ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗವನ್ನು ಇಲ್ಲಿ ಓದಿ: https://aralimara.com/2023/04/22/fromm-16/
ಭಾಗ 3
- ಹಳೆಯ ಒಡಂಬಡಿಕೆಯಲ್ಲಿ having ಮತ್ತು being
ಹಳೆಯ ಒಡಂಬಡಿಕೆಯ ಒಂದು ಮುಖ್ಯ ಥೀಮ್ ಎಂದರೆ : ನೀನು ಹೊಂದಿರುವುದನ್ನೆಲ್ಲ ಬಿಟ್ಟುಬಿಡು; ಎಲ್ಲ ಸಂಕೋಲೆಗಳಿಂದ ನಿನ್ನನ್ನು ನೀನು ಬಿಡುಗಡೆಗೊಳಿಸಿಕೋ ಎನ್ನುವುದು ; be !
ಹೀಬ್ರೂ ಬುಡಕಟ್ಟಿನ ಇತಿಹಾಸ ಶುರುವಾಗೋದು, ಹೀಬ್ರೂಗಳ ಮೊದಲ ನಾಯಕ ಅಬ್ರಹಾಂ ನಿಗೆ ತನ್ನ ದೇಶವನ್ನ, ತನ್ನ ಕುಲಬಾಂಧವರನ್ನ ಬಿಟ್ಟು ಹೋಗುವಂತೆ ಆದೇಶ ನೀಡುವ ಮೂಲಕ : “ ನಿನ್ನ ದೇಶವನ್ನ ತ್ಯಜಿಸಿ, ನಿನ್ನ ಕುಲ ಬಾಂಧವರನ್ನ, ನಿನ್ನ ತಂದೆಯ ಮನೆಯನ್ನ ಬಿಟ್ಟು, ನಾನು ತೋರಿಸುವ ಜಾಗಕ್ಕೆ ಹೋಗು”. (Genesis 12:1).
ಅಬ್ರಹಾಂ ತಾನು ಹೊಂದಿದ್ದ ತನ್ನ ಮನೆ, ಕುಟುಂಬವನ್ನು ಬಿಟ್ಟು ಅಪರಿಚಿತ ಜಾಗಕ್ಕೆ ಹೋಗಬೇಕಾಯಿತು, ಅವನ ಸಂತತಿಯವರು ಹೊಸ ನೆಲದಲ್ಲಿ ನೆಲೆಯಾದರು ಮತ್ತು ಹೊಸ ಕುಲ ಬಾಂಧವ್ಯವೊಂದು (clannishness) ಹುಟ್ಟಿಕೊಂಡಿತು. ಈ ಪ್ರಕ್ರಿಯೆ ತೀವ್ರವಾದ ದಾಸ್ಯಕ್ಕೆ ಕಾರಣವಾದದ್ದು ನಿಖರವಾಗಿ ಏಕೆಂದರೆ, ಅವರು ಈಜಿಪ್ತಿನಲ್ಲಿ ಶ್ರೀಮಂತರಾದರು, ಸಾಮರ್ಥ್ಯಶಾಲಿಗಳಾದರು, ಆದರೆ ಗುಲಾಮರಾದರು; ದೇವರು ಒಬ್ಬನೇ ಎನ್ನುವ, ತಮ್ಮ ಅಲೆಮಾರಿ (nomadic) ಪೂರ್ವಜರ ದೇವರ ಕುರಿತಾದ ದರ್ಶನವನ್ನು ಅವರು ಕಳೆದುಕೊಂಡರು, ವಿಗ್ರಹಗಳನ್ನು ಪೂಜಿಸತೊಡಗಿದರು, ಶ್ರೀಮಂತರ ದೇವರುಗಳು ಕೊನೆಗೆ ಅವರ ಮಾಸ್ಟರ್ ಗಳಾಗಿ ಪರಿವರ್ತಿತರಾದರು.
