ಶ್ರೀ ರಮಣ ಮಹರ್ಷಿಗಳು ತಮ್ಮ ಸಂದರ್ಶಕರು ಮತ್ತು ಶಿಷ್ಯರ ಪ್ರಶ್ನೆಗಳಿಗೆ ನೀಡಿದ ಉತ್ತರಗಳು ಇಲ್ಲಿವೆ. ಮಹರ್ಷಿಗಳ ಆರಂಭಿಕ ಶಿಷ್ಯರಲ್ಲಿ ಒಬ್ಬರಾದ ಶಿವಪ್ರಕಾಶಂ ಪಿಳ್ಳೈ ಇದನ್ನು ಸಂಕಲಿಸಿದ್ದರು. ಈ ಕೃತಿಯನ್ನು ಕನ್ನಡಕ್ಕೆ ತಂದವರು ಡಾ।। ಕೆ.ಎ.ನಾರಾಯಣನ್.
ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2023/02/24/ramana-20/
ತೋರುತ್ತಿರುವ ಪ್ರಪಂಚವು ಇಲ್ಲವಾಗುವುದು ಯಾವಾಗ?
ಎಲ್ಲ ಅರಿವಿಗೂ ಮತ್ತು ಎಲ್ಲ ಕಾರ್ಯಗಳಿಗೂಕಾರಣವಾದ ಮನಸ್ಸು ಅಡಗಿದಾಗ (ಲಯವಾದಾಗ)ಲೇ
ಪ್ರಪಂಚವೂ ಇಲ್ಲವಾಗುವುದು.
ಮನಸ್ಸಿನ ಸ್ವರೂಪವೇನು?
ಮನಸ್ಸು ಎಂದು ಕರೆಯಲ್ಪಡುವುದು ಆತ್ಮಸ್ತರೂಪದಲ್ಲಿನ ಒಂದಾನೊಂದು ಅತಿಶಯವಾದ ಶಕ್ತಿ. ಅದೇ ಎಲ್ಲ ಸಂಕಲ್ಪಗಳಿಗೂ ಕಾರಣ. ಆಲೋಚನೆಗಳ ಸಮೂಹದಹೊರತಾಗಿ ಪ್ರತ್ಯೇಕವಾಗಿ ಮನಸ್ಸೆಂಬುದು ಇಲ್ಲ. ಆದ ಕಾರಣ ಸಂಕಲ್ಪವೇ ಮನಸ್ಸಿನ ಸ್ವರೂಪ. ಸಂಕಲ್ಪಗಳನ್ನು ಬಿಟ್ಟು ಪ್ರಪಂಚವೆಂಬ ವಸ್ತು ಸ್ವತಂತ್ರವಾಗಿ ಬೇರೆ ಇಲ್ಲ ಎಚ್ಚರ ಮತ್ತು ಕನಸುಗಳಲ್ಲಿ ಆಲೋಚನೆಗಳೂ ಇವೆ; ಪ್ರಪಂಚವೂ ಇದೆ. ಜೇಡರ ಹುಳುವು ಹೇಗೆ ತನ್ನ ಶರೀರದೊಳಗಿನಿಂದ ಬಲೆಯ ನೂಲನ್ನು ಹೊರತಂದು ಬಳಿಕ ಅದನ್ನು ತನ್ನೊಳಗೇ ಸೆಳೆದುಕೊಂಡು ವಿಲೀನಗೊಳಿಸಿಕೊಳ್ಳುತ್ತದೆಯೋ ಅಂತೆಯೇ ಮನಸ್ಸೂ ತನ್ನೊಳಗಿನ ಜಗತ್ತನ್ನು ಹೊರದೋರಿ ಮತ್ತೆ ಅದನ್ನು ತನ್ನೊಳಗೇ ವಿಲೀನಗೊಳಿಸಿ ಕೊಳ್ಳುತ್ತದೆ. ಮನಸ್ಸು ಬಹಿರ್ಮುಖವಾದಾಗ (ಆತ್ಮ ಸ್ವರೂಪದಿಂದ ಹೊರ ಬಂದಾಗ) ಪ್ರಪಂಚವು ತೋರಿಕೊಳ್ಳುತ್ತದೆ. ಆದ್ದರಿಂದ ಪ್ರಪಂಚವು ತೋರುತ್ತಿರುವಾಗಸ್ವರೂಪವು ತೋರುವುದಿಲ್ಲ ಸ್ವರೂಪವು ಪ್ರಕಾಶಿಸುತ್ತಿರುವಾಗ ಪ್ರಪಂಚವು ತೋರುವುದಿಲ್ಲ ಮನಸ್ಸಿನ ಸ್ವರೂಪವನ್ನು ಎಡಬಿಡದೆ ವಿಚಾರಕ್ಕೆ ಒಳಪಡಿಸುತ್ತಲೇ ಇದ್ದರೆ ಮನಸ್ಸು ಆತ್ಮವೇ ಆಗಿಬಿಡುವುದು. ಮನಸ್ಸು ಎನ್ನುವುದು ಯಾವಾಗಲೂ ಒಂದು ಸ್ಕೂಲ ವಸ್ತುವನ್ನು ಆಶ್ರಯಿಸಿಯೇ ಇರುತ್ತದೆ. ಹಾಗೆ ಆಶ್ರಯಿಸದೆ ಅದು ಬೇರೆ ಯಾಗಿರುವುದಿಲ್ಲ ಮನಸ್ಸನ್ನೇ ವ್ಯವಹಾರದಲ್ಲಿ ಸೂಕ್ಷ್ಮ ಶರೀರವೆಂದೂ ಅಥವಾ ಜೀವನೆಂದೂ ಕರೆಯಲಾಗುತ್ತದೆ.
