ಸುಡಲು ಬಂದು ತಾನೇ ಬೂದಿಯಾದ ಭಸ್ಮಲೋಚನನ ಕತೆ : Tea time story

ಭಸ್ಮಲೋಚನ ಸೇರಾದರೆ, ವಿಭೀಷಣ ಸವ್ವಾಸೇರು! ಬಹುಶಃ ಇದೊಂದು ಪ್ರಕ್ಷೇಪ ಕತೆ. ನೆನಪಿನ ಸಂಚಿಯಿಂದ…

ಭಸ್ಮಲೋಚನ ವರ್ಷಗಟ್ಟಲೆ ಕಣ್ಣುಮುಚ್ಚಿ ಕೂತು ತಪಸ್ಸು ಮಾಡಿರ್ತಾನೆ. ಮಾಡೀಮಾಡೀ ಅವನ ಕಣ್ಣಲ್ಲಿ ವಿಶೇಷ ಶಕ್ತಿ. ನೂರು ಸೂರ್ಯರ ತೇಜಸ್ಸು ಅಲ್ಲಿ ಗೂಡು ಕಟ್ಟಿರುತ್ತೆ. ಅಂವ ಕಣ್ಣು ತೆರೆದ ಘಳಿಗೆ ಯಾರ ಮೇಲೆಲ್ಲ ದೃಷ್ಟಿ ಹರೀತದೋ ಅವರೆಲ್ಲ ಸುಟ್ಟು ಬೂದಿಯಾಗ್ತಾರೆ ಅಂತ ಅವನಿಗೆ ಯೋಗಗುರು ಶಿವ ಎಚ್ಚರಿಸಿರ್ತಾನೆ. ಸದ್ಯಕ್ಕೆ ಕಣ್ಣು ತೆರೀಬೇಡ, ಸಮಯ ಬಂದಾಗ ಸಂಚಿತ ಶಕ್ತಿ ಬಳಸಿಕೋ ಅಂತ ಉಪಾಯನೂ ಹೇಳಿರ್ತಾನೆ.

ತಪಸ್ಸು ಮುಗಿಸಿ ಕಣ್ಣಿಗೆ ಪಟ್ಟಿ ಕಟ್ಕೊಂಡು ಮನೆಗೆ ಬಂದಾಗಿಂದ ಅವನ ಹೆಸರು ‘ಭಸ್ಮ ಲೋಚನ’ ಅಂತಾಗತ್ತೆ.

ಭಸ್ಮಲೋಚನ ರಾವಣನ ಗೆಳೆಯ. ರಾಮ ಸೇನೆ ರಾವಣನ ಮೇಲೇರಿ ಹೋದಾಗ ಭಸ್ಮಲೋಚನ ಗೆಳೆಯನ ಸಹಾಯಕ್ಕೆ ಬರ್ತಾನೆ. ರಥ ಹತ್ತಿ ರಣಾಂಗಣಕ್ಕೆ ಹೋಗ್ತಾನೆ. ಅಂವ ನಡುರಂಗದಲ್ಲಿ ನಿಂತಿದ್ದೇ ತಡ ರಾವಣ ಪಡೆ ಖುಷಿಯ ಕೇಕೆ ಹಾಕತೊಡಗುತ್ತೆ.

ಇದೇನು ಅಂತ ನೋಡೋಕೆ ಬಂದ ರಾಮನ ಪಾಳಯ ಸೇರಿದ್ದ ವಿಭೀಷಣ ಭಸ್ಮಲೋಚನನ್ನ ನೋಡ್ತಾನೆ. ಹೋ! ಇವನಾ… ಇವ ಕಣ್ಣಿನ ಪಟ್ಟಿ ತೆಗೆದುಬಿಟ್ರೆ ರಾಮಸೇನೆ ಸುಟ್ಟು ಬೂದಿಯಾಗತ್ತಲ್ಲ ಅಂತ ಚಿಂತಾಕ್ರಾಂತನಾಗಿ ರಾಮನ ಬಳಿಗೋಡ್ತಾನೆ. ಹಿಂಗಿಂಗೆ ಅಂತ ಭಸ್ಮಲೋಚನನ ವೈಶಿಷ್ಟ್ಯ ಹೇಳಿ ಅದಕ್ಕೆ ಉಪಾಯನೂ ಸೂಚಿಸ್ತಾನೆ.

ವಿಭೀಷಣ ಕೊಟ್ಟ ಉಪಾಯದ ಪ್ರಕಾರ ರಾಮಸೇನೆ ಗುರಾಣಿಯ ಬದಲು ಕೈಲಿ ನಿಲುವುಗನ್ನಡಿಗಳನ್ನ ಹಿಡಿದು ಅದರ ಹಿಂದೆ ಅಡಗಿಕೊಳ್ಳತ್ತೆ. ರಣಾಂಗಣದ ನಡೂ ಮಧ್ಯಕ್ಕೆ ಬಂದು ನಿಂತ ಪೆದ್ದ ಭಸ್ಮಲೋಚನ, ಕಣ್ಣಿನ ಪಟ್ಟಿ ತೆಗೀತಾನೆ.

ಎದುರಲ್ಲಿ ಅವನದ್ದೇ ನೂರುಸಾವಿರ ಪ್ರತಿಬಿಂಬ! ಒಂದೇ ಕ್ಷಣ…

ಮುಂದೇನಾಯ್ತು? ಊಹಿಸೋದು ಕಷ್ಟವೇನಲ್ಲ.

ಆಮೇಲೆ, ಭಸ್ಮಲೋಚನನ ಬೂದಿಯನ್ನ ವಿಭೀಷಣ ಹಣೆಗೆ ಬಳಿದುಕೊಂಡನಾ?

ಇರಬೇಕು ಬಹುಶಃ.

Leave a Reply