ಕೋಪವನ್ನು ೨೪ ಗಂಟೆ ತಡೆದಿಟ್ಟುಕೊಳ್ಳುವುದು ಸಾಧ್ಯವೇ? ೨೪ ಗಂಟೆಯಲ್ಲ, ೨೪ ನಿಮಿಷ, ೨೪ ಸೆಕೆಡ್ ಕೂಡ ಕೋಪವನ್ನು ತಡೆದುಕೊಳ್ಳುವುದು ಸಾಧ್ಯವಿಲ್ಲ. ಸತ್ಯ ಏನೆಂದರೆ, ನೀವು ಕೇವಲ ಒಂದು ಸೆಕೆಂಡ್ ಕೂಡ ಕೋಪವನ್ನು ತಡೆಯಬಲ್ಲಿರಾದರೆ, ಆ ಕೋಪ ನಾಶವಾಗಿ ಹೋಗುತ್ತದೆ ~ ಓಶೋ। ಕನ್ನಡಕ್ಕೆ: ಚಿದಂಬರ ನರೇಂದ್ರ
ಸೂಫಿ ಫಕೀರ ಜುನಿಯಾದ್ ನ ಬಗ್ಗೆ ಓದುತ್ತಿದ್ದೆ. ಅಕಸ್ಮಾತ್ ಯಾರಾದರೂ ಅವನನ್ನು ನಿಂದಿಸಿದರೆ ಅವನ ಉತ್ತರ, “ ಈ ನಿಂದನೆಗೆ ನಾನು ನಾಳೆ ಉತ್ತರ ಕೊಡುತ್ತೇನೆ.” ಮತ್ತು ನಾಳೆ ಬಂದಾಗ ಅವನ ಉತ್ತರ, “ ನಾನು ಉತ್ತರ ಕೊಡುವ ಅವಶ್ಯಕತೆಯೇನೂ ಇಲ್ಲ.”
ಅವನನ್ನು ನಿಂದಿಸಿದ ವ್ಯಕ್ತಿ ಪ್ರಶ್ನೆ ಮಾಡುತ್ತಿದ್ದ, “ ನಾನು ನಿನ್ನೆ ನಿನ್ನನ್ನು ನಿಂದಿಸಿದ್ದೆ, ನೀನು ನಿನ್ನೆಯೇ ಯಾಕೆ ಆ ನಿಂದನೆಗೆ ಉತ್ತರಿಸಲಿಲ್ಲ? ಬಹಳ ವಿಚಿತ್ರ ಮನುಷ್ಯ ನೀನು. ತಮ್ಮನ್ನು ನಿಂದಿಸಿದವರಿಗೆ ಉತ್ತರ ಕೊಡಲು ಜನ, ಒಂದು ಸೆಕೆಂಡ್ ಕೂಡ ಕಾಯುವುದಿಲ್ಲ, ತಕ್ಷಣ ಉತ್ತರಿಸುತ್ತಾರೆ.”
ಜುನಿಯಾದ್ ಉತ್ತರಿಸಿದ, “ ಯಾವುದಕ್ಕೂ ಅವಸರ ಮಾಡಬೇಡ ಎಂದು ಹೇಳಿಕೊಟ್ಟದ್ದು ನನ್ನ ಮಾಸ್ಟರ್. ಯಾರಾದರೂ ನನಗೆ ಅಪಮಾನ ಮಾಡಿದಾಗ ಅವರಿಗೆ ಉತ್ತರಿಸಲು ನಾನು ಸ್ವಲ್ಪ ಹೊತ್ತಾದರೂ ಕಾಯಲೇಬೇಕು. ನಾನು ತಕ್ಷಣ ಉತ್ತರಿಸುವೆನಾದರೆ, ಆ ಘಟನೆಯ ಬೆಂಕಿ ನನ್ನನ್ನು ಆವರಿಸಿಕೊಳ್ಳುವುದು. ಬೆಂಕಿಯ ಹೊಗೆ ನನ್ನನ್ನು ಕುರುಡು ಮಾಡುವುದು. ಹಾಗಾಗಿ ಮೋಡ ದಾಟಿಹೋಗಿ ಆಕಾಶ ತಿಳಿಯಾಗುವವರೆಗೆ ನಾನು ಕಾಯಲೇಬೇಕು. ೨೪ ಗಂಟೆಗಳ ತರುವಾಯ ಮೋಡಗಳೆಲ್ಲ ದಾಟಿಹೋಗಿ ಆಕಾಶ ಮತ್ತೇ ತನ್ನ ಪ್ರಶಾಂತ ನೀಲಿಯನ್ನ ಧರಿಸಿಕೊಂಡಾಗ ನಾನು ನನ್ನ ಪೂರ್ಣ ಪ್ರಜ್ಞಾವಸ್ಥೆಯಲ್ಲಿ ಉತ್ತರ ಕೊಡಬಹುದು. ಈಗ ಗೊತ್ತಾಗುತ್ತಿದೆ ನನ್ನ ಮಾಸ್ಟರ್ ಎಂಥ ಚಾಲಾಕಿ ಮನುಷ್ಯ ಅಂತ. ನಾನು ಹೀಗೆ ಮಾಡಲು ಶುರು ಮಾಡಿದ ಮೇಲೆ, ನನಗೆ ಯಾರಿಗೂ ಉತ್ತರ ಕೊಡುವ ಸಂದರ್ಭವೇ ಸೃಷ್ಟಿಯಾಗಿಲ್ಲ.”