ಮನಸ್ಸಿನ ಸ್ವರೂಪವನ್ನು ಅರಿಯಲು ಸಾಧನವಾದ ವಿಚಾರ ಮಾರ್ಗವು ಯಾವುದು?
ಈ ಶರೀರದಲ್ಲಿ ‘ನಾನು’ ಎಂದು ಉದಿಸುವುದು ಯಾವುದೋ ಅದೇ ಮನಸ್ಸು “‘ನಾನು’ ಎಂಬ ಕಲ್ಪನೆಯು ಶರೀರದಲ್ಲಿ ಮೊದಲು ಐಲ್ಲಿಂದ ಉದಿಸುತ್ತದೆ ಎಂದು ಶೋಧಿಸಿದಾಗ ಅದು “ಹೃದಯ’ದಲ್ಲಿ ಎಂದು ತಿಳಿಯುವುದು. ಅದೇ ಮನಸ್ಸಿನ ಉಗಮಸ್ಕಾನ. ಒಬ್ಬನು ಎಡಬಿಡದೆ “ನಾನು-ನಾನು’ ಎಂದು ಆವೃತ್ತಿ ಮಾಡುತ್ತಲೇ ಇದ್ದರೂ ಕೂಡ ಅದು ಕೊನೆಗೆ ಅವನನ್ನು ಅಲ್ಲಿಗೇ ಕೊಂಡೊಯ್ದುಬಿಡುತ್ತದೆ. ಮನಸಿನಲ್ಲಿ ಉದಿಸುವ ಎಲ್ಲ ಸಂಕಲ್ಪಗಳಿಗೂ ‘ನಾನು’ ಎಂಬ ಸಂಕಲ್ಪವೇ ಮೊದಲನೆಯದು. ಇದು ಮೊದಲು ಉದಿಸಿದ ಬಳಿಕವೇ ಇತರ ಎಲ್ಲ ಸಂಕಲ್ಪಗಳೂ ಉದಿಸುವುವು. ನಾನು ಎಂದು ಉದಿಸಿದ ಬಳಿಕವೇ ‘ನೀನು’ ಮತ್ತು “ಅವನು’ ಎಂಬುದು ತೋರಿಕೊಳ್ಳುತ್ತವೆ. ನಾನು ಎಂಬ ಉತ್ತಮ ಪುರುಷನಿಲ್ಲದೆ ನೀನು ಮತ್ತು ಅವನು ಎಂಬ ಪ್ರಥಮ ಮತ್ತು ಮಧ್ಯಮ ಪುರುಷರು ಇರಲು ಸಾಧ್ಯವಿಲ್ಲ
ಮನಸ್ಸು ಇಲ್ಲವಾಗುವುದು ಹೇಗೆ?
“ನಾನು ಯಾರು?” ಎಂದು ನಿರಂತರವಾಗಿ ಶೋಧಿಸುವುದರಿಂದ ಮಾತ್ರವೇ ಮನಸ್ಸು ಇಲ್ಲವಾಗುತ್ತದೆ. ನಾನು ಯಾರು ಎಂಬ ಚಿಂತನೆಯೇ ಇತರ ಎಲ್ಲ ಆಲೋಚನೆಗಳನ್ನೂ ನಾಶಗೊಳಿಸಿ ಶವವನ್ನು ಸುಡಲು ಉಪಯೋಗಿಸುವ ಕಟ್ಟಿಗೆಯಂತೆ ಕೊನೆಗೆ ತಾನೂ ನಾಶವಾಗಿ ಬಿಡುತ್ತದೆ. ಬಳಿಕ ಸ್ವರೂಪ ದರ್ಶನವಾಗುವುದು.
“ನಾನು ಯಾರು?” ಎಂಬ ವಿಚಾರ ಮಾರ್ಗದ ಶೋಧನೆಯನ್ನು ಎಡಬಿಡದೆ ಕೈಗೊಳ್ಳುವುದು ಹೇಗೆ?
ಈ ಶೋಧನೆಯ ಮಾರ್ಗದಲ್ಲಿ ಸಂಕಲ್ಪಗಳು ಮತ್ತೆ ಮತ್ತೆ ಉಂಟಾಗುತ್ತಿದ್ದರೂ ಅವುಗಳನ್ನು ಹಿಂಬಾಲಿಸಲು ಪ್ರಯತ್ನಿಸದೆ, “ ಈ ಸಂಕಲ್ಪಗಳು ಯಾರಿಗೆ ಉಂಟಾಗುತ್ತಿದೆ?” ಎಂದು ವಿಚಾರಿಸಬೇಕು. ಎಷ್ಟೇ ಸಂಕಲ್ಪಗಳು ಬರುತ್ತಿರಲಿ ಅದರಿಂದೇನು? ಪ್ರತಿಯೊಂದು ಸಂಕಲ್ಪವೂ ಹೊರಬರುತ್ತಿರುವಾಗಲೇ “ಇದು ಯಾರಿಗೆ?” ಎಂದು ಎಚ್ಚರಿಕೆಯಿಂದ ವಿಚಾರಿಸಿದಾಗ, “ನನಗೆ” ಎಂದು ತೋರುವುದು. ಆಗ “ನಾನು ಯಾರು?” ಎಂದು ಪಟ್ಟುಬಿಡದೆ. ವಿಚಾರ ಮಾಡುತ್ತಿದ್ದರೆ ಮನಸ್ಸು ತನ್ನ ಉಗಮಸ್ಕಾನಕ್ಕೆ ಹಿಂತಿರುಗುವುದು. ನಿರಂತರವಾಗಿ ಹೀಗೆಯೇ ಅಭ್ಯಾಸ ಮಾಡುತ್ತಿದ್ದರೆ ಮನಸ್ಸಿಗೆ ತನ್ನ ಉಗಮಸ್ಥಾನದಲ್ಲಿ ನೆಲೆಸುವ ಶಕ್ತಿಯು ಹೆಚ್ಚುತ್ತಾ ಬರುತ್ತದೆ. ಸೂಕ್ಷ್ಮವಾದ ಮನಸ್ಸು ಮೆದುಳೇ ಮೊದಲಾದ ಇಂದ್ರಿಯಗಳ ಮೂಲಕ ಹೊರ ಮುಖವಾದರೆ ಸ್ಥೂಲವಾದ ನಾಮರೂಪಗಳನ್ನು ಅರಿಯುತ್ತದೆ; ಅದು ಹೃದಯದಲ್ಲೇ ನೆಲೆನಿಂತರೆ ಆಗ ನಾಮರೂಪಗಳು ಮರೆಯಾಗುವುವು. ಹೊರ ಮುಖವಾಗಿ ಹರಿಯುವ ಮನಸ್ಸನ್ನು ಹಿಂತಿರುಗಿಸಿ ಹೃದಯದಲ್ಲಿ ನೆಲೆಸುವುದನ್ನೇ ಅಂತರ್ಮುಖ ಎಂದು ಕರೆಯಲಾಗುತ್ತದೆ. ಹೀಗೆ ಮನಸ್ಸನ್ನು ಹೃದಯದಲ್ಲೇ ನೆಲೆಸುವಂತೆ ಮಾಡಿದಲ್ಲಿ ಎಲ್ಲ ಸಂಕಲ್ಪ ವಿಕಲ್ಪಗಳಿಗೆ ಕಾರಣವಾದ ‘ನಾನು’ ಎಂಬ ಅಹಂಕಾರವು ವಿಲೀನವಾಗಿ ಸದಾ ಇರುವ ಸ್ವಸ್ತರೂಪವಾದ ಆತ್ಮವೇ ಬೆಳಗುತ್ತಿರುತ್ತದೆ. ಮಾಡುವ ಎಲ್ಲ ಕಾರ್ಯಗಳನ್ನೂ “ನಾನು” ಎನ್ನುವ ಅಹಂಕಾರವಿಲ್ಲದವನಾಗಿ ಮಾಡಬೇಕು. ಹಾಗೆ ಮಾಡಿದರೆ ಎಲ್ಲವೂ ಶಿವನ (ಭಗವಂತನ, ಆತ್ಮದ) ಸ್ವರೂಪವಾಗಿಯೇ ಕಾಣುತ್ತದೆ.