ಹೀಬ್ರೂಗಳ ಎರಡನೇಯ ನಾಯಕ ಮೋಸೆಸ್, ದೇವರು ಅವನಿಗೆ, ತನ್ನ ಜನರನ್ನು ಬಿಡುಗಡೆಗೊಳಿಸುವಂತೆ, ತಮ್ಮ ಸ್ವಂತ ಮನೆಯಂತಾಗಿರುವ ( ಕೊನೆಗೂ ಈಗ ಗುಲಾಮರ ಮನೆಯಂತಾಗಿರುವ) ಈ ದೇಶದಿಂದ ಅವರನ್ನು ತನ್ನ ನಾಯಕತ್ವದಲ್ಲಿ ಹೊರಡಿಸಿ ಮರುಭೂಮಿಗೆ ಕರೆದುಕೊಂಡು ಹೋಗಿ “ಸಂಭ್ರಮಿಸಲು” ಅವಕಾಶ ಮಾಡಿಕೊಡುವಂತೆ ಆದೇಶ ನೀಡಿದ್ದಾನೆ. ಮನಸ್ಸಿಲ್ಲದ ಮನಸ್ಸಿನಿಂದ ಮತ್ತು ಹಲವಾರು ಸಂಶಯಗಳೊಂದಿಗೆ ಹೀಬ್ರೂಗಳು ತಮ್ಮ ನಾಯಕ ಮೋಸೆಸ್ ನ ಹಿಂಬಾಲಿಸುತ್ತ ಮರುಭೂಮಿಗೆ ಬಂದು ತಲುಪುತ್ತಾರೆ.
ಈ ಬಿಡುಗಡೆಗೊಳಿಸುವ ಪ್ರಕ್ರಿಯೆಯಲ್ಲಿ ಮರುಭೂಮಿ ಎನ್ನುವುದು ಒಂದು ಬಹಳ ಮುಖ್ಯವಾದ ಸಾಂಕೇತಿಕತೆ. ಮರುಭೂಮಿ ಎಂದರೆ ಮನೆಯಲ್ಲ : ಅಲ್ಲಿ ಶಹರಗಳಿಲ್ಲ, ಐಷಾರಾಮಿಯಿಲ್ಲ, ಇದು ಅಲೆಮಾರಿಗಳ ಜಾಗ, ಅವರು ತಮಗೆ ಅವಶ್ಯವಾಗಿರುವುದನ್ನ ಮಾತ್ರ ಹೊಂದಿದ್ದಾರೆ, ಅವರಿಗೆ ಅವಶ್ಯಕವಾಗಿರುವುದು ಅವರ ಬದುಕಿಗೆ ಬೇಕಾಗಿರುವಂಥದು ಮಾತ್ರ, ಸ್ವಾಧೀನಕ್ಕೆ ಬೇಕಾಗಿರುವಂಥದಲ್ಲ. ಐತಿಹಾಸಿಕವಾಗಿ ಅಲೆಮಾರಿ ಸಂಪ್ರದಾಯಗಳು, ಸಾಮೂಹಿಕ ವಲಸೆಯ ವರದಿಯ (exodus report) ಜೊತೆ ಅಂತರ್ಗತವಾಗಿವೆ. ಮತ್ತು ಬಹುತೇಕ ಈ ಅಲೆಮಾರಿ ಸಂಪ್ರದಾಯಗಳು ಎಲ್ಲ nonfunctional ಆಸ್ತಿಯ ವಿರುದ್ಧದ ಪ್ರವೃತ್ತಿಯನ್ನ, ಮತ್ತು ಮರುಭೂಮಿಯಲ್ಲಿ ಬದುಕಿನ ಆಯ್ಕೆ, ಯಾವುದನ್ನ ಬಿಡುಗಡೆಯ ಬದುಕಿಗೆ ಸಿದ್ಧತೆ ಎಂದುಕೊಳ್ಳಲಾಗುತ್ತದೆಯೋ ಅಂಥವುಗಳನ್ನ ನಿರ್ಧರಿಸಿವೆ. ಆದರೆ ಈ ಐತಿಹಾಸಿಕ ಅಂಶಗಳು ಮರುಭೂಮಿಯ ಅರ್ಥ ಸಂಕೋಲೆಗಳಿಲ್ಲದ, ಆಸ್ತಿಯ ಪ್ರವೃತ್ತಿಯಲ್ಲದ ಬದುಕಿನ ಸಾಂಕೇತಿಕತೆಯನ್ನ ಮತ್ತಷ್ಟು ಗಟ್ಟಿಗೊಳಿಸುತ್ತವೆ.
