ಕರಾರು ಹಾಕುವುದು : ಓಶೋ ವ್ಯಾಖ್ಯಾನ

ಪ್ರೀತಿಸಲು ಸಿದ್ಧರಾಗಿದ್ದಾಗ ನೀವು ಯಾವ ಕರಾರುಗಳನ್ನೂ ಹಾಕುವುದಿಲ್ಲ, ಸುಮ್ಮನೇ ಪ್ರೀತಿಸುತ್ತೀರಿ. ಯಾವಾಗ ನಿಮಗೆ ಪ್ರೇಮದ ಅವಶ್ಯಕತೆ ಇಲ್ಲ ಎನ್ನುವುದು ಅರಿವಾಗುತ್ತದೆಯೋ ಆಗ ನೀವು ಪ್ರೇಮಿಸಲು ಅರ್ಹರಾಗುತ್ತೀರಿ. ಯಾವಾಗ ನಿಮಗೆ ಪ್ರೇಮದ ಅವಶ್ಯಕತೆ ಇದೆಯೋ ಆಗ ನೀವು ಪ್ರೇಮಿಸಲು ಅರ್ಹರಲ್ಲ. ಇದು ಒಂದು ದ್ವಂದ್ವ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಇದು ಒಂದು ಹಳೆಯ ಟಿಬೇಟಿಯನ್ ಕಥೆ.

ಒಂದಾನೊಂದು ಕಾಲದಲ್ಲಿ ಒಬ್ಬ ದೊಡ್ಡ ಋಷಿ ಇದ್ದ, ಅವ ಯಾರನ್ನೂ ತನ್ನ ಶಿಷ್ಯರನ್ನಾಗಿ ಸ್ವೀಕರಿಸುತ್ತಿರಲಿಲ್ಲ, ಯಾರಿಗೂ ಸನ್ಯಾಸದ ದೀಕ್ಷೆ ನೀಡುತ್ತಿರಲಿಲ್ಲ. ಅವನ ಪ್ರಸಿದ್ಧಿ ಸುತ್ತ ಎಲ್ಲೆಡೆ ಹರಡಿತ್ತು. ಅವನನ್ನು ನೋಡಲು ದೂರ ದೂರದ ಜಾಗಗಳಿಂದ ಸಾವಿರಾರು ಜನ ಅವನು ಇದ್ದ ಬೆಟ್ಟದ ತುದಿಗೆ ಬರುತ್ತಿದ್ದರು. ಅವನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ದೀನರಾಗಿ ಬೇಡಿಕೊಳ್ಳುತ್ತಿದ್ದರು,

“ ನಮಗೆ ದೀಕ್ಷೆ ಕೊಟ್ಟು, ಸತ್ಯದ ದಾರಿಯಲ್ಲಿ ನಮ್ಮನ್ನು ಮುನ್ನಡೆಸು, ನೀನು ದೈವವನ್ನು ಅನುಭವಿಸಿದವನು, ನಾವೂ ದೈವದ ಹುಡುಕಾಟದಲ್ಲಿ ಬಳಲಿ ಬೆಂಡಾಗಿದ್ದೇವೆ, ನಮಗೆ ಮಾರ್ಗದರ್ಶನ ಮಾಡು, ನಿನ್ನ ಆಶ್ರಮದ ಬಾಗಿಲನ್ನು ನಮಗಾಗಿ ತೆರೆ, ನಮ್ಮನ್ನು ನಿನ್ನ ಶಿಷ್ಯರನ್ನಾಗಿ ಮಾಡಿಕೋ.”

