ಜಗತ್ತು ಕಂಡು ಮಹಾ ದಾರ್ಶನಿಕರು (Great masters of living), having ಮತ್ತು being ಗಳ ಪರ್ಯಾಯಗಳನ್ನು ತಮ್ಮ ತಮ್ಮ ಚಿಂತನಾ ಪದ್ಧತಿಯ ಕೇಂದ್ರ ವಿಷಯಗಳನ್ನಾಗಿಸಿದ್ದಾರೆ. ಬುದ್ಧನ ಪ್ರಕಾರ, ಮನುಷ್ಯ ಪ್ರಗತಿಯ ಅತ್ಯುಚ್ಚ ಹಂತವನ್ನು ತಲುಪಲು, ನಾವು ಯಾವುದನ್ನೂ ಸ್ವಾಧೀನಪಡಿಸಿಕೊಳ್ಳಲು ಹಂಬಲಿಸಬಾರದು. ಜೀಸಸ್ ಹೇಳುವಂತೆ, “ಯಾರು ತಮ್ಮ ಬದುಕನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೋ, ಅವರು ಅದನ್ನ ಕಳೆದುಕೊಳ್ಳುತ್ತಾರೆ ; ಆದರೆ ಯಾರು ನನ್ನ ಸಲುವಾಗಿ ತಮ್ಮ ಬದುಕನ್ನ ಕಳೆದುಕೊಳ್ಳುತ್ತಾರೋ, ಅದೇ ಅವರನ್ನು ರಕ್ಷಿಸುತ್ತದೆ. ಮನುಷ್ಯರಿಗೆ ಇದು ಎಂಥ ಅನುಕೂಲ? ಅವರು ಜಗತ್ತನ್ನು ಗೆದ್ದು ತಮ್ಮನ್ನು ತಾವು ಕಳೆದುಕೊಳ್ಳುವುದು? ~ ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಾಗ 1: Having ಮತ್ತು Being ಗಳ ನಡುವಿನ ವ್ಯತ್ಯಾಸಗಳ ಗ್ರಹಿಕೆ
ಮೊದಲ ನೋಟ
Having ಮತ್ತು Being ಗಳ ನಡುವಿನ ವ್ಯತ್ಯಾಸಗಳ ಪ್ರಾಮುಖ್ಯತೆ.
“Having ಗೆ ಪ್ರತಿಯಾಗಿ Being” ನ ಪರ್ಯಾಯವನ್ನು ಕಲ್ಪಿಸಿಕೊಳ್ಳುವುದು ಕಾಮನ್ ಸೆನ್ಸ್ ಗೆ ಅಷ್ಟಾಗಿ ಒಗ್ಗುವುದಿಲ್ಲ. Having ನ್ನು ನಮ್ಮ ಬದುಕಿನ ಸಹಜ ಪ್ರಕ್ರಿಯೆ ಎಂದು ತಿಳಿದುಕೊಂಡಿದ್ದೇವೆ : ಬದುಕುವುದಕ್ಕಾಗಿ ನಾವು ಹೊಂದಲೇಬೇಕು ಎನ್ನುವುದು ನಮ್ಮ ತಿಳುವಳಿಕೆ. ಮತ್ತು ನಾವು ಏನನ್ನಾದರೂ ಆನಂದಿಸಬೇಕಾದರೆ ಮೊದಲು ಅವನ್ನು ಹೊಂದಬೇಕು ಎನ್ನುವ ಗ್ರಹಿಕೆ. ಯಾವ ಸಂಸ್ಕೃತಿಯ ಪರಮ ಉದ್ದೇಶ ಹೊಂದುವುದಾಗಿದೆಯೋ – ಹೆಚ್ಚು ಹೆಚ್ಚು ಹೊಂದುವುದಾಗಿದೆಯೋ, ಮತ್ತು ಯಾವ ಸಂಸ್ಕೃತಿಯಲ್ಲಿ ಒಬ್ಬರನ್ನ “ ಮಿಲಿಯನ್ ಡಾಲರ್ ಬೆಲೆ ಬಾಳುವ ಮನುಷ್ಯ” ಎಂದು ಗುರುತಿಸಲಾಗುತ್ತದೆಯೋ ಅಂಥ ಸಂಸ್ಕೃತಿಯಲ್ಲಿ having ಮತ್ತು being ಗಳ ನಡುವೆ ಪರ್ಯಾಯಗಳು ಇರುವುದು ಹೇಗೆ ಸಾಧ್ಯ? ಇದಕ್ಕೆ ವಿರುದ್ಧವಾಗಿ, being ಎಂದರೇನೇ having ಎನ್ನುವ ತಿಳುವಳಿಕೆ ಎಲ್ಲರಲ್ಲೂ ಮನೆ ಮಾಡಿದೆ. ಒಬ್ಬರ ಹತ್ತಿರ ಏನೂ ಇಲ್ಲ ಎಂದರೆ ಅವರು ಏನೂ ಅಲ್ಲ.