ಕೋಪವನ್ನು ೨೪ ಗಂಟೆ ತಡೆದಿಟ್ಟುಕೊಳ್ಳುವುದು ಸಾಧ್ಯವೇ? ೨೪ ಗಂಟೆಯಲ್ಲ, ೨೪ ನಿಮಿಷ, ೨೪ ಸೆಕೆಡ್ ಕೂಡ ಕೋಪವನ್ನು ತಡೆದುಕೊಳ್ಳುವುದು ಸಾಧ್ಯವಿಲ್ಲ. ಸತ್ಯ ಏನೆಂದರೆ, ನೀವು ಕೇವಲ ಒಂದು ಸೆಕೆಂಡ್ ಕೂಡ ಕೋಪವನ್ನು ತಡೆಯಬಲ್ಲಿರಾದರೆ, ಆ ಕೋಪ ನಾಶವಾಗಿ ಹೋಗುತ್ತದೆ.
ಆದರೆ ನೀವು ಉತ್ತರಿಸಲು ಒಂದು ಕ್ಷಣ ಕೂಡ ಕಾಯುವುದಿಲ್ಲ. ಸ್ವಿಚ್ ಹಾಕಿದ ಕೂಡಲೇ ಫ್ಯಾನ್ ತಿರುಗಲು ಶುರು ಮಾಡುವಂತೆ ನೀವು ಥಟ್ಚನೇ ಪ್ರತಿಕ್ರಿಯೆ ನೀಡುತ್ತೀರಿ. ಈ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ನಡುವೆ ಒಂದು ಚೂರು ಅಂತರವೂ ಇಲ್ಲ. ನಿಮಗೆ ನಿಮ್ಮ ಎಚ್ಚರಿಕೆಯ ಬಗ್ಗೆ ಹೆಮ್ಮೆ ಆದರೆ, ನಿಮ್ಮ ಕ್ರಿಯೆಗಳ ಮೇಲೆ ನಿಮಗೆ ಹತೋಟಿಯೇ ಇಲ್ಲ. ಹೇಗೆ ತಾನೇ ಇಂಥ ಅಪ್ರಜ್ಞೆಯ ಮನುಷ್ಯ ತನ್ನ ಮಾಸ್ಟರ್ ಆಗುವುದು ಸಾಧ್ಯ? ಯಾರು ಬೇಕಾದವರು ಅವನ ಕೋಪದ ಸ್ವಿಚ್ ಆನ್ ಮಾಡಿ ಅವನನ್ನು ಕೋಪ ಎನ್ನುವ ಕೂಪಕ್ಕೆ ನೂಕಬಹುದು. ಯಾರಾದರೂ ನಿಮ್ಮನ್ನು ಹೊಗಳಿದರೆ ನಿಮಗೆ ಖುಶಿಯಾಗುತ್ತದೆ, ಯಾರಾದರೂ ನಿಮ್ಮನ್ನೂ ದೂಷಿಸಿದರೆ ನಿಮಗೆ ಅಪಮಾನವಾಗುತ್ತದೆ, ತಕ್ಷಣ ನಿಮ್ಮ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತದೆ.
