ಅಚಲ ನಿರ್ಧಾರ ಮತ್ತು ಸತತ ಪ್ರಯತ್ನ: ಪರಮಹಂಸರು ಹೇಳಿದ ದೃಷ್ಟಾಂತ

ಛಲ ಮತ್ತು ಆತ್ಮವಿಶ್ವಾಸಗಳಿದ್ದರೆ ಎಂಥಾ ಭವಸಾಗರವನ್ನೂ ಈಜಿ ದಾಟಬಹುದು ಅನ್ನುವುದಕ್ಕೆ ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕತೆಯಿದು.

ಒಂದು ಸರೋವರದ ಬಳಿ ಎರಡು ಕಪ್ಪೆಗಳು ಇದ್ದು, ಅದರಲ್ಲಿ ಒಂದು ಸಣ್ಣ ಕಪ್ಪೆ ಇನ್ನೊಂದು ಸ್ವಲ್ಪ ದೊಡ್ಡದು. ಎರಡೂ ಗೆಳೆಯರಾಗಿ ಆಟ ಆಡಿಕೊಂಡಿದ್ದವು. ಅವು ಎಷ್ಟು ಒಳ್ಳೆಯ ಸ್ನೇಹಿತರು ಎಂದರೆ ಒಂದನ್ನೊಂದು ಬಿಟ್ಟು ಎಲ್ಲಿಗೂ ಹೋಗುತ್ತಿರಲಿ ಲ್ಲ. ಸುತ್ತಮುತ್ತಲೂ ಓಡಾಡಿಕೊಂಡು ಸರೋವರದೊಳಗೆ ಈಜಾಡಿಕೊಂಡು ಹಾಯಾಗಿದ್ದವು.

ಒಂದು ದಿನ ಇದ್ದಕ್ಕಿದ್ದಂತೆ ಭಾರಿ ಮಳೆ ಬಂದಿತು. ಅದು ಎಂಥಾ ಮಳೆ ಅಂದರೆ ಒನಕೆಗಾತ್ರದ ಮಳೆ ಹನಿ ಬೀಳುತ್ತಿತ್ತು. ಅವುಗಳಿಗೆ ಅಲ್ಲಿ ನಿಲ್ಲಲು ಆಗಲಿಲ್ಲ ನಿಂತರೆ ಟಪಟಪ ಮಳೆ ನೀರ ಹನಿ ಮೈಮೇಲೆ ಬೀಳುತ್ತಿತ್ತು. ಎಲ್ಲಾದರೂ ಮರೆಯಲ್ಲಿ ಕೂರೋಣವೆಂದರೆ ಎಲ್ಲಾ ಕಡೆ ನೀರು ನೀರು ನೀರು. ಅವು ಯೋಚಿಸಿ, ಮಳೆ ಕಡಿಮೆಯಾಗುವ ತನಕ ಬೇರೆ ಕಡೆ ಹೋಗಿ ಸ್ವಲ್ಪ ಹೊತ್ತು ಆಶ್ರಯ ಪಡೆಯೋಣ ಎಂದುಕೊಂಡು ಗುಡ್ಡದ ಹತ್ತಿರದಲ್ಲಿದ್ದ ಮನೆಯೊಂದಕ್ಕೆ ಬಂದವು. ಅದು ಹಾಲು ಮಾರುವವನ ಮನೆಯಾಗಿತ್ತು. ಅವು ಕುಪ್ಪಳಿಸುತ್ತಾ, ಕುಪ್ಪಳಿಸುತ್ತಾ ಮನೆ ಒಳಗೆ ಬಂದಿದ್ದರಿಂದ. ಹೊಸ ಜಾಗ ಗಲಿಬಿಲಿ ಗೊಂಡವು. ಅಲ್ಲೊಂದು ಕಿಟಕಿಯ ಮೇಲೆ ಹತ್ತಿ ಕುಳಿತಾಗ ಒಳಗೆ ಒಂದು ದೊಡ್ಡ ಪಾತ್ರೆಗೆ ತುಂಬಾ ಮಜ್ಜಿಗೆ ಇಟ್ಟಿರುವುದನ್ನು ಕಂಡವು. ಅವು ಅಂದುಕೊಂಡವು ಅರೆ ಇದು ಒಳ್ಳೆ ಬೆಳ್ಳಗಿರುವ ಸರೋವರ ನಾವು ಇದುವರೆಗೂ ಇಂಥ ನೀರನ್ನು ನೋಡೇ ಇರಲಿಲ್ಲ ಎಂದುಕೊಂಡು ಖುಷಿಯಿಂದ ನೆಗೆಯುತ್ತಾ ನೆಗೆಯುತ್ತಾ ಮಜ್ಜಿಗೆ ತುಂಬಿದ ಪಾತ್ರೆಯೊಳಗೆ ಬಿದ್ದವು. ಆದರೆ ಮಜ್ಜಿಗೆಯೊಳಗೆ ಈಜುವುದು ಅವುಗಳಿಗೆ ಕಷ್ಟ ಎಂದು ತಿಳಿಯಿತು.