ಜ್ಯೂಯಿಶ್ ಹಬ್ಬಗಳಲ್ಲಿನ ಕೆಲವು ಮುಖ್ಯ ಸಿಂಬಲ್ ಗಳು ತಮ್ಮ ಮೂಲವನ್ನು ಮರುಭೂಮಿ ಸಂಬಂಧದಲ್ಲಿ ಹೊಂದಿವೆ. Unleavened ಬ್ರೆಡ್ ( bread made without yeast) ಹೊರಡಲು ಅವಸರದಲ್ಲಿರುವವರಿಗಾಗಿ ಇರುವ ಬ್ರೆಡ್; ಇದು ಅಲೆಮಾರಿಗಳ ಬ್ರೆಡ್. ಮತ್ತು ಸುಲಭವಾಗಿ ನಿರ್ಮಿಸಿಕೊಂಡು, ಸುಲಭವಾಗಿ ಬಿಚ್ಚಬಹುದಾದ ಟೆಂಟ್ ನಂಥ suka (ಡೇರೆ) ಅಲೆಮಾರಿಗಳ ಮನೆ. ಯಹೂದಿಗಳ ಸಾಂಪ್ರದಾಯಿಕ ಕಾನೂನಿನಲ್ಲಿ (Talmud ) ಹೇಳಿರುವಂತೆ, suka ಎನ್ನುವುದು ವಾಸಿಸಲು ಬಳಸುವಂಥ ತಾತ್ಕಾಲಿಕ ಮನೆ, ಇದು ಒಬ್ಬರು ಆಸ್ತಿಯಂತೆ ಹೊಂದಬಹುದಾದ ಸ್ಥಿರವಾದ ಮನೆಯಲ್ಲ.
ಹೀಬ್ರೂಗಳು ಈಜಿಪ್ತಿನಲ್ಲಿ ಐಷಾರಾಮಿ ಬದುಕನ್ನ ಸಾಧ್ಯಮಾಡುವಂಥ ಜಾಗಗಳಿಗಾಗಿ (fleshpots) ಹಂಬಲಿಸುತ್ತಿದ್ದರು ; ಒಂದು ಸ್ಥಿರವಾದ ಮನೆ, ಬಡತನವಾದರೂ ಸರಿ ಆಹಾರದ ನಿಶ್ಚಿತತೆ, ಕಾಣಸಿಗುವಂಥ ವಿಗ್ರಹಗಳು ಮುಂತಾಗಿ. ಅವರಿಗೆ ಮರುಭೂಮಿಯ ಆಸ್ತಿರಹಿತ ಬದುಕಿನ ಅನಿಶ್ಚಿತತೆಯ ಕುರಿತಾಗಿ ಭಯವಿತ್ತು. ಅವರು ಹೇಳುತ್ತಿದ್ದರು : “ಈಜಿಪ್ತಿನ ನೆಲದ ಐಷಾರಾಮಿ ಜಾಗಗಳಲ್ಲಿ ಕುಳಿತು ಹೊಟ್ಟೆತುಂಬಾ ಬ್ರೆಡ್ ತಿನ್ನುತ್ತಿದ್ದರೆ ನಾವು ದೇವರು ಕೈಯಲ್ಲಿ ಕೊಲೆಯಾಗಬಹುದಿತ್ತೆ ? ; ನೀನು ನಮ್ಮನ್ನ ಈ ಭಯಂಕರ ಜಾಗೆಗೆ ಕರೆದುಕೊಂಡು ಬಂದದ್ದು ಹಸಿವಿನಿಂದ ಕೊಲ್ಲಲಿಕ್ಕಾ?” (Exodus:16:3). ಇಡೀ ಲಿಬರೇಶನ್ ಕಥೆಯಲ್ಲಿಯಂತೆ ದೇವರು, ಜನರ ನೈತಿಕ ದುರ್ಬಲತೆಗೆ ಪ್ರತಿಕ್ರಯಿಸುತ್ತಾನೆ. ಅವನು ಅವರಿಗೆ ಆಹಾರದ ನಿಶ್ಚಿತತೆಯ ಬಗ್ಗೆ ಭರವಸೆ ನೀಡುತ್ತಾನೆ : ಬೆಳಿಗ್ಗೆ ಬ್ರೆಡ್ ಮೂಲಕ ಹಾಗು ಸಂಜೆ ಕ್ವೀಲ್ ಹಕ್ಕಿಯನ್ನು ಪ್ರಾಮಿಸ್ ಮಾಡುವ ಮೂಲಕ.
ಆದರೆ ದೇವರು ಎರಡು ಬಹುಮುಖ್ಯ ಕಟ್ಟಳೆಗಳನ್ನೂ ವಿಧಿಸುತ್ತಾನೆ : ಪ್ರತಿಯೊಬ್ಬರೂ ತಮಗೆ ಅವಶ್ಯವಿರುವಷ್ಟು ಮಾತ್ರ ಸಂಗ್ರಹಿಸಬೇಕು : “ ಇಸ್ರೇಲಿನ ಜನ ಹಾಗೆಯೇ ಮಾಡುತ್ತಾರೆ; ಕೆಲವರು ಹೆಚ್ಚು ಸಂಗ್ರಹಿಸುತ್ತಾರೆ, ಕೆಲವರು ಕಡಿಮೆ. ಆದರೆ ಓಮರ್ ನಿಂದ (ಹಳೆಯ ಹೀಬ್ರೂ ಅಳತೆಯ ಮಾಪಕ) ಅಳತೆ ಮಾಡಿದಾಗ, ಯಾರು ಹೆಚ್ಚು ಸಂಗ್ರಹಿಸಿದ್ದರೋ ಅವರ ಅಳತೆ ತುಂಬಿ ಚೆಲ್ಲಿರಲಿಲ್ಲ, ಯಾರು ಕಡಿಮೆ ಸಂಗ್ರಹಿಸಿದ್ದರೋ ಅವರ ಅಳತೆಯಲ್ಲಿ ಕೊರತೆಯಾಗಿರಲಿಲ್ಲ ; ಪ್ರತಿಯೊಬ್ಬರೂ ತಮಗೆ ತಿನ್ನಲು ಸಾಧ್ಯವಾಗಬಹುದಾದಷ್ಟನ್ನು ಮಾತ್ರ ಸಂಗ್ರಹಿಸಿದ್ದರು” (Exodus 16:17-18).
ಮೊದಲ ಬಾರಿಗೆ ಇಲ್ಲಿ ಪ್ರತಿಪಾದಿಸಲಾದ ತತ್ವ ಮುಂದೆ ಮಾರ್ಕ್ಸ್ ನ ಮೂಲಕ ಪ್ರಸಿದ್ಧವಾಯಿತು : ಇದೇ ಪ್ರತಿಯೊಬ್ಬರಿಗೂ ಅವರ ಅವಶ್ಯಕತೆಗಳಿಗೆ ತಕ್ಕಂತೆ ಎನ್ನುವ ತತ್ವ. ಅವಶ್ಯಕತೆಗಳನ್ನ ಪೂರೈಸುವ ಹಕ್ಕನ್ನ (the right to fed) ಯಾವುದೇ ಅರ್ಹತೆಯ ಮಾನದಂಡವಿಲ್ಲದೇ ಸ್ಥಾಪನೆ ಮಾಡಲಾಯಿತು. ಇಲ್ಲಿ ದೇವರು ತನ್ನ ಮಕ್ಕಳ ಅವಶ್ಯಕತೆಗಳನ್ನು ಪೋಷಿಸುವ ತಾಯಿಯಂತೆ, ಮತ್ತು ಮಕ್ಕಳಿಗೆ ತಮ್ಮ ಅವಶ್ಯಕತೆಗಳನ್ನ ಪೂರೈಸಿಕೊಳ್ಳುವ ಹಕ್ಕನ್ನು ಮಂಡಿಸಲು ಯಾವ ಅರ್ಹತೆಯನ್ನೂ ಸ್ಫಾಪಿಸಿಕೊಳ್ಳಬೇಕಿಲ್ಲ.
