ಕವಿಯಲ್ಲದೆಯೂ ಪದ್ಯ ಬರೆಯುವುದು… : ಓಶೋ ವ್ಯಾಖ್ಯಾನ

ಸೂಫಿಯಿಸಂ ನಲ್ಲಿಯ ಸೂಫ್ ಎಂದರೆ ಉಣ್ಣೆಯ ಬಟ್ಟೆ. ಮತ್ತು ಸೂಫಿ ಎಂದರೆ ಉಣ್ಣೆಯ ಬಟ್ಟೆಯನ್ನ ಧರಿಸಿದವನು. ಸನಾಯಿ ಬಿಳೀ ಅಂಗಿ, ಕಪ್ಪು ಟೊಪ್ಪಿಗೆ ಧರಿಸುತ್ತಿದ್ದ, ಇದರ ಹಿಂದೆ ಯಾವ ತರ್ಕವೂ ಇಲ್ಲ ಯಾವ ಕಾರಣವೂ ಇಲ್ಲ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಬೌದ್ಧಿಕತೆ, ತನ್ನ ಅಸ್ತಿತ್ವವನ್ನು
ಸಾಬೀತು ಮಾಡಲು ಬಯಸಿದರೆ ;
ಪ್ರೇಮ,
ಎಲ್ಲದರಿಂದ ಕಳೆದು ಹೋಗಲು.

ಓಡಿ ಹೋಗುತ್ತಾನೆ ಬುದ್ಧಿವಂತ
ಕೊಚ್ಚಿಕೊಂಡು ಹೋಗುವ ಭಯದಿಂದ ;
ಆದರೆ ಪ್ರೇಮಿಗೆ
ಮುಳುಗುವುದೇ ಬದುಕು.

ಬೌದ್ಧಿಕತೆ, ಪ್ರಶಾಂತತೆಗಾಗಿ
ಯೋಜನೆ ಹಾಕಿಕೊಂಡರೆ;
ಪ್ರೇಮ,
ನಾಚಿಕೆ ಬಿಟ್ಟು ಕೋಲಾಹಲಕ್ಕೆ.
ಜನ ಸುತ್ತ ಇರುವಾಗಲೂ ಪ್ರೇಮಿ
ಏಕಾಂಗಿ;
ತೇಲುವಂತೆ ನೀರಿನ ಮೇಲೆ ಎಣ್ಣೆ.

ಪ್ರೇಮಿಗೆ ಸಲಹೆ ನೀಡುವ
ದುಸ್ಸಾಹಸಕ್ಕೆ ಕೈ ಹಾಕಿದ ಪಂಡಿತರು
ಕೈ ಕೈ ಹೊಸಕಿಕೊಂಡಿದ್ದಾರೆ,
ಅಣಕಿಸಿಕೊಂಡಿದ್ದಾರೆ ಉತ್ಕಟತೆಯ ಕೈಯಲ್ಲಿ.

ಕಸ್ತೂರಿಯ ಆತ್ಮವೇ, ಪ್ರೇಮ
ತಪ್ಪಿಸಿಕೊಂಡು ಸಾಧಿಸುವುದೇನಿದೆ
ಪ್ರೇಮದ ನೆರಳಲ್ಲಿ ಸಾಗಲಿ
ಪ್ರೇಮಿಗಳ ದರ್ಬಾರು.

~ ರೂಮಿ

ಸನಾಯಿಯಂಥ ಜನ ವಾದ ಮಾಡುವುದಿಲ್ಲ, ಅವರು ಕೇವಲ ತಮಗನಿಸಿದ್ದನ್ನ ಹೇಳಿ ಸುಮ್ಮನಾಗಿಬಿಡುತ್ತಾರೆ. ಅವರಿಗೆ ವಾದ ಮಾಡುವ ಅವಶ್ಯಕತೆಯೇ ಇಲ್ಲ. ಅವರ ಅಸ್ತಿತ್ವವೇ ಅವರ ಮಾತುಗಳಿಗೆ ಸಾಕ್ಷಿ, ಬೇರೆ ಯಾವ ವಾದವೂ ಬೇಕಿಲ್ಲ. ಬನ್ನಿ ಅವರ ಕಣ್ಣುಗಳನ್ನೊಮ್ಮೆ ನೋಡಿ, ಅಲ್ಲಿ ಯಾವ ವಾದವೂ ಇಲ್ಲ. ಅವರು ಹೇಳಬೇಕಾಗಿರುವುದೆಲ್ಲವೂ ಅವರ ಕಣ್ಣುಗಳಲ್ಲಿ ತುಂಬಿ ತುಳುಕುತ್ತಿದೆ. ವಾದದಲ್ಲಿ ಜಾಣತನ ಕಾಣಿಸಬಹುದು ಆದರೆ ಅದು ನಿಜವಿರುವುದು ಕೇವಲ ಅಪರೂಪಕ್ಕೆ ಮಾತ್ರ.

ಸನಾಯಿ ಜೊತೆಗಿನದು ನನ್ನ ಒಂದು ಪ್ರೇಮ ಸಂಬಂಧ. ಸನಾಯಿಯ ಪ್ರೇಮವನ್ನು ನಾನು ಉತ್ಪ್ರೇಕ್ಷೆ ಮಾಡಿ ಹೇಳಬೇಕನಿಸಿದರೂ ಅದು ನನಗೆ ಸಾಧ್ಯವಾಗುವುದಿಲ್ಲ. ಸನಾಯಿ ಎಂದರೆ ಸೂಫಿಯಿಸಂ ನ ತಿರುಳು.

