ದಿನನಿತ್ಯದ ಬದುಕಿನಲ್ಲಿ ನಾವು ಗಮನಿಸಬೇಕಾದುದೆಂದರೆ, ನಮ್ಮ ಖುಶಿ ನಮ್ಮನ್ನ ಕೃತಜ್ಞರನ್ನಾಗಿಸುವುದಿಲ್ಲ ಬದಲಾಗಿ ನಮ್ಮ ಕೃತಜ್ಞತೆ ನಮ್ಮನ್ನು ಖುಶಿಯಾಗಿಡುತ್ತದೆ… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಒಬ್ಬ ಪ್ರಸಿದ್ಧ ಲೇಖಕ ತನ್ನ ಸ್ಟಡಿ ರೂಮ್ ನಲ್ಲಿ ಒಬ್ಬನೇ ಕುಳಿತಿದ್ದ. ಅವನಿಗೇನನ್ನಿಸಿತೋ ಅಲ್ಲಿಯೇ ಇದ್ದ ಪೆನ್ ತೆಗೆದುಕೊಂಡು ಸರಸರನೇ ಬರೆಯಲು ಪ್ರಾರಂಭಿಸಿದ.
*ಕಳೆದ ವರ್ಷ ಇದೇ ದಿನ ನನಗೆ ಸರ್ಜರಿ ಆಯ್ತು, ವೈದ್ಯರು ನನ್ನ ಗಾಲ್ ಬ್ಲಾಡರ್ ತೆಗೆದುಹಾಕಿಬಿಟ್ಟರು. ಹಾಗಾಗಿ ನಾನು ಎಷ್ಟೋ ದಿವಸ ಹಾಸಿಗೆಗೆ ಅಂಟಿಕೊಂಡೇ ಇರಬೇಕಾಯಿತು.
**ಕಳೆದ ವರ್ಷವೇ ನನಗೆ 60 ವರ್ಷ ವಯಸ್ಸಾಯಿತು. 30 ವರ್ಷಗಳಿಂದ ನಾನು ಅತ್ಯಂತ ಪ್ರೀತಿಯಿಂದ ಮಾಡಿಕೊಂಡುಬಂದಿದ್ದ ಕೆಲಸದಿಂದ ನಿವೃತ್ತಿ ಪಡೆಯಬೇಕಾಯಿತು.
*ಕಳೆದ ವರ್ಷವೇ ನನ್ನ ಪ್ರೀತಿಯ ಅಪ್ಪ ತೀರಿಕೊಂಡ.
** ಕಳೆದ ವರ್ಷವೇ ನನ್ನ ಮಗನಿಗೆ ಭೀಕರ ಅಪಘಾತವಾಯಿತು. ಕಾರು ಪೂರ್ತಿ ಜಜ್ಜಿ ಹೋಗಿತ್ತು.
ಕೊನೆಗೆ ಲೇಖಕ ಹೀಗೆ ಬರೆದಿದ್ದ : ಆಹ್! ಎಂಥ ಕ್ರೂರಿ ವರ್ಷ ಇದು.
ಆಗಲೇ ಲೇಖಕನ ಹೆಂಡತಿ ಅವನ ಸ್ಟಡಿ ರೂಮ್ ಗೆ ಬಂದಳು. ಗಂಡ ಅತೀವ ದುಃಖದಲ್ಲಿ ಕುಳಿತಿರುವುದನ್ನ ಗಮನಿಸಿದಳು. ಅವನು ಟೇಬಲ್ ಮೇಲೆ ಬರೆದಿಟ್ಟಿದ್ದ ಸಾಲುಗಳನ್ನು ಓದಿದಳು. ಕೂಡಲೇ ಅವಳು ಮನೆಯ ಒಳಗೆ ಹೋಗಿ ಇನ್ನೊಂದು ಪೇಪರ್ ತಂದು ಟೇಬಲ್ ಮೇಲೆ ಇಟ್ಟಳು. ಆ ಪೇಪರ್ ನಲ್ಲಿ ಹೀಗೆ ಬರೆಯಲಾಗಿತ್ತು.