ಆದರೆ ಇಂಥ ಬೇಡಿಕೆಗಳಿಗೆಲ್ಲ, ಋಷಿ ಸುತರಾಂ ಒಪ್ಪುತ್ತಿರಲಿಲ್ಲ. ನೀವು ಇನ್ನೂ ನನ್ನ ಶಿಷ್ಯತ್ವಕ್ಕೆ ಸಿಧ್ಧರಾಗಿಲ್ಲ. ಮೊದಲು ಆ ಅರ್ಹತೆಯನ್ನು ಸಂಪಾದಿಸಿಕೊಳ್ಳಿ. ಮೂರು ವರ್ಷ ಒಂದೇ ಒಂದು ಸುಳ್ಳು ಮಾತು ಆಡಬೇಡಿ, ಮೂರು ವರ್ಷ ಶುದ್ಧ ಬ್ರಹ್ಮಚರ್ಯವನ್ನು ಪಾಲಿಸಿ, ನಿಮ್ಮ ಮನಸ್ಸಿನಲ್ಲಿ ಒಂದೇ ಒಂದು ಕ್ಷಣವೂ ಹೆಣ್ಣಿನ ಅಥವಾ ಗಂಡಿನ ಬಯಕೆ ಮೂಡದಿರಲಿ. ಋಷಿ ತನ್ನ ಶಿಷ್ಯತ್ವ ಬಯಸಿಬಂದವರಿಗೆಲ್ಲ ಹೀಗೆಲ್ಲ ಕಠಿಣ ಸವಾಲುಗಳನ್ನ ಹಾಕುತ್ತಿದ್ದ.

ಋಷಿಯ ಕರಾರುಗಳು ಪಾಲಿಸಲು ಅಸಾಧ್ಯ ಎನ್ನುವಂತಿದ್ದವು. ಹೆಚ್ಚು ಹೆಚ್ಚು ಈ ಕರಾರುಗಳನ್ನ ಪಾಲಿಸಲು ಪ್ರಯತ್ನಿಸಿದಂತೆಲ್ಲ, ಹೆಚ್ಚು ಹೆಚ್ಚು ಅವು ಅಸಾಧ್ಯದ ಸವಾಲುಗಳು ಅನಿಸುತ್ತಿದ್ದವು. ನೀವು ಬ್ರಹ್ಮಚರ್ಯವನ್ನು ಪಾಲಿಸಬಹುದು ಆದರೆ ಹೆಚ್ಚು ಹೆಚ್ಚು ನೀವು ನಿಮ್ಮ ವೃತದ ಬಗ್ಗೆ ಯೋಚನೆ ಮಾಡಿದಂತೆಲ್ಲ ಹೆಚ್ಚು ಹೆಚ್ಚು ಕಾಮದ ಬಯಕೆಗಳು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ.

ಬಹಳಷ್ಟು ಜನ ಋಷಿಯ ಈ ಕರಾರುಗಳನ್ನು ಪಾಲಿಸಲು ಪ್ರಯತ್ನಿಸಿ ವಿಫಲರಾಗಿದ್ದರು. ಹಾಗಾಗಿ ಋಷಿ ಯಾರನ್ನೂ ತನ್ನ ಶಿಷ್ಯರನ್ನಾಗಿ ಸ್ವೀಕರಿಸಿರಲಿಲ್ಲ.

ಕೊನೆಗೊಮ್ಮೆ ಋಷಿಗೆ ವಯಸ್ಸಾಗ ತೊಡಗಿತು, ಸಾವು ಹತ್ತಿರವಾಗತೊಡಗಿತು. ತನ್ನ ಸಾವು ಇನ್ನೂ ಮೂರು ದಿನ ದೂರ ಇರುವಾಗ ಋಷಿ ತನ್ನ ಹತ್ತಿರದ ಜನರೆದುರು ಘೋಷಿಸಿದ, “ ಹೋಗಿ ನನ್ನಿಂದ ದೀಕ್ಷೆಪಡೆಯ ಬಯಸಿದವರನ್ನೆಲ್ಲ ಕರೆದುಕೊಂಡು ಬನ್ನಿ, ನಾನು ಎಲ್ಲರಿಗೂ ದೀಕ್ಷೆ ಕೊಡುತ್ತೇನೆ. ನನ್ನ ಬಳಿ ಈಗ ಕೇವಲ ಮೂರು ದಿನಗಳು ಉಳಿದಿವೆ.”

“ ನಿನ್ನ ಅಸಾಧ್ಯದ ಕರಾರುಗಳ ವಿಷಯ ಏನಾಯಿತು ಹಾಗಾದರೆ? “ ಜನ ಅವನನ್ನು ಪ್ರಶ್ನೆ ಮಾಡಿದರು.

