ಸಮ್ಯಕ್ ದೃಷ್ಟಿ: ಓಶೋ ವ್ಯಾಖ್ಯಾನ

ಬುದ್ಧ ಹೀಗೆ ಶ್ರೀಮಂತವಾಗಿ ಬದುಕಿದ, ಈ ಸಮ್ಯಕ್ ದೃಷ್ಟಿ, ಈ ಪರಿಪೂರ್ಣ ಅಧ್ಯಾತ್ಮವೇ ಅವನ ಶ್ರೀಮಂತಿಕೆ… । ಆಕರ: ಓಶೋ ಉಪನ್ಯಾಸ; ಕನ್ನಡ ನಿರೂಪಣೆ: ಚಿದಂಬರ ನರೇಂದ್ರ

ಬೀದಿ ನಾಯಿಯೊಂದು
ಅಂಗಳದಲ್ಲಿ ಮೂರು ಮುದ್ದು ಮರಿಗಳನ್ನು ಹೆತ್ತಾಗ
ದೇವಾಲಯ ಪವಿತ್ರವಾಯ್ತು. ಗರ್ಭಗುಡಿಯ ಪಕ್ಕದ ಗರಿಕೆ ಹುಲ್ಲಿನ ಮೇಲೆ
ಹಾವು ಪೊರೆ ಬಿಟ್ಟಾಗ
ದೇವಾಲಯ ಪವಿತ್ರವಾಯ್ತು. ಬೇಸಿಗೆ ಮಳೆಯ ಮೊದಲ ಹನಿ
ಹಿತ್ತಲಿನ ಮರಳಿನ ಕಣಗಳಿಗೆ ರೋಮಾಂಚನ ತಂದಾಗ
ದೇವಾಲಯ ಪವಿತ್ರವಾಯ್ತು. ವೇದ, ವಿಗ್ರಹಗಳ ಹಂಗೇಕೆ ಇನ್ನು? ಪ್ರಾರ್ಥನೆ, ಶಾಸ್ತ್ರ, ಸಂಪ್ರದಾಯಗಳು
ಇವುಗಳಿಗಿಂತ ಪವಿತ್ರವಾಗಿರುವುದು ಹೇಗೆ ಸಾಧ್ಯ? ~ ಸಚ್ಚಿದಾನಂದನ್


ಒಮ್ಮೆ ಬುದ್ಧ ತನ್ನ ಶಿಷ್ಯನನ್ನು ಪ್ರಶ್ನೆ ಮಾಡಿದ “ಈ ಬದುಕಿನಲ್ಲಿ ಯಾವ ಪ್ರಯೋಜನವೂ ಇಲ್ಲದ ಯಾವದಾದರೂ ಒಂದು ವಸ್ತು ನಿನಗೆ ಗೊತ್ತಾ? ಗೊತ್ತಿದ್ದರೆ ಅಂಥ ವಸ್ತುವನ್ನು ನನ್ನ ಬಳಿ ತೆಗೆದುಕೊಂಡು ಬರುವೆಯಾ?”

ಈ ಕುರಿತು ಶಿಷ್ಯ ಬಹಳಷ್ಟು ದಿನಗಳ ವರೆಗೆ ಯೋಚನೆ ಮಾಡುತ್ತಲೇ ಇದ್ದ, ಬುದ್ಧನ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಲೇ ಇದ್ದ. ಬುದ್ಧ ಭೇಟಿಯಾದಾಗಲೆಲ್ಲ ಶಿಷ್ಯನನ್ನು ವಿಚಾರಿಸುತ್ತಿದ್ದ, “ ಏನಾಯಿತು? ಯಾವ ಪ್ರಯೋಜನಕ್ಕೂ ಬಾರದ ವಸ್ತುವನ್ನ ಹುಡುಕಿದೆಯಾ?”

ಎರಡು ಮೂರು ತಿಂಗಳುಗಳ ನಂತರ ಶಿಷ್ಯ ಬುದ್ಧನ ಬಳಿ ಬಂದು ಹೇಳಿದ, “ಕ್ಷಮಿಸು ಬುದ್ಧ, ನಾನು ಎಲ್ಲ ಹುಡುಕಿದೆ, ಬಹಳ ಪ್ರಯತ್ನ ಮಾಡಿದೆ. ನಿನ್ನ ಪ್ರಶ್ನೆಯಿಂದಾಗಿ ನನಗೆ ನಿದ್ದೆಯೇ ಬರಲಿಲ್ಲ. ಕೊನೆಗೆ ನಾನು ಈ ನಿರ್ಧಾರಕ್ಕೆ ಬಂದಿರುವೆ. ಈ ಜಗತ್ತಿನಲ್ಲಿ ಪ್ರಯೋಜನಕ್ಕೆ ಬಾರದ ಯಾವ ವಸ್ತುವೂ ಇಲ್ಲ”.

