ನೀವೇನು ಬಯಸುತ್ತೀರೋ ಅದೇ ಆಗುತ್ತೀರಿ…

ಕೇವಲ ಒಂದು ಚಾನೆಲ್ ನಮ್ಮನ್ನು ಡಾಮಿನೇಟ್ ಮಾಡಲಿಕ್ಕೆ ನಾವು ಅವಕಾಶ ಮಾಡಿಕೊಡಬಾರದು. ನಮ್ಮೊಳಗೆ ಎಲ್ಲದರ ಬೀಜ ಇದೆ, ನಾವು ಪರಿಸ್ಥಿತಿಯನ್ನ ನಮ್ಮ ಹತೋಟಿಗೆ ತೆಗೆದುಕೊಳ್ಳಬೇಕೆ ಹೊರತು, ನಾವು ಪರಿಸ್ಥಿತಿಯ ಅಡಿಯಾಳಾಗಬಾರದು. ನಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸಿಕೊಳ್ಳಲು ಈ ಟೆಲಿವಿಜನ್ ನ ರಿಮೋಟ್ ಕಂಟ್ರೋಲ್ ನಮ್ಮ ಅಧೀನದಲ್ಲಿರಬೇಕು... ~ Thich Naht Hahn | ಕನ್ನಡಕ್ಕೆ: ಚಿದಂಬರ ನರೇಂದ್ರ

ಒಳ್ಳೆಯ ಸುದ್ದಿ

ಅವರು ಮುದ್ರಿಸದ ಒಳ್ಳೆಯ ಸುದ್ದಿಗಳನ್ನ
ನಾವು ಪ್ರಕಟ ಮಾಡುತ್ತೆವೆ.
ಪ್ರತೀ ಕ್ಷಣಕ್ಕೊಂದರಂತೆ ಪ್ರಕಟವಾಗುತ್ತವೆ
ನಮ್ಮ ವಿಶೇಷ ಸಂಚಿಕೆಗಳು,
ಕೇವಲ ನಿಮಗಾಗಿ ಎಂಬಂತೆ.

ಒಳ್ಳೆಯ ಸುದ್ದಿ ಎಂದರೆ,
ನೀವು ಇನ್ನೂ ಬದುಕಿರುವುದು ಮತ್ತು,
ಚಳಿಗಾಲದ ಕೊರೆವ ಚಳಿಯ ನಡುವೆಯೂ
ನಿಂಬೆಯ ಗಿಡ ತಲೆ ಎತ್ತಿ ನಿಂತಿರುವುದು.

ಒಳ್ಳೆಯ ಸುದ್ದಿ ಎಂದರೆ,
ನಿನಗೆ ಸುಂದರವಾದ ಕಣ್ಣುಗಳಿವೆ ,
ನೀಲಿ ಆಕಾಶದ
ಮೂಲೆ ಮೂಲೆಗಳನ್ನು ಮುಟ್ಟಲು.

ಒಳ್ಳೆಯ ಸುದ್ದಿ ಎಂದರೆ,
ನಿಮ್ಮ ಪ್ರೀತಿ ಪಾತ್ರರು ನಿಮ್ಮ ಎದುರಿದ್ದಾರೆ ಹಾಗು,
ಅವರನ್ನು ಬರಸೆಳೆದು ಅಪ್ಪಿಕೊಳ್ಳಲು
ಸಧೃಡವಾಗಿವೆ ನಿಮ್ಮ ತೋಳುಗಳು.

ಒಳ್ಳೆಯ ಸುದ್ದಿ ಎಂದರೆ,
ರಸ್ತೆಯ ಬದಿಯಲ್ಲಿ ಡ್ಯಾಂಡೆಲಿಯನ್ ಹೂವುಗಳು
ಇನ್ನೂ ಅದ್ಭುತವಾಗಿ ಮುಗುಳ್ನಗುತ್ತ,
ಅನನ್ಯ ಸಂಗೀತವನ್ನು ನುಡಿಸುತ್ತಿವೆ
ದಯವಿಟ್ಟು ಕೇಳಿ,
ಒಳ್ಳೆಯ ಸುದ್ದಿ ಎಂದರೆ,
ನಿಮಗೆ ಕೇಳಬಲ್ಲ ಕಿವಿಗಳಿವೆ.

