ಬೆಳಕಿನ ಮೂಲ , ಸಂತೋಷ, ಪ್ರೇಮದ ದಾರಿಯಲ್ಲಿ ನಡೆಯುತ್ತಿರುವವರ ಸಂಗದಲ್ಲಿ ಹೆಜ್ಜೆ ಹಾಕುತ್ತಿರುವಿರಾದರೆ, ಎಷ್ಟು ದಿನ ತಾನೆ ನೀವು ಹಿಂದೆ ಉಳಿಯುವುದು ಸಾಧ್ಯ? ~ ಓಶೋ; ಕನ್ನಡಕ್ಕೆ : ಚಿದಂಬರ ನರೇಂದ್ರ
ಶರಣಾಗತಿ ಎಂದರೆ
ಎದುರು ಮಂಡಿಯೂರುವುದಲ್ಲ,
ಬೇರೆಲ್ಲ ವಿಷಯಗಳಲ್ಲಿ ಅನಾಸಕ್ತರಾಗುವುದಲ್ಲ.
ವಿಧಿ ಎಂದು ಹತಾಶರಾಗುವುದಲ್ಲ,
ಎದುರಾಳಿಯೆದುರು ಶಸ್ತ್ರತ್ಯಾಗ ಮಾಡುವುದಲ್ಲ,
ಬದಲಾಗಿ
ಈ ಎಲ್ಲದಕ್ಕೆ ತದ್ವಿರುದ್ಧವಾದುದು
ಅಪಾರ ಧೈರ್ಯದ ವಿಷಯ.
ಶರಣಾಗತಿಯೊಳಗೆ
ಹುಟ್ಟುವ ಶಕ್ತಿಯೇ ನಿಜದ ಶಕ್ತಿ.
ಬದುಕಿನ ದಿವ್ಯ ಸ್ವಾರಸ್ಯಕ್ಕೆ ಶರಣಾಗುವವರು,
ಇಡೀ ಜಗತ್ತು ಒಂದರ ಮೇಲೊಂದು
ಉದ್ವಿಗ್ನ ಪರಿಸ್ಥಿತಿಗಳನ್ನು ಎದುರಿಸುತ್ತಿರುವಾಗಲೂ
ಅಚಲ ಪ್ರಶಾಂತತೆಯಲ್ಲಿ ಸ್ಥಿರವಾಗುವರು.
~ ಶಮ್ಸ್ ತಬ್ರೀಝಿ
***********************
ಸಂಘಂ ಶರಣಂ ಗಚ್ಛಾಮಿ
ಅರಿವು ಹೊಂದಿದವರ ಸಂಗದಲ್ಲಿ ನಾನು ಶರಣಾಗತಿ ಬಯಸುತ್ತೇನೆ.
ಧರ್ಮ ಎಂದರೆ ಅದು ಕಲಿಸುವಂಥದ್ದಲ್ಲ ಕೇವಲ ಗ್ರಹಿಸುವಂಥದ್ದು. ಧರ್ಮ ಒಂದು ಬಗೆಯ ಸೊಂಕು, ಅದನ್ನ ಕಲಿಸಲಿಕ್ಕಾಗುವುದಿಲ್ಲ, ಆದರೆ ಈ ಸೊಂಕು ತಗುಲಿದವರ ಸಂಗದಲ್ಲಿ ನೀವು ಇರುವುದಾದಾರೆ ಅದು ನಿಮಗೆ ನಿಧಾನವಾಗಿ ನಿಮಗೆ ಅಂಟಿಕೊಳ್ಳುತ್ತದೆ, ಧರ್ಮ ಮಹಾ ಸಾಂಕ್ರಾಮಿಕ.
ಒಂದು ಪುರಾತನ ತಾವೋ ಶಾಸ್ತ್ರಗ್ರಂಥದಲ್ಲಿ ಬರೆದಿರುವುಂತೆ ನೀವು ಒಂದು ಸಣ್ಣ ಕಲ್ಲಿನ ಹರಳನ್ನು ವಜ್ರಗಳ ನಡುವೆ ಬಚ್ಚಿಡುವಿರಾದರೆ ಕಾಲಾನಂತರ ಆ ಕಲ್ಲಿನ ಹರಳೂ ವಜ್ರವಾಗುತ್ತದೆ. ಇದು ಸತ್ಯ, ಮನುಷ್ಯರ ವಿಚಾರದಲ್ಲಂತೂ ಖಚಿತ ಸತ್ಯ.
ನೀವು ಸೂರ್ಯನ ಕಡೆ ಮುಖಮಾಡಿದವರ ಅಥವಾ , ಬೆಳಕಿನ ಮೂಲ , ಸಂತೋಷ, ಪ್ರೇಮದ ದಾರಿಯಲ್ಲಿ ನಡೆಯುತ್ತಿರುವವರ ಸಂಗದಲ್ಲಿ ಹೆಜ್ಜೆ ಹಾಕುತ್ತಿರುವಿರಾದರೆ, ಎಷ್ಟು ದಿನ ತಾನೆ ನೀವು ಹಿಂದೆ ಉಳಿಯುವುದು ಸಾಧ್ಯ? ಆದಷ್ಟು ಬೇಗ ಆ ಗುಂಪಿನ ಚೈತನ್ಯ ನಿಮ್ಮ ಕಾಲುಗಳಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವುದು, ತನ್ನ ಹುಚ್ಚು ಹರಿವಿನಲ್ಲಿ ನಿಮ್ಮನ್ನು ಮುಳುಗಿಸಿಬಿಡುವುದು.
ಒಂದು ಒಳ್ಳೆಯ ಸಂಗೀತ ಕೇಳಿದಾಗ ನಿಮ್ಮ ಆಳದಲ್ಲಿ ಒಂದು ಭಾವ ಉತ್ಪತ್ತಿಯಾಗುವುದು, ಆ ಸಂಗೀತ ಮತ್ತು ನಿಮ್ಮ ಚೈತನ್ಯದ ನಡುವೆ ಒಂದು ಸಾಮರಸ್ಯ ತಾನೇ ತಾನಾಗಿ ನಿರ್ಮಾಣವಾಗುವುದು, ನೀವು ತಾಳ ಹಾಕಲು ಆರಂಭಿಸುತ್ತೀರಿ, ಮನಸ್ಸಿನಲ್ಲಿಯೇ ಗುಣುಗಲು ಶುರುಮಾಡುತ್ತೀರಿ. ಒಂದು ಸುಂದರ ನೃತ್ಯ ನೋಡುವಾಗ ನಿಮಗೇ ಗೊತ್ತಿಲ್ಲದಂತೆ ನಿಮ್ಮ ಕಾಲುಗಳು ತಾವೂ ಆ ನೃತ್ಯದೊಡನೆ ಹೆಜ್ಜೆ ಹಾಕಲು ಸಿದ್ಧವಾಗುವವು, ನಿಮ್ಮ ಕಾಲುಗಳಿಗೆ ಯಾವುದೋ ಒಂದು ಸಂಗತಿ ವರ್ಗಾವಣೆಯಾಗಿದೆ. ಈ ಸಂಗತಿ ಕಾಣುವಂಥದ್ದಲ್ಲ, ಎಣಿಸುವಂಥದ್ದಲ್ಲ, ಅದು ಭೌತಿಕ ವಸ್ತುವಲ್ಲ, ಅದು ಒಂದು vibe. ಆ ವೈಬ್ ನಿಮ್ಮೊಳಗೆ ತುಂಬಿಕೊಂಡು ನಿಮ್ಮ ಆತ್ಮವನ್ನು ಕುಣಿಯಲು ಸಿದ್ಧಮಾಡುವಂಥದು.
ಒಮ್ಮೆ ಒಬ್ಬ ರೈತ ತಾನು ಹುಟ್ಟಿದ ಹಳ್ಳಿ ಬಿಟ್ಟು ಹತ್ತಿರದ ಇನ್ನೊಂದು ಊರಿಗೆ ಗಂಟು ಮೂಟೆ ಕಟ್ಟಿಕೊಂಡು ವಲಸೆ ಹೋದ. ಹೊಸ ಊರು ಹೇಗೋ ಏನೋ ಎಂದು ಚಿಂತೆಗೊಳಗಾದ ಆ ಮನುಷ್ಯ, ಈ ಬಗ್ಗೆ ವಿಚಾರಿಸಲು ಅಲ್ಲೇ ವಾಸವಾಗಿದ್ದ ಝೆನ್ ಮಾಸ್ಟರ್ ಬಳಿ ಹೋದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಕೆಟ್ಚ ಜನ ಮಾಸ್ಟರ್, ಹೊಟ್ಟೆ ಕಿಚ್ಚಿನವರು, ಮೋಸಗಾರರು, ಕಳ್ಳರು.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.
ಕೆಲ ದಿನಗಳ ನಂತರ ಇನ್ನೊಬ್ಬ ರೈತ, ಇನ್ನೊಂದು ಊರಿನಿಂದ ಅದೇ ಊರಿಗೆ ಬಂದು, ಝೆನ್ ಮಾಸ್ಟರ್ ಗೆ ಅದೇ ಪ್ರಶ್ನೆ ಕೇಳಿದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಒಳ್ಳೆ ಜನ ಮಾಸ್ಟರ್, ಒಬ್ಬರಿಗೊಬ್ಬರು ಬಹಳ ಸಹಾಯ ಮಾಡುತ್ತಾರೆ, ಸದಾ ತಮ್ಮ ತಮ್ಮ ಕೆಲಸ ಮಾಡುತ್ತ, ಹಾಡುತ್ತ, ಕುಣಿಯುತ್ತ ಖುಷಿಯಾಗಿರ್ತಾರೆ.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.