ಖಾಲೀತನ ಸಾಧ್ಯಮಾಡುವ ಆನಂದ – ಅದು ದೈಹಿಕ ಸುಖವೂ ಅಲ್ಲ, ಮಾನಸಿಕ ಸುಖವೂ ಅಲ್ಲ. ಅದು ಭೌತಿಕ ಅನುಭವವನ್ನು ಮೀರಿದ ಸ್ಥೀತಿ (transcendence). ನಿನಗೆ ಗೊತ್ತಿರುವ, ನೀವು ಅನುಭವಿಸಿರುವ, ನೀವು ಆಗಿರುವ ಎಲ್ಲ ಸ್ಥಿತಿಗಳ ಮೀರುವಿಕೆ. ಅದನ್ನ ಸುಮ್ಮನೇ ಖಾಲೀ ಎಂದು ಹೇಳುವುದೇ ಒಳ್ಳೆಯದು. ಅದು ನಿಮ್ಮನ್ನು ಬೇರಿನಿಂದಲೇ ಬೇರೆಯಾಗಿಸುತ್ತದೆ. ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಖಾಲಿ ಕಣಿವೆಯ ಚೈತನ್ಯ, ಅನನ್ಯ.
ಅಂತೆಯೇ ತಾವೋ ಮಹಾಮಾಯಿ
ಸಕಲ ಜಗತ್ತುಗಳ ಹಡೆದವ್ವ.
ಗಾಳಿಯ ಹಾಗೆ ಕಾಣಿಸದಿದ್ದರೂ
ಉಸಿರಿನ ಹಾಗೆ ಸರಾಗ.
~ ಲಾವೋತ್ಸೇ
ಬುದ್ಧನನ್ನು ಮತ್ತೆ ಮತ್ತೆ ಕೇಳಲಾಗುತ್ತಿತ್ತು,
“ಮನುಷ್ಯ ಖಾಲೀ ಆದಾಗ ಅವನಿಗೆ ಏನಾಗುತ್ತದೆ?”
ಬುದ್ಧ ಯಾವ ಉತ್ತರವನ್ನೂ ಕೊಡದೇ ಸುಮ್ಮನಾಗಿಬಿಡುತ್ತಿದ್ದ.
ಒತ್ತಾಯ ಮಾಡಿದಾಗ ಬುದ್ಧ ಹೇಳುತ್ತಿದ್ದ,
“ನನ್ನನ್ನೇನೂ ಕೇಳಬೇಡಿ. ನೀವು ಖಾಲೀ ಆಗಿ ಏನಾಗುತ್ತದೆ ಎನ್ನುವುದನ್ನ ನೀವೇ ಕಂಡುಕೊಳ್ಳಿ”.
ಅವನು ಯಾವಾಗಲೂ ಖಾಲೀ ಆಗುವುದರಿಂದ ಪರಿಪೂರ್ಣ ಆನಂದ (bliss) ನಿಮ್ಮದಾಗುತ್ತದೆ ಎಂದು ಉತ್ತರಿಸುತ್ತಿರಲಿಲ್ಲ. ಅವನ ಇಂಥ ಉತ್ತರಕ್ಕೆ ಸರಳ ಕಾರಣ ಎಂದರೆ, ಪರಿಪೂರ್ಣ ಆನಂದ ಎಂದ ತಕ್ಷಣ ನೀವು ಆನಂದದ ಕುರಿತಾದ ನಿಮ್ಮ ಅನುಭವ, ವಿಚಾರಗಳಲ್ಲಿ ಮುಳುಗಿಬಿಡುತ್ತೀರಿ. ಮತ್ತು ಆನಂದ ಎಂದ ಕೂಡಲೇ ನೀವು ಅದನ್ನ ಸುಖ ಎಂದು ಅನುವಾದ ಮಾಡಿಕೊಂಡು ಬಿಡುತ್ತೀರಿ. ದೇಹದ ಸುಖ, ಮನಸ್ಸಿನ ಸುಖ ಎನ್ನುವ ತಪ್ಪುಕಲ್ಪನೆಗೆ ಒಳಗಾಗುತ್ತೀರಿ.
ಆದರೆ ಈ ಖಾಲೀತನ ಸಾಧ್ಯಮಾಡುವ ಆನಂದ ಇದ್ಯಾವುದೂ ಅಲ್ಲ. ಅದು ದೈಹಿಕ ಸುಖವೂ ಅಲ್ಲ, ಮಾನಸಿಕ ಸುಖವೂ ಅಲ್ಲ. ಅದು ಭೌತಿಕ ಅನುಭವವನ್ನು ಮೀರಿದ ಸ್ಥೀತಿ (transcendence). ನಿನಗೆ ಗೊತ್ತಿರುವ, ನೀವು ಅನುಭವಿಸಿರುವ, ನೀವು ಆಗಿರುವ ಎಲ್ಲ ಸ್ಥಿತಿಗಳ ಮೀರುವಿಕೆ. ಅದನ್ನ ಸುಮ್ಮನೇ ಖಾಲೀ ಎಂದು ಹೇಳುವುದೇ ಒಳ್ಳೆಯದು. ಅದು ನಿಮ್ಮನ್ನು ಬೇರಿನಿಂದಲೇ ಬೇರೆಯಾಗಿಸುತ್ತದೆ.
