ಸೂಫಿ ದೃಷ್ಟಾಂತ ಕಥೆ ಮತ್ತು ನೀತಿ

ನಿರೂಪಣೆ: ಚಿದಂಬರ ನರೇಂದ್ರ

ಒಮ್ಮೆ ಒಂದು ಕತ್ತೆ ಮತ್ತು ಹುಲಿ ಜಗಳಾಡುತ್ತಿದ್ದವು.

“ಹುಲ್ಲಿನ ಬಣ್ಣ ನೀಲಿ” ಕತ್ತೆ ವಾದ ಮಾಡುತ್ತಿತ್ತು.

“ಇಲ್ಲ ಯಾವತ್ತೂ ಹುಲ್ಲು ಹಸಿರು ಬಣ್ಣದ್ದು” ಹುಲಿ ತನ್ನ ಪಟ್ಟು ಸಡಿಲಿಸುತ್ತಿರಲಿಲ್ಲ.

ವಾದ ತಾರಕಕ್ಕೇರಿತು. ಇನ್ನು ತಮ್ಮ ನಡುವೆ ಪರಿಹಾರ ಸಾಧ್ಯವಿಲ್ಲ ಎಂದು ಗೊತ್ತಾದಾಗ, ಕತ್ತೆ ಮತ್ತು ಹುಲಿ ಎರಡೂ ಕೂಡಿ ಕಾಡಿನ ರಾಜ ಸಿಂಹವನ್ನು ಭೇಟಿಯಾಗಿ ತಮ್ಮ ವಿವಾದ ಪರಿಹರಿಸುವಂತೆ ಬೇಡಿಕೊಂಡವು.

“ಹುಲ್ಲಿನ ಬಣ್ಣ ನೀಲಿ, ಹೌದೋ ಅಲ್ಲವೋ ನೀನೇ ಹೇಳು ಮಹಾರಾಜ”
ಕತ್ತೆ ತನ್ನ ಒರಟು ದನಿಯಲ್ಲಿ ಅಹವಾಲು ಮಂಡಿಸಿತು.

“ಹೌದು ಹುಲ್ಲಿನ ಬಣ್ಣ ನೀಲಿ” ಮಹಾರಾಜ ಸಿಂಹ ತಕ್ಷಣ ಒಪ್ಪಿಕೊಂಡಿತು.

“ ಈ ದಡ್ಡ ಹುಲಿ ಹುಲ್ಲಿನ ಬಣ್ಣ ಹಸಿರು ಎಂದು ವಾದ ಮಾಡುತ್ತ ನನ್ನ ಮನಶಾಂತಿಯನ್ನು, ನನ್ನ ಸಮಯವನ್ನ ಹಾಳು ಮಾಡಿದೆ. ಈ ದಡ್ಡ ಹುಲಿಗೆ ಶಿಕ್ಷೆ ಕೊಡು” ಕತ್ತೆ ದೊರೆಯ ಎದುರು ತನ್ನ ವಾದ ಮುಂದುವರೆಸಿತು.

ಕಾಡಿನ ದೊರೆ ಸಿಂಹ, ಹುಲಿಗೆ 5 ವರ್ಷಗಳ ಮೌನದ ಶಿಕ್ಷೆ ವಿಧಿಸಿತು. ದೊರೆಯ ತೀರ್ಮಾನ ಕೇಳಿ ಕತ್ತೆ ಖುಶಿಯಿಂದ ಕುಣಿದು ಕುಪ್ಪಳಿಸಿತು.

ಕತ್ತೆ ಅಲ್ಲಿಂದ ಹೊರಟು ಹೋದ ಮೇಲೆ, ಹುಲಿ ರಾಜನನ್ನು ಪ್ರಶ್ನೆ ಮಾಡಿತು, “ ರಾಜ ನಿನ್ನ ನಿರ್ಣಯ ನನಗೆ ಒಪ್ಪಿಗೆ ಆದರೆ ನನಗ್ಯಾಕೆ ಈ ಶಿಕ್ಷೆ? ಹುಲ್ಲಿನ ಬಣ್ಣ ಹಸಿರು ಎನ್ನುವುದು ನಿನಗೆ ಚೆನ್ನಾಗಿ ಗೊತ್ತು.”

“ ಹೌದು, ಹುಲ್ಲಿನ ಬಣ್ಣ ಹಸಿರು” ಸಿಂಹ ಉತ್ತರಿಸಿತು.

“ಹಾಗಾದರೆ ನನಗೆ ಯಾಕೆ ಶಿಕ್ಷೆ ಕೊಟ್ಟೆ ನೀನು” ಹುಲಿ ಮತ್ತೆ ಪ್ರಶ್ನೆ ಮಾಡಿತು.

“ನಾನು ನಿನಗೆ ಶಿಕ್ಷೆ ಕೊಟ್ಟಿದ್ದಕ್ಕೂ, ಹುಲ್ಲಿನ ಬಣ್ಣ ಹಸಿರು ಇರುವುದಕ್ಕೂ ಯಾವ ಸಂಬಂಧವೂ ಇಲ್ಲ. ನಾನು ನಿನಗೆ ಶಿಕ್ಷೆ ಘೋಷಿಸಿದ ಕಾರಣ ಏನೆಂದರೆ, ನಿನ್ನಂಥ ಬುದ್ಧಿಶಾಲಿ, ಬಲಶಾಲಿ ಪ್ರಾಣಿ ಕತ್ತೆಯೊಡನೆ ವಾದ ಮಾಡುತ್ತ ಸಮಯ ವ್ಯರ್ಥ ಮಾಡಿಕೊಂಡಿದ್ದಕ್ಕೆ ಮತ್ತು ನೀನು ನಿನ್ನ ಸಮಯ ವ್ಯರ್ಥ ಮಾಡಿಕೊಂಡಿದ್ದು ಅಷ್ಟೇ ಅಲ್ಲದೆ ನನ್ನ ಸಮಯವನ್ನೂ ವ್ಯರ್ಥ ಮಾಡಿದ್ದಕ್ಕೆ.

ಸಮಯವನ್ನು ಅತ್ಯಂತ ಕೆಟ್ಟದಾಗಿ ಹಾಳುಮಾಡುವುದೆಂದರೆ, ಮೂರ್ಖರೊಡನೆ, ಮತಾಂಧರೊಡನೆ ವಾದಕ್ಕಿಳಿಯುವುದು. ಇಂಥವರಿಗೆ ಸತ್ಯದ ಬಗ್ಗೆ, ವಾಸ್ತವದ ಬಗ್ಗೆ ಯಾವ ಕಾಳಜಿಯೂ ಇಲ್ಲ, ಅವರಿಗೆ ತಮ್ಮ ಭ್ರಮೆಗಳ, ನಂಬಿಕೆಗಳ ಮುಂದುವರಿಕೆ ಮಾತ್ರ ಅವಶ್ಯಕ. ಇಂಥ ಪ್ರಯೋಜನಕ್ಕೆ ಬಾರದ ವಾದಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ಮೂರ್ಖತನ, ಅಂಧಾಭಿಮಾನ, ಮೊಂಡುತನ ಅವರನ್ನ ಎಷ್ಟು ಕುರುಡರನ್ನಾಗಿಸಿದೆ ಎಂದರೆ ನೀವು ಕೊಟ್ಟ ಯಾವ ಸಾಕ್ಷಿಯೂ ಇವರ ಕಣ್ತೆರೆಸುವುದಿಲ್ಲ, ಅವರು ತಮ್ಮ ಕುರುಡುತನದ ನಶೆಯಲ್ಲಿ ಮುಳುಗಿಬಿಟ್ಟಿದ್ದಾರೆ ನಿಮ್ಮ ಯಾವ ಮಾತೂ ಅವರನ್ನು ಮುಟ್ಟುವುದಿಲ್ಲ. ತಮ್ಮ ಮಾತನ್ನು ಸಾಧಿಸಿಕೊಳ್ಳುವುದನ್ನ ಬಿಟ್ಟರೆ ಅವರಿಗೆ ಬೇರೆ ಯಾವ ಸತ್ಯವೂ ಇಲ್ಲ. ಮೂರ್ಖತನ ಕೂಗುತ್ತಿರುವಾಗ ಜಾಣರು ವಾದಕ್ಕಿಳಿಯದೇ ತಮ್ಮ ಸತ್ಯದ ಪ್ರತಿಪಾದನೆಗೆ ಉಪಯುಕ್ತವಾದ ಬೇರೆ ದಾರಿಗಳನ್ನು ಹುಡುಕಿಕೊಳ್ಳಬೇಕು.

“ಕತ್ತೆನ ಪಿಕ್ನಿಕ್ ಗೆ ಕರ್ಕೊಂಡು ಹೋಗಿದ್ದು ಎಷ್ಟು ಒಳ್ಳೆಯದಾಯ್ತು ನೋಡು” ನಸ್ರುದ್ದೀನ್ ತನ್ನ ಗೆಳೆಯನಿಗೆ ಹೇಳುತ್ತಿದ್ದ.

“ಯಾಕೆ? “ ಗೆಳೆಯ ಪ್ರಶ್ನೆ ಮಾಡಿದ.

“ಪಿಕ್ನಿಕ್ ಲ್ಲಿ ಆ ಹುಡುಗನಿಗೆ ಗಾಯ ಆದಾಗ, ಕತ್ತೆ ಮೇಲೆ ಕೂರಿಸ್ಕೊಂಡು ವಾಪಸ್ ಬಂದ್ವಿ. ಕತ್ತೆ ಇಲ್ದಿದ್ರೆ ಕಷ್ಟ ಆಗಿರೋದು”. ನಸ್ರುದ್ದೀನ್ ಕ್ಲಾರಿಫೈ ಮಾಡಿದ.

ಹುಡುಗನಿಗೆ ಗಾಯ ಆಯ್ತಾ? ಹೇಗೆ? ಗೆಳೆಯ ಮತ್ತೆ ಪ್ರಶ್ನೆ ಮಾಡಿದ.

“ಕತ್ತೆ ಒದೀತು” ನಸ್ರುದ್ದೀನ್ ಉತ್ತರಿಸಿದ.

Leave a Reply