ಪರಿಸ್ಥಿತಿ ಹೀಗಿರುವಾಗಲೂ, ಜಗತ್ತು ಕಂಡು ಮಹಾ ದಾರ್ಶನಿಕರು (Great masters of living), having ಮತ್ತು being ಗಳ ಪರ್ಯಾಯಗಳನ್ನು ತಮ್ಮ ತಮ್ಮ ಚಿಂತನಾ ಪದ್ಧತಿಯ ಕೇಂದ್ರ ವಿಷಯಗಳನ್ನಾಗಿಸಿದ್ದಾರೆ. ಬುದ್ಧನ ಪ್ರಕಾರ, ಮನುಷ್ಯ ಪ್ರಗತಿಯ ಅತ್ಯುಚ್ಚ ಹಂತವನ್ನು ತಲುಪಲು, ನಾವು ಯಾವುದನ್ನೂ ಸ್ವಾಧೀನಪಡಿಸಿಕೊಳ್ಳಲು ಹಂಬಲಿಸಬಾರದು. ಜೀಸಸ್ ಹೇಳುವಂತೆ, “ಯಾರು ತಮ್ಮ ಬದುಕನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೋ, ಅವರು ಅದನ್ನ ಕಳೆದುಕೊಳ್ಳುತ್ತಾರೆ ; ಆದರೆ ಯಾರು ನನ್ನ ಸಲುವಾಗಿ ತಮ್ಮ ಬದುಕನ್ನ ಕಳೆದುಕೊಳ್ಳುತ್ತಾರೋ, ಅದೇ ಅವರನ್ನು ರಕ್ಷಿಸುತ್ತದೆ. ಮನುಷ್ಯರಿಗೆ ಇದು ಎಂಥ ಅನುಕೂಲ? ಅವರು ಜಗತ್ತನ್ನು ಗೆದ್ದು ತಮ್ಮನ್ನು ತಾವು ಕಳೆದುಕೊಳ್ಳುವುದು? ಅಥವಾ ಬದುಕಿನಿಂದ ತಿರಸ್ಕ್ರತರಾಗುವುದು? “ ( Luke 9 : 24 – 25 ) Master Eckhart ಬೋಧಿಸುವ ಹಾಗೆ, ಯಾವುದನ್ನೂ ಹೊಂದದಿರುವುದು, ತಮ್ಮನ್ನು ತಾವು ಖಾಲಿಯಾಗಿಸಿಕೊಳ್ಳುವುದು, ತೆರೆದುಕೊಳ್ಳುವುದು, ತಮ್ಮ ಬಿಡುಗಡೆಯ ಹಾದಿಯಲ್ಲಿ ತಮ್ಮ ಅಹಂ ಅಡ್ಡ ಬರದಂತೆ ನೋಡಿಕೊಳ್ಳುವುದು, ಅಧ್ಯಾತ್ಮಿಕ ಸಂಪತ್ತು ಮತ್ತು ಸಾಮರ್ಥ್ಯವನ್ನು ಸಾಧಿಸಿಕೊಳ್ಳಲು ಅವಶ್ಯಕವಾಗಿರುವ ಕರಾರುಗಳು. ಮಾರ್ಕ್ಸ್ ಹೇಳುವಂತೆ, “ ಬಡತನ ಎಷ್ಟು ಕ್ರೌರ್ಯವೋ ಅಷ್ಟೇ ಅಸಹ್ಯ ಐಷಾರಾಮಿ, ಮತ್ತು ನಮ್ಮ ಉದ್ದೇಶ ಸಾಧ್ಯವಾದಷ್ಟು “being” ನ ದಿಕ್ಕಿನಲ್ಲಿ ಮುಂದುವರೆಯಬೇಕೇ ಹೊರತು, ಹೆಚ್ಚು ಹೆಚ್ಚು ಹೊಂದುವ ದಿಕ್ಕಿನಲ್ಲಲ್ಲ. ( ಹೀಗೆ ಹೇಳುವಾಗ ನಾನು ನೈಜ ಮನುಷ್ಯ, ಕ್ರಾಂತಿಕಾರಿ ಮಾನವತಾವಾದಿ ಕಾರ್ಲ್ ಮಾರ್ಕ್ಸ್ ನನ್ನು ಉಲ್ಲೇಖಿಸುತ್ತಿದ್ದೇನೆಯೇ ಹೊರತು, ಅಸಹ್ಯಕರ ನಕಲನ್ನು ಆಚರಣೆಗೆ ತಂದ ಸೋವಿಯತ್ ನ ಕಮ್ಯುನಿಸಂನ ಅಲ್ಲ)
ಕಳೆದ ಹಲವಾರು ವರ್ಷಗಳಿಂದ ನಾನು, ಈ ವ್ಯತ್ಯಾಸಗಳ ಬಗ್ಗೆ ಕುತೂಹಲಿಯಾಗಿದ್ದರೂ, ಮನೋವಿಶ್ಲೇಷಣಾತ್ಮಕ ಪದ್ಧತಿಯಲ್ಲಿ, ವ್ಯಕ್ತಿಗಳನ್ನ ಮತ್ತು ಸಮೂಹಗಳನ್ನ ವಾಸ್ತವಿಕ ರೀತಿಯಲ್ಲಿ ಅಧ್ಯಯನ ಮಾಡಲು, ನಾನು ಪ್ರಾಯೋಗಿಕ ಆಧಾರಗಳನ್ನು ಹುಡುಕುತ್ತಿದ್ದೆ. ನಾನು ಗಮನಿಸಿದ ಆಧಾರಗಳ ಮೇಲೆ ನನ್ನ ತೀರ್ಮಾನ ಹೇಳುವುದಾದರೆ, ಅದು ಹೀಗಿದೆ ; ಈ ವ್ಯತ್ಯಾಸ , ಬದುಕಿನ ಕುರಿತಾದ ಪ್ರೀತಿ ಹಾಗು ಸಾವಿನ ಬಗ್ಗೆಯ ಪ್ರೀತಿಯ ಜೊತೆಗೂಡಿ, ಅಸ್ತಿತ್ವದ ಕುರಿತಾದ ಅತ್ಯಂತ ನಿರ್ಣಾಯಕ ಸಮಸ್ಯೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ. ಆ ಪ್ರಾಯೋಗಿಕ ಮಾನವ ಶಾಸ್ತ್ರೀಯ ಮತ್ತು ಮನೋವಿಶ್ಲೇಷಣಾತ್ಮಕ ಮಾಹಿತಿ ನಮ್ಮೆದುರು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿರುವ ಸಂಗತಿ ಏನೆಂದರೆ; having ಮತ್ತು being ಎರಡೂ ಬದುಕಿನ ಎರಡು ಮೂಲಭೂತ ಅನುಭವಗಳು ಮತ್ತು ಅವುಗಳ ಆಯಾ ಸಾಮರ್ಥ್ಯಗಳು, ವ್ಯಕ್ತಿಗಳ ಮತ್ತು ವಿವಿಧ ರೀತಿಯ ಸಾಮಾಜಿಕ ಪಾತ್ರಗಳ ಗುಣಲಕ್ಷಣಗಳ ನಡುವಿನ ವ್ಯತ್ಯಾಸವನ್ನ ಎತ್ತಿ ತೋರಿಸುತ್ತವೆ.
ವಿವಿಧ ಕಾವ್ಯತ್ಮಕ ಅಭಿವ್ಯಕ್ತಿಗಳು ಪ್ರಸ್ತುತಪಡಿಸುವ ಉದಾಹರಣೆಗಳು
ಬದುಕಿನ ಅಸ್ತಿತ್ವದ ಎರಡು ವಿಧಾನಗಳಾದ Having ಮತ್ತು being ಗಳ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳುವ ಪ್ರಕ್ರಿಯೆಗೆ ಮುನ್ನುಡಿಯಾಗಿ ನಾನು, D.T ಸುಝುಕಿಯವರು ತಮ್ಮ “Lectures on Zen Buddhism “ ಪುಸ್ತಿಕೆಯಲ್ಲಿ ಉಲ್ಲೇಖಿಸಿರುವ, ಒಂದೇ ವಿಷಯದ ಕುರಿತಾಗಿ ರಚಿತವಾಗಿರುವ ಎರಡು ಪದ್ಯಗಳನ್ನು ಇಲ್ಲಿ ರೆಫರ್ ಮಾಡುತ್ತಿದ್ದೇನೆ. ಮೊದಲನೇಯದು ಜಪಾನೀ ಕವಿ ಬಾಶೋ (1644-1694) ರಚಿಸಿರುವ ಒಂದು ಪುಟ್ಟ ಹಾಯ್ಕು ಹಾಗು ಇನ್ನೊಂದು ಪದ್ಯ, ಹತ್ತೊಂಭತ್ತನೇ ಶತಮಾನದ ಪ್ರಖ್ಯಾತ ಇಂಗ್ಲೀಷ್ ಕವಿ ಟೆನಿಸನ್ ರಚಿಸಿದ್ದು. ಇಬ್ಬರೂ ಕವಿಗಳು ಒಂದೇ ಬಗೆಯ ಅನುಭವವನ್ನು ವರ್ಣಿಸುತ್ತಿದ್ದಾರೆ : ಪ್ರಯಾಣ ಮಾಡುವಾಗ ದಾರಿಯಲ್ಲಿ ಕಂಡ ಒಂದು ಹೂವಿನ ಬಗ್ಗೆ……..
ಟೆನಿಸನ್ ನ ಪದ್ಯ ಹೀಗಿದೆ…
ಬಿರುಕು ಬಿಟ್ಟ ಗೋಡೆಯೊಂದರ ಮೇಲೆ
ಅರಳಿರುವ ಪುಟ್ಟ ಹೂವು,
ಬೇರು ಸಹಿತ ಕಿತ್ತು
ಹಿಡಿದುಕೊಂಡಿದ್ದೇನೆ ಕೈಯಲ್ಲಿ ಇಡಿಯಾಗಿ,
ಪುಟ್ಟ ಹೂವೇ,
ನೀನು, ನಿನ್ನ ಮೂಲ, ನಿನ್ನ ಸಮಸ್ತ
ನನಗೆ ಅರ್ಥವಾಗುವುದಾದರೆ
ಅರ್ಥವಾಗಲೇ ಬೇಕು ನನಗೆ ದೇವರು
ಮತ್ತು ಮನುಷ್ಯ.
ಜಪಾನಿ ಭಾಷೆಯಿಂದ ಅನುವಾದಿಸಿಲಾಗಿರುವ ಬಾಶೋ ನ ಹಾಯ್ಕು ಹೀಗಿದೆ….
ಗಮನವಿಟ್ಟು ನೋಡಿದಾಗ
ಕಂಡದ್ದು ಅರಳಿದ ನಝೂನಾ ಹೂವು,
ಬೇಲಿಯ ಸಾಲಿನಲ್ಲಿ !
ಈ ಎರಡೂ ಪದ್ಯಗಳ ನಡುವಿನ ವ್ಯತ್ಯಾಸ ಬೆಚ್ಚಿಬೀಳಿಸುವಂಥದು. ಹೂವನ್ನು ನೋಡಿದಾಗ ಟೆನಿಸನ್ ನ ಪ್ರತಿಕ್ರಿಯೆ ಹೊವನ್ನು ಹೊಂದುವುದರಲ್ಲಿ ಕೊನೆಗೊಳ್ಳುತ್ತದೆ. ಅವನು ಹೂವನ್ನ ಬೇರು ಸಹಿತ ಕಿತ್ತು ಕೊಳ್ಳುತ್ತಾನೆ. ಅವನು ಪದ್ಯವನ್ನು ಕೊನೆಗೊಳಿಸುವುದು, ತಾನು ಪ್ರಕೃತಿಯ ರಹಸ್ಯವನ್ನು ಬೇಧಿಸುತ್ತ, ದೇವರು ಮತ್ತು ಮನುಷ್ಯರ ಬಗ್ಗೆ ಒಳನೋಟಗಳನ್ನು ಹೊಂದುವ ಸಲುವಾಗಿ, ಹೂವು ಮಾಡಬೇಕಾಗಿರುವ ಅಗತ್ಯ ಕೆಲಸದ ಕುರಿತಾಗಿನ ಬೌದ್ಧಿಕ ಚರ್ಚೆಯ ಮೂಲಕವಾದರೂ, ಅಷ್ಟೊತ್ತಿಗಾಗಲೇ ಕವಿಯ ಕುತೂಹಲದ ಕಾರಣವಾಗಿ ಹೂವು ಸತ್ತು ಹೋಗಿದೆ. ನಾವು ಈ ಕವಿತೆಯಲ್ಲಿನ ಕವಿ ಟೆನಿಸನ್ ನನ್ನು, ಬದುಕನ್ನ ಛೇದಿಸುತ್ತ, ನಾಶಮಾಡುತ್ತ ಸತ್ಯವನ್ನು ಹುಡುಕುವ ಪ್ರಯತ್ನ ಮಾಡುತ್ತಿರುವ ಪಾಶ್ಚಿಮಾತ್ಯ ವಿಜ್ಞಾನಿಗಳಿಗೆ ಹೋಲಿಸಬಹುದು.
ಆದರೆ ಹೂವನ್ನು ಕಂಡಾಗ ಬಾಶೋನ ಪ್ರತಿಕ್ರಿಯೆ ಸಂಪೂರ್ಣ ವಿಭಿನ್ನ. ಅವನು ಹೂವನ್ನು ಗಿಡದಿಂದ ಕಿತ್ತುಕೊಳ್ಳಲು ಬಯಸುವುದಿಲ್ಲ ; ಅವನು ಹೂವನ್ನ ಮುಟ್ಟುವುದಿಲ್ಲ ಕೂಡ. ಅವನು ಮಾಡುವ ಒಂದೇ ಒಂದು ಕೆಲಸವೆಂದರೆ, ಹೂವನ್ನ ತಾದಾತ್ಮ್ಯತೆಯಿಂದ, ಕಾಳಜಿಯಿಂದ ಗಮನಿಸುವುದು. ಈ ಕುರಿತಾದ ಸುಝುಕಿಯವರ ವಿವರಣೆ ಹೀಗಿದೆ.
