ಪ್ರೀತಿಸುವಿಕೆ : To have or to be #20

ಯಾವಾಗ ಪ್ರೀತಿಯನ್ನ having ವಿಧಾನದಲ್ಲಿ ಅನುಭವಿಸಲಾಗುತ್ತದೆಯೋ ಆಗ ಅದು, ಪ್ರೀತಿಗೆ ಒಳಗಾಗಿರುವ ವ್ಯಕ್ತಿಯನ್ನ / ಸಂಗತಿಯನ್ನ ಸೀಮಿತಗೊಳಿಸುತ್ತದೆ, ಕಟ್ಟಿಹಾಕುತ್ತದೆ, ಹತೋಟಿಗೆ ತೆಗೆದುಕೊಳ್ಳುತ್ತದೆ. ಇದು ಕತ್ತು ಹಿಸುವಂಥ, ನಿರ್ವಿರ್ಯಗೊಳಿಸುವಂಥ, ಉಸಿರುಗಟ್ಟಿಸುವಂಥ, ಕೊಲ್ಲುವಂಥ, ಬದುಕು ನೀಡದಂಥ ಅನುಭವ… ~ ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.

ಹಿಂದಿನ ಭಾಗವನ್ನು ಇಲ್ಲಿ ಓದಿ: https://aralimara.com/2023/04/22/fromm-16/

Loving

ಪ್ರೀತಿಯ ಕುರಿತಾದ ಚರ್ಚೆ, being ವಿಧಾನದಲ್ಲಿ ನಡೆಯುತ್ತಿದೆಯೋ ಅಥವಾ having ವಿಧಾನದಲ್ಲಿ ನಡೆಯುತ್ತಿದೆಯೋ ಎನ್ನುವುದರ ಮೇಲೆ ಅವಲಂಬಿತವಾಗಿ, ಪ್ರೀತಿಸುವಿಕೆ ಕೂಡ ಎರಡು ಅರ್ಥಗಳನ್ನು ಹೊಂದಿದೆ.

ಯಾರಾದರೂ ಪ್ರೀತಿಯನ್ನ ಹೊಂದಬಹುದೆ ? ಹಾಗಾಗಬಹುದಾದರೆ ಪ್ರೀತಿ ಎನ್ನುವುದು ಒಂದು ವಸ್ತುವಾಗಬೇಕು, ಒಬ್ಬರು ಹೊಂದಬಹುದಾದ, ಸ್ವಂತ ಮಾಡಿಕೊಳ್ಳಬಹುದಾದ, ಅದರ ಮೇಲೆ ಅಧಿಕಾರ ಸ್ಥಾಪಿಸಬಹುದಾದ ಸಂಗತಿಯಾಗಬೇಕು. ಆದರೆ ವಾಸ್ತವದ ಸಂಗತಿಯೆಂದರೆ “ಪ್ರೀತಿ” ಎನ್ನುವ ಯಾವ ವಸ್ತುವೂ ಇಲ್ಲ. ಪ್ರೀತಿ ಎನ್ನುವುದು ಒಂದು ಅಮೂರ್ತ ಸಂಗತಿ, ಬಹುತೇಕ ಒಂದು ದೇವತೆಯ ಥರ ಅಥವಾ ಒಂದು ಏಲಿಯನ್ ಅಸ್ತಿತ್ವದ ರೀತಿಯಲ್ಲಿ, ಯಾರೂ ದೇವತೆಯನ್ನ ಅಥವಾ ಏಲಿಯನ್ ನ ನೋಡಿಲ್ಲವಾದರೂ. ನಿಜದಲ್ಲಿ ಇರುವುದು ಪ್ರೀತಿಸುವಿಕೆ ಎನ್ನುವ ಪ್ರಕ್ರಿಯೆಯೇ ಹೊರತು ಪ್ರೀತಿಯಲ್ಲ. ಪ್ರೀತಿಸುವುದು ಒಂದು ಸೃಜನಶೀಲ ಪ್ರಕ್ರಿಯೆ. ಪ್ರೀತಿಸುವುದು ಎಂದರೆ ಕಾಳಜಿ, ತಿಳಿದುಕೊಳ್ಳುವಿಕೆಯ ಬಗ್ಗೆ, ಪ್ರತಿಕ್ರಯಿಸುವಿಕೆಯ ಬಗ್ಗೆ, ಧೃಡೀಕರಿಸುವಿಕೆಯ ಕುರಿತು, ಹಾಗು ಖುಶಿಯ ಬಗ್ಗೆ : ಈ ಕಾಳಜಿ ವ್ಯಕ್ತಿಯ ಕುರಿತಾಗಿರಬಹುದು, ಗಿಡ ಮರದ ಕುರಿತಾಗಿರಬಹುದು, ಪೇಂಟಿಂಗ್ ಬಗ್ಗೆಯಾಗಿರಬಹುದು, ಐಡಿಯಾದ ಬಗ್ಗೆ ಆಗಿರಬಹುದು. ಪ್ರೀತಿಯೆಂದರೆ ಜೀವಂತವಾಗಿಸುವ ಪ್ರಕ್ರಿಯೆ, ಅವನ / ಅವಳ / ಅದರ ಜೀವಂತಿಕೆಯನ್ನು ಹೆಚ್ಚಿಸುವುದು, ಇದು ತನ್ನನ್ನು ತಾನು ಹೊಸದಾಗಿಸಿಕೊಳ್ಳುವ (self renewing), ಮತ್ತು ತನ್ನನ್ನು ತಾನು ಹೆಚ್ಚಿಸಿಕೊಳ್ಳುವ (self increasing) ಪ್ರಕ್ರಿಯೆ.

