ಕ್ರಿಯಾಶೀಲತೆ ಎನ್ನುವ ಪದದ ಆಧುನಿಕ ಬಳಕೆಯ ಪ್ರಕಾರ, ಕ್ರಿಯಾಶೀಲತೆ ಎನ್ನುವುದು ನಮ್ಮ ಸಾಮರ್ಥ್ಯದ ಬಳಕೆಯಿಂದ ಪ್ರತ್ಯಕ್ಷ ಪರಿಣಾಮಗಳನ್ನು ಸಾಧ್ಯ ಮಾಡುವ ನಮ್ಮ ನಡುವಳಿಕೆಯ ಗುಣಲಕ್ಷಣ. ಪರಕೀಯ ಕ್ರಿಯಾತ್ಮಕತೆಯಲ್ಲಿ ನಾನು ನಿಜವಾಗಿ ಭಾಗವಹಿಸುವುದಿಲ್ಲ; ಬದಲಾಗಿ ನಾನು ಒಳಗಿನ ಹಾಗು ಹೊರಗಿನ ಶಕ್ತಿಗಳ ಕಾರಣವಾಗಿ ಭಾಗವಹಿಸಲ್ಪಡುತ್ತೇನೆ. ಅಪರಕೀಯ ಕ್ರಿಯಾತ್ಮಕತೆಯಲ್ಲಿ (non alienated activity) ನಾನು ನನ್ನನ್ನು ನನ್ನ ಕ್ರಿಯೆಯ ವಿಷಯವಾಗಿ (subject) ಅನುಭವಿಸುತ್ತೇನೆ… | ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/07/02/fromm-35/
Being ನ ನಾವು ಈಗ ವಿವರಿಸಿರುವ ರೀತಿಯನ್ನ ನೋಡಿದರೆ ಅದು ಕ್ರಿಯಾಶೀಲತೆಯ ವಿಭಾಗಕ್ಕೆ ಸೇರಿದ್ದು ಎನ್ನುವುದು ಸೂಚಿತವಾಗುತ್ತದೆ; ನಿಷ್ಕ್ರೀಯತೆ being ನ ತನ್ನಿಂದ ಹೊರತಾಗಿಸಿಕೊಂಡಿದೆ. ಆದರೆ ಕ್ರಿಯಾಶೀಲತೆ (active) ಮತ್ತು ನಿಷ್ಕ್ರೀಯತೆ (passive) ಎರಡೂ ಬಹಳಷ್ಟು ತಪ್ಪುತಿಳುವಳಿಕೆಗೆ ಒಳಗಾಗಿರುವ ಪದಗಳು, ಏಕೆಂದರೆ ಅವುಗಳ ಇಂದಿನ ಅರ್ಥ, ಶಾಸ್ತ್ರೀಯ ಪಾಚೀನ ಯುಗ ಮತ್ತು ಮಧ್ಯಕಾಲೀನ ಯುಗದಿಂದ ಹಿಡಿದು ಪುನರುತ್ಥಾನದ ಅವಧಿಯ ಶುರುವಾತಿನವರೆಗೆ ಇದ್ದ ಅರ್ಥಕ್ಕಿಂತ ಸಂಪೂರ್ಣ ಭಿನ್ನವಾಗಿದೆ. Being ನ ಪರಿಕಲ್ಪನೆಯನ್ನ ಅರ್ಥಮಾಡಿಕೊಳ್ಳಲು ಮೊದಲು ಕ್ರಿಯಾಶೀಲತೆ ಮತ್ತು ನಿಷ್ಕ್ರೀಯತೆಯ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸಬೇಕಾಗಿದೆ.
ಕ್ರಿಯಾಶೀಲತೆ ಎನ್ನುವ ಪದದ ಆಧುನಿಕ ಬಳಕೆಯ ಪ್ರಕಾರ, ಕ್ರಿಯಾಶೀಲತೆ ಎನ್ನುವುದು ನಮ್ಮ ಸಾಮರ್ಥ್ಯದ ಬಳಕೆಯಿಂದ ಪ್ರತ್ಯಕ್ಷ ಪರಿಣಾಮಗಳನ್ನು ಸಾಧ್ಯ ಮಾಡುವ ನಮ್ಮ ನಡುವಳಿಕೆಯ ಗುಣಲಕ್ಷಣ. ಆದ್ದರಿಂದಲೇ ತಮ್ಮ ಹೊಲದಲ್ಲಿ ಸಾಗುವಳಿ ಮಾಡುವ ರೈತರನ್ನ ನಾವು ಕ್ರಿಯಾಶೀಲರು ಎಂದು ಕರೆಯುತ್ತೇವೆ, ಹಾಗೆಯೇ ಅಸೆಂಬ್ಲಿ ಲೈನ್ ನಲ್ಲಿ ಕೆಲಸ ಮಾಡುವ ಕಾರ್ಮಿಕರನ್ನ, ಸರಕುಗಳನ್ನ ಕೊಳ್ಳುವಂತೆ ಬಳಕೆದಾರರ ಮನವೊಲಿಸುವ ಸೇಲ್ಸ್ ಜನರನ್ನ, ತಮ್ಮ ಅಥವಾ ಇತರರ ಹಣವನ್ನು ವ್ಯಾಪಾರ ವ್ಯವಹಾರದಲ್ಲಿ ತೊಡಗಿಸುವ ಹೂಡಿಕೆದಾರರನ್ನ, ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರನ್ನ, ಪೋಸ್ಟೇಜ್ ಸ್ಟ್ಯಾಂಪ್ ಗಳನ್ನ ಮಾರುವ ಕ್ಲರ್ಕ್ಗಳನ್ನ, ಕಾಗದ ಪತ್ರಗಳ ಮೂಲಕ ವ್ಯವಹಾರ ಮಾಡುವ ಬ್ಯೂರೋಕ್ರ್ಯಾಟ್ಗಳನ್ನ ಕೂಡ. ಈ ಕೆಲಸಗಳಲ್ಲಿ ಕೆಲವು, ಹೆಚ್ಚು ಆಸಕ್ತಿ ಮತ್ತು ಏಕಾಗ್ರತೆಯನ್ನು ಅಪೇಕ್ಷಿಸುತ್ತವೆಯಾದರೂ, ಕ್ರಿಯಾಶಾಲತೆಯ ಸಂದರ್ಭದಲ್ಲಿ ಇದು ಅಂಥ ಮಹತ್ವದ ವಿಷಯವೇನಲ್ಲ. ಹೆಚ್ಚೂ ಕಡಿಮೆ ಕ್ರಿಯಾಶೀಲತೆ ಎಂದರೆ, ಆಯಾ ವಿಭಾಗದಲ್ಲಿ ಉಪಯೋಗಕರ ಸಾಮಾಜಿಕ ಬದಲಾವಣೆಗೆ ಅವಕಾಶ ಸಾಧ್ಯಮಾಡಿಕೊಡುವ,
ಸಾಮಾಜಿಕವಾಗಿ ಅಂಗೀಕೃತವಾದ ಒಂದು ಉದ್ದೇಶಪೂರ್ವಕ ನಡುವಳಿಕೆ.