ಬಹುಶಃ ಹಳ್ಳಿಯ ದಾರಿಯೊಂದರಲ್ಲಿ ನಡೆಯುತ್ತ ಹೋಗುವಾಗ ಬಾಶೋ, ಬೇಲಿಯ ಸಾಲಿನಲ್ಲಿ ನಿರ್ಲಕ್ಷಕ್ಕೆ ತುತ್ತಾಗಿ ಅರಳಿಕೊಂಡಿರುವ ಈ ಹೂವನ್ನ ಗಮನಿಸಿದ್ದಾನೆ. ಹೂವಿನ ಹತ್ತಿರ ಹೋಗಿ ನೋಡಿದ್ದಾನೆ, ಅದೊಂದು ಕಾಡು ಹೂ, ದಾರಿಹೋಕರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಂಥ ಪ್ರಸಿದ್ಥವೇನೂ ಅಲ್ಲದ ಹೂ. ಹಾಯ್ಕುನಲ್ಲಿ ಹೂವನ್ನು ಹಾಡಿ ಹೊಗಳಲಾಗಿಲ್ಲ, ಅದರ ಮೇಲೆ ಯಾವ ಭಾವನಾತ್ಮಕ ಹೊರೆಯನ್ನೂ ಹೊರೆಸಲಾಗಿಲ್ಲ, ಕೊನೆಯ ಎರಡು ಅಕ್ಷರಗಳನ್ನು ಹೊರತುಪಡಿಸಿ. ಇದನ್ನ ಜಪಾನಿ ಭಾಷೆಯಲ್ಲಿ kana ಎನ್ನುತ್ತಾರೆ. ಇದನ್ನ ಬಹುತೇಕ ನಾಮಪದಗಳ ಜೊತೆ, ವಿಶೇಷಣಗಳ ಜೊತೆ ಅಥವಾ ಕ್ರಿಯಾ ವಿಶೇಷಣಗಳ ಜೊತೆ ಬಳಸುತ್ತಾರೆ, ಮತ್ತು ಇದು ಅಭಿಮಾನದ, ಅಥವಾ ಹೊಗಳಿಕೆಯ ಅಥವಾ ದುಗುಡ ಅಥವಾ ಆನಂದದ ಭಾವವನ್ನು ಸೂಚಿಸುತ್ತದೆ. ಕೆಲವೊಮ್ಮೆ ಇಂಗ್ಲೀಷ್ ಅನುವಾದದಲ್ಲಿ ಆಶ್ಚರ್ಯಸೂಚಕ (!) ಚಿಹ್ನೆಯನ್ನ ಬಳಸುವ ಮೂಲಕ ಈ ಭಾವಗಳನ್ನು ತುಂಬಿಕೊಳ್ಳಲಾಗುತ್ತದೆ. ಸಧ್ಯದ ಹಾಯ್ಕುದಲ್ಲಿ ಇಡಿ ಪದ್ಯ ಮುಕ್ತಾಯಗೊಳ್ಳುವುದು ಈ ಆಶ್ಚರ್ಯಸೂಚಕ ಚಿಹ್ನೆಯ ಮೂಲಕ.
ಟೆನಿಸನ್ ಗೆ ಪ್ರಕೃತಿಯನ್ನ ಮನುಷ್ಯರನ್ನ ಅರ್ಥಮಾಡಿಕೊಳ್ಳಲು ಹೂವನ್ನು ಸ್ವಾಧೀನಪಡಿಸಿಕೊಳ್ಳುವುದು ಅನಿವಾರ್ಯ, ಆದರೆ ಅವನು ಈ ಹೂವನ್ನ ಹೊಂದುವ ಪ್ರಕ್ರಿಯೆಯಲ್ಲಿ ಹೂವು ನಾಶವಾಗಿದೆ. ಆದರೆ ಬಾಶೋ ಗೆ ಹೂವನ್ನು ತನ್ಮಯತೆಯಿಂದ ನೋಡುವುದಷ್ಟೇ ಮುಖ್ಯ, ನೋಡುವುದಷ್ಟೇ ಅಲ್ಲ, ಹೂವಿನೊಂದಿಗೆ ತಾದಾತ್ಮ್ಯವನ್ನು ಸಾಧಿಸುವುದು, ತನ್ನನ್ನು ಹೂವಿನೊಂದಿಗೆ ಒಂದಾಗಿಸಿಕೊಳ್ಳುವುದು ಮತ್ತು ಹೂವನ್ನು ಅದರ ಪಾಡಿಗೆ ಬದುಕಲು ಬಿಟ್ಟು ಬಿಡುವುದು ಮುಖ್ಯ.
(ಮುಂದುವರೆಯುತ್ತದೆ)
(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )