ಎಲ್ಲರೂ ಬುದ್ಧರೇ, ನಿಮಗೆ ಆ ಕುರಿತು ಅರಿವು ಇರಬಹುದು ಅಥವಾ ಇರಲಿಕ್ಕಿಲ್ಲ. ಝೆನ್ ಹಾದಿಯಲ್ಲಿ ಯಾವ ಊಹಾ ಪೋಹಗಳಿಗೂ ಜಾಗವಿಲ್ಲ. ನೀವು ಬೌದ್ಧರಾಗಿರದಿದ್ದರೆ, ಬೌದ್ಧರು ಮತ್ತು ಬೌದ್ಧರಲ್ಲದವರು ಎಂಬ ಎರಡು ಗುಂಪುಗಳ ಬಗ್ಗೆ ನೀವು ವಿಚಾರ ಮಾಡುತ್ತೀರಿ ಆದರೆ ಅಕಸ್ಮಾತ್ ನೀವು ಬೌದ್ಧರಾಗಿದ್ದರೆ ನಿಮಗೆ ಎಲ್ಲರೂ ಬೌದ್ಧರೇ, ತಿಗಣೆಗಳು ಕೂಡ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತನ ಬಗ್ಗೆ
ಪೂರ್ಣವಾಗಿ ಗೊತ್ತಿರುವ ಇಬ್ಬರು
ಹೇಗೆ ಪರಸ್ಪರ ಭೇಟಿ ಮಾಡಬೇಕು
ಮತ್ತು ಹೇಗೆ
ಒಬ್ಬರನೊಬ್ಬರು ಬಿಳ್ಕೊಡಬೇಕು?
ಹೇಗೆಂದರೆ
ಹಿರಿಯ ಸಂಗೀತ ಮಾಂತ್ರಿಕನೊಬ್ಬ
ತನ್ನ ಪ್ರೀತಿಯ
ವಾದ್ಯವನ್ನು ಅಕ್ಕರೆಯಿಂದ ಮಾತಾಡಿಸಿ
ತನ್ನ ಅವತ್ತಿನ ಕೊನೆಯ ಪ್ರದರ್ಶನಕ್ಕೆ
ಹುರಿದುಂಬಿಸುವಂತೆ.
- ಹಾಫಿಜ್
ಇದು ಬುದ್ಧ ಹೇಳಿದ ಮಾತು, “ ನನಗೆ ಜ್ಞಾನೋದಯವಾದ ತಕ್ಷಣ ಆಶ್ಚರ್ಯವಾಯಿತು, ಇಡೀ ಅಸ್ತಿತ್ವಕ್ಕೆ ಈ ಮೊದಲೇ ಜ್ಞಾನೋದಯವಾಗಿದೆ, ಅಸ್ತಿತ್ವದ ಪ್ರತಿಯೊಂದು ಸಂಗತಿ, ಪ್ರತಿಯೊಬ್ಬ ವ್ಯಕ್ತಿ ಈ ಜ್ಞಾನೋದಯದ ಭಾಗವಾಗಿದ್ದಾರೆ, ಆದರೆ ಮನುಷ್ಯರಿಗೆ ಮಾತ್ರ ಈ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲ. ಎಲ್ಲರೂ ತಮ್ಮೊಳಗೆ ಜ್ಞಾನೋದಯವನ್ನ ತುಂಬಿಕೊಂಡಿದ್ದಾರೆ ಆದರೆ ಯಾರೂ ಇದನ್ನ ಗಮನಿಸುತ್ತಿಲ್ಲ.”