*ಕಳೆದ ವರ್ಷ ಕೊನೆಗೂ ನನಗೆ ಅಪಾರ ನೋವು ಕೊಡುತ್ತಿದ್ದ ಗಾಲ್ ಬ್ಲಾಡರ್ ನ ವೈದ್ಯರು ಸರ್ಜರಿ ಮಾಡಿ ತೆಗೆದು ಹಾಕಿದರು, ನನಗೆ ನೋವಿನಿಂದ ಮುಕ್ತಿ ಸಿಕ್ಕಿತು.
**ನನಗೆ ಅರವತ್ತು ವರ್ಷ ವಯಸ್ಸಾಯಿತು, ನನ್ನ ಅದೃಷ್ಟ ನನಗೆ ನಿವೃತ್ತಿಯಾಗುವಾಗಲೂ ಆರೋಗ್ಯ ಬಹಳ ಚೆನ್ನಾಗಿದೆ. ಇನ್ನೂ ನಾನು ನನ್ನ ಆಸಕ್ತಿಯ ಬೇರೆ ವಿಷಯಗಳ ಮೇಲೆ ಫೋಕಸ್ ಮಾಡಬಹುದು. ನಾನು ಇಷ್ಟು ವರ್ಷಗಳಿಂದ ಬರೆಯಬೇಕೆಂದುಕೊಂಡಿದ್ದ ಕಾದಂಬರಿಯ ಕೆಲಸಕ್ಕೆ ಕೈ ಹಾಕಬಹುದು.
*ಕಳೆದ ವರ್ಷ ಅಪ್ಪ ತೀರಿಕೊಂಡ ಅವನಿಗೆ 95 ವರ್ಷ ವಯಸ್ಸಾಗಿತ್ತು. ಕೊನೆವರೆಗೂ ಅಪ್ಪ ಯಾರ ಸಹಾಯವೂ ಇಲ್ಲದೇ ಬದುಕಿದ್ದ, ಯಾವ ಮಾರಣಾಂತಿಕ ಕಾಯಿಲೆಯ ಬಾಧೆಯನ್ನು ಅವನು ಅನುಭವಿಸಲಿಲ್ಲ. ಪ್ರಶಾಂತವಾಗಿ ಆತ ದೇವರನ್ನು ಸೇರಿಕೊಂಡ.
**ಕಳೆದ ವರ್ಷವೇ ನನ್ನ ಮಗನಿಗೆ ಹೊಸ ಬದುಕೊಂದು ಸಿಕ್ಕಿತು. ಅವನಿಗೆ ಆದ ಆ್ಯಕ್ಸಿಡೆಂಟ್ ನಲ್ಲಿ ಕಾರು ಜಜ್ಜಿ ಹೋಯಿತಾದರೂ ಅವನಿಗೆ ಯಾವ ವಿಶೇಷ ಗಾಯಗಳಾಗಲಿಲ್ಲ. ಇದು ಅವನಿಗೊಂದು ಪುನರ್ಜನ್ಮದಂಥ ಅನುಭವ.
ಕೊನೆಗೆ ಅವಳು ಹೀಗೆ ಬರೆದಿದ್ದಳು : ಕಳೆದ ವರ್ಷ ನಮ್ಮ ಮೇಲೆ ದೇವರ ಅಪಾರ ಆಶೀರ್ವಾದ ಇತ್ತು. ಎಷ್ಟೆಲ್ಲ ತೊಂದರೆಗಳು ಎದುರಾದರೂ ನಾವು ಅವನ ಕರುಣೆಯಿಂದ ಎಲ್ಲವನ್ನೂ ಧೈರ್ಯದಿಂದ ಎದುರಿಸಿ ಯಶಸ್ವಿಯಾದೆವು.
ದಿನನಿತ್ಯದ ಬದುಕಿನಲ್ಲಿ ನಾವು ಗಮನಿಸಬೇಕಾದುದೆಂದರೆ, ನಮ್ಮ ಖುಶಿ ನಮ್ಮನ್ನ ಕೃತಜ್ಞರನ್ನಾಗಿಸುವುದಿಲ್ಲ ಬದಲಾಗಿ ನಮ್ಮ ಕೃತಜ್ಞತೆ ನಮ್ಮನ್ನು ಖುಶಿಯಾಗಿಡುತ್ತದೆ.