ಯಾವಾಗ ಪ್ರೀತಿಯನ್ನ having ವಿಧಾನದಲ್ಲಿ ಅನುಭವಿಸಲಾಗುತ್ತದೆಯೋ ಆಗ ಅದು, ಪ್ರೀತಿಗೆ ಒಳಗಾಗಿರುವ ವ್ಯಕ್ತಿಯನ್ನ / ಸಂಗತಿಯನ್ನ ಸೀಮಿತಗೊಳಿಸುತ್ತದೆ, ಕಟ್ಟಿಹಾಕುತ್ತದೆ, ಹತೋಟಿಗೆ ತೆಗೆದುಕೊಳ್ಳುತ್ತದೆ. ಇದು ಕತ್ತು ಹಿಸುವಂಥ, ನಿರ್ವಿರ್ಯಗೊಳಿಸುವಂಥ, ಉಸಿರುಗಟ್ಟಿಸುವಂಥ, ಕೊಲ್ಲುವಂಥ, ಬದುಕು ನೀಡದಂಥ ಅನುಭವ. ಜನ ಯಾವುದನ್ನ ಪ್ರೀತಿ ಎನ್ನುತ್ತಾರೋ ಅದು ಬಹುತೇಕ ಆ ಪದದ ತಪ್ಪು ಬಳಕೆ, ಪ್ರೀತಿಸಲು ಸಾಧ್ಯವಾಗದಿರುವಂಥ ತಮ್ಮ ವಾಸ್ತವ ಸ್ಥಿತಿಯನ್ನು ಮರೆ ಮಾಚುವ ಕಾರಣಕ್ಕಾಗಿ. ಎಷ್ಟು ತಂದೆ ತಾಯಂದಿರು ತಮ್ಮ ಮಕ್ಕಳನ್ನ ಪ್ರೀತಿಸುತ್ತಾರೆ ಎನ್ನುವುದು ಇನ್ನೂ ಸಂಪೂರ್ಣವಾಗಿ ಒಂದು ಮುಕ್ತ ಪ್ರಶ್ನೆಯಾಗಿಯೇ ಉಳಿದಿದೆ. Lloyd Mause ಕಳೆದ ಎರಡು ಸಹಸ್ರಮಾನಗಳ ಪಾಶ್ಚಾತ್ಯ ಇತಿಹಾಸವನ್ನು ಗಮನಿಸಿ ಗುರುತಿಸಿರುವ ಪ್ರಕಾರ, ಮಕ್ಕಳ ಮೇಲೆ ಎಸಗಲಾಗಿರುವ ಕ್ರೌರ್ಯ, ದೈಹಿಕ ಹಿಂಸೆಯಿಂದ ಹಿಡಿದು ಮಾನಸಿಕ ಹಿಂಸೆ, ಬೇಜವಾಬ್ದಾರಿ, ತೀವ್ರ ಪೊಸೆಸ್ಸಿವ್ ನೆಸ್, ಸೇಡಿಸಂ ವರೆಗೆ ಚಾಚಿಕೊಂಡಿದೆ. ಇದು ಎಷ್ಟು ಶಾಕಿಂಗ್ ಎಂದರೆ, ಪ್ರೀತಿಯ ತಂದೆ ತಾಯಿ ಈಗ ನಿಯಮದಂತೆ (not as a rule) ಅಲ್ಲದೆ ಅಪವಾದದಂತೆ ಇರುತ್ತಾರೆ ಎಂದು ನಂಬುವಂತಾಗಿದೆ.

ಇದನ್ನೇ ನಾವು ಮದುವೆಗಳ ಬಗ್ಗೆ ಕೂಡ ಹೇಳಬಹುದು. ಮದುವೆ ಪ್ರೀತಿಯ ಆಧಾರದ ಮೇಲೆ ನಡೆದಿದೆಯೋ ಅಥವಾ, ಅದು ಹಿಂದಿನ ರೀತಿಯ ಸಂಪ್ರದಾಯ ಬದ್ಧ ರೀತಿಯ ಮದುವೆಯೋ, ಸಾಮಾಜಿಕ ಅನುಕೂಲತೆ ಹಾಗು ಕಸ್ಟಂ ಆಧರಿತವಾಗಿ ನಡೆದ ಮದುವೆಯೋ, ಈ ಎಲ್ಲ ರೀತಿಯ ಮದುವೆಗಳಲ್ಲಿ ಪರಸ್ಪರರನ್ನ ಪ್ರೀತಿಸುವ ದಂಪತಿಗಳು ಅಪವಾದದಂತೆಯೇ ಕಾಣ ಸಿಗುತ್ತಾರೆ. ಯಾವುದು ಸಾಮಾಜಿಕ ಅನುಕೂಲತೆಯೋ, ಸಂಪ್ರದಾಯಬದ್ಧವೋ, ಪರಸ್ಪರರ ಸಮಾನ ಆರ್ಥಿಕ ಆಸಕ್ತಿಯ ಕಾರಣವೋ, ತಮ್ಮ ಮಕ್ಕಳ ಕುರಿತಾದ ಹಂಚಿಕೊಂಡ ಆಸಕ್ತಿ (shared interest) ಕಾರಣವಾಗಿಯೋ, ಪರಸ್ಪರರ ಅವಲಂಬನೆ ಅಥವಾ ಪರಸ್ಪರರ ಸಮಾನ ದ್ವೇಷ (mutual hate) ಅಥವಾ ಭಯ ಇವೇ ಮುಂತಾದವನ್ನ ಪ್ರೀತಿ ಎಂದು ಪ್ರಜ್ಞಾಪೂರ್ವಕವಾಗಿ ಅನುಭವಿಸಲಾಗುತ್ತದೆ, ಎಲ್ಲಿಯವರೆಗೆ ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ತಾವು ಪರಸ್ಪರರನ್ನ ಪ್ರೀತಿಸುತ್ತಿಲ್ಲ , ತಾವು ಎಂದೂ ಇನ್ನೊಬ್ಬರನ್ನ ಪ್ರೀತಿಸಿರಲಿಲ್ಲ ಎನ್ನುವುದನ್ನ ಕಂಡುಕೊಳ್ಳುವ ಕ್ಷಣದತನಕ. ಇವತ್ತು ಈ ಸಂಗತಿಯ ವಿಷಯದಲ್ಲಿ ಕೆಲವೊಂದು ಬೆಳವಣಿಗೆಯನ್ನ ನಾವು ಗಮನಿಸಬಹುದು : ಜನ ಎಂದಿಗಿಂತ ಇಂದು ಹೆಚ್ಚು ರಿಯಲಿಸ್ಟಿಕ್, ಹೆಚ್ಚು ಸಮಚಿತ್ತದವರಾಗಿದ್ದಾರೆ ಮತ್ತು, ಹೆಚ್ಚಿನ ಜನರಿಗೆ, ಲೈಂಗಿಕ ಆಕರ್ಷಣೆ ಎಂದರೆ, ಆಪ್ತ ಗೆಳೆತನ ಎಂದರೆ, ಟೀಂ ಸಂಬಂಧಗಳು ಎಂದರೆ ಪ್ರೀತಿಯ ಅಭಿವ್ಯಕ್ತಿ ಎನ್ನುವುದರಲ್ಲಿ ಯಾವ ನಂಬಿಕೆಯೂ ಇಲ್ಲ. ಜನಗಳ ಈ ಹೊಸ ದೃಷ್ಚಿಕೋನ ಹೆಚ್ಚಿನ ಪ್ರಾಮಾಣಿಕತೆ ಮತ್ತು ಹಾಗೆಯೇ ಹೆಚ್ಚುತ್ತಿರುವ ಪಾರ್ಟನರ್ ಗಳ ಬದಲಾವಣೆಯ ಕಾರಣವಾಗಿ ಕೂಡ ಸಾಧ್ಯವಾಗಿರುವಂಥದು. ಇದರಿಂದಾಗಿ ಪ್ರೀತಿಯ ಕ್ವಾಲಿಟಿಯಲ್ಲಿ, ಪ್ರೀತಿಯ ಫ್ರಿಕ್ವೆನ್ಸಿಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ, ಮತ್ತು ಹೊಸ ಪಾರ್ಟನರ್ ಗಳು ಹಳೆಯ ಪಾರ್ಟನರ್ ಗಳಷ್ಟೇ ಕಡಿಮೆ ಪ್ರೀತಿಸುವವರಾಗಿರುವ ಸಾಧ್ಯತೆ ಹೆಚ್ಚಾಗಿದೆ.