ಈಜಲು ಹೋದರೆ ಜಾರುತ್ತಿತ್ತು ಸಾಕಷ್ಟು ಹೊತ್ತು ಈಜಿದವು. ಅದರಲ್ಲಿ ದೊಡ್ಡ ಕಪ್ಪೆ ಬದುಕುವ ಆಸೆ ಬಿಟ್ಟು ಇನ್ನು ನಾನು ಸೋತಿದ್ದೇನೆ ಈಜು ನಿಲ್ಲಿಸೂಣ ಎಂದಿತು. ಆದರೆ ಇನ್ನೊಂದು ಕಪ್ಪೆ ಆತ್ಮ ವಿಶ್ವಾಸದಿಂದ ಹೇಳಿತು. ಇನ್ನೂ ಸ್ವಲ್ಪ ಹೊತ್ತು ಈಜೋಣ ಗೆಳೆಯ ಸ್ವಲ್ಪ ಪ್ರಯತ್ನ ಪಟ್ಟರೆ ಭಗವಂತ ರಕ್ಷಿಸುತ್ತಾನೆ ಎಂದಿತು. ಸರಿ ಎಂದು ದೊಡ್ಡ ಕಪ್ಪೆ ಮತ್ತು ಒಂದು ಸ್ವಲ್ಪ ಹೊತ್ತು ಈಜತೊಡಗಿತು. ಆದರೆ ಅದು ಬಹಳ ನಿತ್ರಾಣಗೊಂಡು ಗೆಳೆಯ ನನ್ನ ಕೈಲಿ ಇನ್ನೂ ಸಾಧ್ಯವೇ ಇಲ್ಲ ನಾನು ಮುಳುಗುತ್ತೇನೆ ಎಂದು ಹೇಳಿ ಸೋತು ಮಜ್ಜಿಗೆ ಒಳಗೆ ಮುಳುಗಿ ಹೋಯಿತು. ಇದರಿಂದ ಸಣ್ಣ ಕಪ್ಪೆಗೆ ತುಂಬಾ ಬೇಜಾರಾಯಿತು. ಅದು ಸಿಟ್ಟು ಆತಂಕ ದುಃಖದಿಂದ ಬೇರೆ ಏನನ್ನು ಯೋಚಿಸದೆ ಸಿಟ್ಟಿನಿಂದ ಶಕ್ತಿ ಬಿಟ್ಟು ಈಜತೊಡಗಿತು.

ಅದು ಎಷ್ಟು ಈಜಿತು ಎಂದರೆ, ಆಯಾಸವಾದರೂ ನಿಧಾನವಾಗಿ ಈಜಾಡುತ್ತಲೇ ಇತ್ತು. ಯಾಕೆ ಮೇಲೆ ಹೋಗಲು ಸಾಧ್ಯವಿಲ್ಲ ನೋಡೇ ಬಿಡೋಣ ಎಂಬ ಛಲ ಮತ್ತು ಆತ್ಮವಿಶ್ವಾಸದಿಂದ ಈಜುತ್ತಲೇ ಇತ್ತು. ಸ್ವಲ್ಪ ಹೊತ್ತಿಗೆ ಅದಕ್ಕೆ ಈಜುವುದು ಹಗುರ ಎನಿಸಿತು. ಏಕೆಂದರೆ ಮಜ್ಜಿಗೆ ಒಳಗೆ ಜಿಡ್ಡು ಎಲ್ಲಾ ಒಂದಾಗಿ ಬೆಣ್ಣೆಯಾಗ ತೊಡಗಿತ್ತು. ಇದರಿಂದ ಮಜ್ಜಿಗೆ ತಿಳಿಯಾಗಿ ಜಾರುತ್ತಿರಲಿಲ್ಲ ಸ್ವಲ್ಪ ಹೊತ್ತಿಗೆ ಬೆಣ್ಣೆ ಜಾಸ್ತಿಯಾಗಿ ಒಂದು ಕಡೆ ಇರುತ್ತಾ ಇತ್ತು. ಇದನ್ನು ಕಂಡ ಕಪ್ಪೆ ಮತ್ತಷ್ಟು ಪ್ರಯತ್ನ ಪಟ್ಟು ಜೋರಾಗಿ ಈಜತೊಡಗಿತು. ಸಾಕಷ್ಟು ಬೆಣ್ಣೆ ಸೇರಿ ಒಂದು ಗುಡ್ಡೆಯಂತೆ ನಿಂತಿತು. ಸಣ್ಣ ಕಪ್ಪೆ ಈಜುತ್ತಲೇ ಬೆಣ್ಣೆ ಮೇಲೆ ಕುಳಿತು ಮೇಲಕ್ಕೆ ಹಾರಿ ಈಚೆಗೆ ಬಂದಿತು. ನಿರಂತರ ಪ್ರಯತ್ನದಿಂದಾಗಿ ಆ ಕಪ್ಪೆ ತನ್ನ ಜೀವವನ್ನು ಕಾಪಾಡಿಕೊಂಡಿತು.

Leave a Reply