ನಿಮ್ಮನ್ನು ನೀವೇ ಈ ಪ್ರಶ್ನೆ ಕೇಳಿಕೊಳ್ಳಿ, “ ನನ್ನ ಹತ್ತಿರ ಇರುವ ಎಲ್ಲವೂ ನಿಜವಾ? “ ಬೀಜದ ಬಳಿ ಇರುವುದಾದರೂ ಏನು? ಬೀಜಕ್ಕೆ ಕೇಳಿ, ನೀನು ಮುಂದೆ ಬೆಳೆದು ಮರ ಆಗುತ್ತಿಯೋ ಅಥವಾ ಆಗುವುದಿಲ್ಲವೋ ಎನ್ನುವ ಪ್ರಶ್ನೆ ಬೇಡ, ನಿನ್ನ ಬಳಿ ಇರುವ ಯಾವುದು ಕಳೆದು ಹೋಗುತ್ತದೆ ಎನ್ನುವ ಭಯ ನಿನಗೆ? ವಿಶ್ವಾಸ ಯಾವಾಗಲೂ ಕೇಳುವುದು ಈ ಪ್ರಶ್ನೆಯನ್ನೇ… ~ ಓಶೋ ರಜನೀಶ್। ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದು ದಿನ ನಸ್ರುದ್ದೀನ್ ತನ್ನ ಹೆಂಡತಿಗೆ ಕಾರ್ ಡ್ರೈವಿಂಗ್ ಹೇಳಿಕೊಡುತ್ತಿರುವುದು ನನ್ನ ಕಣ್ಣಿಗೆ ಬಿತ್ತು. ರಸ್ತೆಯ ತುದಿಗೆ ನಿಂತಿದ್ದ ನಸ್ರುದ್ದೀನ್ ದೊರದಲ್ಲಿ ಕಾರೊಳಗೆ ಡ್ರೈವಿಂಗ್ ಸೀಟ್ ಲ್ಲಿ ಕುಳಿತಿದ್ದ ಹೆಂಡತಿಗೆ ಜೋರಾಗಿ ಕೂಗುತ್ತ ಇನಸ್ಟ್ರಕ್ಷನ್ ಕೊಡುತ್ತಿದ್ದ, …… ಕ್ಲಚ್ ಒತ್ತು, ಗೇರ್ ಚೇಂಜ್ ಮಾಡು, ಸ್ಟೀಯರಿಂಗ್ ತಿರುಗಿಸು …. ಮುಂತಾಗಿ.
ನನ್ನ ಕುತೂಹಲ ಹೆಚ್ಚಾಗಿ, ನಾನು ನಸ್ರುದ್ದೀನ್ ನಿಂತಿದ್ದ ಜಾಗಕ್ಕೆ ಹೋಗಿ ಪ್ರಶ್ನೆ ಮಾಡಿದೆ. “ ನಾನು ಎಷ್ಟೋ ಜನ ಕಾರ್ ಕಲಿಸುವವರನ್ನ ನೋಡಿದ್ದೀನಿ, ಅವರು ಡ್ರೈವರ್ ಪಕ್ಕ ಕುಳಿತು ಹೇಳಿಕೊಡುತ್ತಾ ಇರುತ್ತಾರೆ. ನಿನ್ನದು ಕಾರ್ ಡ್ರೈವಿಂಗ್ ಹೇಳಿಕೊಡುವ ವಿಶಿಷ್ಟ್ ರೀತಿ, ದೂರದಲ್ಲಿ ನಿಂತು ಕಾರ್ ಡ್ರೈವಿಂಗ್ ಹೇಳಿಕೊಡುವ ಯಾರನ್ನೂ ನಾನು ನೋಡಿಲ್ಲ”.
“ ಕಾರ್ ಗೆ ಇನ್ಶುರನ್ಸ್ ಇದೆ ಆದರೆ ನನಗೆ ಇಲ್ಲ, ಹಾಗಾಗಿ ನಾನು ಇಲ್ಲಿ ನಿಂತು ಕಾರ್ ಡ್ರೈವಿಂಗ್ ಹೇಳಿಕೊಡ್ತಾ ಇದ್ದೀನಿ”, ನಸ್ರುದ್ದೀನ್ ಉತ್ತರಿಸಿದ.
