ತನ್ನನ್ನು ನಾವಿಕನೆಂದು ಭ್ರಮಿಸಿದ ನೊಣ : ರೂಮಿಯ ‘ಮಸ್ನವಿ’ ಕೃತಿಯಿಂದ #3

ಆರಾಮಾಗಿ ಎಲೆಯ ಮೇಲೆ ತೂಕಡಿಸುತ್ತಿದ್ದ ನೊಣ ಇದ್ದಕ್ಕಿದ್ದಂತೆ ಉಂಟಾದ ಸನ್ನಿವೇಶದಿಂದ ಗಾಬರಿಗೊಂಡಿತು. ಕೂಡಲೇ ಸಾವರಿಸಿಕೊಂಡು ತನ್ನ ಯಾನವನ್ನು ಆನಂದಿಸತೊಡಗಿತು. ಆ ತರಗೆಲೆಯೊಂದು ನಾವೆಯಂತೆ, ತಾನು ಅದರ ನಾವಿಕನಂತೆ ಭಾವಿಸತೊಡಗಿತು… ~ ಮೂಲ : ಜಲಾಲುದ್ದೀನ್ ರೂಮಿ; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಒಂದೂರಿನಲ್ಲಿ ಒಂದು ಕತ್ತೆ ಇತ್ತು. ಬಹಳ ಶ್ರಮಿಕ ಕತ್ತೆ. ಅದರ ಯಜಮಾನ ಯಾವಾಗಲೂ ಅದರ ಮೇಲೆ ಭಾರೀ ಮೂಟೆಗಳನ್ನು ಹೇರಿ ದೂರ ದೂರದವರೆಗೆ ನಡೆಸುತ್ತಿದ್ದ. ಅದಕ್ಕೆ ಉಚ್ಚೆ ಹೊಯ್ಯಲೂ ಬಿಡುವು ಕೊಡುತ್ತಿರಲಿಲ್ಲ.

ಹೀಗೇ ಒಂದು ದಿನ ಕತ್ತೆ ಮೂಟೆಗಳನ್ನು ಹೊತ್ತು ಸಾಗುತ್ತಿತ್ತು. ಯಜಮಾನನ ಚಾಟಿಗೆ ಹೆದರಿ ಅದು ಉಚ್ಚೆಯನ್ನೂ ಹೊಯ್ಯದೆ ಕಟ್ಟಿಕೊಂಡು ನಡೆಯುತ್ತಿತ್ತು. ಯಾವಾಗ ಗುರಿ ಮುಟ್ತೀನೋ, ಯಾವಾಗ ಹೊಟ್ಟೆ ಹಗುರ ಮಾಡಿಕೊಳ್ತೀನಿ ಎಂದು ಬೇಗ ಬೇಗ ಹೆಜ್ಜೆ ಹಾಕುತ್ತಿತ್ತು.

ಕೊನೆಗೂ ತನ್ನ ಗುರಿ ಮುಟ್ಟಿದಾಗಲೇ ಕತ್ತೆ ನಿರಾಳವಾಗಿದ್ದು. ಯಜಮಾನ ಅದರ ಹೊರೆ ಇಳಿಸಿ ಬೆನ್ನು ತಟ್ಟಿ ಕಳಿಸಿದ. ಕತ್ತೆ ಎಲ್ಲಕ್ಕಿಂತ ಮೊದಲು ರಸ್ತೆ ಬದಿಯಲ್ಲಿ ನಿಂತು ಉಚ್ಚೆ ಸುರಿಸಿ ಹಗುರಾಯಿತು.

ಅದೇ ರಸ್ತೆ ಬದಿಯಲ್ಲಿ ತರಗೆಲೆ ಮೇಲೆ ಒಂದು ನೊಣ ಕುಳಿತಿತ್ತು. ಕಟ್ಟಿಕೊಂಡ ಉಚ್ಚೆಯನ್ನೆಲ್ಲಾ ಸುರಿಸಿದ ರಭಸಕ್ಕೆ ಅದು ವೇಗವಾಗಿ ಹರಿದು ಆ ಎಲೆಯನ್ನೂ ಹೊತ್ತುಕೊಂಡು ಸಾಗತೊಡಗಿತು.

ಆರಾಮಾಗಿ ಎಲೆಯ ಮೇಲೆ ತೂಕಡಿಸುತ್ತಿದ್ದ ನೊಣ ಇದ್ದಕ್ಕಿದ್ದಂತೆ ಉಂಟಾದ ಸನ್ನಿವೇಶದಿಂದ ಗಾಬರಿಗೊಂಡಿತು. ಕೂಡಲೇ ಸಾವರಿಸಿಕೊಂಡು ತನ್ನ ಯಾನವನ್ನು ಆನಂದಿಸತೊಡಗಿತು. ಆ ತರಗೆಲೆಯೊಂದು ನಾವೆಯಂತೆ, ತಾನು ಅದರ ನಾವಿಕನಂತೆ ಭಾವಿಸತೊಡಗಿತು. “ನಾನೆಷ್ಟು ಒಳ್ಳೆಯ ನಾವಿಕ, ಎಷ್ಟು ಚೆನ್ನಾಗಿ ಈ ನಾವೆ ನಡೆಸುತ್ತಿದ್ದೇನೆ. ಕೇವಲ ನಾನು ನಿಲ್ಲುವ ಭಂಗಿಯ ಸಮತೋಲನದಿಂದಲೇ ಈ ನಾವೆ ಸೊಯ್ಯನೆ ಸಾಗುತ್ತಿದೆ” ಎಂದೆಲ್ಲ ತನ್ನ ಬೆನ್ನು ತಾನೇ ತಟ್ಟಿಕೊಂಡಿತು.

ಅದಕ್ಕೇನು ಗೊತ್ತು? ತಾನು ತೇಲುತ್ತಿರುವುದು ಕತ್ತೆ ಉಚ್ಚೆಯಲ್ಲಿ ಹರಿಯುತ್ತಿರುವ ತರಗೆಲೆ ಮೇಲೆ ಎಂದು? ತಾನು ಯಾವ ಸಾಧನೆಯನ್ನೂ ಮಾಡುತ್ತಿಲ್ಲ, ತಾನು ಈಗಲೇ ಕೊಳಕಿನ ಮೇಲೆ ಕೂರುವ ಅದೇ ಹಳೆಯ ನೊಣ ಎಂದು? ಭ್ರಮೆಗಳು ಯಾವತ್ತೂ ನಿಜವಲ್ಲ, ಭ್ರಮೆಯಿಂದ ನಿಜವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು!?


ಮಸ್ನವಿ, ಜಲಾಲೂದ್ದೀನ್ ರೂಮಿಯ ಅನುಭಾವ ಕತೆಗಳ ಸಂಗ್ರಹ. ಮೇಲ್ನೋಟಕ್ಕೆ ಸರಳ ದೃಷ್ಟಾಂತ / ಸಾಮತಿ ಇಲ್ಲವೇ ಸರಳ ಕತೆಗಳಂತೆ ಕಂಡರೂ ಈ ಕೃತಿಯ ಪ್ರತಿಯೊಂದು ಕತೆಯೂ ಒಂದು ಗೂಢಾರ್ಥವನ್ನು, ಪರಮಾರ್ಥ ಚಿಂತನೆಯನ್ನು, ವ್ಯಕ್ತಿತ್ವ – ಆತ್ಮ ವಿಕಸನ ಪಾಠವನ್ನು ಹೊತ್ತುಕೊಂಡಿವೆ.

Leave a Reply