ತಾವೋ ಹಿಂಬಾಲಕರು ಶೂನ್ಯವನ್ನು ಕಣಿವೆಗೆ ಹೋಲಿಸುತ್ತಾರೆ. ಕಣಿವೆ ಪೂರ್ತಿ ಖಾಲಿ ಆದರೂ ಭಾರೀ ಕ್ರೀಯಾಶೀಲ, ಅಪ್ಪಟ ಧನಾತ್ಮಕ. ಕಣಿವೆಯ ಖಾಲೀತನ, ನದಿಗಳನ್ನೂ, ಝರಿಗಳನ್ನೂ, ಸೂರ್ಯನ ಬಿಸಿಲನ್ನು ತನ್ನೊಳಗೆ ಆಕರ್ಷಿಸುತ್ತ ಸುತ್ತ ಮುತ್ತಲಿನ ಬದುಕನ್ನು ಪೊರೆಯುತ್ತದೆ. ಕಣಿವೆಯ ತೆರೆದ ತೋಳುಗಳು ಮನುಷ್ಯರ, ಪ್ರಾಣಿಗಳ ನಡುವೆ ಭೇದ ಎಣಿಸುವುದಿಲ್ಲ. ಖಾಲಿತನ ಎಂದರೆ ಗಾಬರಿಯಲ್ಲ ಬದಲಾಗಿ ಅದು ಎಲ್ಲ ಸಾಧ್ಯತೆಗಳ ತವ ನಿಧಿ.
ಈ ಖಾಲೀತನದೊಳಗೊಮ್ಮೆ ಇಣುಕಿ ನೋಡಿ, ಕೂಗಿ ಕರೆಯಿರಿ ಬರೀ ಧ್ವನಿಯಿಂದಲ್ಲ ನಿಮ್ಮನ್ನು ನೀವು ಪೂರ್ತಿಯಾಗಿ ತೆರೆದುಕೊಂಡು. ನಿಮ್ಮ ಕೂಗು ಆರ್ತವಾಗಿದ್ದರೆ, ಆಳವಾಗಿದ್ದಾರೆ ನಿಮಗೊಂದು ಪ್ರತಿಧ್ವನಿ ಕೇಳಿಸುವುದು. ಈ ಪ್ರತಿಧ್ವನಿಯೇ ನಮ್ಮ ಅಸ್ತಿತ್ವದ ಬಗೆಗಿನ ಪ್ರಮಾಣ, ನಾವು ಸರಿದಾರಿಯಲ್ಲಿರುವ ಬಗ್ಗೆ ಸ್ಪಷ್ಟ ಧೃಡೀಕರಣ. ಈ ಉತ್ತೇಜನದ ಕಾರಣವಾಗಿಯೇ ನಮ್ಮ ಹುಡುಕಾಟ ಮತ್ತು ಬದುಕಿನ ಮುಂದುವರಿಕೆ. ಆಗ ಖಾಲೀತನ ಗಾಬರಿಗೆ ಕಾರಣವಲ್ಲ ಬದುಕಿನ ನಿತ್ಯ ಸಂಗಾತಿ.
ಒಮ್ಮೆ ಶಿಷ್ಯನೊಬ್ಬ ಝೆನ್ ಮಾಸ್ಟರ್ ಹತ್ತಿರ, ಒಂದು ದೂರು ತೆಗೆದುಕೊಂಡು ಬಂದ.
“ಮಾಸ್ಟರ್, ನನಗೆ ಧ್ಯಾನದಲ್ಲಿ ತುಂಬ ತೊಂದರೆಗಳಾಗುತ್ತಿವೆ. ಧ್ಯಾನಕ್ಕೆ ಕೂತಾಗಲೆಲ್ಲ ವಿಪರೀತ ಕಾಲು ನೋಯುತ್ತದೆ, ನಿದ್ದೆ ಬಂದ ಹಾಗಾಗುತ್ತದೆ. ಬಹಳ ಚಿಂತೆಯಾಗುತ್ತಿದೆ. ಏನು ಮಾಡಲಿ? “
“ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ” ಮಾಸ್ಟರ್ ಉತ್ತರಿಸಿದ.
ಎರಡು ಮೂರು ತಿಂಗಳುಗಳ ನಂತರ ಶಿಷ್ಯ ವಾಪಸ್ ಬಂದ,
“ ಮಾಸ್ಟರ್, ಈಗ ಧ್ಯಾನದಲ್ಲಿ ಅದ್ಭುತ ಅನುಭವಗಳಾಗುತ್ತಿವೆ, ತುಂಬ ಎಚ್ಚರದ ಸ್ಥಿತಿ ಅನಿಸುತ್ತಿದೆ. ಎಷ್ಟು ಶಾಂತ, ಎಷ್ಟು ಜೀವಂತಿಕೆಯ ಸ್ಥಿತಿ ಇದು “
ಮಾಸ್ಟರ್ ಸಾವಧಾನವಾಗಿ ಉತ್ತರಿಸಿದ,
“ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ”