ಅಷ್ಟಾವಕ್ರ ಕೇವಲ ಒಬ್ಬ ಸುದ್ದಿಗಾರ. ನಮ್ಮ ಪ್ರಜ್ಞೆಯನ್ನ, ಸಾಕ್ಷಿತನವನ್ನ ಎಚ್ಚರಿಸಿದವನು. ಅವನದು ಶುದ್ಧ ಸಾಕ್ಷಿಪ್ರಜ್ಞೆ, ಅಪ್ಪಟ ನಿರ್ಭಾವುಕತೆ… ~ ಓಶೋ | ಕನ್ನಡಕ್ಕೆ; ಚಿದಂಬರ ನರೇಂದ್ರ
ಈ ಘಟನೆ ನಡೆದದ್ದು ಇನ್ನೂ ಅಷ್ಟಾವಕ್ರ ಈ ಲೋಕದಲ್ಲಿ ಹುಟ್ಟುವ ಮೊದಲೇ, ಅವನು ಇನ್ನೂ ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ. ಅವನ ತಂದೆ ಬಹಳ ದೊಡ್ಡ ವೇದ ವಿದ್ವಾಂಸ. ಪ್ರತಿದಿನ ತಂದೆ ವೇದ ಪಠಣ ಮಾಡುತ್ತಿದ್ದಾಗ ಇನ್ನೂ ತಾಯಿಯ ಗರ್ಭದಲ್ಲಿದ್ದ ಅಷ್ಟಾವಕ್ರ ವೇದದ ಸಾರವನ್ನು ಕಿವಿಗೊಟ್ಟು ಆಲಿಸುತ್ತಿದ್ದ.
ಒಂದು ದೀನ ಹೀಗೆ ವೇದ ಪಾರಾಯಣ ನಡೆಯುತ್ತಿದ್ದಾಗ ತಾಯಿಯ ಗರ್ಭದಿಂದ ಒಂದು ದನಿ ಹೊರಗೆ ಬಂದಿತು, “ ನಿಲ್ಲಿಸಿ ಈ ವೇದ ಪಠಣವನ್ನ, ಇದೆಲ್ಲ ಸುಳ್ಳು, ಮೂರ್ಖತನದ್ದು. ಈ ಬರಡು ಮಾತುಗಳಲ್ಲಿ ಯಾವ ಜ್ಞಾನವೂ ಇಲ್ಲ. ಇವು ಕೇವಲ ಖಾಲೀ ಮಾತುಗಳು. ಜ್ಞಾನ ವ್ಯಕ್ತಿಯಲ್ಲಿರುತ್ತದೆ ಮಾತಿನಲ್ಲಲ್ಲ“
ಈ ಮಾತುಗಳನ್ನ ಕೇಳುತ್ತಿದ್ದಂತೆಯೇ ಸಹಜವಾಗಿ ತಂದೆ ಕೆಂಡಾಮಂಡಲನಾದ. ಅವನ ಅಹಂ ಗೆ ತೀವ್ರವಾದ ಧಕ್ಕೆಯಾಗಿತ್ತು. ಅವನು ಗಂಡಸು, ಮೇಲಾಗಿ ಅಪ್ಪ, ಪಂಡಿತ, ಇನ್ನೂ ಗರ್ಭದಲ್ಲಿಯೇ ಇರುವ ಕೂಸು ಆಡಿದ ಮಾತುಗಳು ಅವನನ್ನು ಸಿಟ್ಟಿಗೆಬ್ಬಿಸಿದ್ದವು, ಅವನ ಪಾಂಡಿತ್ಯಕ್ಕೆ ಸವಾಲು ಹಾಕಿದ್ದವು. ಅವನು ಸಕಲ ವಿದ್ಯಾಪಾರಂಗತ, ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡವನು, ಅವನ ಅಹಂ ಮಗುವಿನ ಈ ಮಾತುಗಳಿಂದ ತೀವ್ರ ಘಾಸಿಗೊಂಡಿತ್ತು. ಅವನು ಸಿಟ್ಟಿನಿಂದ ಸ್ಫೋಟಗೊಂಡ.
“ ವೇದವನ್ನ ನಿಂದಿಸಿದ ನೀನು ಅಂಗವಿಕಲನಾಗಿ ಹುಟ್ಟು, ನಿನ್ನ ದೇಹ ಎಂಟು ಕಡೆ ಸೊಟ್ಟಗೆ ಆಗಿರಲಿ “ ಎಂದು ಆ ತಂದೆ ಇನ್ನೂ ತನ್ನ ತಾಯಿಯ ಗರ್ಭದಲ್ಲಿದ್ದ ಮಗುವಿಗೆ ಶಾಪಕೊಟ್ಟ. ಹೀಗೆ ಹುಟ್ಟಿದವನೇ ಅಷ್ಟಾವಕ್ರ. ಅಷ್ಟಾವಕ್ರ ಎಂದರೆ ತನ್ನ ದೇಹದ ಎಂಟು ಭಾಗಗಳಲ್ಲಿ ವಕ್ರತೆಯನ್ನ ಹೊಂದಿದವನು.
ಅಷ್ಟಾವಕ್ರ ಕೇವಲ ಒಬ್ಬ ಸುದ್ದಿಗಾರ. ನಮ್ಮ ಪ್ರಜ್ಞೆಯನ್ನ, ಸಾಕ್ಷಿತನವನ್ನ ಎಚ್ಚರಿಸಿದವನು. ಅವನದು ಶುದ್ಧ ಸಾಕ್ಷಿಪ್ರಜ್ಞೆ, ಅಪ್ಪಟ ನಿರ್ಭಾವುಕತೆ. ನಿಮ್ಮ ಎದುರು ದುಃಖವಿದ್ದರೆ ನೀವು ಕೇವಲ ಅದಕ್ಕೆ ಸಾಕ್ಷಿಯಾಗಿ , ನಿಮ್ಮ ಎದುರು ಸುಖವಿದ್ದರೆ ನೀವು ಕೇವಲ ಅದಕ್ಕೆ ಸಾಕ್ಷಿಯಾಗಿ. ಯಾವುದನ್ನೂ ಅಪ್ಪಿಕೊಳ್ಳಬೇಡಿ, ಯಾವುದರಲ್ಲೂ ಭಾಗವಹಿಸಬೇಡಿ. ಎರಡೂ ತಾವಾಗಿ ಬರಲಿ ತಾವಾಗಿ ಹೋಗಲಿ. ನೀವು ಯಾವುದನ್ನೂ ಸಂಭ್ರಮಿಸಬೇಡಿ. ರಾತ್ರಿಯಾದಾಗ ಸಾಕ್ಷಿಯಾಗಿ, ಬೆಳಗು ಆದಾಗ ಸಾಕ್ಷಿಯಾಗಿ. ರಾತ್ರಿಯಲ್ಲಿ ನಿಮ್ಮನ್ನ ಕತ್ತಲು ಎಂದುಕೊಳ್ಳಬೇಡಿ, ಬೆಳಗಿನಲ್ಲಿ ನಿಮ್ಮನ್ನ ಬೆಳಕು ಎಂದುಕೊಳ್ಳಬೇಡಿ. ಸುಮ್ಮನೇ ಎರಡಕ್ಕೂ ಸಾಕ್ಷಿಯಾಗಿ.