ನಮ್ಮ ನಗುವೂ ಭಾರ ಮತ್ತು ಬೋರಿಂಗ್! : ಓಶೋ ವ್ಯಾಖ್ಯಾನ

ಜನರ ನಗುವನ್ನೊಮ್ಮೆ ಗಮನಿಸಿ, ಎಷ್ಟು ಪ್ರಯಾಸ ಪಡುತ್ತಿದ್ದಾರೆ ಅವರು ನಗಲು. ಅವರ ನಗು ಕೇವಲ ಒಂದು ಶಿಷ್ಟಾಚಾರವಾಗಿದೆ, ಅವರು ತೋರಿಕೆಗಾಗಿ ನಗುತ್ತಿದ್ದಾರೆ… ~ ಓಶೋ । ಚಿದಂಬರ ನರೇಂದ್ರ

ನಿಮ್ಮ ಸುತ್ತಲಿನ ಜನರ ಮುಖಗಳನ್ನೊಮ್ಮೆ ನೋಡಿ. ಅವರು ಬದುಕನ್ನ ಭಾರ, ಬೋರಿಂಗ್ ಮತ್ತು ಯಾವ ಅರ್ಥವಿಲ್ಲದ್ದು ಎನ್ನುವಂತೆ ಹೊತ್ತು ತಿರುಗುತ್ತಿದ್ದಾರೆ. ಅವರಿಗೆ ಬದುಕು ಒಂದು ಕೆಟ್ಟ ಕನಸಿನಂತೆ, ಒಂದು ಕ್ರೂರ ಜೋಕ್ ನಂತೆ, ಹಿಂಸೆ ಎನ್ನುವಂತೆ ಭಾಸವಾಗುತ್ತಿದೆ.

ಬದುಕು, ನೆನಪುಗಳ ಭಾರದಿಂದ ತಲ್ಲಣಿಸುತ್ತಿರುವಾಗ ಅದನ್ನು ಸಂಭ್ರಮಿಸುವುದು ಹೇಗೆ? ನೀವು ನಗುತ್ತಿದ್ದರೂ ನಿಮ್ಮ ನಗುವಿನಲ್ಲಿ boredom ಎದ್ದು ಕಾಣುತ್ತಿರುತ್ತದೆ. ಜನರ ನಗುವನ್ನೊಮ್ಮೆ ಗಮನಿಸಿ, ಎಷ್ಟು ಪ್ರಯಾಸ ಪಡುತ್ತಿದ್ದಾರೆ ಅವರು ನಗಲು. ಅವರ ನಗು ಕೇವಲ ಒಂದು ಶಿಷ್ಟಾಚಾರವಾಗಿದೆ, ಅವರು ತೋರಿಕೆಗಾಗಿ ನಗುತ್ತಿದ್ದಾರೆ.

ನನಗೆ ಒಬ್ಬ ಗಣ್ಯ ವ್ಯಕ್ತಿಯ ಬದುಕಿನಲ್ಲಿ ನಡೆದ ಘಟನೆಯೊಂದು ನೆನಪಾಗುತ್ತಿದೆ. ಆ ಗಣ್ಯ ವ್ಯಕ್ತಿ ಆಫ್ರಿಕಾದ ಅತಿ ಪುರಾತನ aborigines ಸಮುದಾಯವನ್ನು ಭೇಟಿ ಮಾಡಲು ಹೋಗಿದ್ದ. ಅಲ್ಲಿನ ಜನರೆದರು ಅವನು ಸುದೀರ್ಘ ಭಾಷಣ ಮಾಡಿದ. ಒಂದು ದೀರ್ಘ ವಿನೋದ ಪ್ರಸಂಗವನ್ನು ರಸವತ್ತಾಗಿ ವಿವರಿಸಿದ. ಆ ವಿನೋದ ಪ್ರಸಂಗ ಬಹುತೇಕ ಅರ್ಧ ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಆ ಗಣ್ಯ ವ್ಯಕ್ತಿ ಪ್ರಸಂಗ ಹೇಳಿ ಮುಗಿಸಿದ ಮೇಲೆ ಅವನ ಭಾಷಣವನ್ನು ಆ ಸಮುದಾಯದ ಜನರ ಭಾಷೆಗೆ ಭಾಷಾಂತರಿಸುತ್ತಿದ್ದ ವ್ಯಕ್ತಿ ಎದ್ದು ನಿಂತು ಕೇವಲ ನಾಲ್ಕು ಮಾತು ಹೇಳಿ ಕುಳಿತುಕೊಂಡ. ಅವನ ಮಾತಿಗೆ ಸಮುದಾಯದ ಜನರು ಬಿದ್ದು ಬಿದ್ದು ನಗಲು ಶುರು ಮಾಡಿದರು.