“ ಆ ಕರಾರುಗಳೆನ್ನೆಲ್ಲ ಮರೆತು ಬಿಡಿ. ನಾನೇ ಶಿಷ್ಯತ್ವ ದೀಕ್ಷೆ ನೀಡಲು ಇನ್ನೂ ಸಿದ್ಧನಾಗಿರಲಿಲ್ಲ, ಆ ಅರ್ಹತೆಯನ್ನು ಇನ್ನೂ ಸಂಪಾದಿಸಿಕೊಂಡಿರಲಿಲ್ಲ. ಆದ್ದರಿಂದ ಜನರನ್ನ ನನ್ನಿಂದ ದೂರ ಮಾಡಿಕೊಳ್ಳಲು ಅಂಥ ಅಸಾಧ್ಯದ ಕರಾರುಗಳನ್ನು ಪೂರೈಸುವಂತೆ ಷರತ್ತು ವಿಧಿಸುತ್ತಿದ್ದೆ. ಈಗ ನಾನು ಪೂರ್ಣನಾಗಿದ್ದೇನೆ, ಈಗ ನಾನು ಶಿಷ್ಯತ್ವದ ದೀಕ್ಷೆ ನೀಡಲು ಅರ್ಹನಾಗಿದ್ದೇನೆ. ಯಾರಿಗೆಲ್ಲ ನನ್ನಿಂದ ದೀಕ್ಷೆ ಸ್ವೀಕರಿಸುವ ಇಚ್ಛೆ ಇದೇಯೋ ಅವರನ್ನೆಲ್ಲ ಬೇಗ ಬೇಗ ಕರೆದುಕೊಂಡು ಬನ್ನಿ. ನನ್ನ ಬಳಿ ಈಗ ಕೇವಲ ಮೂರು ದಿನ ಮಾತ್ರ ಉಳಿದಿವೆ.”

ಋಷಿ ಬಯಸಿದವರಿಗೆಲ್ಲ ದೀಕ್ಷೆ ನೀಡಿದ. ಜನರಿಗೆ ಋಷಿಯ ವರ್ತನೆ ಕಂಡು ಆಶ್ಚರ್ಯವಾಯಿತು. ನಿನ್ನ ಅಸಾಧ್ಯದ ಕರಾರುಗಳ ವಿಷಯ ಹಾಗಿರಲಿ, ನಾವು ಪಾಪಿಗಳು, ಎಷ್ಟೋ ಪಾಪ ಮಾಡಿದ್ದೇವೆ. ನೀನು ನಮ್ಮಂಥವಿರಿಗೆಲ್ಲ ದೀಕ್ಷೆ ಕೊಡುತ್ತಿದ್ದೀಯಲ್ಲ, ಇದು ಸರಿಯೇ? “ ಜನ ಅವನನ್ನು ಪ್ರಶ್ನೆ ಮಾಡಿದರು.

“ ನಿಮ್ಮ ಪಾಪದ ವಿಷಯ ಮರೆತುಬಿಡಿ. ನಾನು ಇಲ್ಲಿಯವರೆಗೆ ಸಂತನಾಗಿರಲಿಲ್ಲ, ಅದು ನನ್ನ ಸಮಸ್ಯೆಯಾಗಿತ್ತು. ಆಗ ಯಾರಿಗೂ ದೀಕ್ಷೆ ನೀಡುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಬಾಗಿಲು ಮುಚ್ಚಿಕೊಂಡಿತ್ತು. ನಾನು ಬಾಗಿಲ ಹೊರಗೆ ನಿಂತಿದ್ದೆ, ಈಗ ಬಾಗಿಲು ತೆರೆದುಕೊಂಡಿದೆ, ಈಗ ಹಂಚಿಕೊಳ್ಳದೇ ನನಗೆ ಬೇರೆ ದಾರಿಯೇ ಇಲ್ಲ. ಅಸಾಧ್ಯದದ ಕರಾರುಗಳ ಯಾವ ಬೇಡಿಕೆಯೂ ಈಗ ನನ್ನ ಮುಂದಿಲ್ಲ. ಹಾಗೆ ನೋಡಿದರೆ ನಿಮ್ಮಿಂದ ಯಾವ ಸಿದ್ಧತೆಯನ್ನೂ ನಾನು ಈಗ ನಿರೀಕ್ಷೆ ಮಾಡುತ್ತಿಲ್ಲ. ನಾನು ಸಿದ್ಧನಾಗಿದ್ದೇನೆ ಅಷ್ಟು ಸಾಕು. ನಾನು ಹೀಗೇ ಪೂರ್ಣವಾಗಿ ಉಳಿಯಬೇಕಾದರೆ ನಾನು ಹಂಚಿಕೊಳ್ಳಬೇಕು.

