ಜಗವೆಲ್ಲ ಮಲಗಿರಲು ಬುದ್ಧನೊಬ್ಬನೆ ಎಂದು ಹೇಳುವುದು ಈ ಕಾರಣಕ್ಕಾಗಿಯೇ. ಬುದ್ಧನ ಪ್ರತಿಯೊಂದು ಕ್ರಿಯೆಯೂ ಪ್ರಜ್ಞಾಪೂರ್ವಕ ಆಗಿರುವಾಗ ನಿದ್ದೆ ಪ್ರಜ್ಞೆಯಿಂದ ಹೊರತಾಗುವುದು ಹೇಗೆ ಸಾಧ್ಯ? ಧ್ಯಾನ ನಿಮ್ಮ ಭಾಗವಾಗಿಬಿಟ್ಟಾಗ ಅದು ನಿದ್ದೆಯನ್ನೂ ಕೂಡ ಬಿಡುವುದಿಲ್ಲ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮದ ಖಾಸಗೀತನ
ತನ್ನ ಸುತ್ತ ಚಾಚಿಕೊಂಡಿರುವುದು
ಗೊತ್ತಾಯಿತೆಂದರೆ
ಪ್ರೇಮದಲ್ಲಿ ಮುಳುಗಿದವರಿಗೆ
ನಿದ್ದೆ ಸಾಧ್ಯವಾಗುವುದೇ ಇಲ್ಲ.
ಕೊಂಚ ಬಾಯಾರಿದ ಪ್ರೇಮಿ
ಸ್ವಲ್ಪ ಹೊತ್ತು ಮಲಗಬಹುದೇನೋ,
ಆದರೆ ಅವರಿಗೆ ನಿದ್ದೆಯಲ್ಲೂ
ನೀರಿನ ಕನಸು,
ತುಂಬಿ ಹರಿಯುವ ಹಳ್ಳದ ಪಕ್ಕ
ತಂಬಿಗೆ ತುಂಬ ನೀರು
ಅಥವಾ
ಆ ಇನ್ನೊಬ್ಬರ ಎದೆಯಿಂದ
ಚಿಮ್ಮುತ್ತಿರುವ ಆರ್ದ್ರ ಅಂತಃಕರಣ.
ಇಡೀ ರಾತ್ರಿ
ಈ ಅಪರೂಪದ ಸಂಭಾಷಣೆಗೆ ಕಿವಿಯಾಗಿರಿ,
ಇದೊಂದೇ ಕ್ಷಣ
ನಿಮಗೆ ದಕ್ಕಬಹುದಾದದ್ದು, ದಕ್ಕಬೇಕಾದದ್ದು.
~ ರೂಮಿ
*************
ಗೌತಮ ಬುದ್ಧನ ಪ್ರಧಾನ ಶಿಷ್ಯ ಆನಂದ ಒಮ್ಮೆ ಬುದ್ಧನನ್ನ ಪ್ರಶ್ನೆ ಮಾಡಿದ,
“ಒಂದು ಸಂಗತಿ ಸದಾ ನನ್ನಲ್ಲಿ ಅಚ್ಚರಿ ಮೂಡಿಸುತ್ತದೆ, ನನ್ನ ಈ ಪ್ರಶ್ನೆ ಅಪ್ರಸ್ತುತವಾಗಿದ್ದರೂ ನನ್ನ ಕುತೂಹಲವನ್ನ ನಾನು ಹತ್ತಿಕ್ಕಿಕೊಳ್ಳಲಾರೆ. ಪ್ರಶ್ನೆ ಏನೆಂದರೆ ನಿದ್ದೆ ಮಾಡುವಾಗ ನೀನು ಮಲಗಿರುವ ಭಂಗಿಯನ್ನ ಬದಲಿಸುವುದೇ ಇಲ್ಲ. ಇಡೀ ರಾತ್ರಿ ನೀನು ಒಂದೇ ಭಂಗಿಯಲ್ಲಿ ಮಲಗಿರುತ್ತೀ. ಕೈ, ಕಾಲು, ದೇಹದ ಭಂಗಿ ಕೊಂಚವೂ ಬದಲಾಗುವುದಿಲ್ಲ. ಒಂದು ವಿಗ್ರಹ ಮಲಗಿರುವಂತೆ ಮಲಗಿರುತ್ತೀ. ಅಲ್ಲಾಡುವುದಿಲ್ಲ, ಮಗ್ಗಲು ಬದಲಿಸುವುದಿಲ್ಲ. ರಾತ್ರಿ ಯಾವ ಭಂಗಿಯಲ್ಲಿ ನಿದ್ದೆ ಹೋಗಿದ್ದೆಯೋ ಬೆಳಿಗ್ಗೆ ಏಳುವಾಗಲೂ ನೀನು ಅದೇ ಭಂಗಿಯಲ್ಲಿರುತ್ತೀ. ಕುತೂಹಲದಿಂದ ಒಂದು ಇಡೀ ರಾತ್ರಿ ನಿನ್ನನ್ನು ನೋಡುತ್ತ ಕುಳಿತಿದ್ದೆ, ಒಂದಿಷ್ಟೂ ಚಲನೆ ಇಲ್ಲ. ನಿದ್ದೆಯಲ್ಲೂ ನಿನ್ನನ್ನು ನೀನು ನಿಯಂತ್ರಿಸಿಕೊಳ್ಳುತ್ತೀಯ? “
ಬುದ್ಧ ಉತ್ತರಿಸಿದ,