ಲಾಜಿಕ್ ಗೆ ಯಾವಾಗಲೂ ಇನ್ಶುರನ್ಸ್ ಬೇಕು, ಅದಕ್ಕೆ ಗ್ಯಾರಂಟಿ ಬೇಕು. ತಾನು ಮುಂದೆ ಬೆಳೆದು ಮರ ಆಗುತ್ತೇನೆ ಎನ್ನುವ ಗ್ಯಾರಂಟಿ ಬೀಜಕ್ಕೂ ಬೇಕಾದರೆ, ಅದಕ್ಕೆ ಭರವಸೆ ನೀಡುವವರು ಯಾರು? ಆಗ ನಮ್ಮ ಸಮಯಕ್ಕೆ ಬರುವುದೇ ವಿಶ್ವಾಸ. ವಿಶ್ವಾಸಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ವಿಶ್ವಾಸ ಕತ್ತಲೆಯಲ್ಲಿ ಕೂಡ ಪ್ರಯಾಣ ಮಾಡಬಲ್ಲದು ಆದ್ದರಿಂದ ಲಾಜಿಕ್ ತಲುಪಲಾಗದ ಜಾಗಗಳನ್ನ ವಿಶ್ವಾಸ ಮುಟ್ಟಬಲ್ಲದು. ಬುದ್ಧಿಗೆ ಇನ್ಶುರನ್ಸ್ ಬೇಕು, ಅಶ್ಶುರನ್ಸ್ ಬೇಕು ಆದರೆ ಹೃದಯಕ್ಕೆ ಈ ಯಾವುದರ ಅವಶ್ಯಕತೆಯೂ ಇಲ್ಲ. ಹಾಗಾಗಿ ಬುದ್ಧಿ ನಿಮ್ಮ ದಾರಿಯನ್ನು ತಪ್ಪಿಸಿದಾಗಲೆಲ್ಲ, ಹೃದಯ ನಿಮ್ಮ ಕೈಹಿಡಿದು ನಡೆಸಿ ಗುರಿ ಮುಟ್ಟಿಸುತ್ತದೆ.
ಪ್ರೀತಿಸುವಾಗ, ಪ್ರಾರ್ಥನೆ ಮಾಡುವಾಗ ನೀವು ಲಾಜಿಕ್ ನ ಮಾತು ಕೇಳುವುದಿಲ್ಲ. ಒಂದು ವೇಳೆ ನೀವು ಲಾಜಿಕ್ ನ ಮಾತು ಕೇಳುವಿರಾದರೆ ಅದು ನಿಮ್ಮನ್ನು ಕೂಡಲೇ ಒಪ್ಪಿಸಿ ಬಿಡುತ್ತದೆ ಮತ್ತು ನಿಮಗೆ ಯಾವ ಗುರಿಯನ್ನು ಮುಟ್ಟುವುದೂ ಸಾಧ್ಯವಾಗುವುದಿಲ್ಲ. ಲಾಜಿಕ್ ಮಾತು ಕೇಳಿದರೆ ಬೀಜ, ಬೀಜವಾಗಿಯೇ ಉಳಿಯುತ್ತದೆ ಅಷ್ಟೇ ಅಲ್ಲ ಕೊಳೆತುಹೋಗುತ್ತದೆ ಕೂಡ.
