ತೀವ್ರ ವೈರಾಗ್ಯ ಏಕೆ ಉಂಟಾಗುವುದಿಲ್ಲ? : ಪರಮಹಂಸ ವಿಚಾರ ಧಾರೆ

ಅದು ಯಾವುದೇ ಕೆಲಸವಾದರೂ ಅಷ್ಟೇ. ಅದಕ್ಕೆ ಎಷ್ಟು ಪ್ರಯತ್ನ ಹಾಕಬೇಕೋ, ಎಷ್ಟು ಕಾಳಜಿ ಮಾಡಬೇಕೋ ಅಷ್ಟು ಮಾಡಲೇಬೇಕು. ವೈರಾಗ್ಯ ಸಾಧನೆಯ ವಿಷಯದಲ್ಲೂ ಅಷ್ಟೇ… । ರಾಮಕೃಷ್ಣ ಪರಮಹಂಸ

ತೀವ್ರ ವೈರಾಗ್ಯ ಏಕೆ ಉಂಟಾಗುತ್ತಿಲ್ಲ ಎಂದು ಪ್ರಶ್ನಿಸುತ್ತೀರಲ್ಲವೆ? ಕಾರಣವಿದೆ. ಆಂತರ್ಯದಲ್ಲಿ ವಾಸನಾಪ್ರವೃತ್ತಿಗಳು ತುಂಬಿವೆ. ವೈರಾಗ್ಯದ ಪ್ರಶ್ನೆ ಬಂದಾಗೆಲ್ಲ ಸಾಮಾನ್ಯವಾಗಿ ನಾನು ಅದನ್ನೇ ಹೇಳುವುದು.

ನಮ್ಮ ಊರಿನಲ್ಲಿ ಗದ್ದೆಗೆ ನೀರು ಹಾಯಿಸುತ್ತಾರೆ. ನೀರು ಹರಿದು ಹೋಗದೆ ಇರಲೆಂದು ಗದ್ದೆಯ ನಾಲ್ಕು ಕಡೆಗೂ ತೆವರಿ ಕಟ್ಟುತ್ತಾರೆ. ಇವು ಮಣ್ಣಿನವಾದ್ದರಿಂದ ಅನೇಕ ವೇಳೆ ಬಿರುಕು ಬಿಟ್ಟಿರುತ್ತವೆ. ರೈತರು ಎದೆಮುರಿದೇನೊ ಗದ್ದೆಗೆ ನೀರು ತರುತ್ತಾರೆ, ಆದರೆ ಬಿರುಕುಗಳ ಮೂಲಕ ನೀರು ಹೊರಕ್ಕೆ ಹರಿದುಹೋಗಿಬಿಡುತ್ತದೆ. ವಾಸನೆಗಳೇ* ಬಿರುಕು. ನಿತ್ಯ ಜನ ಜಪತಪಾದಿಗಳನ್ನು ಮಾಡುತ್ತಾರೆ, ಆದರೆ ಅವುಗಳ ಹಿನ್ನೆಲೆಯಲ್ಲಿಯೇ ವಾಸನೆಗಳು (ಆಸೆಗಳು). ಆ ವಾಸನೆಯ ಬಿರುಕುಗಳ ಮೂಲಕ ಎಲ್ಲಾ ಖಾಲಿಯಾಗಿಬಿಡುತ್ತದೆ. (*ವಾಸನೆಗಳು ಎಂದರೆ ಐಹಿಕ ವಾಂಛೆಗಳು. ಕಾಮ – ಮೋಹ – ಲೋಭಾದಿಗಳು)