ಕ್ರಿಯಾಶೀಲತೆ ತನ್ನ ಆಧುನಿಕ ಅರ್ಥದಲ್ಲಿ ಕೇವಲ ನಡುವಳಿಕೆಯನ್ನ ರೆಫರ್ ಮಾಡುತ್ತದೆ, ನಡುವಳಿಕೆಯ ಹಿಂದಿರುವ ವ್ಯಕ್ತಿಯನ್ನಲ್ಲ. ಈ ಕ್ರಿಯಾಶೀಲತೆಯ ಹಿಂದಿರುವ ಕಾರಣ, ಗುಲಾಮಗಿರಿಯಂಥ ಹೊರಗಿನ ಶಕ್ತಿಯಾಗಿರಬಹುದು ಅಥವಾ ಒಳಗಿನ ಒತ್ತಡಗಳು ಈ ಥರದ ಕ್ರಿಯಾಶಿಲತೆಗೆ ಕಾರಣವಾಗಿರಬಹುದು, ಉದಾಹರಣೆಗೆ ವ್ಯಕ್ತಿಯನ್ನ ಅವನೊಳಗಿನ ಆತಂಕ ಮುನ್ನಡೆಸುತ್ತಿರಬಹುದು, ಈ ಯಾವುದೂ ಇಲ್ಲಿ ಪರಿಗಣನೆಗೆ ಒಳಪಡುವುದಿಲ್ಲ. ಕಾರ್ಪೆಂಟರ್ ಗಳಂತೆ, ಸೃಜನಶೀಲ ಲೇಖಕರಂತೆ, ವಿಜ್ಞಾನಿಗಳಂತೆ ಅಥವಾ ತೋಟಗಾರರಂತೆ ಅವರಿಗೆ ಕೆಲಸದಲ್ಲಿ ಆಸಕ್ತಿ ಇದೆಯೋ ಅಥವಾ ಇಲ್ಲವೋ ಎನ್ನುವುದು ಅಥವಾ, ಅವರಿಗೆ ತಾವು ಮಾಡುವ ಕೆಲಸದಲ್ಲಿ ಅಂತರಂಗದ ಸಮಾಧಾನ ಅಥವಾ ತೃಪ್ತಿ ಇದೆಯೋ ಇಲ್ಲವೋ ಎನ್ನುವುದು, ಇಲ್ಲಿ ಅಷ್ಟು ಮುಖ್ಯವಾಗುವುದಿಲ್ಲ, ಉದಾಹರಣೆಗೆ ಅಸೆಂಬ್ಲಿ ಲೈನ್ ಕಾರ್ಮಿಕರು ಅಥವಾ ಪೋಸ್ಟಲ್ ಕ್ಲರ್ಕ್ ಗಳಂತೆ.
ಕ್ರಿಯಾಶೀಲತೆಯ ಆಧುನಿಕ ಅರ್ಥಸೂಚಿ, ಕ್ರಿಯಾತ್ಮಕತೆ ಮತ್ತು ಅವಿಶ್ರಾಂತತೆಯ (busyness) ನಡುವೆ ಯಾವ ವ್ಯತ್ಯಾಸವನ್ನೂ ಗುರುತಿಸುವುದಿಲ್ಲ. ಆದರೆ ಕ್ರಿಯೆಗಳ ಸಂದರ್ಭದಲ್ಲಿ ಈ ಎರಡರ ನಡುವೆ ಮೂಲಭೂತ ವ್ಯತ್ಯಾಸವಿದೆ ಮತ್ತು ಈ ವ್ಯತ್ಯಾಸ ಪರಕೀಯತೆ (alienated) ಮತ್ತು ಅಪರಕೀಯತೆ(non alienated) ಎನ್ನುವ ಪದಗಳಿಗೆ ಸಂಬಂಧಿಸಿದ್ದಾಗಿದೆ. ಪರಕೀಯ ಕ್ರಿಯಾತ್ಮಕತೆಯಲ್ಲಿ (alienated activity) ನಾನು ನನ್ನನ್ನು ಕ್ರಿಯೆ ಮಾಡುತ್ತಿರುವ ವ್ಯಕ್ತಿಯಾಗಿ ಅನುಭವಿಸುವುದಿಲ್ಲ; ಬದಲಾಗಿ ನಾನು, ನನ್ನನ್ನು ಕ್ರಿಯೆಯ ಪರಿಣಾಮವಾಗಿ ಅನುಭವಿಸುತ್ತೇನೆ – ಮತ್ತು ಅದು “ ಅಲ್ಲಿ” ನನ್ನಿಂದ ಪ್ರತ್ಯೇಕವಾಗಿ, ನನ್ನ ಕೈಗೆಟುಕದ ಹಾಗೆ, ನನ್ನ ವಿರುದ್ಧವಾಗಿ.