“ಹಾಗಾದರೆ ಈಗ ನಿನಗೆ ಇನ್ನೊಂದು ಕೆಲಸ, ಪ್ರಯೋಜನ ಆಗುವ ಒಂದು ವಸ್ತುವನ್ನ ನನಗೆ ತೋರಿಸು. ಈ ಕೆಲಸಕ್ಕೆ ನಿನಗೆ ಎಷ್ಟು ತಿಂಗಳು ಬೇಕು!” ಬುದ್ಧ ತನ್ನ ಶಿಷ್ಯನಿಗೆ ಇನ್ನೊಂದು ಕೆಲಸ ವಹಿಸಿದ. ತಕ್ಷಣ ಶಿಷ್ಯ ನೆಲಕ್ಕೆ ಬಾಗಿ ಒಂದು ಹುಲ್ಲಿನ ಗರಿಕೆಯನ್ನು ಕಿತ್ತು ಬುದ್ಧನ ಕೈಗಿಡುತ್ತ ಉತ್ತರಿಸಿದ, “ ಈ ಕೆಲಸಕ್ಕೆ ನನಗೆ ಯಾವ ಸಮಯವೂ ಬೇಡ ಬುದ್ಧ. ಈ ಹುಲ್ಲಿನ ಗರಿಕೆಗೆ ಕೂಡ ಮೌಲ್ಯ ಉಂಟು”.

ಬುದ್ಧ ಖುಶಿಯಿಂದ ತನ್ನ ಶಿಷ್ಯನನ್ನು ಹರಸುತ್ತ ಮಾತನಾಡಿದ, “ ಇದು ಬದುಕನ್ನ ಗಮನಿಸುವ ಸರಿಯಾದ ರೀತಿ. ಇದು ಸರಿಯಾದ ಮನೋಭಾವ – ಸಮ್ಯಕ್ ದೃಷ್ಟಿ. ನನಗೆ ನಿನ್ನ ಬಗ್ಗೆ ಖುಶಿಯಾಗುತ್ತದೆ. ತಿಂಗಳುಗಳಷ್ಟು ಸಮಯ ತೆಗೆದುಕೊಂಡು ಹುಡುಕಿದರೂ ನಿಮಗೆ ಪ್ರಯೋಜನಕ್ಕೆ ಬಾರದ ವಸ್ತು ಸಿಗಲಿಲ್ಲ, ಅರ್ಥವಿಲ್ಲದ ಒಂದು ವಸ್ತುವೂ ನಿನ್ನ ಕಣ್ಣಿಗೆ ಬೀಳಲಿಲ್ಲ ಆದರೆ ಮೌಲ್ಯ, ಅರ್ಥ ಇರುವ ವಸ್ತುವನ್ನ ಕ್ಷಣ ಮಾತ್ರದಲ್ಲಿ ಹುಡುಕಿದೆ ನೀನು. ನೀನು ಬದುಕನ್ನ ನೋಡುವ ರೀತಿ ಪರಿಪೂರ್ಣ. ಇಡೀ ಬದುಕು ಪವಿತ್ರ ಎನ್ನುವುದನ್ನ ನೀನು ಸಿದ್ಧ ಮಾಡಿ ತೋರಿಸಿದೆ. ನನಗೆ ನಿನ್ನ ಬಗ್ಗೆ ಹೆಮ್ಮೆಯಾಗುತ್ತದೆ”.

ಬುದ್ಧ ಹೀಗೆ ಶ್ರೀಮಂತವಾಗಿ ಬದುಕಿದ, ಈ ಸಮ್ಯಕ್ ದೃಷ್ಟಿ, ಈ ಪರಿಪೂರ್ಣ ಅಧ್ಯಾತ್ಮವೇ ಅವನ ಶ್ರೀಮಂತಿಕೆ. ಸಾಧನೆಯ ಹಾದಿಯಲ್ಲಿದ್ದ ಒಬ್ಬ ಝೆನ್ ಸನ್ಯಾಸಿ ಒಮ್ಮೆ ಮಾರ್ಕೆಟ್ ಮೂಲಕ ಹಾಯ್ದು ಹೋಗುವಾಗ ಮಾಂಸದ ಅಂಗಡಿಯೊಂದರಲ್ಲಿ ನಡೆಯುತ್ತಿದ್ದ ಸಂಭಾಷಣೆಯನ್ನು ಕಿವಿಗೊಟ್ಟು ಕೇಳಿದ. ಗ್ರಾಹಕ : ನಿನ್ನ ಅಂಗಡಿಯಲ್ಲಿರುವ ಒಳ್ಳೆಯ ಮಾಂಸದ ತುಣುಕು ನನಗೆ ಬೇಕು ಅಂಗಡಿಯವ: ನನ್ನ ಅಂಗಡಿಯಲ್ಲಿರೋದೆಲ್ಲ ಒಳ್ಳೆಯ ಮಾಂಸವೇ. ಇಲ್ಲಿಯ ಯಾವ ಮಾಂಸದ ತುಣುಕೂ ಕಳಪೆಯಲ್ಲ. ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದಂತಯೇ ಝೆನ್ ಸನ್ಯಾಸಿಗೆ ಜ್ಞಾನೋದಯವಾಯಿತು.

Leave a Reply