ನಿಮ್ಮನ್ನು ನೀವೇ ಈ ಪ್ರಶ್ನೆ ಕೇಳಿಕೊಳ್ಳಿ, “ ನನ್ನ ಹತ್ತಿರ ಇರುವ ಎಲ್ಲವೂ ನಿಜವಾ? “ ಬೀಜದ ಬಳಿ ಇರುವುದಾದರೂ ಏನು? ಬೀಜಕ್ಕೆ ಕೇಳಿ, ನೀನು ಮುಂದೆ ಬೆಳೆದು ಮರ ಆಗುತ್ತಿಯೋ ಅಥವಾ ಆಗುವುದಿಲ್ಲವೋ ಎನ್ನುವ ಪ್ರಶ್ನೆ ಬೇಡ, ನಿನ್ನ ಬಳಿ ಇರುವ ಯಾವುದು ಕಳೆದು ಹೋಗುತ್ತದೆ ಎನ್ನುವ ಭಯ ನಿನಗೆ? ವಿಶ್ವಾಸ ಯಾವಾಗಲೂ ಕೇಳುವುದು ಈ ಪ್ರಶ್ನೆಯನ್ನೇ. ವಿಶ್ವಾಸ ಕೇಳುತ್ತದೆ : ನಿನ್ನ ಬಳಿ ಕಳೆದುಕೊಳ್ಳಲಿಕ್ಕೆ ಇರುವುದಾದರೂ ಏನು? ನನ್ನ ಹತ್ತಿರ ಇರುವುದು ಆತಂಕ, ದುಗುಡ, ವೇದನೆ. ಇವನ್ನು ಕಳೆದುಕೊಳ್ಳಲಿಕ್ಕೆ ಭಯ ಯಾಕೆ? ನಿನ್ನ ಬಳಿ ಕಳೆದುಕೊಳ್ಳಲಿಕ್ಕೆ ಖುಶಿ, ಆನಂದ, ಉಲ್ಲಾಸ ಏನಾದರೂ ಇದೆಯಾ? ಇಲ್ಲವಲ್ಲ, ಹಾಗಾದರೆ ನಿನ್ನ ಭಯ ಯಾವ ರೀತಿಯದು?
ನೀನು ಉಟ್ಟ ಬಟ್ಟೆ ಒಣಗಿಸಲು ಜಾಗ ಇಲ್ಲ ಎನ್ನುವ ಕಾರಣಕ್ಕೆ ಸ್ನಾನವನ್ನೇ ಮಾಡದ ಬೆತ್ತಲೆ ಮನುಷ್ಯನ ಹಾಗೆ. ಮೊದಲು ನಿನ್ನ ಬಳಿ ಧರಿಸಲು ಬಟ್ಟೆಯೇ ಇಲ್ಲ, ಹಾಗಿರುವಾಗ ಬಟ್ಚೆಯನ್ನು ವಾಶ್ ಮಾಡುವ, ಒಣಗಲು ಹಾಕುವ ಪ್ರಶ್ನೆ ಎಲ್ಲಿಂದ ಬಂತು? ಇಂಥ ಸುಳ್ಳು ಆತಂಕಗಳೇ ನಿಮ್ಮನ್ನು ಕಟ್ಟಿ ಹಾಕಿವೆ.
ನಿನ್ನ ಬಳಿ ಕಳೆದುಕೊಳ್ಳುವಂಥದು ಏನೂ ಇಲ್ಲ, absolutely no. ನೀನು ಏನನ್ನಾದರೂ ಗಳಿಸಬಹುದು ಮಾತ್ರ. ಸತ್ಯ ಯಾವಗಲೂ ಒಳಗೆ ನೋಡಿಕೊಂಡು ಪ್ರಶ್ನೆ ಮಾಡುತ್ತದೆ, “ನನ್ನ ಬಳಿ ಏನಿದೆ?” ಆದರೆ ಲಾಜಿಕ್ ಮುಂದೆ ನೋಡುತ್ತ ಪ್ರಶ್ನೆ ಮಾಡುತ್ತದೆ, “ ಮುಂದೆ ಏನಾಗಬಹುದು?” ಸತ್ಯದ ದೃಷ್ಟಿ ಯಾವಾಗಲೂ ವರ್ತಮಾನದಲ್ಲಿ ಮತ್ತು ಸಧ್ಯವನ್ನು ಬದುಕುವುದೆಂದರೆ ಎಲ್ಲ ಆತಂಕಗಳಿಂದ ಹೊರತಾಗುವುದು.