ನೀವು ನಿಮ್ಮ ಕ್ರಿಯೆಗಳ ಮಾಸ್ಟರ್ ಆಗಿದ್ದೀರಾ? ಅಥವಾ ಯಾರಾದರೂ ನಿಮ್ಮನ್ನು ಮ್ಯಾನಿಪ್ಯುಲೇಟ್ ಮಾಡಬಹುದಾ? ನೀವು ನಿಮ್ಮ ಗುಲಾಮರ ಗುಲಾಮರಾಗಿದ್ದೀರಿ. ಯಾರು ನಿಮ್ಮನ್ನ ಮ್ಯಾನಿಪ್ಯುಲೇಟ್ ಮಾಡುತ್ತಿದ್ದಾರೋ ಅವರು ಕೂಡ ತಮ್ಮ ಕ್ರಿಯೆಗಳ ಮಾಸ್ಟರ್ ಆಗಿಲ್ಲ. ವ್ಯಂಗ್ಯ ಏನೆಂದರೆ ಪ್ರತಿಯೊಬ್ಬರೂ ಇನ್ನೊಬ್ಬರನ್ನು ಮ್ಯಾನಿಪ್ಯುಲೇಟ್ ಮಾಡಲು ಚತುರರಾಗಿದ್ದಾರೆಯೇ ಹೊರತು ತಮ್ಮನ್ನು ತಾವು ಹತೋಟಿಗೆ ತೆಗೆದುಕೊಳ್ಳುವುದು ಅವರಿಗೆ ಸಾಧ್ಯವಿಲ್ಲ. ಯಾರು ಬೇಕಾದರೂ ನಿಮ್ಮನ್ನು ಮ್ಯಾನಿಪ್ಯುಲೇಟ್ ಮಾಡಬಹುದು ಎನ್ನುವುದಾದರೆ, ಇದಕ್ಕಿಂತ ಅಪಮಾನಕರ ಸಂಗತಿ ನಿಮ್ಮ ಆತ್ಮಕ್ಕೆ ಬೇರೆ ಯಾವುದಿದೆ?
ಒಮ್ಮೆ ಶಿಷ್ಯನೊಬ್ಬ ಝೆನ್ ಮಾಸ್ಟರ್ ಬಳಿ ಹೋಗಿ ಅವರ ಸಲಹೆ ಕೇಳಿದ.
“ಮಾಸ್ಟರ್, ನನ್ನ ಸಿಟ್ಟು ಹತೋಟಿಗೆ ಸಿಗುತ್ತಿಲ್ಲ, ಏನಾದರೂ ಉಪಾಯ ಹೇಳಿ “
ಮಾಸ್ಟರ್ : ಹಂ, ಇದೇನೋ ವಿಚಿತ್ರವಾಗಿದೆಯಲ್ಲ, ಎಲ್ಲಿ ಒಮ್ಮೆ ನಿನ್ನ ಸಿಟ್ಟು ತೋರಿಸು, ಹೇಗಿದೆ ನೋಡೋಣ.
ಶಿಷ್ಯ : ಆದರೆ ಮಾಸ್ಟರ್, ನನಗೀಗ ಸಿಟ್ಟು ಬಂದಿಲ್ಲ, ಹೇಗೆ ತೋರಿಸಲಿ?
ಮಾಸ್ಟರ್ : ಹಾಗಾದ್ರೆ ಯಾವಾಗ ತೋರಸ್ತೀಯಾ?
ಶಿಷ್ಯ : ಅಯ್ಯೋ ಅದು ಹಾಗೆ ಹೇಳಕ್ಕಾಗಲ್ಲ, ಅಚಾನಕ್ ಆಗಿ ಬರತ್ತೆ.
ಮಾಸ್ಟರ್ : ಹಾಗಾದ್ರೆ ಅದು ನಿನ್ನ ಸ್ವಂತದ್ದಲ್ಲ. ಸ್ವಂತದ್ದಾಗಿದ್ರೆ ಕೇಳಿದಾಗೆಲ್ಲ ನೀನು ಅದನ್ನ ನನಗೆ ತೋರಿಸಬಹುದಾಗಿತ್ತು. ಅದು ಹುಟ್ಟಿನಿಂದ ಬಂದದ್ದಲ್ಲ, ಅಪ್ಪ ಅಮ್ಮ ಕೊಟ್ಟಿದ್ದಲ್ಲ. ನಿನ್ನದಲ್ಲ ಅಂದ ಮೇಲೆ ನಿನ್ನ ಹತೋಟಿಗೆ ಹೇಗೆ ಬರತ್ತೆ ಆ ಸಿಟ್ಟು? ಆ ಸಿಟ್ಟು ನಿನ್ನದಲ್ಲ ಅಂದ ಮೇಲೆ ಅದನ್ಯಾಕೆ ಹೊತ್ತು ತಿರುಗುತ್ತೀಯ, ಆ ಸಿಟ್ಟನ್ನ ಕೆಳಗಿಳಿಸಿಬಿಡು.
ಈ ಸಮಜಾಯಿಶಿ ಕೇಳಿ ಶಿಷ್ಯ ಕುಣಿದು ಕುಪ್ಪಳಿಸಿಬಿಟ್ಟ.