ಕವಿಯದ್ದು ಬರೀ ಕಲ್ಪನೆಯಲ್ಲ, ಕಾಣ್ಕೆ! : ಓಶೋ ವ್ಯಾಖ್ಯಾನ

ಕವಿಗೆ ಮಾತ್ರ ಮಾತ್ರ ಸೃಷ್ಟಿಯ ರಹಸ್ಯಗಳ ಕುರಿತ ದಾರಿಯ ಶಾರ್ಟ್ ಕಟ್ ಗೊತ್ತು. ಅವುಗಳನ್ನ ಸಾಕ್ಷಿಕೊಟ್ಟು ಪ್ರೂವ್ ಮಾಡುವುದು ಅವನಿಗೆ ಸಾಧ್ಯವಾಗದಿರಬಹುದು. ಅವನು ವಿಜ್ಞಾನಿಯಲ್ಲ, ಅವನು ತರ್ಕ ಶಾಸ್ತ್ರಜ್ಞನಲ್ಲ, ಅವನಿಗೆ ಯಾವುದನ್ನಾದರೂ ಪ್ರೂವ್ ಮಾಡುವ ಯಾವ ಹುಕಿಯೂ ಇಲ್ಲ. ಅವನು ಕವಿ, ತನ್ನ ಹಾಡುಗಳ ಮೂಲಕ, ತನ್ನ ಚಿತ್ರಗಳ ಮೂಲಕ ಸತ್ಯಗಳನ್ನ ಬಿಚ್ಚಿಡುವುದಷ್ಟೇ ಅವನಿಗೆ ಗೊತ್ತು… ~ ಓಶೋ | ಚಿದಂಬರ ನರೇಂದ್ರ

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರ, ನಿಮ್ಮ ಶರಣ ಸಂಬಂಧ.

~ ಅಲ್ಲಮಪ್ರಭು ದೇವರು

ಬೀಜದಲ್ಲಿ ಅಡಗಿಹುದು ಮರವು; ಮರ-
-ದಲ್ಲಿ ಅಡಗಿ ಬೀಜ
ತೇಜವೆಂಬ ಬಸಿರಲ್ಲೇ ಕತ್ತಲಿದೆ
ಕತ್ತಲಲ್ಲೇ ತೇಜ.

~ ಅಂಬಿಕಾತನಯದತ್ತ


ಅತ್ಯಂತ ಮುಖ್ಯ ಡಚ್ ಪೇಂಟರ್ ಗಳಲ್ಲಿ ವಿನ್ಸೆಂಟ್ ವ್ಯಾನ್ ಗೋ ನ ಸ್ಥಾನ ಅನನ್ಯವಾದದ್ದು. ತಿಳುವಳಿಕೆ ಮತ್ತು ಒಳನೋಟಗಳ ವಿಷಯದಲ್ಲಿ ವ್ಯಾನ್ ಗೋ ನಂಥ ಇನ್ನೊಬ್ಬ ಚಿತ್ರಕಾರನಿಲ್ಲ. ಅವನ ಪೇಂಟಿಂಗ್ ಗಳಲ್ಲಿ ಮರಗಳು, ನಕ್ಷತ್ರಗಳ ಆಚೆ ಹಬ್ಬಿಕೊಂಡಿರುತ್ತಿದ್ದವು. ಆತನ ಸಮಕಾಲೀನರು ಅವನೊಬ್ಬ ವಿಕ್ಷಿಪ್ತ, ಹುಚ್ಚ ಎಂದೇ ಭಾವಿಸಿದ್ದರು. ಅವನನ್ನ ಮೇಲಿಂದ ಮೇಲೆ ಕೇಳಲಾಗುತ್ತಿತ್ತು, “ಎಲ್ಲಿ ನೋಡಿರುವೆ ನೀನು ನಕ್ಷತ್ರಗಳಿಗಿಂತಲೂ ಎತ್ತರ ಬೆಳೆದಿರುವ ಮರಗಳನ್ನ?”

“ ನಾನು ನೋಡಿಲ್ಲ, ಆದರೆ ಈ ಮರಗಳ ಪಕ್ಕ ಕುಳಿತಿರುವಾಗ ನನಗೆ ಈ ಮರಗಳ ಬಯಕೆಗಳು, ತುಡಿತಗಳು , ಕೇಳಿಸುತ್ತವೆ. ನಾನು ಹೂವುಗಳನ್ನ ಪೇಂಟ್ ಮಾಡೋದು, ಇನ್ನೂ ಆ ಹೂವಿನ ಗಿಡದ ಬೀಜಗಳನ್ನು ಬಿತ್ತುವ ಮೊದಲು, ಆ ಬೀಜದೊಳಗಿನ ಕರೆ ನನಗೆ ಕೇಳಿಸುತ್ತದೆ”. ವ್ಯಾನ್ ಗೋ ನ ಇಂಥ ಉತ್ತರಗಳನ್ನು ಕೇಳಿ ಯಾವ ಸಾಮಾನ್ಯರು ಅವನನ್ನು ಹುಚ್ಚ ಅನ್ನುವುದಿಲ್ಲ ಹೇಳಿ.