ಪರಕೀಯ ಕ್ರಿಯಾತ್ಮಕತೆಯಲ್ಲಿ ನಾನು ನಿಜವಾಗಿ ಭಾಗವಹಿಸುವುದಿಲ್ಲ; ಬದಲಾಗಿ ನಾನು ಒಳಗಿನ ಹಾಗು ಹೊರಗಿನ ಶಕ್ತಿಗಳ ಕಾರಣವಾಗಿ ಭಾಗವಹಿಸಲ್ಪಡುತ್ತೇನೆ. ನಾನು ನನ್ನ ಕ್ರಿಯೆಯ ಪರಿಣಾಮದಿಂದ ಪ್ರತ್ಯೇಕವಾಗಿಸಲ್ಪಟ್ಟಿದ್ದೇನೆ. ಮನೋರೋಗಶಾಸ್ತ್ರದಲ್ಲಿ ಪರಕೀಯ ಕ್ರಿಯಾತ್ಮಕತೆಯ ನಮ್ಮ ಕಣ್ಣಿಗೆ ಕಾಣಿಸಬಹುದಾದ ಉದಾಹರಣೆ, compulsive ಮತ್ತು obsessional ವ್ಯಕ್ತಿಗಳದ್ದು. ಸ್ವಂತದ ಇಚ್ಛೆಗೆ ವಿರುದ್ಧವಾಗಿ ಏನಾದರೂ ಮಾಡಬೇಕೆನ್ನುವ ತಮ್ಮ ಒಳಗಿನ ತುಡಿತದಂಥ ಒತ್ತಡದ ಕಾರಣ – ಉದಾಹರಣೆಗೆ ಮೆಟ್ಟಿಲುಗಳನ್ನು ಎಣಿಸುವುದು, ಕೆಲವು ಪದಗಳನ್ನ ಪದೆ ಪದೆ ಪುನರಾವರ್ತಿಸುವುದು, ಕೆಲವು ಖಾಸಗಿ ಆಚರಣೆಗಳಿಗೆ ಅಂಟಿಕೊಳ್ಳುವುದು – ಅವರು ತಮ್ಮ ಈ ಉದ್ದೇಶಗಳಲ್ಲಿ ತೀವ್ರವಾಗಿ ಆ್ಯಕ್ಟಿವ್ ಆಗಿ ಇರಬಹುದು , ಆದರೆ ಮನೋವಿಶ್ಲೇಷಣೆಯ ವಿಚಾರಣೆಗಳು ತೋರಿಸಿಕೊಟ್ಟಂತೆ ಅವರು ತಮಗೇ ಗೊತ್ತಿರದ ತಮ್ಮ ಒಳಗಿನ ಒತ್ತಡದಿಂದ ಪ್ರೇರಿತರಾಗಿರುತ್ತಾರೆ. ಪರಕೀಯ ಕ್ರಿಯಾತ್ಮಕತೆಯ ಇನ್ನೊಂದು ಸ್ಪಷ್ಟ ಉದಾಹರಣೆ ಎಂದರೆ, ವ್ಯಕ್ತಿಗಳ ಹಿಪ್ನಾಟಿಕ್ ಕ್ರಿಯೆಗೆ ಒಳಗಾದ ನಂತರದ ನಡುವಳಿಕೆ. ಹಿಪ್ನಾಟಿಕ್ ಸೂಚನೆಗಳಿಗೆ ಒಳಗಾದ ವ್ಯಕ್ತಿಗಳು ತಮ್ಮ trance ನಿಂದ ಹೊರಬಂದ ಮೇಲೂ, ತಮಗೆ ಹಿಂದೆ ನೀಡಲಾಗಿದ್ದ ಹಿಪ್ನಾಟಿಕ್ ಸೂಚನೆಗಳನ್ನ ತಮಗೆ ಅರಿವಿಲ್ಲದಂತೆ ಮುಂದೆವರೆಸಿಕೊಂಡು ಬರುವುದು.
ಅಪರಕೀಯ ಕ್ರಿಯಾತ್ಮಕತೆಯಲ್ಲಿ (non alienated activity) ನಾನು ನನ್ನನ್ನು ನನ್ನ ಕ್ರಿಯೆಯ ವಿಷಯವಾಗಿ (subject) ಅನುಭವಿಸುತ್ತೇನೆ. ಅಪರಕೀಯ ಕ್ರಿಯಾತ್ಮಕತೆ ಏನೋ ಒಂದನ್ನ ಹುಟ್ಟಿಸುವ ಪ್ರಕ್ರಿಯೆ, ಏನೋ ಒಂದನ್ನು ಸೃಷ್ಟಿಮಾಡಿ, ತಾನು ಸೃಷ್ಟಿಸಿದ್ದಕ್ಕೆ ಹೊಂದಿಕೊಂಡಂತೆ ಇರುವುದು. ನನ್ನ ಈ ಕ್ರಿಯೆ, ನನ್ನ ಶಕ್ತಿ ಸಾಮರ್ಥ್ಯಗಳ ಅಭಿವ್ಯಕ್ತಿಯೂ ಹೌದು. ಇಲ್ಲಿ ನಾನು, ನನ್ನ ಕ್ರಿಯೆ ಮತ್ತು ನನ್ನ ಕ್ರಿಯೆಯ ಪರಿಣಾಮ ಬೇರೆ ಬೇರೆ ಅಲ್ಲ, ಒಂದೇ. ಈ ಅಪರಕೀಯ ಕ್ರಿಯಾತ್ಮಕತೆಯನ್ನ ನಾನು ಸೃಜನಶೀಲ ಕ್ರಿಯಾತ್ಮಕತೆ* (productive activity) ಎಂದು ಕರೆಯುತ್ತೇನೆ. ( * ಇದನ್ನ ನಾನು ನನ್ನ Escape from freedom ನಲ್ಲಿ spontaneous activity ಎಂದು ಕರೆದಿದ್ದೇನೆ ಮತ್ತು ಮುಂದಿನ ಬರಹಗಳಲ್ಲಿ productive activity ಎಂದು)
“ ಸೃಜನಶೀಲ” (productive) ಎಂದು ನಾನು ಇಲ್ಲಿ ರೆಫರ್ ಮಾಡಿರುವುದು ಕಲಾವಿದರಂತೆ, ವಿಜ್ಞಾನಿಗಳಂತೆ ಪೂರ್ತಿ ಹೊಸದಾಗಿ, ಓರಿಜಿನಲ್ ಆಗಿ ಸೃಷ್ಟಿಸುವ ಸಾಮರ್ಥ್ಯವನ್ನು ಸೂಚಿಸುವುದಿಲ್ಲ. ಮತ್ತು ನನ್ನ ಕ್ರಿಯೆಯ product ನ್ನೂ ರೆಫರ್ ಮಾಡುವುದಿಲ್ಲ, ಇದು ನನ್ನ ಕ್ರಿಯೆಯ ಕ್ವಾಲಿಟಿಯನ್ನ ಮಾತ್ರ ಸೂಚಿಸುತ್ತದೆ. ಒಂದು ಪೇಂಟಿಂಗ್ ಅಥವಾ ಒಂದು ವೈಜ್ಞಾನಿಕ ಬರಹ ಅನುತ್ಪಾದಕ (unproductive), ಬರಡಾಗಿರಬಹುದು; ಇನ್ನೊಂದು ಬದಿಯಲ್ಲಿ, ತಮ್ಮ ಬಗ್ಗೆ ಆಳವಾದ ಅರಿವು ಹೊಂದಿರುವ ವ್ಯಕ್ತಿಗಳ ಒಳಗೆ ನಡೆಯುತ್ತಿರುವ ಪ್ರಕ್ರಿಯೆ, ಅಥವಾ ಒಂದು ಮರವನ್ನ ಕೇವಲ ನೋಡುವುದರ ಬದಲಿಗೆ ನಿಜವಾಗಿ “ಕಾಣುವ” ವರು, ಅಥವಾ ಒಂದು ಪದ್ಯವನ್ನು ಓದಿದಾಗ ತಮ್ಮೊಳಗೆ ಕವಿ ಶಬ್ದಗಳಲ್ಲಿ ವ್ಯಕ್ತಪಡಿಸಿದ ಭಾವನೆಗಳ ಹರಿವನ್ನು ಅನುಭವಿಸಬಲ್ಲವರು – ಇಲ್ಲಿ ಪ್ರಕ್ರಿಯೆ ಸೃಜನಶೀಲವಾಗಿದ್ದರೂ ಏನನ್ನೂ ಸೃಷ್ಟಿಸಿಲಾಗಿಲ್ಲ. ಸೃಜನಶೀಲ ಕ್ರಿಯೆ ಅಂತರಂಗದ ಕ್ರಿಯೆಯ ಸ್ಥಿತಿಯನ್ನು ಸೂಚಿಸುತ್ತದೆ; ಅದಕ್ಕೂ ಕಲೆ, ವಿಜ್ಞಾನ ಅಥವಾ ಯಾವುದೇ ಉಪಯೋಗಕರ ಸಂಗತಿಯ ಸೃಷ್ಟಿ ಇತ್ಯಾದಿಯೊಡನೆ ಯಾವುದೇ ಅವಶ್ಯಕ ಸಂಬಂಧವಿಲ್ಲ. ಉತ್ಪಾದಕತೆ (productiveness) ಎನ್ನುವುದು ಯಾವುದೇ ಮನುಷ್ಯ ಜೀವಿಗೆ ಸಾಧ್ಯವಾಗಬಹುದಾದ ಸ್ವಭಾವ ದೃಷ್ಟಿಕೋನ (character orientation), ಅವರು ಭಾವನಾತ್ಮಕವಾಗಿ ಕುಸಿಯುವ ಮಟ್ಟದವರೆಗೆ. ಸೃಜನಶೀಲ ವ್ಯಕ್ತಿಗಳು ಏನನ್ನು ಮುಟ್ಟಿದರೂ ಅದನ್ನು ಜೀವಂತ ಮಾಡುತ್ತಾರೆ, ಅವರು ತಮ್ಮೊಳಗಿನ ಸಹಜ ವಿಶೇಷತೆಗಳಿಗೆ ಜನ್ಮ ನೀಡುತ್ತಾರೆ ಮತ್ತು ಇತರ ವ್ಯಕ್ತಿಗಳಿಗೆ, ವಸ್ತುಗಳಿಗೆ ಹೊಸ ಬದುಕು ನೀಡುತ್ತಾರೆ.
“ಕ್ರಿಯಾತ್ಮಕತೆ” ಮತ್ತು “ನಿಷ್ಕ್ರಿಯಾತ್ಮಕತೆ” ಸಂಪೂರ್ಣವಾಗಿ ಎರಡು ವಿಭಿನ್ನ ಅರ್ಥಗಳನ್ನು ಹೊಂದಬಹುದು. ಉತ್ಪಾದಕತೆಯ ಸಂದರ್ಭದಲ್ಲಿ, ಪರಕೀಯ ಕ್ರಿಯಾತ್ಮಕತೆ , ಕೇವಲ ಅವಿಶ್ರಾಂತತೆ ( busy) ಎನ್ನುವ ಅರ್ಥದಲ್ಲಿ ನಿಷ್ಕ್ರಿಯಾತ್ಮಕತೆಯೇ ಆಗಿದೆ; ಮತ್ತು ನಿಷ್ಕ್ರಿಯಾತ್ಮಕತೆ ಅವಿಶ್ರಾಂತತೆ ಅಲ್ಲದ (non busyness) ಎನ್ನುವ ಅರ್ಥದಲ್ಲಿ, ಅಪರಕೀಯ ಕ್ರಿಯಾತ್ಮಕತೆ ಆಗಬಹುದು. ಇದನ್ನು ಇವತ್ತು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ ಏಕೆಂದರೆ ಬಹಳಷ್ಟು ಕ್ರಿಯೆಗಳು ಪರಕೀಯ “ನಿಷ್ಕ್ರಿಯಾತ್ಮಕತೆ” ಗೆ ಒಳಪಟ್ಟರೆ, ಸೃಜನಶೀಲ ನಿಷ್ಕ್ರಿಯಾತ್ಮಕತೆಯನ್ನ ಬಹಳ ಅಪರೂಪಕ್ಕೆ ಕಾಣಬಹುದು.
1 Comment