ತಲೆ ಬಾಗಿಸಿ
ಆ ಮಧುರ ಸಂಗೀತಕ್ಕೆ ಕಿವಿಯಾಗಿ,
ನಿಮ್ಮ ಪೂರ್ವಾಗ್ರಹಗಳನ್ನೆಲ್ಲ ಬದಿಗೆ ಸರಿಸುತ್ತ,
ಜಗದ ದುಗುಡಗಳನ್ನೆಲ್ಲ ಹಿಂದೆ ಹಾಕುತ್ತ.
ಇದೀಗ ಬಂದ ಒಳ್ಳೆಯ ಸುದ್ದಿ,

ಹೀಗೆ ಮಾಡುವುದು ನಿಮಗೆ ಸಾಧ್ಯ.

“ದುಃಖ ನನ್ನ ತುಂಬಿಕೊಂಡಿದೆ, ನಾನು ನಗುವುದು ಹೇಗೆ ಸಾಧ್ಯ?

ಇತ್ತೀಚಿಗೆ ನನ್ನ ಫ್ರೆಂಡ್ ಒಬ್ಬರು ಹೀಗೆ ಪ್ರಶ್ನೆ ಮಾಡಿದರು, “ದುಃಖ ನನ್ನ ತುಂಬಿಕೊಂಡಿರುವಾಗ, ನಗುವಂತೆ ನನ್ನ ನಾನು ಹೇಗೆ ಒತ್ತಾಯ ಮಾಡಲಿ? ಇದು ಅಸಹಜ ಅಲ್ಲವೆ?”

ನಾನು ಅವಳಿಗೆ ಹೇಳಿದೆ, ನಾವು ಈ ದುಃಖ ಮಾತ್ರ ಅಲ್ಲ, ದುಃಖಕ್ಕಿಂತ ಬಹಳ ವಿಸ್ತಾರವಾದವರು, ಹಾಗಾಗಿ ನಮಗೆ ನಮ್ಮ ದುಃಖವನ್ನು ನೋಡಿ ನಗುವುದು ಸಾಧ್ಯವಾಗಬೇಕು. ಮನುಷ್ಯ ಸಾವಿರಾರು ಚಾನೆಲ್ ಗಳ ಟೆಲಿವಿಜನ್ ಸೆಟ್ ನಂತೆ, ನಾವು ಬುದ್ಧ ಚಾನೆಲ್ ಆನ್ ಮಾಡಿದರೆ ಬುದ್ಧನಂತೆ, ದುಃಖದ ಚಾನೆಲ್ ಆನ್ ಮಾಡಿದರೆ ನಾವು ದುಃಖ, ನಗುವಿನ ಚಾನೆಲ್ ಆನ್ ಮಾಡಿದರೆ ನಾವು ನಗುವಿನ ಹೊರತಾಗಿ ಬೇರೆ ಏನೂ ಅಲ್ಲ. ನೀವು ಏನು ಬಯಸುತ್ತೀರೋ ಅದೇ ಆಗುತ್ತೀರಿ.

ಕೇವಲ ಒಂದು ಚಾನೆಲ್ ನಮ್ಮನ್ನು ಡಾಮಿನೇಟ್ ಮಾಡಲಿಕ್ಕೆ ನಾವು ಅವಕಾಶ ಮಾಡಿಕೊಡಬಾರದು. ನಮ್ಮೊಳಗೆ ಎಲ್ಲದರ ಬೀಜ ಇದೆ, ನಾವು ಪರಿಸ್ಥಿತಿಯನ್ನ ನಮ್ಮ ಹತೋಟಿಗೆ ತೆಗೆದುಕೊಳ್ಳಬೇಕೆ ಹೊರತು, ನಾವು ಪರಿಸ್ಥಿತಿಯ ಅಡಿಯಾಳಾಗಬಾರದು. ನಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸಿಕೊಳ್ಳಲು ಈ ಟೆಲಿವಿಜನ್ ನ ರಿಮೋಟ್ ಕಂಟ್ರೋಲ್ ನಮ್ಮ ಅಧೀನದಲ್ಲಿರಬೇಕು.

ಒಬ್ಬ ಝೆನ್ ಮಾಸ್ಟರ್ ಗೆ ಒಬ್ಬ ಅತೃಪ್ತ ಶಿಷ್ಯನಿದ್ದ. ಆತ ಒಂದಿಲ್ಲೊಂದು ಕಾರಣದಿಂದ ಸದಾ ದುಃಖಿಯಾಗಿರುತ್ತಿದ್ದ. ಒಂದು ದಿನ ಶಿಷ್ಯ ಮಾಸ್ಟರ್ ಹತ್ತಿರ ಹೋಗಿ ಕೇಳಿಕೊಂಡ.