ದೇವರು ವಿಧಿಸಿದ ಎರಡನೇಯ ಕಟ್ಟಳೆ, ಕೂಡಿಡುವ ಬಗ್ಗೆ, ದುರಾಸೆಯ ಬಗ್ಗೆ, ಮತ್ತು ಸ್ವಾಮ್ಯಸೂಚಕತೆಯ (possessiveness) ಕುರಿತಾಗಿ. ಇಸ್ರೇಲಿನ ಜನರಿಗೆ ಮರುದಿನ ಮುಂಜಾನೆಯವರೆಗೆ ಯಾವುದನ್ನೂ ಸಂಗ್ರಹಿಸದಂತೆ ಆಜ್ಞೆ ವಿಧಿಸಲಾಗಿತ್ತು. “ ಆದರೆ ಅವರು ಮೋಸೆಸ್ ನ ಮಾತು ಕೇಳಲಿಲ್ಲ; ಕೆಲವರು ಒಂದಿಷ್ಟನ್ನ ಮರುದಿನ ಮುಂಜಾನೆಯವರೆಗೆ ಉಳಿಸಿಕೊಂಡರು, ಆಗ ಅದರಲ್ಲಿ ಹುಳುಗಳಾಗಿ ಅದು ಕೆಟ್ಟು ಹೋಯಿತು ; ಇದರಿಂದಾಗಿ ಮೋಸೆಸ್ ಅವರ ಮೇಲೆ ಸಿಟ್ಟಿಗೆದ್ದ. ಪ್ರತಿ ಮುಂಜಾನೆ ತಮಗೆ ತಿನ್ನಲು ಸಾಧ್ಯವಾಗುವಷ್ಟನ್ನ ಮಾತ್ರ ಅವರು ಸಂಗ್ರಹಿಸಿದ್ದರು; ಆದರೆ ಸೂರ್ಯ ಪ್ರಖರನಾಗುತ್ತಿದ್ದಂತೆ ಅವರು ಸಂಗ್ರಹಿಸಿದ್ದೆಲ್ಲ ಕರಗಿಹೋಯಿತು” (Exodus 16:20-21)
ಆಹಾರ ಸಂಗ್ರಹಣೆಯ ಸಂಬಂಧದಲ್ಲಿ ಶಬ್ಬತ್ (“Sabbath” ೬ ಸತತ ಸೃಷ್ಟಿ ಕಾರ್ಯದ ದಿನಗಳ ನಂತರ ೭ ನೇಯ ದಿನ ದೇವರು ವಿಶ್ರಾಂತಿ ತೆಗೆದುಕೊಂಡ ದಿನ) ಆಚರಿಸುವ ಪರಿಕಲ್ಪನೆಯನ್ನ ಪರಿಚಯಿಸಲಾಯಿತು. ಹೀಬ್ರೂಗಳಿಗೆ ಮೋಸೆಸ್ ಪ್ರತಿ ಶುಕ್ರುವಾರ ಎಂದಿಗಿಂತ ಡಬಲ್ ಆಹಾರ ಸಂಗ್ರಹಿಸುವಂತೆ ಹೇಳಿದ : “ ಆರು ದಿನ ಆಹಾರ ಸಂಗ್ರಹಿಸುವುದು, ಮತ್ತು ಏಳನೇಯ ದಿನ (ಶಬ್ಬತ್ ದಿನ) ಏನನ್ನೂ ಸಂಗ್ರಹಿಸಬಾರದು” (Genesis 16:26).
ಬೈಬಲ್ ನ ಪರಿಕಲ್ಪನೆಗಳಲ್ಲಿ ಮತ್ತು ಮುಂದೆ ಜುಡಾಯಿಸಂ ನಲ್ಲಿ ಕೂಡ, ಶಬ್ಬತ್ ಬಹಳ ಮುಖ್ಯವಾದದ್ದು. Ten Commandments ಲ್ಲಿ ಇದೊಂದೇ ಅತ್ಯಂತ ಕಟ್ಟುನಿಟ್ಟಾದ ಧಾರ್ಮಿಕ ನಿಯಮ : ಇದರ ಸಂಪೂರ್ಣ ಆಚರಣೆಗಾಗಿ ಸಂಪ್ರದಾಯ ವಿರೋಧಿ ಪ್ರವಾದಿಗಳು (otherwise antiritualistic prophets) ಒತ್ತಾಯಿಸುತ್ತಾರೆ ; ಇದು ೨೦೦೦ ವರ್ಷಗಳುದ್ದಕ್ಕೂ ಹರಡಿಕೊಂಡಿರುವ ವಲಸಿಗರ ಬದುಕಿನಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಆಚರಿಸಲ್ಪಟ್ಟ ಕಮಾಂಡಮೆಂಟ್, ಇದರ ಆಚರಣೆ ಕಠಿಣ ಮತ್ತು ಕಷ್ಟಕರವಾಗಿದ್ದರೂ. ಯಹೂದಿಗಳ ಬದುಕಿನಲ್ಲಿ ಶಬ್ಬತ್ ಕಾರಂಜಿಯಂತೆ ಇತ್ತು ಎಂದರೆ ಯಾರಿಗೂ ಸಂಶಯ ಬರಬಾರದು. ಯಹೂದಿಗಳು ಬಹುತೇಕ, ಚದುರಿ ಹೋದವರು, ಅಧಿಕಾರಹೀನರು, ತಿರಸ್ಕೃತರು, ಕಿರುಕುಳಕ್ಕೊಳಗಾದವರು ಆದರೆ ಯಾವಾಗ ಇವರು ರಾಜರಂತೆ ಶಬ್ಬತ್ ಆಚರಿಸುತ್ತಿದ್ದರೋ ಆಗ ತಮ್ಮ ಅಭಿಮಾನ ಮತ್ತು ಘನತೆಯನ್ನ ಮತ್ತೆ ಹೊಸದಾಗಿಸಿಕೊಳ್ಳುತ್ತಿದ್ದರು.
ಶಬ್ಬತ್ ಎಂದರೆ ಜನರ ನಿರಸ ಬದುಕಿನಲ್ಲಿ ಕೇವಲ ಒಂದು ವಿಶ್ರಾಂತಿಯ ದಿನ ಮಾತ್ರವೆ? ಕೆಲಸದ ಒತ್ತಡದ ನಡುವೆ ಕೊನೆಪಕ್ಷ ಒಂದು ದಿನದ ಬಿಡುಗಡೆ? ಖಂಡಿತ ಹೌದು. ಮತ್ತು ಈ ಆಚರಣೆ ಶಬ್ಬತ್ ಗೆ ಮಾನವ ವಿಕಾಸದ ಅತ್ಯಂತ ಮಹಾನ್ ಸಂಶೋಧನೆ ಎನ್ನುವ ಘನತೆಯ ಪಟ್ಟವನ್ನ ದಯಪಾಲಿಸುತ್ತದೆ. ಆದರೆ ಇದು ಇಷ್ಟು ಮಾತ್ರ ಆಗಿ ಉಳಿದುಬಿಟ್ಟಿದ್ದರೆ, ನಾನು ಈವರೆಗೆ ವಿವರಿಸಿದ ಕೇಂದ್ರ ಪಾತ್ರವನ್ನು ವಹಿಸಲಿಕ್ಕೆ ಶಬ್ಬತ್ ಗೆ ಸಾಧ್ಯವಾಗುತ್ತಿರಲಿಲ್ಲವೆನೋ.
(ಮುಂದುವರೆಯುತ್ತದೆ… )
(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )
1 Comment