ಅನುಗ್ರಹ ಇದ್ದಾಗ ಮಾತ್ರ ಇದು ಸಾಧ್ಯ…

“ದೈವಾನುಗ್ರಹದಿಂದ ನಿನ್ನಲ್ಲಿ ಏನಾದರೂ ಬದಲಾವಣೆ ಆಗಿದೆಯಾ?” ಎಂಬ ಪ್ರಶ್ನೆಗೆ ಸೂಫಿ ಕೊಟ್ಟ ಉತ್ತರ ಮತ್ತು ವಿವರಣೆ… । ಚಿದಂಬರ ನರೇಂದ್ರ

ದೇವನ ನಿರಾಕರಣೆಯೂ
ದೈವಿಕವಾಗಿರುತ್ತದೆ ಎಂಬ ಸತ್ಯ
ತುಂಬ ಜನರಿಗೆ ಗೊತ್ತಿಲ್ಲ.

” ನಿನ್ನ ತುಟಿಗೇನಾದರೂ
ಜೇನು ಮೆತ್ತಿಕೊಂಡಿದೆಯಾ”

ಎಂಬ ನನ್ನ ಪ್ರಶ್ನೆಗೆ
ಒಮ್ಮೆ ತುಟಿ ಸವರಿಕೊಂಡು
ಉತ್ತರಿಸಿದ ಆತ

“ಇಲ್ಲವಲ್ಲ”

ಈ ನಿರಾಕರಣೆಯೂ
ಒಂದು ಬಗೆಯ ‘ಜೇನು’
ಎನ್ನುವುದನ್ನ
‘ರುಚಿ’ ಬಲ್ಲವರೇ ಬಲ್ಲರು.

  • ರೂಮಿ

ಒಮ್ಮೆ ಸೂಫಿ ಉವೈಸ್ ನ ಪ್ರಶ್ನೆ ಮಾಡಲಾಯಿತು.

ದೈವಾನುಗ್ರಹದಿಂದ ನಿನ್ನಲ್ಲಿ ಏನಾದರೂ ಬದಲಾವಣೆ ಆಗಿದೆಯಾ?

ಸೂಫಿ ಉತ್ತರಿಸಿದ ;

ಹೌದು, ನಾನು ಮುಂಜಾನೆ ನಿದ್ದೆಯಿಂದ ಎದ್ದಾಗ, ತಾನು ಸಂಜೆಯ ತನಕ ಬದುಕುವುದು ಖಾತ್ರಿ ಇಲ್ಲದ ಮನುಷ್ಯ ಅನುಭವಿಸುವ ಭಾವವನ್ನ ನಾನು ಅನುಭವಿಸುತ್ತೇನೆ.

ಸೂಫಿಯನ್ನ ಮತ್ತೆ ಪ್ರಶ್ನೆ ಮಾಡಲಾಯಿತು,

ಇದು ಎಲ್ಲರಿಗೂ ಗೊತ್ತಿರುವ ವಿಷಯ ಅಲ್ಲವೆ? ಇದರಲ್ಲೇನು ಅಂಥ ವಿಶೇಷ?

ಉವೈಸ್ ಉತ್ತರಿಸಿದ :

“ ಹೌದು ಈ ವಿಷಯ ಎಲ್ಲರಿಗೂ ಗೊತ್ತು ಆದರೆ, ಯಾರೂ ಈ ಭಾವವನ್ನ ಅನುಭವಿಸುವುದಿಲ್ಲ.

ವೈನ್ ನ ವಿಷಯ ಗೊತ್ತಿದ್ದ ಮಾತ್ರಕ್ಕೆ ಯಾರಿಗೂ ನಶೆ ಏರುವುದಿಲ್ಲ.

ಅನುಗ್ರಹ ಇದ್ದಾಗ ಮಾತ್ರ ಇದು ಸಾಧ್ಯ.

ಒಂದು ದಿನ ಇಬ್ಬರು ವ್ಯಕ್ತಿಗಳು ಓಡುತ್ತ ನಸ್ರುದ್ದೀನ್ ನ ಮನೆಗೆ ಬಂದರು.

“ ಯಾಕೆ ಏನಾಯ್ತು ? “ ಆ ಇಬ್ಬರನ್ನು ವಿಚಾರಿಸಿದ ನಸ್ರುದ್ದೀನ್.

“ ಮಾರ್ಕೇಟ್ ನಲ್ಲಿ ಒಂದು ಕಾರ್ ಅಪಘಾತದಲ್ಲಿ ಒಬ್ಬ ಮನುಷ್ಯ ಸತ್ತು ಹೋಗಿದ್ದಾನೆ, ಸತ್ತುಹೋದ ಮನುಷ್ಯ ಥೇಟ್ ನಿನ್ನ ಹಾಗೆ ಕಾಣಿಸುತ್ತಿದ್ದ. ಅದಕ್ಕೇ ನಿನ್ನ ಹೆಂಡತಿಗೆ ವಿಷಯ ತಿಳಿಸಲು ಓಡಿ ಬಂದೆವು. “

ಆ ಇಬ್ಬರು ನಸ್ರುದ್ದೀನ್ ಗೆ ತಾವು ಬಂದ ಕಾರಣ ವಿವರಿಸಿದರು.

“ ಸತ್ತ ವ್ಯಕ್ತಿ ನನ್ನಷ್ಟೇ ಎತ್ತರವಿದ್ದನಾ? “ ವಿಚಾರಿಸಿದ
ನಸ್ರುದ್ದೀನ್.

“ ಹೌದು, ಬರೋಬ್ಬರಿ ನಿನ್ನಷ್ಟೇ ಎತ್ತರ “

“ ನನ್ನ ಹಾಗೇ ಇತ್ತಾ ಅವನ ಗಡ್ಡ ? “

“ ಥೇಟ್ ನಿನ್ನ ಹಾಗೆ “

“ ಯಾವ ಬಣ್ಣದ ಶರ್ಟ ಹಾಕಿಕೊಂಡಿದ್ದ ? “

“ ಪಿಂಕ್ ಕಲರ್ ಶರ್ಟ್ “

“ ಸಧ್ಯ ಪಿಂಕ್ ಕಲರ್ ಶರ್ಟ್ ನನ್ನ ಹತ್ತಿರ ಇಲ್ಲ , ನಾನು ಬದುಕಿಕೊಂಡೆ “

ನಿಟ್ಟುಸಿರು ಬಿಟ್ಟ ನಸ್ರುದ್ದೀನ್.


(Anthony de Mello ಲೇಖನ ಆಧಾರಿತ…)

Leave a Reply