“Falling in love” ಇಂದ “having love” ಎನ್ನುವ ಭ್ರಮೆಯ ವರೆಗಿನ ಬದಲಾವಣೆಯನ್ನ ನಾವು ಆಳ ವಿವರಗಳಲ್ಲಿ “ಪ್ರೀತಿಯಲ್ಲಿ ಬಿದ್ದಿರುವ” ಪ್ರೇಮಿಗಳ ಇತಿಹಾಸದಲ್ಲಿ ಗಮನಿಸಬಹುದು. ( ನನ್ನ ಪುಸ್ತಕ The art of loving ನಲ್ಲಿ ನಾನು “ ಪ್ರೀತಿಯಲ್ಲಿ ಬೀಳುವುದು” ಎನ್ನುವ ವಾಕ್ಯದಲ್ಲಿರುವ “ಬೀಳುವುದು” ಎನ್ನುವ ಪದ ಹೇಗೆ ತನ್ನೊಳಗೇ ದ್ವಂದ್ವಗಳನ್ನು ಒಳಗೊಂಡಿದೆ ಎಂದು ವಿವರಿಸಿದ್ದೇನೆ. ಪ್ರೀತಿಸುವುದು ಒಂದು ಸೃಜನಶೀಲ ಪ್ರಕ್ರಿಯೆಯಾಗಿರುವುದರಿಂದ ಒಬ್ಬರು ಕೇವಲ ಪ್ರೀತಿಯಲ್ಲಿ ಎದ್ದು ನಿಲ್ಲಬಹುದು ಅಥವಾ ಎದ್ದು ನಡೆಯಬಹುದು; ಆದ್ದರಿಂದ ಪ್ರೀತಿಯಲ್ಲಿ ಯಾರೂ ಬೀಳುವುದಿಲ್ಲ, ಏಕೆಂದರೆ ಬೀಳುವುದು ಎನ್ನುವ ಪದ ನಿಷ್ಕ್ರೀಯತೆಯನ್ನ ಸೂಚಿಸುತ್ತದೆ.)

ಒಬ್ಬರನ್ನೊಬ್ಬರು ಪ್ರೀತಿಸಲು (courtship) ಶುರು ಮಾಡಿರುವ ಹೊತ್ತಿನಲ್ಲಿ , ಒಬ್ಬರಿಗೂ ಇನ್ನೊಬ್ಬರ ಬಗ್ಗೆ ಖಾತ್ರಿ ಇರುವುದಿಲ್ಲ, ಆದರೆ ಇಬ್ಬರೂ ಇನ್ನೊಬ್ಬರನ್ನು ಗೆಲ್ಲುವ ಪ್ರಯತ್ನ ಮಾಡುತ್ತಿರುತ್ತಾರೆ. ಇಬ್ಬರಲ್ಲೂ ಜೀವಂತಿಕೆ ತುಂಬಿ ತುಳುಕುತ್ತಿರುತ್ತದೆ, ಇಬ್ಬರೂ ಒಬ್ಬರಿಗೊಬ್ಬರು ಆಕರ್ಷಕರಾಗಿ, ಆಸಕ್ತಿಯುಳ್ಳವರಾಗಿ, ಸುಂದರರಾಗಿರುತ್ತಾರೆ. ಅವರಲ್ಲಿರುವ ಜೀವಂತಿಕೆಯೇ ಅವರ ಚಹರೆಯನ್ನ, ಅವರ ವ್ಯಕ್ತಿತ್ವವನ್ನ ಸುಂದರವಾಗಿಸಿರುತ್ತದೆ. ಇಬ್ಬರೂ ಇನ್ನೂಬ್ಬರನ್ನು ಇನ್ನೂ ಹೊಂದಿಲ್ಲವಾದ್ದರಿಂದ, ಪ್ರತಿಯೊಬ್ಬರ ಸಾಮರ್ಥ್ಯವೂ being ನ ದಿಕ್ಕಿನಲ್ಲಿ ಪ್ರವಹಿಸುತ್ತಿರುತ್ತದೆ, ಹಾಗೆಂದರೆ ಇಬ್ಬರೂ ಪರಸ್ಪರರಿಗೆ ಕೊಡುವುದರಲ್ಲಿ ಮತ್ತು ಪರಸ್ಪರರನ್ನು ಪ್ರಚೋದಿಸುವುದರಲ್ಲಿ (stimulating) ತೊಡಗಿಕೊಂಡಿರುತ್ತಾರೆ. ಮದುವೆಯ ಪ್ರಕ್ರಿಯೆಯಿಂದಾಗಿ ಅವರ ಪ್ರೀತಿಯ ಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳಾಗುತ್ತವೆ. ಮದುವೆ ಎನ್ನುವ ಕಾಂಟ್ರ್ಯಾಕ್ಟ್ ಪ್ರತಿ ಸಂಗಾತಿಗೂ ಇನ್ನೊಬ್ಬ ಸಂಗಾತಿಯ ದೇಹದ ಮೇಲೆ ವಿಶೇಷ ಅಧಿಕಾರವನ್ನು, ಭಾವನೆಗಳನ್ನೂ, ಕಾಳಜಿಯನ್ನು ಒದಗಿಸಿಕೊಡುತ್ತದೆ. ಈಗ ಯಾರಿಗೂ ಇನ್ನೊಬ್ಬರ ಮೇಲೆ ವಿಜಯ ಸಾಧಿಸುವ ಅವಶ್ಯಕತೆಯಿಲ್ಲ, ಏಕೆಂದರೆ ಈಗ ಪ್ರೀತಿ ಒಬ್ಬರು ಹೊಂದಬಹುದಾದ ಆಸ್ತಿಯಂಥ ಸಂಗತಿಯಾಗಿ ಪರಿವರ್ತಿತವಾಗಿದೆ. ಈಗ ಇಬ್ಬರೂ, ಇನ್ನೊಬ್ಬರನ್ನು ಮೆಚ್ಚಿಸುವ, ಪರಸ್ಪರರಲ್ಲಿ ಪ್ರೀತಿ ಹುಟ್ಟಿಸುವ ಪ್ರಯತ್ನವನ್ನು ಬಿಟ್ಟುಬಿಡುತ್ತಾರೆ, ಹಾಗಾಗಿ ಅವರು ಇಬ್ಬರೂ ಒಬ್ಬರಿಗೊಬ್ಬರು ಬೋರಿಂಗ್ ಆಗುತ್ತಾರೆ ಮತ್ತು ಹಾಗಾಗಿ ಅವರ ನಡುವಿನ ಚೆಲುವು ಮಾಯವಾಗುತ್ತದೆ. ಇದು ಅವರಿಬ್ಬರಲ್ಲೂ ನಿರಾಶೆಯನ್ನೂ ಗೊಂದಲನ್ನೂ ಮೂಡಿಸುತ್ತದೆ. ಹಾಗಾದರೆ ಈಗ ಅವರಿಬ್ಬರೂ ಮೊದಲಿನ ಆ ಪ್ರೀತಿಗಾಗಿ ಚಡಪಡಿಸುವ ವ್ಯಕ್ತಿಗಳಲ್ಲವೆ? ಅವರಿಂದ ಏನಾದರೂ ತಪ್ಪು ಘಟಿಸಿತಾ? ಇಬ್ಬರೂ ಈ ಬದಲಾವಣೆಯ ಕಾರಣವನ್ನು ಇನ್ನೊಬ್ಬರ ಮೇಲೆ ಆರೋಪಿಸುತ್ತ ತಾವು ಮೋಸಕ್ಕೊಳಗಾಗಿದ್ದೇವೆ ಎಂದು ಕಳವಳಕ್ಕೀಡಾಗುತ್ತಾರೆ. ಅವರಿಬ್ಬರಿಗೂ ಗೊತ್ತಾಗದಿರುವ ಸಂಗತಿ ಏನೆಂದರೆ, ಈಗ ಅವರು ತಾವು ಮೊದಲು ಪರಸ್ಪರ ಪ್ರೀತಿಯಲ್ಲಿದ್ದಾಗಿನ ಅದೇ ಪ್ರೇಮಿಗಳಾಗಿ ಉಳಿದಿಲ್ಲ ಎನ್ನುವುದು; ಒಬ್ಬರು ಹೊಂದಿರಬಹುದಾದ ದೋಷದ (error) ಕಾರಣವಾಗಿ ಪ್ರೀತಿ ಅವರನ್ನು ಪ್ರೀತಿಸದ ದಾರಿಯಲ್ಲಿ ಮುನ್ನಡೆಸಿದೆ. ಈಗ ಅವರು ಒಬ್ಬರನ್ನೊಬ್ಬರು ಪ್ರೀತಿಸುವುದರ ಬದಲಿಗೆ, ತಾವು ಹೊಂದಿರುವುದರ ಮೇಲೆ ಇಬ್ಬರೂ ಕೂಡಿ ಸ್ವಾಮಿತ್ವವನ್ನು ಸಾಧಿಸುವ ಪ್ರಯತ್ನ ಮಾಡುತ್ತಾರೆ : ಉದಾಹರಣೆಗೆ ಹಣ, ಸಾಮಾಜಿಕ ಸ್ಥಿತಿಗತಿ (social standing) ಮನೆ, ಮಕ್ಕಳು ಮುಂತಾಗಿ. ಹೀಗೆ ಕೆಲವು ಪ್ರಕರಣಗಳಲ್ಲಿ, ಪ್ರೀತಿ ಕಾರಣವಾಗಿ ಸ್ಥಾಪಿಸಲ್ಪಟ್ಟ ಮದುವೆ ಎನ್ನುವ ಸಂಸ್ಥೆ, ಫ್ರೆಂಡ್ಲೀ ಓನರ್’ಶಿಪ್ ನಂಥ ಎರಡು ಅಹಂ ಗಳು ಒಂದೆಡೆ ಸೇರಿ ಕಟ್ಟಿಕೊಂಡಿರುವ “ಕುಟುಂಬ” ಎನ್ನುವ ಸಂಸ್ಥೆಯಾಗಿ ಪರಿವರ್ತಿತವಾಗುತ್ತವೆ.

ಯಾವಾಗ ಇಬ್ಬರೂ ಪಾರ್ಟ್ನರ್ ಗಳಿಗೆ, ತಮ್ಮ ಮೊದಲಿನ ಪ್ರೀತಿಯ ಅನುಭವವನ್ನು ಪುನರ್ಸ್ಥಾಪಿಸಿಕೊಳ್ಳಬೇಕು ಎನ್ನುವ ತುಡಿತದಿಂದ ಹೊರಬರಲು ಸಾಧ್ಯವಾಗುವುದಿಲ್ಲವೋ ಆಗ, ಇಬ್ಬರಲ್ಲಿ ಯಾರೋ ಒಬ್ಬ ಪಾರ್ಟನರ್ ಗೆ (ಅಥವಾ ಇಬ್ಬರಿಗೂ?), ಹೊಸ ಪಾರ್ಟನರ್ (ಅಥವಾ ಪಾರ್ಟನರ್ಸ್) ತಮ್ಮ ತುಡಿತವನ್ನು ತೃಪ್ತಿಗೊಳಿಸಬಹುದು ಎನ್ನುವ ಭ್ರಮೆ ಹುಟ್ಟಿಕೊಳ್ಳುತ್ತದೆ. ಆಗ ಅವರಲ್ಲಿ ತಾವು ಹೊಂದ ಬೇಕಾದದ್ದು ಪ್ರೀತಿ ಮಾತ್ರ ಎನ್ನುವ ಭಾವವಿರುತ್ತದೆ. ಆದರೆ ಅವರಿಗೆ ಪ್ರೀತಿ ಎನ್ನುವುದು ಅವರ ಅಸ್ತಿತ್ವದ ಅಭಿವ್ಯಕ್ತಿಯಲ್ಲ : ಅದು ಅವರಿಗೆ ಕೇವಲ ತಾವು ಶರಣಾಗಬಯಸುವ ದೇವತೆ ಮಾತ್ರ. ಹಾಗಾಗಿ ಅವರು ತಮ್ಮ ಪ್ರೀತಿಯಲ್ಲಿ ಅವಶ್ಯಕವಾಗಿ ಸೋಲಲೇ ಬೇಕಾಗುತ್ತದೆ ಏಕೆಂದರೆ, “ ಪ್ರೀತಿ ಎನ್ನುವುದು ಸ್ವಾತಂತ್ರ್ಯದ ಮಗು” (ಹಳೆಯ ಫ್ರೆಂಚ್ ಹಾಡೊಂದು ಹಾಡುವಂತೆ), ಮತ್ತು ಈ ಪ್ರೀತಿ ದೇವತೆಯ ಆರಾಧಕರು ಅಂತಿಮವಾಗಿ ಎಷ್ಟು ನಿಷ್ಕ್ರೀಯರಾಗುತ್ತಾರೆ (passive) ಎಂದರೆ, ಅವರು ಪರಸ್ಪರರಿಗೆ ಬೋರಿಂಗ್ ಆಗುತ್ತ ತಮ್ಮ ಬಳಿ ಉಳಿದಿದ್ದ ಎಲ್ಲ ಹಳೆಯ ಆಕರ್ಷಣೆಯನ್ನು ಕಳೆದುಕೊಂಡುಬಿಡುತ್ತಾರೆ.

ಈ ವಿವರಣೆ, ಮದುವೆ ಎನ್ನುವುದು ಪರಸ್ಪರರನ್ನ ಪ್ರೀತಿಸುತ್ತಿರುವ ಇಬ್ಬರು ವ್ಯಕ್ತಿಗಳಿಗೆ ಅತ್ಯುತ್ತಮ ಪರಿಹಾರವಲ್ಲ ಎಂದು ಸಾಧಿಸುವುದಕ್ಕಲ್ಲ. ತೊಂದರೆ ಇರುವುದು ಮದುವೆ ಎನ್ನುವ ಸಂಸ್ಥೆಯಲ್ಲಲ್ಲ, ಬದಲಾಗಿ ಸಮಸ್ಯೆ ಇರುವುದು, ಇಬ್ಬರೂ ವ್ಯಕ್ತಿಗಳ ಮತ್ತು ಕೊನೆಯದಾಗಿ ಅವರ ಸಮಾಜದ ಪೊಸೆಸ್ಸಿವ್, ಅಸ್ತಿತ್ವವಾದಿ ಸಂರಚನೆಯಲ್ಲಿ. ಇಂದಿನ ಆಧುನಿಕ ದಿನದ ಕೂಡಿ ಬದುಕುವ (living together) ಮಾದರಿಗಳಾದ, ಗ್ರುಪ್ ಮ್ಯಾರೇಜ್, ಸಂಗಾತಿಗಳ ಬದಲಾಯಿಸುವಿಕೆ, ಗ್ರುಪ್ ಸೆಕ್ಸ್ ಇತ್ಯಾದಿಗಳನ್ನು ಅನುಮೋದಿಸುವವರು ನಾನು ಗಮನಿಸಿದಂತೆ ಪ್ರಯತ್ನ ಮಾಡುತ್ತಿರುವುದೇನೆಂದರೆ, ತಮ್ಮ ಪ್ರೀತಿಸುವಿಕೆಯಲ್ಲಿನ ತೊಂದರೆಗಳ ಸಮಸ್ಯೆಯನ್ನು ನಿವಾರಿಸಿಕೊಳ್ಳಲು, ತಮ್ಮ boredom ನ್ನು ಬೇರೆ ಬೇರೆ ಹೊಸ ಪ್ರಚೋದನೆಗಳ ಮೂಲಕ ಪರಿಹರಿಸಿಕೊಳ್ಳಲು, ಹೆಚ್ಚು ಹೆಚ್ಚು ಲವರ್ ಗಳನ್ನು ಹೊಂದಲು ಬಯಸುತ್ತಾರೆಯೇ ವಿನಹ ಒಬ್ಬರನ್ನು ಆಳವಾಗಿ ಪ್ರೀತಿಸಲು ಬಯಸುವುದಿಲ್ಲ. (See the discussion of the distinction between “activating” & “passivating ” stimuli in Chapter 10 of The Anatomy of Human Destructiveness.)

(ಮುಂದುವರೆಯುತ್ತದೆ)


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

Leave a Reply