“ ನಿಯಂತ್ರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನಿದ್ದೆಯಲ್ಲೂ ನಾನು ಎಚ್ಚರವಾಗಿಯೇ ಇರುತ್ತೇನೆ ಆದರೆ ನಾನು ಧ್ಯಾನದಲ್ಲಿರುತ್ತೇನೆ ಅಷ್ಟೇ. ನನ್ನ ನಿದ್ದೆಯೂ ಧ್ಯಾನದ ಒಂದು ಭಾಗವೇ. ಹೇಗೆ ನಡೆಯುವಾಗ, ಮಾತಾಡುವಾಗ, ಉಣ್ಣುವಾಗ ಧ್ಯಾನದಲ್ಲಿರುತ್ತೇನೆಯೋ ಹಾಗೆಯೇ ನಿದ್ದೆ ಮಾಡುವಾಗಲೂ ನಾನು ಧ್ಯಾನ ಮಾಡುತ್ತಿರುತ್ತೇನೆ. ಹಗಲು ಹೇಗೆ ನನ್ನ ಧ್ಯಾನದ ಭಾಗವೋ ರಾತ್ರಿ ಕೂಡ ಹಾಗೆಯೇ. ನಿದ್ದೆಯಲ್ಲೂ ನಾನು ಸಂಪೂರ್ಣವಾಗಿ ಪ್ರಶಾಂತ ಸ್ಥಿತಿಯಲ್ಲಿ ಇರುತ್ತೇನೆ ಏಕೆಂದರೆ ಆಳದಲ್ಲಿ ನಾನು ಎಚ್ಚರವಾಗಿರುತ್ತೇನೆ. ಧ್ಯಾನದ ಜ್ಯೋತಿ ಯಾವ ಹೊಗೆಯಿಲ್ಲದೆ ಉರಿಯುತ್ತಿರುತ್ತದೆ. ಆದ್ದರಿಂದಲೇ ನನಗೆ ನಿದ್ದೆಯಲ್ಲಿ ಭಂಗಿ ಬದಲಿಸುವ ಅವಶ್ಯಕತೆ ಇರುವುದೇ ಇಲ್ಲ”.
ಜಗವೆಲ್ಲ ಮಲಗಿರಲು ಬುದ್ಧನೊಬ್ಬನೆ ಎಂದು ಹೇಳುವುದು ಈ ಕಾರಣಕ್ಕಾಗಿಯೇ. ಬುದ್ಧನ ಪ್ರತಿಯೊಂದು ಕ್ರಿಯೆಯೂ ಪ್ರಜ್ಞಾಪೂರ್ವಕ ಆಗಿರುವಾಗ ನಿದ್ದೆ ಪ್ರಜ್ಞೆಯಿಂದ ಹೊರತಾಗುವುದು ಹೇಗೆ ಸಾಧ್ಯ? ಧ್ಯಾನ ನಿಮ್ಮ ಭಾಗವಾಗಿಬಿಟ್ಟಾಗ ಅದು ನಿದ್ದೆಯನ್ನೂ ಕೂಡ ಬಿಡುವುದಿಲ್ಲ.
ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು.
ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.
ಮಾಸ್ಟರ್ ನ ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ.
ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಟರ್ ಬಳಿ ಹೋಗಿ ಗಾರ್ಡನ್ ಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್ ನ ಅನುಮತಿ ಕೇಳಲು ನಿರ್ಧರಿಸಿದರು.
ಮರುದಿನ ಒಬ್ಬ ಶಿಷ್ಯ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು.
“ ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ “ ಅವ ಸಿಟ್ಟಿನಿಂದ ಮಾತಾಡಿದ.
“ ನಿಲ್ಲು ನಿಲ್ಲು, ನೀನು ಮಾಸ್ಟರ್ ನ ಏನಂತ ಕೇಳಿದೆ? “ ಮೊದಲ ಶಿಷ್ಯ ಕೇಳಿದ.
“ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ “ ಎರಡನೇಯವ ಉತ್ತರಿಸಿದ.
“ ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ “
ಮೊದಲ ಶಿಷ್ಯ ನಕ್ಕು ಬಿಟ್ಟ.