ಬುದ್ಧನಿಗೆ ಜ್ಞಾನೋದಯವಾಗುವುದಕ್ಕಿಂತ ಮುಂಚೆ, ಅವನು ಇನ್ನೂ ಸಾಧಕನಾಗಿದ್ದಾಗ, ಅವನಿಗೆ ಜ್ಞಾನೋದಯ ಹೊಂದಿದ ಒಬ್ಬ ಮನುಷ್ಯನ ಬಗ್ಗೆ ಗೊತ್ತಾಯಿತು. ಬುದ್ಧ ಆ ಮನುಷ್ಯನನ್ನು ಭೇಟಿಯಾಗಲು ಅವನನ್ನು ಹುಡುಕಿಕೊಂಡು ಬಂದ. ಆಗ ಬುದ್ಧನಿಗೆ ಜ್ಞಾನೋದಯದ ಕುರಿತು ಯಾವ ಕಲ್ಪನೆ ಯಾವ ತಿಳುವಳಿಕೆಯೂ ಇರಲಿಲ್ಲ. ಅವನಿಗೆ ಈ ಕುರಿತು ಯಾವ ಪೂರ್ವಾಗ್ರಹವೂ ಇರಲಿಲ್ಲ, ಅವನು ಜ್ಞಾನೋದಯದ ಪರವಾಗಿಯೂ ಇರಲಿಲ್ಲ, ವಿರುದ್ಧವಾಗಿಯೂ ಇರಲಿಲ್ಲ. ಅವನು ಮುಕ್ತ ಮನಸ್ಸಿನಿಂದ ಜ್ಞಾನೋದಯ ಹೊಂದಿದ ಮನುಷ್ಯನನ್ನು ಭೇಟಿಯಾಗಲು ಬಂದಿದ್ದ.
ಆ ಮನುಷ್ಯನ ಹತ್ತಿರ ಬರುತ್ತಿದ್ದಂತೆಯೇ, ಬುದ್ಧ ತನಗೇ ಗೊತ್ತಿಲ್ಲದಂತೆ ಆ ಮನುಷ್ಯನ ಎದುರು ಬಾಗಿದ, ಅವನ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಿದ. ತನ್ನ ಈ ವರ್ತನೆಯ ಬಗ್ಗೆ ಬುದ್ಧನಿಗೆ ಆಶ್ಚರ್ಯವಾಯಿತು, ಏಕೆಂದರೆ ಬುದ್ಧ ಹೀಗೆ ಮಾಡಬೇಕೆಂದು ಯಾವ ನಿರ್ಧಾರವನ್ನೂ ಮಾಡಿರಲಿಲ್ಲ. ಬುದ್ಧ ತನಗೆ ಅರಿವಿಲ್ಲದಂತೆಯೇ ಆ ಮನುಷ್ಯನ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಿದ್ದ. ಇದು ಬುದ್ಧ ಅನುಭವಿಸಿದ ಮೊದಲ ಆಶ್ಚರ್ಯ. ಆದರೆ ಬುದ್ಧ ಆ ಮನುಷ್ಯನಿಗೆ ನಮಸ್ಕಾರ ಮಾಡಿ ತಲೆ ಎತ್ತಿದಾಗ ಅವನಿಗಾಗಿ ಇನ್ನೊಂದು ಆಶ್ಚರ್ಯ ಕಾದಿತ್ತು ಮತ್ತು ಇದು ಮೊದಲ ಅಚ್ಚರಿಗಿಂತ ಇನ್ನೂ ಹೆಚ್ಚಿನದಾಗಿತ್ತು.
ಬುದ್ಧ ಆ ಮನುಷ್ಯನಿಗೆ ನಮಸ್ಕಾರ ಮಾಡಿ ತಲೆ ಎತ್ತುತ್ತಿದ್ದಂತೆಯೇ, ಆ ಮನುಷ್ಯ ಬುದ್ಧನ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಿದ. ಆ ಮನುಷ್ಯನ ಇಂಥ ವರ್ತನೆಯಿಂದ ಅಪ್ರತಿಭನಾದ ಬುದ್ಧ ಪ್ರಶ್ನೆ ಮಾಡಿದ, “ ನಿನಗೆ ಜ್ಞಾನೋದಯವಾಗಿದೆ, ನಾನು ನಿನ್ನ ಪಾದ ಮುಟ್ಟಿ ನಮಸ್ಕಾರ ಮಾಡಿದರೆ ತಪ್ಪಿಲ್ಲ ಆದರೆ ನೀನು ಯಾಕೆ ನನಗೆ ನಮಸ್ಕಾರ ಮಾಡಿದೆ?”
ಆ ಮನುಷ್ಯ ನಕ್ಕು ಉತ್ತರಿಸಿದ, “ ಸ್ವಲ್ಪ ಸಮಯದ ಮೊದಲು ನನಗೆ ಜ್ಞಾನೋದಯವಾಗಿರಲಿಲ್ಲ, ಆದರೆ ಈಗ ಜ್ಞಾನೋದಯವಾಗಿದೆ. ನಿನಗೆ ಇನ್ನೂ ಜ್ಞಾನೋದಯವಾಗಿಲ್ಲ ಸ್ವಲ್ಪ ಸಮಯದ ನಂತರ ಖಂಡಿತ ಆಗುತ್ತದೆ. ಇದು ಕೇವಲ ಸಮಯದ ವಿಷಯ ಅಷ್ಟೇ. ಆದರೆ ನನಗೆ ಮಾತ್ರ ನೀನು ಜ್ಞಾನೋದಯದ ಮನುಷ್ಯನೇ ನಿನಗೆ ಈ ಬಗ್ಗೆ ಇನ್ನೂ ಗೊತ್ತಿಲ್ಲ ಅಷ್ಟೇ. ನನಗೆ ನಿನ್ನೊಳಗೆ ಇರುವ ಈ ನಿಧಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಆದ್ದರಿಂದ ನೀನು ನನಗೆ ಯಾವ ಕಾರಣಕ್ಕಾಗಿ ನಮಸ್ಕಾರ ಮಾಡಿದೆಯೋ, ನಾನೂ ನಿನಗೆ ಅದೇ ಕಾರಣಕ್ಕಾಗಿ ತಲೆಬಾಗಿದೆ. “
ಎಲ್ಲರೂ ಬುದ್ಧರೇ, ನಿಮಗೆ ಆ ಕುರಿತು ಅರಿವು ಇರಬಹುದು ಅಥವಾ ಇರಲಿಕ್ಕಿಲ್ಲ. ಝೆನ್ ಹಾದಿಯಲ್ಲಿ ಯಾವ ಊಹಾ ಪೋಹಗಳಿಗೂ ಜಾಗವಿಲ್ಲ. ನೀವು ಬೌದ್ಧರಾಗಿರದಿದ್ದರೆ, ಬೌದ್ಧರು ಮತ್ತು ಬೌದ್ಧರಲ್ಲದವರು ಎಂಬ ಎರಡು ಗುಂಪುಗಳ ಬಗ್ಗೆ ನೀವು ವಿಚಾರ ಮಾಡುತ್ತೀರಿ ಆದರೆ ಅಕಸ್ಮಾತ್ ನೀವು ಬೌದ್ಧರಾಗಿದ್ದರೆ ನಿಮಗೆ ಎಲ್ಲರೂ ಬೌದ್ಧರೇ, ತಿಗಣೆಗಳು ಕೂಡ.
ಒಮ್ಮೆ ಒಬ್ಬ ರೈತ ತಾನು ಹುಟ್ಟಿದ ಹಳ್ಳಿ ಬಿಟ್ಟು ಹತ್ತಿರದ ಇನ್ನೊಂದು ಊರಿಗೆ ಗಂಟು ಮೂಟೆ ಕಟ್ಟಿಕೊಂಡು ವಲಸೆ ಹೋದ. ಹೊಸ ಊರು ಹೇಗೋ ಏನೋ ಎಂದು ಚಿಂತೆಗೊಳಗಾದ ಆ ಮನುಷ್ಯ, ಈ ಬಗ್ಗೆ ವಿಚಾರಿಸಲು ಅಲ್ಲೇ ವಾಸವಾಗಿದ್ದ ಝೆನ್ ಮಾಸ್ಟರ್ ಬಳಿ ಹೋದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಕೆಟ್ಚ ಜನ ಮಾಸ್ಟರ್, ಹೊಟ್ಟೆ ಕಿಚ್ಚಿನವರು, ಮೋಸಗಾರರು, ಕಳ್ಳರು.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.
ಕೆಲ ದಿನಗಳ ನಂತರ ಇನ್ನೊಬ್ಬ ರೈತ, ಇನ್ನೊಂದು ಊರಿನಿಂದ ಅದೇ ಊರಿಗೆ ಬಂದು, ಝೆನ್ ಮಾಸ್ಟರ್ ಗೆ ಅದೇ ಪ್ರಶ್ನೆ ಕೇಳಿದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಒಳ್ಳೆ ಜನ ಮಾಸ್ಟರ್, ಒಬ್ಬರಿಗೊಬ್ಬರು ಬಹಳ ಸಹಾಯ ಮಾಡುತ್ತಾರೆ, ಸದಾ ತಮ್ಮ ತಮ್ಮ ಕೆಲಸ ಮಾಡುತ್ತ, ಹಾಡುತ್ತ, ಕುಣಿಯುತ್ತ ಖುಷಿಯಾಗಿರ್ತಾರೆ.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.