“ಮಾಸ್ಟರ್, ನನ್ನ ಮೇಲೆ ನಿಮ್ಮ ಆಶೀರ್ವಾದವಿರಲಿ, ನನಗೂ ನಿಮ್ಮ ತಿಳಿವನ್ನು ದಯಪಾಲಿಸಿ, ನನಗೆ ದುಃಖದಿಂದ ಮುಕ್ತಿ ಬೇಕು, ಆನಂದವನ್ನು ಹುಡುಕಬೇಕು ನಾನು “

ಮಾಸ್ಟರ್, ಆ ಅತೃಪ್ತ ಶಿಷ್ಯನಿಗೆ ಒಂದು ಮುಷ್ಟಿ ಉಪ್ಪನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ಕರಗಿಸಿ, ಕುಡಿಯಲು ಹೇಳಿದರು.

ಒಂದು ಗುಟುಕು ಉಪ್ಪಿನ ನೀರು ಬಾಯಿಗೆ ಬೀಳುತ್ತಲೇ ಶಿಷ್ಯ, ವ್ಯಾಕ್ ಎನ್ನುತ್ತ ಎಲ್ಲ ಉಗಳಿ ಬಿಟ್ಟ.

“ ಯಾಕೆ? ಹೇಗಿದೆ ರುಚಿ ? “ ಕೇಳಿದರು ಮಾಸ್ಟರ್. “

“ ದರಿದ್ರವಾಗಿದೆ “ ಎಂದ ಶಿಷ್ಯ.

ಮಾಸ್ಟರ್, ಶಿಷ್ಯನ ಕೈ ಹಿಡಿದುಕೊಂಡು ದರದರನೇ ಎಳೆದುಕೊಂಡು ಸಮೀಪದ ಕೊಳದ ಹತ್ತಿರ ಬಂದರು.

“ ಈ ಕೊಳದಲ್ಲಿ ಒಂದು ಮುಷ್ಟಿ ಉಪ್ಪು ಹಾಕು ನೋಡೋಣ “ ಎಂದರು.

ಶಿಷ್ಯ, ಮಾಸ್ಟರ್ ಹೇಳಿದಂತೆ ಮಾಡಿದ.

“ ಈಗ ಕೊಳದ ನೀರು ಕುಡಿದು ಹೇಳು, ರುಚಿ ಹೇಗಿದೆ? ಮೊದಲಿನ ಹಾಗೆ ಉಪ್ಪು ಉಪ್ಪಾಗಿದೆಯಾ? “

ಶಿಷ್ಯ, ಕೊಳದಿಂದ ಒಂದು ಬೊಗಸೆ ನೀರು ಕುಡಿದು ಹೇಳಿದ “ ಇಲ್ಲ ಮಾಸ್ಟರ್, ರುಚಿಯಾಗಿದೆ “

ಶಿಷ್ಯನನ್ನು ಕೊಳದ ದಂಡೆಯ ಮೇಲೆ ಕೂರಿಸಿ, ಕೈ ಹಿಡಿದುಕೊಂಡು ಮಾಸ್ಟರ್ ಹೇಳಿದರು.

“ ಬದುಕಿನಲ್ಲಿ ದುಃಖದ ಪ್ರಮಾಣ ಒಂದು ಮುಷ್ಟಿ ಉಪ್ಪಿನಷ್ಟೇ. ಆದರೆ ಅದನ್ನು ಅನುಭವಿಸುವಾಗ, ನೀನು ಗ್ಲಾಸಿನಷ್ಟಾಗಬೇಡ, ಕೊಳದಷ್ಟಾಗು. ದುಃಖವನ್ನು, ಭರಿಸುವ ನಿನ್ನ ಅರಿವಿನ ವ್ಯಾಪ್ತಿ ಕೊಳದಷ್ಟು ವಿಶಾಲವಾಗಲಿ. ಆಗ ನಿನಗೆ ಕೊಳದ ನೀರಿನಂತೆ ಎಲ್ಲ ರುಚಿಯಾಗೇ ಇರುವುದು.

Leave a Reply