ತಸವುಫ್ ಎನ್ನುವ ಪದದ ಇಂಗ್ಲೀಷ್ ಅನುವಾದ ಸೂಫಿಯಿಸಂ. ತಸವುಫ್ ಎಂದರೆ ಶುದ್ಧ ಪ್ರೇಮ. ಸೂಫಿಯಿಸಂ ನಲ್ಲಿಯ ಸೂಫ್ ಎಂದರೆ ಉಣ್ಣೆಯ ಬಟ್ಟೆ. ಮತ್ತು ಸೂಫಿ ಎಂದರೆ ಉಣ್ಣೆಯ ಬಟ್ಟೆಯನ್ನ ಧರಿಸಿದವನು. ಸನಾಯಿ ಬಿಳೀ ಅಂಗಿ, ಕಪ್ಪು ಟೊಪ್ಪಿಗೆ ಧರಿಸುತ್ತಿದ್ದ, ಇದರ ಹಿಂದೆ ಯಾವ ತರ್ಕವೂ ಇಲ್ಲ ಯಾವ ಕಾರಣವೂ ಇಲ್ಲ. ಸನಾಯಿ ಥೇಟ್ ನನ್ನ ಥರದ ಹುಚ್ಚ. ಆದರೆ ಏನು ಮಾಡುವುದು, ಇಂಥವರನ್ನು ಅವರು ಇರುವ ಹಾಗೆಯೇ ಒಪ್ಪಿಕೊಳ್ಳಬೇಕಾಗುತ್ತದೆ, ಅಪ್ಪಿಕೊಳ್ಳಬೇಕಾಗುತ್ತದೆ. ಅವನನ್ನು ನೀವು ಪ್ರೀತಿಸಬಹುದು ಅಥವಾ ದ್ವೇಷಿಸಬಹುದು, ಬೇರೆ ಯಾವ ಸಂಬಂಧವೂ ಸಾಧ್ಯವೇ ಇಲ್ಲ. ಪ್ರೀತಿ ಮತ್ತು ದ್ವೇಷ ಈ ಎರಡನ್ನು ಹೊರತುಪಡಿಸಿದ ಯಾವ ಪರ್ಯಾಯವೂ ಅವನ ಜೊತೆ ಸಾಧ್ಯವಿಲ್ಲ. ಅವನ ಜೊತೆ ಉದಾಸೀನವಂತೂ ಅಸಾಧ್ಯದ ಮಾತು. ಇದು ಅನುಭಾವಿಗಳ ಜಾದು. ನನ್ನ ಜೊತೆಯ ನಿಮ್ಮ ಸಂಬಂಧವೂ ಹಾಗೇ ಅಲ್ಲವೇ, ನೀವು ನನ್ನ ಗೆಳೆಯರು ಅಥವಾ ವೈರಿಗಳು. ನನ್ನ ಅಸಡ್ಡೆ ಮಾಡುವುದು ಯಾರಿಗೂ ಸಾಧ್ಯವೇ ಇಲ್ಲ. ನೋಡಿ ನಾನು ಕವಿಯಲ್ಲದಿದ್ದರೂ ಒಮ್ಮೊಮ್ಮೆ ಪದ್ಯ ಬರೆದುಬಿಡುತ್ತೇನೆ. ಒಬ್ಬ ಹುಚ್ಚನಿಗೆ ಮಾತ್ರ ಇದು ಸಾಧ್ಯ.

ತಾನು ಹೇಳಬಯಸುವುದನ್ನ ಯಾವ ವಾದದ ಹಿಂದೆ ಬಚ್ಚಿಡದೇ ಸನಾಯಿ ನೇರವಾಗಿ ಹೇಳಿಬಿಡುತ್ತಾನೆ. ಯಾಕೆ ಹೀಗೆ ಎಂದು ನೀವು ಕೇಳುವ ಹಾಗೇ ಇಲ್ಲ.

ಅವನು ಹೇಳುತ್ತಾನೆ :

ಸುಮ್ಮನಿರಿ! ಏಕೆ ಎನ್ನುವುದೊಂದು ಇಲ್ಲವೇ ಇಲ್ಲ.

ಗುಲಾಬಿಗೆ ನೀವು ಕೇಳುತ್ತೀರಾ “ಏಕೆ?”

ಹಿಮ ಕ್ಕೆ ನೀವು ಕೇಳುತ್ತೀರಾ “ಏಕೆ?”

ನಕ್ಷತ್ರಗಳಿಗೆ ನೀವು ಕೇಳುತ್ತೀರಾ “ಏಕೆ?”

ಮತ್ತೆ ಸನಾಯಿಗೆ ಏಕೆ, ಎನ್ನುವ ಪ್ರಶ್ನೆ “ಏಕೆ” ?

ಸನಾಯಿ ಕೂಡ ನಕ್ಷತ್ರ, ಹಿಮ, ಗುಲಾಬಿಯ ಲೋಕದವನೇ. ಅವುಗಳಂತೆ ಅವನೂ ವಾದ ಮಾಡುವುದಿಲ್ಲ.

ಆಯ್ ಲವ್ ಸನಾಯಿ. ಸನಾಯಿ ಯನ್ನ ನಾನು ಮರೆತಿಲ್ಲ. ನಾನು ಅವನ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಏಕೆಂದರೆ, ನಾನು ಅವನನ್ನು ನನಗೆ ಮಾತ್ರ ಮೀಸಲಾಗಿಟ್ಟುಕೊಳ್ಳುತ್ತೇನೆ, ನನ್ನ ಹೃದಯದಲ್ಲಿ. ನೀವು ಹಾಗೇ ಮಾಡಬೇಕು ಎನ್ನುವುದು ನನ್ನ ಆಸೆ.

Leave a Reply