ಸ್ವಾಧೀನಪಡಿಸಿಕೊಳ್ಳುವ ಆಟ ಅತ್ಯಂತ ಮೂರ್ಖ ಆಟವಾದರೂ ಇದೇ ನಮ್ಮ ಬದುಕಿನ ಆಟವಾಗಿರುವುದು ದುರ್ದೈವ. ನಾನು – ನನ್ನದು ಎನ್ನುವ ಆಟ ನಮ್ಮ ಜಗತ್ತನ್ನು ಕಾಡುತ್ತಿರುವ ದೊಡ್ಡ ಮನೋರೋಗ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ವಯಸ್ಸಾದ ಐರಿಶ್ ಗ್ರಹಸ್ಥರು ತಮ್ಮ ಹೊಟೆಲ್ ರೂಂ ಖಾಲಿ ಮಾಡಿ ಅವಸರದಿಂದ ಬಸ್ ಡಿಪೋ ಗೆ ಹೊರಟರು. ಬಸ್ ಸ್ಟ್ಯಾಂಡ್ ತಲುಪಿದ ಮೇಲೆ ಅವರಿಗೆ ತಾವು ತಮ್ಮ ಹಳದಿ ಬಣ್ಣದ ಕೊಡೆಯನ್ನ ಹೊಟೆಲ್ ರೂಮ್ ನಲ್ಲಿಯೇ ಬಿಟ್ಟು ಬಂದಿರುವುದು ನೆನಪಾಯಿತು. ಅವರು ತಮ್ಮ ಕೊಡೆಯನ್ನು ತೆಗೆದುಕೊಂಡು ಬರಲು ಲಗುಬಗೆಯಿಂದ ಮತ್ತೆ ಹೊಟೆಲ್ ನತ್ತ ಹೆಜ್ಜೆ ಹಾಕಿದರು.
ಅಷ್ಟರಲ್ಲಾಗಲೇ ಹೊಟೇಲಿನ ಮ್ಯಾನೇಜರ್ ಗ್ರಹಸ್ಥರಿದ್ದ ರೂಮನ್ನು ಆಗ ತಾನೇ ಮದುವೆಯಾಗಿದ್ದ ಇಬ್ಬರು ಯುವ ಪ್ರೇಮಿಗಳಿಗೆ ಕೊಟ್ಟುಬಿಟ್ಟಿದ್ದ. ಕೊಡೆ ಹುಡುಕಿಕೊಂಡು ಬಂದ ಗ್ರಹಸ್ಥರಿಗೆ ಆ ರೂಮಿಗೆ ಹೋಗಿ ನೀವೇ ವಿಚಾರಿಸಿ ಎಂದು ಮ್ಯಾನೇಜರ್ ಸಲಹೆ ನೀಡಿದ. ಗ್ರಹಸ್ಥರು ತಾವು ಇದ್ದ ರೂಮಿಗೆ ಬಂದು ಇನ್ನೇನು ಡೋರ್ ಬೆಲ್ ಬಾರಿಸಬೇಕು ಎನ್ನುವಷ್ಟರಲ್ಲಿ ಒಳಗಿನಿಂದ ಕೇಳಿಬಂದ ಪ್ರೇಮಸಂಭಾಷಣೆಗಳನ್ನು ಕೇಳುತ್ತ ಬಾಗಿಲಲ್ಲೇ ನಿಂತುಕೊಂಡರು.
“ ಈ ಸುಂದರ ಕಣ್ಣುಗಳು ಯಾರವು ಗೆಳತಿ? “ ಗಂಡು ದನಿ ಪ್ರಶ್ನೆ ಮಾಡಿತು. “ ನಿನ್ನವೇ” ಹೆಣ್ಣು ದನಿ ಉತ್ತರ ನೀಡಿತು. “ ಈ ನೀಳ ಮೂಗು ಯಾರದು? “ ಗಂಡು ದನಿ ಮತ್ತೆ ಪ್ರಶ್ನೆ ಮಾಡಿತು. “ ನಿನ್ನದೇ” ಹೆಣ್ಣು ಉತ್ತರ ನೀಡಿತು. “ ಈ ಸುಂದರ ತುಟಿಗಳು ಯಾರವು ಹುಡುಗಿ” ಮತ್ತೆ ಗಂಡು ದನಿಯ ಪ್ರಶ್ನೆ. “ ಕೇವಲ ನಿನ್ನವೇ ಗೆಳೆಯ” ಹೆಣ್ಣಿನ ಉತ್ತರ. ಪ್ರಶ್ನೋತ್ತರ ಇದೇ ಧಾಟಿಯಲ್ಲಿ ಮುಂದುವರೆಯುತ್ತಿರುವುದನ್ನ ಕೇಳಿಸಿಕೊಂಡ ಐರಿಶ್ ಗ್ರಹಸ್ಥ ಗಂಡಸಿಗೆ ಕೂಗಿ ಹೇಳಿದ, “ ಎಲ್ಲಾ ನಿನ್ನದಿರಬಹುದು ಮಿಸ್ಟರ್ ಆದರೆ ಆ ಹಳದಿ ಕೊಡೆ ಮಾತ್ರ ನನ್ನದು”.
“ನಾನು” “ನನ್ನದು” ಎನ್ನುವ ಈ ರೋಮಾಂಚಕಾರಿ ಆಟ ಅಸಂಗತವಾದದ್ದು. ಆದರೇ ನಮ್ಮ ಇಡೀ ಬದುಕೇ ಇಂಥ ಆಟಗಳಿಂದ ತುಂಬಿಕೊಂಡಿದೆ. ನೀವು ಹುಟ್ಟುವ ಮೊದಲೂ ಈ ಭೂಮಿ ಇತ್ತು ಮತ್ತು ನೀವು ಸತ್ತು ಹೋದ ಮೇಲೂ ಈ ಭೂಮಿ ಇರುತ್ತದೆ. ನೀವು ಧರಿಸಿರುವ ವಜ್ರಗಳು ಮೊದಲೂ ಇದ್ದವು ನಿಮ್ಮ ತರುವಾಯವೂ ಇರುತ್ತವೆ. ಆ ವಜ್ರಗಳಿಗೆ ನಿಮ್ಮ ನೆನಪು ಕೂಡ ಇಲ್ಲ. ನೀವು ಅವುಗಳ ಮೇಲೆ ಹಕ್ಕು ಸಾಧಿಸಿದ್ದೀರಿ ಎನ್ನುವ ಕುರಿತು ವಜ್ರಗಳಿಗೆ ವಿಸ್ಮೃತಿ.
ಸ್ವಾಧೀನಪಡಿಸಿಕೊಳ್ಳುವ ಆಟ ಅತ್ಯಂತ ಮೂರ್ಖ ಆಟವಾದರೂ ಇದೇ ನಮ್ಮ ಬದುಕಿನ ಆಟವಾಗಿರುವುದು ದುರ್ದೈವ. ನಾನು – ನನ್ನದು ಎನ್ನುವ ಆಟ ನಮ್ಮ ಜಗತ್ತನ್ನು ಕಾಡುತ್ತಿರುವ ದೊಡ್ಡ ಮನೋರೋಗ.
ಒಮ್ಮೆ ತನ್ನ ನೂರು ವರ್ಷದ ತಂದೆಯನ್ನ ನರ್ಸಿಂಗ್ ಹೋಂ ಗೆ ಕರೆದುಕೊಂಡು ಬಂದಿದ್ದ ಎಪ್ಪತೈದು ವರ್ಷ ವಯಸ್ಸಿನ ನಸ್ರುದ್ದೀನ್.
“ ಡಾಕ್ಟರ್, ನನ್ನ ಅಪ್ಪ ಯಾಕೋ ಇತ್ತೀಚಿಗೆ ತೀರಾ ಹುಚ್ಚುಚ್ಚಾಗಿ ಆಡುತ್ತಾನೆ. ಕಳೆದ ಹದೈನೈದು ದಿನಗಳಿಂದ ಬಾತ್ ಟಬ್ ನಲ್ಲಿ ರಬ್ಬರ್ ಡೋನಾಲ್ಡ್ ಡಕ್ ಜೊತೆ ಆಟ ಆಡುತ್ತ ಕೂತು ಬಿಡುತ್ತಿದ್ದಾನೆ. ಆ ಡೋನಾಲ್ಡ್ ಡಕ್ ನ ಬೇರೆ ಯಾರಿಗೂ ಕೊಡುವುದಿಲ್ಲ. ದಯವಿಟ್ಟು ಇವನನ್ನು ನಿಮ್ಮ ಆಸ್ಪತ್ರೆಗೆ ಸೇರಿಸಿಕೊಳ್ಳಿ “
“ಬಹುಶಃ, ಇದು ವಯೋಸಹಜ ನೆನಪಿನ ಸಮಸ್ಯೆ. ಅವನ ವರ್ತನೆಯಿಂದ ಯಾರಿಗೂ ತೊಂದರೆ ಇಲ್ಲ ತಾನೆ? ಮನೆಯಲ್ಲಿಯೇ ಆರೈಕೆ ಮಾಡು “
ಮನೋವೈದ್ಯರು ನಸ್ರುದ್ದೀನ್ ಗೆ ತಿಳಿಹೇಳಿದರು.
“ಆದರೆ, ಅದು ನನ್ನ ಡೋನಾಲ್ಡ್ ಡಕ್ “
ನಸ್ರುದ್ದೀನ್ ನಿಧಾನಕ್ಕೆ ತನ್ನ ಸಮಸ್ಯೆ ಹೇಳಿಕೊಂಡ.
(Source: A sudden Clash of thunder by Osho )