ಇದನ್ನು ಕಂಡು ಗಣ್ಯವ್ಯಕ್ತಿಗೆ ಆಶ್ಚರ್ಯವಾಯಿತು. ತಾನು ಅರ್ಧ ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡು ವಿವರಿಸಿದ ವಿನೋದ ಪ್ರಸಂಗವನ್ನ ಕೇವಲ ನಾಲ್ಕು ಮಾತುಗಳಲ್ಲಿ ಅನುವಾದ ಮಾಡುವುದು ಹೇಗೆ ಸಾಧ್ಯ? ಮತ್ತು ಈ ಸಮುದಾಯದ ಜನರಿಗೆ ಈ ವಿನೋದ ಅರ್ಥವಾಗಿದೆ ಹಾಗಾಗಿ ಅವರು ಇಷ್ಟು ಜೋರು ಜೋರಾಗಿ ನಗುತ್ತಿದ್ದಾರೆ. ಅಚ್ಚರಿಯಿಂದ ಆ ಗಣ್ಯವ್ಯಕ್ತಿ ತನ್ನ ಭಾಷಣವನ್ನು ಅನುವಾದಿಸಿದವನನ್ನು ಪ್ರಶ್ನೆ ಮಾಡಿದ….

“ ನೀನು ಒಂದು ಪವಾಡ ಮಾಡಿದ ಹಾಗಿದೆ. ನೀನು ಕೇವಲ ನಾಲ್ಕು ಮಾತು ಮಾತನಾಡಿದೆ. ನೀನು ಏನು ಮಾತನಾಡಿದೆ ಎನ್ನುವುದು ನನಗೆ ಗೊತ್ತಾಗಲಿಲ್ಲ, ಆದರೆ ನಾನು ಅಷ್ಟು ಸಮಯ ತೆಗೆದುಕೊಂಡು ಹೇಳಿದ ಪ್ರಸಂಗವನ್ನ ನೀನು ಹೇಗೆ ಕೇವಲ ನಾಲ್ಕು ಮಾತುಗಳಲ್ಲಿ ಅನುವಾದ ಮಾಡಿದೆ? “

“ ನೀವು ಹೇಳಿದ ಜೋಕ್ ತುಂಬ ಉದ್ದವಾಗಿತ್ತು, ನನಗೆ ಅನುವಾದ ಕಷ್ಟ. ಆದರಿಂದ ನಮ್ಮ ಅತಿಥಿ ಒಂದು ಒಳ್ಳೆಯ ಜೋಕ್ ಹೇಳಿದರು, ಈಗ ನೀವು ನಗಬೇಕು ಅದು ಶಿಷ್ಟಾಚಾರ ಎಂದಷ್ಟೇ ನಾನು ಹೇಳಿದೆ”. ಅನುವಾದಕ ಉತ್ತರಿಸಿದ.

ಬಹುತೇಕ ನಾವೆಲ್ಲ ನಗುತ್ತಿರುವುದು ಕೇವಲ ಶಿಷ್ಟಾಚಾರಕ್ಕಾಗಿ. ನೀವು ಹೊಟ್ಟೆ ತುಂಬ ನಕ್ಕದ್ದು ಯಾವಾಗ ನೆನಪಿಸಿಕೊಳ್ಳಿ. ನಾವು ಬದುಕನ್ನ ಭಾರ ಮಾಡಿಕೊಂಡಿದ್ದೇವೆ ಹಾಗಾಗಿ ನಮ್ಮ ನಗುವೂ ಭಾರವಾಗಿದೆ.

“ ರಾತ್ರಿ ನಿನ್ನ ಮನೆಯಿಂದ ಜೋರು ಜೋರಾಗಿ ನಗುವಿನ ಸದ್ದು ಕೇಳಿಸತ್ತೆ, ಅಷ್ಟು ರಾತ್ರಿ ಏನು ನಡಿಯತ್ತೆ ನಿನ್ನ ಮನೆಯಲ್ಲಿ ? “

ಗೆಳೆಯ, ನಸ್ರುದ್ದೀನ್ ನ ಪ್ರಶ್ನೆ ಮಾಡಿದ.

“ ರಾತ್ರಿಯಾದರೆ ನನಗೂ ನನ್ನ ಹೆಂಡ್ತಿಗೂ ಜೋರು ಜಗಳ”

ಉತ್ತರಿಸಿದ ನಸ್ರುದ್ದೀನ್.

“ ಮತ್ತೆ ನಗುವಿನ ಸದ್ದು ? “ ಗೆಳೆಯನಿಗೆ ಕುತೂಹಲ ಹೆಚ್ಚಾಯಿತು.

“ ಸಿಟ್ಟಿನಲ್ಲಿ ಹೆಂಡ್ತಿ ತನ್ನ ಕೈ ಗೆ ಸಿಕ್ಕ ವಸ್ತುವನ್ನ ನನ್ನ ಮೇಲೆ ಎಸಿತಾಳೆ. ಆ ವಸ್ತು ನನಗೆ ತಾಕಿದಾಗ ಅವಳು ನಗ್ತಾಳೆ, ತಾಕದೇ ಹೋದಾಗ ನಾನು ಜೋರಾಗಿ ನಗ್ತೀನಿ. “

ನಸ್ರುದ್ದೀನ್ ತನ್ನ ಮನೆಯ ನಗುವಿನ ರಹಸ್ಯ ಬಿಡಿಸಿಟ್ಟ.

Leave a Reply