ಯಾವಾಗ ನೀವು ಪ್ರೀತಿಸಲು ಇನ್ನೂ ಅರ್ಹರಾಗಿಲ್ಲವೋ ಆಗ ನೀವು ಇನ್ನೊಬ್ಬರಿಂದ ಅರ್ಹತೆಯನ್ನ ನಿರೀಕ್ಷಿಸುತ್ತೀರಿ, ಅವರು ಅದ್ಭುತ ವ್ಯಕ್ತಿಯಾಗಿರಬೇಕು, ನಿಸ್ವಾರ್ಥಿಯಾಗಿರಬೇಕು, ನಿಷ್ಕಲ್ಮಷ ಮನಸ್ಸಿನವರಾಗಿರಬೇಕು ಮುಂತಾಗಿ ಅಸಾಧ್ಯದದ ಕರಾರುಗಳನ್ನ ಹಾಕುತ್ತೀರಿ. ಅಕಸ್ಮಾತ್ ಪ್ರೀತಿಸಲು ಸಿದ್ಧರಾಗಿದ್ದಾಗ ನೀವು ಯಾವ ಕರಾರುಗಳನ್ನೂ ಹಾಕುವುದಿಲ್ಲ, ಸುಮ್ಮನೇ ಪ್ರೀತಿಸುತ್ತೀರಿ. ಯಾವಾಗ ನಿಮಗೆ ಪ್ರೇಮದ ಅವಶ್ಯಕತೆ ಇಲ್ಲ ಎನ್ನುವುದು ಅರಿವಾಗುತ್ತದೆಯೋ ಆಗ ನೀವು ಪ್ರೇಮಿಸಲು ಅರ್ಹರಾಗುತ್ತೀರಿ. ಯಾವಾಗ ನಿಮಗೆ ಪ್ರೇಮದ ಅವಶ್ಯಕತೆ ಇದೆಯೋ ಆಗ ನೀವು ಪ್ರೇಮಿಸಲು ಅರ್ಹರಲ್ಲ. ಇದು ಒಂದು ದ್ವಂದ್ವ.

ಒಂದು ಮಧ್ಯಾಹ್ನದ ಊಟ ಮುಗಿಸಿ ಸಣ್ಣ ನಿದ್ದೆಗಾಗಿ ಆಗಲೇ ಮಂಚದ ಮೇಲೆ ಅಡ್ಡಾಗಿದ್ದ ನಸ್ರುದ್ದೀನ್ ಜೋರಾಗಿ ಬಾಗಿಲು ಬಾರಿಸುವ ಸದ್ದು ಕೇಳಿ ಬೇಸರದಿಂದ ಎದ್ದು ಬಾಗಿಲು ತೆರೆದ. ಬಾಗಿಲಲ್ಲಿ ಒಬ್ಬ ಬಾಬಾ ನಿಂತಿದ್ದ.

“ ದೇವರ ಆಜ್ಞೆಯಾಗಿದೆ ಮನುಷ್ಯ, ನಿನಗೆ ನೋವಾಗುವ ತನಕ ದಾನ ಮಾಡು “

ಬಾಬಾ ಜೋರು ದನಿಯಲ್ಲಿ ನಸ್ರುದ್ದೀನ್ ನಿಂದ ದಾನ ಕೇಳಿದ.

“ ದಾನ ಕೊಡುವ ಮಾತು ಕೇಳಿಯೇ ನನಗೆ ನೋವಾಗಿದೆ. ಇನ್ನು ನಾನು ಏನೂ ಕೊಡುವ ಹಾಗಿಲ್ಲ “

ನಸ್ರುದ್ದೀನ್ ಬಾಬಾನ ಮುಖದ ಮೇಲೆ ಬಾಗಿಲು ಮುಚ್ಚಿ ಮತ್ತೆ ನಿದ್ದೆ ಮಾಡಲು ಒಳಗೆ ಹೋದ.


Source: OSHO; “A Sudden Clash of Thunder”

Leave a Reply