ವ್ಯಾನ್ ಗೋ ಚಿತ್ರಿಸಿದ ಎಲ್ಲ ನಕ್ಷತ್ರಗಳು ವಿಚಿತ್ರವಾದವು, ಅವನು ಅವುಗಳನ್ನ ಸ್ಪೈರಲ್ (spiral) ಗಳಂತೆ ಪೇಂಟ್ ಮಾಡಿದ್ದಾನೆ. “ ನೀನೊಬ್ಬ ಹುಚ್ಚ, ಈ ಸ್ಪೈರಲ್ ನಕ್ಷತ್ರಗಳನ್ನ ಎಲ್ಲಿ ನೋಡಿರುವಿ ನೀನು?” ಅವನ ಜೊತೆಯ ಪೇಂಟರ್ ಗಳು ಅವನನ್ನು ಹೀಗಳೆಯುತ್ತಿದ್ದರು. “ನನ್ನ ಕನಸುಗಳಲ್ಲಿ ಅಷ್ಟೇ ಅಲ್ಲ, ಎಚ್ಚರಿಕೆಯ ಸ್ಥಿತಿಯಲ್ಲಿಯೂ ನನಗೆ ನಕ್ಷತ್ರಗಳು ಸ್ಪೈರಲ್ ಗಳಂತೆಯೇ ಕಾಣಿಸುತ್ತವೆ, ಏನು ಮಾಡಲಿ ನಾನು?” ವ್ಯಾನ್ ಗೋ ಉತ್ತರಿಸುತ್ತಿದ್ದ. ಅವನ ಜೀವಿತ ಕಾಲದಲ್ಲಿ ಅವನ ಒಂದು ಪೇಂಟಿಂಗ್ ಕೂಡ ಮಾರಾಟವಾಗಲಿಲ್ಲ, ಇಂಥ ಅಸಂಬದ್ಧ ಚಿತ್ರಗಳನ್ನು ಯಾರು ತಾನೆ ಕೊಳ್ಳಬಹುದು? ಅವನು ತನ್ನ ಚಿತ್ರಗಳನ್ನ, ತನ್ನ ಇಡೀ ಬದುಕನ್ನೇ ಬಸಿದು ಧಾರೆಯೆರೆದವರಂತೆ ಚಿತ್ರಿಸುತ್ತಿದ್ದ.

ಅವನಿಗೆ ಪ್ರತಿ ವಾರ, ಏಳು ದಿನಗಳ, ಎರಡು ಹೊತ್ತಿನ ಊಟಕ್ಕೆ ಸಾಕಾಗುವಷ್ಟು ಹಣವನ್ನ, ಅವನ ತಮ್ಮ ಕೊಡುತ್ತಿದ್ದ. ವ್ಯಾನ್ ಗೋ ವಾರದಲ್ಲಿ ಮೂರು ದಿನ ಉಪವಾಸ ಮಾಡುತ್ತ, ತಮ್ಮ ಕೊಟ್ಟ ದುಡ್ಡಿನಲ್ಲಿ ಹಣ ಉಳಿಸಿ ತನ್ನ ಚಿತ್ರಗಳಿಗಾಗಿ ಪೇಂಟ್, ಕ್ಯಾನವಾಸ್ ಖರೀದಿಸುತ್ತಿದ್ದ. ಇಷ್ಟು ಆಳವಾದ ಜೀವನ ಪ್ರೀತಿಯಿಂದ ಚಿತ್ರಿಸಿದ ಪೇಂಟಿಂಗಳನ್ನ ನಾನಂತೂ ಬೇರೆಲ್ಲೂ ನೋಡಿಲ್ಲ.

ಅವನು ಪೇಂಟ್ ಮಾಡುವುದಕ್ಕಾಗಿಯೇ ಹುಟ್ಟಿದ್ದ, ಪೇಂಟ್ ಮಾಡುವುದಕ್ಕಾಗಿಯೇ ಬದುಕಿದ್ದ. ಆತ ತೀರಿಕೊಂಡಿದ್ದು ಅವನ ಮೂವತ್ಮೂರರ ಹರೆಯದಲ್ಲಿ, ಇನ್ನೂ ಪೇಂಟ್ ಮಾಡುವುದಕ್ಕೆ ಏನೂ ಉಳಿದಿಲ್ಲ ಎನ್ನುವ ಭರವಸೆಯಲ್ಲಿ. ಕೆಲವು ತಿಂಗಳುಗಳಷ್ಟು ಹಿಂದೆಯಷ್ಟೇ ಭೌತ ಶಾಸ್ತ್ರಜ್ಞರು ನಿರ್ಣಯಕ್ಕೆ ಬಂದಿದ್ದಾರೆ, ನಕ್ಷತ್ರಗಳು ಸ್ಪೈರಲ್ ಗಳ ಆಕಾರದಲ್ಲಿವೆಯೆಂದು, ವ್ಯಾನ್ ಗೋ ಸತ್ತು ಬರೊಬ್ಬರಿ ನೂರು ವರ್ಷಗಳ ನಂತರ.

ಕವಿಯೊಬ್ಬನಿಗೆ ಮಾತ್ರ ಇಂಥ ಅಸಾಧ್ಯ ಒಳನೋಟಗಳು ಸಾಧ್ಯ. ಅವನಿಗೆ ಮಾತ್ರ ಸೃಷ್ಟಿಯ ರಹಸ್ಯಗಳ ಕುರಿತ ದಾರಿಯ ಶಾರ್ಟ್ ಕಟ್ ಗೊತ್ತು. ಅವುಗಳನ್ನ ಸಾಕ್ಷಿಕೊಟ್ಟು ಪ್ರೂವ್ ಮಾಡುವುದು ಅವನಿಗೆ ಸಾಧ್ಯವಾಗದಿರಬಹುದು. ಅವನು ವಿಜ್ಞಾನಿಯಲ್ಲ, ಅವನು ತರ್ಕ ಶಾಸ್ತ್ರಜ್ಞನಲ್ಲ, ಅವನಿಗೆ ಯಾವುದನ್ನಾದರೂ ಪ್ರೂವ್ ಮಾಡುವ ಯಾವ ಹುಕಿಯೂ ಇಲ್ಲ. ಅವನು ಕವಿ, ತನ್ನ ಹಾಡುಗಳ ಮೂಲಕ, ತನ್ನ ಚಿತ್ರಗಳ ಮೂಲಕ ಸತ್ಯಗಳನ್ನ ಬಿಚ್ಚಿಡುವುದಷ್ಟೇ ಅವನಿಗೆ ಗೊತ್ತು. ವ್ಯಾನ್ ಗೋ ನ ಸಮಕಾಲೀನರು ಅವನಿಗಿಂತ ಸಾವಿರ ವರ್ಷ ಹಿಂದೆ ಇದ್ದರು. ನಿಜವಾದ ಸಮಕಾಲೀನ ವ್ಯಕ್ತಿಯೊಬ್ಬ ಸಿಗುವುದು ನಿಜಕ್ಕೂ ಅಪರೂಪ.

ದೇವಸ್ಥಾನದ ನೆರಳಲ್ಲಿ
ಒಬ್ಬಂಟಿಯಾಗಿ ಕುಳಿತಿದ್ದ ಕುರುಡನೊಬ್ಬ
ನಮ್ಮ ಕಣ್ಣಿಗೆ ಬಿದ್ದ.

‘ಅಗೋ ಅಲ್ಲಿ ನೋಡು
ಈ ನೆಲದ ಅತ್ಯಂತ ದೊಡ್ಡ ಜ್ಞಾನಿಯನ್ನು’
ಗೆಳೆಯ ಉತ್ಸಾಹದಿಂದ ಕೂಗಿಕೊಂಡ.

ಗೆಳೆಯನನ್ನು ಹಿಂದೆ ಬಿಟ್ಟು
ನಾನು ಕುರುಡನ ಹತ್ತಿರ ಹೋದೆ,
ಬಹಳ ಹೊತ್ತು ನಾವು ಅದು, ಇದು ಮಾತನಾಡಿದೆವು.
‘ಯಾವತ್ತಿನಿಂದ ನಿನಗೆ ಈ ಕುರುಡು? ‘ ನನ್ನ ಪ್ರಶ್ನೆ.
‘ನಾನು ಹುಟ್ಟು ಕುರುಡ ಸ್ವಾಮಿ’ ಅವನು ಉತ್ತರಿಸಿದ.

‘ಎಷ್ಟು ಮೋಹಕವಾಗಿದೆ ನಿನ್ನ ಮಾತು
ಯಾವ ಜ್ಞಾನದ ಮಾರ್ಗ ನಿನ್ನದು?’ ಮತ್ತೆ ಕೇಳಿದೆ.

‘ ನಾನೊಬ್ಬ ಖಗೋಳ ಯಾತ್ರಿ’

ಆತ, ತನ್ನ ಕೈ ಎದೆ ಮೇಲೆ ಇಟ್ಟುಕೊಂಡು ಹೇಳಿದ,

‘ಹೀಗೆ ನಾನು ಹಲವಾರು ಸೂರ್ಯ, ಚಂದ್ರ, ನಕ್ಷತ್ರಗಳ
ಜೊತೆ ಹೆಜ್ಜೆ ಹಾಕುತ್ತೇನೆ’

  • ಖಲೀಲ್ ಜಿಬ್ರಾನ್

Leave a Reply