ಯಾವಾಗ ನೀವು ನಿಮ್ಮ ಪ್ರತ್ಯೇಕ ಬದುಕಿನ ಕುರಿತಾದ ಆಸಕ್ತಿಯನ್ನು ಕಳೆದುಕೊಳ್ಳುತ್ತೀರೋ ಆಗ ನೀವು ಅನಂತ ಅಸ್ತಿತ್ವಗಳನ್ನು ಕಂಡುಕೊಳ್ಳುತ್ತೀರಿ ಮತ್ತು ಶಾಶ್ವತ ಇರುವಿಕೆಯೊಂದರ ಭಾಗವಾಗುತ್ತೀರಿ. ಒಂದು ದೀಪದ ಜ್ವಾಲೆಯಾಗಿ ಮಾಯವಾಗುತ್ತೀರಿ ಆದರೆ ಹಲವಾರು ಸೂರ್ಯರಿಗೆ ಸೂರ್ಯ ಅಗುತ್ತೀರಿ. ಒಂದು ಹನಿ ನೀರಿನಂತೆ ಮಾಯವಾಗುತ್ತೀರಿ ಆದರೆ ನೀವೇ ಸ್ವತಃ ಒಂದು ಸಾಗರವಾಗುತ್ತೀರಿ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಬ್ಬ ಚಕ್ರವರ್ತಿ ತನ್ನ ಶಯನ ಗೃಹದ ಗೋಡೆಯ ಮೇಲೆ ಹಿಮಾಲಯದ ಪರ್ವತ ಶಿಖರಗಳನ್ನು ಪೇಂಟ್ ಮಾಡಲು ತನ್ನ ರಾಜ್ಯದ ಶ್ರೇಷ್ಠ ಚಿತ್ರಕಾರನನ್ನು ಕೇಳಿಕೊಂಡ. ಚಕ್ರವರ್ತಿಗೆ ಹಿಮಾಲಯ ಅತ್ಯಂತ ಪ್ರೀತಿ ಪಾತ್ರ ಜಾಗೆಯಾಗಿತ್ತು. ಚಿತ್ರಕಾರ ಎರಡು ಮೂರು ವರ್ಷ ತನ್ನನ್ನು ತಾನು ಈ ಕೆಲಸದಲ್ಲಿ ತೊಡಗಿಸಿಕೊಂಡು ಚಿತ್ರವನ್ನು ಪೇಂಟ್ ಮಾಡಿ ಮುಗಿಸಿದ. ರಾಜನನ್ನು ಚಿತ್ರವನ್ನು ನೋಡಲು ಆಹ್ವಾನಿಸಿದ.
ಚಕ್ರವರ್ತಿ ಚಿತ್ರ ನೋಡಲು ಆಗಮಿಸಿದ. ಗೋಡೆಗೆ ಹಾಕಿದ್ದ ಪರದೆಯನ್ನು ತೆರೆಯಲಾಯಿತು. ಹಿಮಾಲಯದ ಚಿತ್ರವನ್ನು ನೋಡಿದ ರಾಜ ಮೂಕವಿಸ್ಮಿತನಾದ. ಅವನು ತನ್ನ ಇರುವನ್ನೇ ಮರೆತು ಹಿಮಾಲಯದ ಚೆಲುವಿನಲ್ಲಿ ಒಂದಾಗಿಬಿಟ್ಟ. ರಾಜ ಎಷ್ಟೋ ಬಾರಿ ಹಿಮಾಲಯದಲ್ಲಿ ಪ್ರಯಾಣ ಮಾಡಿದ್ದ ಆದರೆ ಈ ಬಗೆಯ ಹಿಮಾಲಯವನ್ನು ಆತ ಎಂದೂ ಕಂಡಿರಲಿಲ್ಲ. ಚಿತ್ರವನ್ನು ಒಂದೇ ಸವನೇ ನೋಡುತ್ತ ನಿಂತುಬಿಟ್ಟ ರಾಜನ ಬಾಯಿಂದ ಎಷ್ಟೋ ಹೊತ್ತು ಒಂದೇ ಒಂದು ಮಾತೂ ಹೊರಡಲಿಲ್ಲ .
ಎಷ್ಟೋ ಹೊತ್ತಿನ ನಂತರ ಚಕ್ರವರ್ತಿ ಮಾತನಾಡಿದ, “ ಈ ಜಾಗೆಗೆ ನಾನು ಎಷ್ಟೋ ಬಾರಿ ಹೋಗಿರುವೆ ಆದರೆ ಪರ್ವತವನ್ನು ಬಳಸಿ ಹೋಗುತ್ತಿರುವ ಈ ಕಾಲುದಾರಿಯನ್ನು ನಾನು ಎಂದೂ ನೋಡಿಲ್ಲ. ಎಷ್ಟು ಸುಂದರವಾಗಿದೆ ಈ ದಾರಿ. ನಿನಗೆ ಹೇಗೆ ಕಾಣಿಸಿತು ಈ ದಾರಿ?”
“ನನಗೆ ನಿಜವಾಗಿ ಗೊತ್ತಿಲ್ಲ. ಇರಿ ನಾನು ನೋಡಿ ಬರ್ತೀನಿ ” ಎನ್ನುತ್ತ ಚಿತ್ರಕಾರ ಆ ಚಿತ್ರದೊಳಗೆ ಪ್ರವೇಶ ಮಾಡಿ, ಆ ಕಾಲುದಾರಿಯ ಮೇಲೆ ಪ್ರಯಾಣ ಮಾಡುತ್ತ ಪರ್ವತದ ಗಿರಿ ಶಿಖರಗಳ ಹಿಂದೆ ಕಣ್ಮರೆಯಾಗಿಬಿಟ್ಟ. ಆ ಚಿತ್ರಕಾರ ಮತ್ತೆಂದೂ ವಾಪಸ್ ಬರಲಿಲ್ಲ.
ಇದು ವಿಚಿತ್ರ ತಾವೋಯಿಸ್ಟ್ ಕಥೆ. ನಂಬಲು ಅಸಾಧ್ಯವಾದದ್ದು. ಯಾರು ಹೇಗೆ ತಾನೆ ಚಿತ್ರದೊಳಗೆ ಪ್ರವೇಶ ಮಾಡಿ ಕಣ್ಮರೆಯಾಗಿಬಿಡಬಲ್ಲರು? ಆದರೆ ಇದು ಬಹಳ ಮಹತ್ವದ್ದು. ಇದು ಐತಿಹಾಸಿಕ ಘಟನೆ ಅಲ್ಲ, ಇದು ಒಂದು ಕಾವ್ಯಾತ್ಮಕ ಘಟನೆ.
ತನ್ನ ಪೇಂಟಿಂಗ್ ಒಳಗೆ ಪ್ರವೇಶ ಮಾಡಬಲ್ಲ ಚಿತ್ರಕಾರ ಮಾತ್ರ ನಿಜವಾದ ಚಿತ್ರಕಾರ. ತನ್ನ ಕವಿತೆಯೊಳಗೆ ಪ್ರವೇಶ ಮಾಡುವುದು ನಿಜವಾದ ಕವಿಗೆ ಮಾತ್ರ ಸಾಧ್ಯ. ಹೀಗೆ ಸಾಧ್ಯವಾಗದೇ ಹೋದರೆ ಅದು ತೋರಿಕೆಯ ಕಾವ್ಯ, ಅದು ಕೃತಕ ಪೇಂಟಿಂಗ್. ತನ್ನ ಪೇಂಟಿಂಗ್ ನಲ್ಲಿ ಮರೆಯಾಗಿ ಹೋಗುವುದು ಸಾಧ್ಯವಾಗದೇ ಹೋದರೆ, ಎಷ್ಟು ತಾಂತ್ರಿಕತೆಯ ಪರಿಚಯವಿದ್ದರೂ, ಬಣ್ಣಗಳ ಬಗ್ಗೆ ಎಷ್ಟು ಅಗಾಧ ಜ್ಞಾನವಿದ್ದರೂ, ಅವನು ಅಥವಾ ಅವಳು ಜೀನಿಯಸ್ ಪೇಂಟರ್ ಅಲ್ಲ. ಅವರನ್ನ ಒಬ್ಬ ಒಳ್ಳೆಯ ತಂತ್ರಜ್ಞ ಎಂದು ಮಾತ್ರ ಕರೆಯಬಹುದು. ಅವರು ತಮ್ಮ ಪೇಂಟಿಂಗ್ ನಿಂದ ಇನ್ನೂ ಪ್ರತ್ಯೇಕತೆಯನ್ನು ಕಾಯ್ದುಕೊಂಡಿದ್ದಾರೆ. ಚಿತ್ರದೊಳಗೆ ಒಂದಾಗಿಬಿಡುವ ಕಲೆ ಇನ್ನೂ ಅವರಿಗೆ ಸಿದ್ಧಿಸಿಲ್ಲ. ಯಾವಾಗ ಈ ಒಂದಾಗುವ ಕಲೆ ಅವರಿಗೆ ಸಾಧ್ಯವಾಗುತ್ತದೆಯೋ ಆಗ ಅವರಿಗೆ ಅಲ್ಲಿ ಭಗವಂತನ ಭೇಟಿ ಸಾಧ್ಯವಾಗುತ್ತದೆ.
ಆದ್ದರಿಂದಲೇ ಭಗವಂತನ ಭೇಟಿಗೆ ಎಷ್ಟು ಜನ ಸಾಧಕರಿದ್ದಾರೋ ಅಷ್ಟು ಬಾಗಿಲುಗಳಿವೆ. ನೀವು ಮಾಡ ಬೇಕಾದದ್ದು ಇಷ್ಟೇ , ನೀವು ಯಾವ ಕೆಲಸ ಮಾಡುತ್ತಿದ್ದೀರೋ ಆ ಕೆಲಸದಲ್ಲಿ ಕಳೆದುಹೋಗುವುದು. ಆ ಕೆಲಸದಲ್ಲಿ ಪೂರ್ಣವಾಗಿ ಒಂದಾಗಿ, ಒಂದು ಚೂರೂ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಬೇಡಿ. ಆ ಒಂದು ಒಂದಾದ ಗಳಿಗೆಯಲ್ಲಿಯೇ ಭಗವಂತನ ಸಾನಿಧ್ಯ ಸಾಧ್ಯವಾಗುವುದು. ನಿಮ್ಮ ಸ್ವಂತ ವ್ಯಕ್ತಿತ್ವಕ್ಕೆ , ನಿಮ್ಮ ಪ್ರತ್ಯೇಕ ಬದುಕಿಗೆ ಜೋತು ಬೀಳುತ್ತಿದ್ದೀರಾದರೆ, ನೀವು ಭಗವಂತನಿಂದ ದೂರ. ಏಕೆಂದರೆ ಭಗವಂತನೆಂದರೆ ಐಕ್ಯತೆ. ಐಕ್ಯತೆ ಮತ್ತು ಪ್ರತ್ಯೇಕತೆ ಏಕಕಾಲದಲ್ಲಿ ಸಾಧ್ಯವಿಲ್ಲ.
ದ್ವಂದ್ವ ಏನೆಂದರೆ, ಯಾವಾಗ ನೀವು ನಿಮ್ಮ ಪ್ರತ್ಯೇಕ ಬದುಕಿನ ಕುರಿತಾದ ಆಸಕ್ತಿಯನ್ನು ಕಳೆದುಕೊಳ್ಳುತ್ತೀರೋ ಆಗ ನೀವು ಅನಂತ ಅಸ್ತಿತ್ವಗಳನ್ನು ಕಂಡುಕೊಳ್ಳುತ್ತೀರಿ ಮತ್ತು ಶಾಶ್ವತ ಇರುವಿಕೆಯೊಂದರ ಭಾಗವಾಗುತ್ತೀರಿ. ಒಂದು ದೀಪದ ಜ್ವಾಲೆಯಾಗಿ ಮಾಯವಾಗುತ್ತೀರಿ ಆದರೆ ಹಲವಾರು ಸೂರ್ಯರಿಗೆ ಸೂರ್ಯ ಅಗುತ್ತೀರಿ. ಒಂದು ಹನಿ ನೀರಿನಂತೆ ಮಾಯವಾಗುತ್ತೀರಿ ಆದರೆ ನೀವೇ ಸ್ವತಃ ಒಂದು ಸಾಗರವಾಗುತ್ತೀರಿ.
ಒಬ್ಬ ಪ್ರಸಿದ್ಧ ಕಲಾವಿದನ ಬಳಿ ಯುವ ಕಲಾವಿದನೊಬ್ಬ ಕಲಿಯಲು ಬರುತ್ತಿದ್ದ. ಆ ಯುವ ಕಲಾವಿದನಿಗೆ ಕಲೆ ಅಭಿಜಾತವಾಗಿ ಒಲಿದಿತ್ತು. ಅವನ ಅಪ್ರತಿಮ ಕಲಾ ಪ್ರತಿಭೆ ಕಂಡು ಗುರುವಿಗೆ ಅಸಾಧ್ಯ ಹೊಟ್ಚೆಕಿಚ್ಚು. ಏನಾದರೊಂದು ನೆಪ ಹುಡುಕಿ ಆ ಯುವ ಕಲಾವಿದನ ಮೇಲೆ ಹರಿ ಹಾಯುತ್ತಿದ್ದ, ಚಿತ್ರ ಬರಿಯಲಿಕ್ಕಲ್ಲ, ಮನೆಗೆ ಸುಣ್ಣ ಹಚ್ಚುವುದಕ್ಕೆ ಲಾಯಕ್ಕು ನೀನು ಎಂದು ಮಾತು ಮಾತಿಗೆ ಎಲ್ಲರ ಮುಂದೆ ಅಪಮಾನ ಮಾಡುತ್ತಿದ್ದ. ಕ್ರಮೇಣ ಆ ಯುವ ಕಲಾವಿದನ ಆತ್ಮವಿಶ್ವಾಸ ಕಡಿಮೆಯಾಗತೊಡಗಿತು.
ಒಂದು ದಿನ ಗೋಲ್ಡ್ ಫಿಶ್ ಪೇಂಟ್ ಮಾಡುವ ಕೆಲಸ ಯುವಕನ ಪಾಲಿಗೆ ಬಂತು. ಆತ ಕಣ್ಣು ಮುಚ್ಚಿ ತನ್ನ ದೊಡ್ಡಪ್ಪನ ಮನೆಯಲ್ಲಿದ್ದ ಗೋಲ್ಡ್ ಫಿಶ್ ಧ್ಯಾನಿಸುತ್ತ ಚಿತ್ರ ಬರೆದು ಮುಗಿಸಿದ.
ಆ ಚಿತ್ರ ನೋಡುತ್ತಿದ್ದಂತೆಯೇ ಕೆಂಡಾಮಂಡಲನಾದ ಗುರು “ಹೀಗಾ ಚಿತ್ರ ಬರೆಯೋದು? “ ಎಂದು ಶಿಷ್ಯನನ್ನು ಹಿಯಾಳಿಸುತ್ತ, ಆ ಚಿತ್ರವನ್ನು ಮುದುಡಿ ಮಾಡಿ ಅಲ್ಲೇ ಇದ್ದ ನೀರಿನ ಕೊಳಕ್ಕೆ ಎಸೆದ.
ಅಲ್ಲಿದ್ದ ಎಲ್ಲರೂ ನೋಡ ನೋಡುತ್ತಿದ್ದಂತೆಯೇ, ಆ ಮೀನಿನ ಚಿತ್ರ ನೀರಿಗೆ ಇಳಿದು ಈಸತೊಡಗಿತು.
Source: ~ Osho, Unio Mystica, Vol 2, Ch 9