ಜನರು ಒಂದು ವಿಧದ ಬಿದಿರಬೋನಿನಿಂದ ಮೀನು ಹಿಡಿಯುತ್ತಾರೆ, ಬಿದಿರಿನದು ನೆಟ್ಟಗೆ ನಿಲ್ಲುವ ಸ್ವಭಾವ. ಆದರೆ ಅದು ಬೋನಿನಲ್ಲಿ ಬಗ್ಗಿಕೊಂಡಿದೆಯಲ್ಲ ಏಕೆ ಗೊತ್ತೆ? ಮೀನು ಹಿಡಿಯಲೋಸುಗ. ವಾಸನೆಯೇ ಮೀನು. ಅದಕ್ಕಾಗಿಯೆ ಮನಸ್ಸು ಸಂಸಾರದ ಕಡೆ ವಾಲಿಕೊಂಡಿದೆ. ವಾಸನೆಗಳಿಲ್ಲದಿದ್ದರೆ ಸಹಜವಾಗಿಯೆ ಮನಸ್ಸಿಗೆ ಊರ್ಧ್ವ ದೃಷ್ಟಿ; ಭಗಪಂತನ ಕಡೆ ದೃಷ್ಟಿ.

ಹೇಗೆ ಗೊತ್ತೆ? ಇದು ತಕ್ಕಡಿಯ ಮುಳ್ಳುಗಳ ಹಾಗೆ. ಕಾಮ – ಕಾಂಚನದ ಭಾರ ತಕ್ಕಡಿಯಮೇಲೆ ಇರುವುದರಿಂದ ಮೇಲಿನ ಕೆಳಗಿನ ಮುಳ್ಳು ಒಂದಾಗಿ ನಿಲ್ಸುವುದಿಲ್ಲ. ಅದಕ್ಕಾಗಿಯೆ ಮನುಷ್ಯ ಯೋಗ ಭ್ರಷ್ಟನಾಗುತ್ತಾನೆ. ದೀಪದ ಉರಿಯನ್ನು ನೋಡಿಲ್ಲವೆ? ಒಂದು ಸ್ವಲ್ಪ ಗಾಳಿ ತಾಗಿದರೇ ಅಲುಗಲಾರಂಭಿಸುತ್ತದೆ. ಯೋಗಾವಸ್ಥೆ ದೀಪದ ಉರಿಯ ಹಾಗೆ. ಅಲ್ಲಿ ಗಾಳಿ ಇಲ್ಲ. ಆದರೆ ಮನಸ್ಸು ಚದುರಿ ಹೋಗಿದೆ; ಸ್ವಲ್ಪಭಾಗ ಢಾಕಾಕ್ಕೆ, ಸ್ವಲ್ಪ ಭಾಗ ದೆಹಲಿಗೆ, ಸ್ವಲ್ಪಭಾಗ ಕುಚ್‌ಬಿಹಾರಿಗೆ. ಅಂಥ ಮನಸ್ಸನ್ನು ಈಗ ಒಟ್ಟುಗೂಡಿಸಬೇಕಾಗಿದೆ. ಒಟ್ಟುಗೂಡಿಸಿ ಒಂದು ವಸ್ತುವಿನ ಮೇಲೆ ಏಕಾಗ್ರ ಮಾಡಬೇಕಾಗುತ್ತದೆ.

ನಿನಗೆ ಹದಿನಾರಾಣೆ ಬೆಲೆ ಬಾಳುವ ಬಟ್ಟೆ ಬೇಕಾದರೆ. ವ್ಯಾಪಾರಿಗೆ ಹದಿನಾರಾಣೆಯನ್ನೇ ಕೊಡಬೇಕಾಗುತ್ತದೆ. ಅದಕ್ಕಿಂತ ಕಡಿಮೆ ಕೊಟ್ಟರೆ ಆ ಬಟ್ಟೆ ಸಿಗುವುದಿಲ್ಲ. ಹಾಗೆಯೇ ಇದೂ. ಸಾಧನೆಯಲ್ಲಿ ಒಂದು ಸ್ವಲ್ಪ ಕಡಿಮೆಯಾದರೂ ಯೋಗ ಸಿದ್ಧಿಸುವ ಹಾಗಿಲ್ಲ.

Leave a Reply