ಖುಷಿಗಾಗಿ ಎಲ್ಲರೂ ಎಲ್ಲ ಕಡೆ ಹುಡುಕುತ್ತಿದ್ದಾರೆ… । ಹಗುರ ಮನ

ನಮ್ಮ ಬದುಕಿನಲ್ಲಿ ಆಗುತ್ತಿರುವುದೂ ಹೀಗೆಯೇ. ಪ್ರತಿಯೊಬ್ಬರೂ ಖುಶಿಗಾಗಿ ಎಲ್ಲ ಕಡೆ ಹುಡುಕುತ್ತಿದ್ದಾರೆ, ಅದು ಎಲ್ಲಿದೆ ಎನ್ನುವುದು ಗೊತ್ತಿರದೆ. ತಮ್ಮ ಖುಶಿಗಾಗಿ ಇನ್ನೊಬ್ಬರನ್ನು ನೂಕುತ್ತಿದ್ದಾರೆ, ಕೆಡವುತ್ತಿದ್ದಾರೆ, ಘಾಸಿ ಮಾಡುತ್ತಿದ್ದಾರೆ. ಆದರೆ ಕೊನೆಗೆ ನಿರಾಶೆಯಿಂದ ಸಂಕಟ ಅನುಭವಿಸುತ್ತಿದ್ದಾರೆ… । ಚಿದಂಬರ ನರೇಂದ್ರ

ಒಮ್ಮೆ ಒಂದೈದು ನೂರು ಜನ ಒಂದು ಸೆಮಿನಾರ್ ನಲ್ಲಿ ಭಾಗವಹಿಸಿದ್ದರು. ಮಾತಿನ ನಡುವೆ ಸ್ಪೀಕರ್ ಥಟ್ಟನೇ ಮಾತಾಡುವುದನ್ನ ನಿಲ್ಲಿಸಿ ಒಂದು ಗ್ರುಪ್ ಆ್ಯಕ್ಟಿವಿಟಿ ಮಾಡಲು ನಿರ್ಧರಿಸಿದರು.

ಪ್ರತಿಯೊಬ್ಬರಿಗೂ ಒಂದೊಂದು ಬಲೂನ್ ಕೊಡಲಾಯಿತು. ಎಲ್ಲರಿಗೂ ಬಲೂನ್ ಉಬ್ಬಿಸಿ ಅದರ ಮೇಲೆ ಮಾರ್ಕರ್ ಪೆನ್ ನಿಂದ ತಮ್ಮ ತಮ್ಮ ಹೆಸರು ಬರೆಯುವಂತೆ ಹೇಳಲಾಯಿತು. ನಂತರ ಎಲ್ಲರಿಂದ ಬಲೂನ್ ಗಳನ್ನ ವಾಪಸ್ ತೆಗೆದುಕೊಂಡು ಒಂದು ರೂಂ ನಲ್ಲಿ ಕೂಡಿಸಿಡಲಾಯಿತು.

ಆಮೇಲೆ ರೂಂ ನ ಬಾಗಿಲು ತೆರೆದು, ಎಲ್ಲರಿಗೂ ತಮ್ಮ ತಮ್ಮ ಹೆಸರಿನ ಬಲೂನ್ ಐದು ನಿಮಿಷದಲ್ಲಿ ಹುಡುಕುವಂತೆ ಹೇಳಲಾಯಿತು. ಪ್ರತಿಯೊಬ್ಬರು ತಮ್ಮ ಹೆಸರಿನ ಬಲೂನ್ ಹುಡುಕಲು ಒಬ್ಬರನ್ನೊಬ್ಬರು ನೂಕುತ್ತ, ಕೆಡವುತ್ತ ದೊಡ್ಡ ಧಾಂದಲೆ ಸೃಷ್ಟಿ ಮಾಡಿದರು. ಆ ರೂಂನಲ್ಲಿ ದೊಡ್ಡ ಅರಾಜಕತೆ ನಿರ್ಮಾಣವಾಗಿತ್ತು.

ಐದು ನಿಮಿಷದ ಕೊನೆಯಲ್ಲಿ ಒಬ್ಬರಿಗೂ ತಮ್ಮ ಹೆಸರಿನ ಬಲೂನ್ ಸಿಕ್ಕಿರಲಿಲ್ಲ.

ನಂತರ ಸ್ಪೀಕರ್ ಎಲ್ಲರಿಗೂ, ಕೈಗೆ ಸಿಕ್ಕ ಯಾವುದೋ ಒಂದು ಬಲೂನ್ ತೆಗೆದುಕೊಳ್ಳುವಂತೆ ಮತ್ತು ಅದರ ಮೇಲಿರುವ ಹೆಸರನ್ನು ಕೂಗಿ ಕರೆದು ಆ ಬಲೂನನ್ನು ಆ ಹೆಸರಿನವರಿಗೆ ಒಪ್ಪಿಸುವಂತೆ ಹೇಳಿದ. ಕೆಲವೇ ನಿಮಿಷಗಳಲ್ಲಿ ಎಲ್ಲರಿಗೂ ತಮ್ಮ ತಮ್ಮ ಹೆಸರಿನ ಬಲೂನ್ ಸಿಕ್ಕಿತು.

ನಂತರ ಸ್ಪೀಕರ್ ಮಾತನಾಡಲು ಶುರು ಮಾಡಿದ.

ನಮ್ಮ ಬದುಕಿನಲ್ಲಿ ಆಗುತ್ತಿರುವುದೂ ಹೀಗೆಯೇ. ಪ್ರತಿಯೊಬ್ಬರೂ ಖುಶಿಗಾಗಿ ಎಲ್ಲ ಕಡೆ ಹುಡುಕುತ್ತಿದ್ದಾರೆ, ಅದು ಎಲ್ಲಿದೆ ಎನ್ನುವುದು ಗೊತ್ತಿರದೆ. ತಮ್ಮ ಖುಶಿಗಾಗಿ ಇನ್ನೊಬ್ಬರನ್ನು ನೂಕುತ್ತಿದ್ದಾರೆ, ಕೆಡವುತ್ತಿದ್ದಾರೆ, ಘಾಸಿ ಮಾಡುತ್ತಿದ್ದಾರೆ. ಆದರೆ ಕೊನೆಗೆ ನಿರಾಶೆಯಿಂದ ಸಂಕಟ ಅನುಭವಿಸುತ್ತಿದ್ದಾರೆ.

ನಮ್ಮ ಖುಶಿ ಇರುವುದು ಇನ್ನೊಬ್ಬರ ಖುಶಿಯಲ್ಲಿ. ಅವರಿಗೆ ಅವರ ಖುಶಿ ಸಿಗುವಂತೆ ಮಾಡಿ, ಆಗ ನಿಮ್ಮ ಖುಶಿ ನಿಮಗೆ ಸಿಗುತ್ತದೆ. ಇದು ಮನುಷ್ಯ ಬದುಕಿನ ಉದ್ದೇಶ, ಖುಶಿಯ ಹುಡುಕಾಟ.

(source : zen page)

Leave a Reply