ಗೆಳೆತನದ ವ್ಯಾಖ್ಯಾನ

ಗೆಳೆತನದಲ್ಲಿ ಎಲ್ಲ ಬೂಟಾಟಿಕೆಯನ್ನ ಬಿಟ್ಟು ಬಿಡಬೇಕು. ಸತ್ಯ ಜನಗಳ ಗುಂಪಿನಲ್ಲಿ ಇರುವುದು ಸಾಧ್ಯವಿಲ್ಲ. ಏಕಾಂಗಿಯಾಗಿರುವುದು ನಿನಗೆ ಸಾಧ್ಯವಿಲ್ಲವಾದರೆ ನಿನ್ನೊಳಗಿನ ಕಲ್ಮಶಗಳಿಂದ ಯಾವತ್ತು ಹೊರತಾಗುತ್ತೀಯ? । ಚಿದಂಬರ ನರೇಂದ್ರ

ನಾನು ನಿನ್ನೊಡನೆ
ಕಠಿಣವಾಗಿ ನಡೆದುಕೊಳ್ಳುತ್ತಿರುವುದರ
ಉದ್ದೇಶ ಇಷ್ಟೇ, ನೀನು ನಿನ್ನೊಳಗೆ ಅದುಮಿಟ್ಚುಕೊಂಡಿರುವುದೆಲ್ಲ
ಹೊರಗೆ ಹರಿದುಬರಲೆಂದು,
ಅಲ್ಲಿಯೇ ಕೊಳೆತು ನಂಜಾಗದಿರಲೆಂದು. ನೆನಪಿರಲಿ,
ನಿನ್ನನ್ನು ಹಿಂಸೆಗೆ ಗುರಿಮಾಡುವಾಗ
ತಾನು ಯಾತನೆಪಡದವ
ಮಹಾ ಕ್ರೂರಿ. ಸಹನೆಯಲ್ಲಿ ಮತ್ತು ಕ್ಷಮಿಸುವಲ್ಲಿ
ಒಂದು ಅದ್ಭುತ ಸೌಂದರ್ಯವಿದೆ
ಘನತೆ, ಒಂದು ರೀತಿಯ ಪರಿಪೂರ್ಣತೆ. ನನಗಂತೂ ಯಾತನೆಯ ಜೊತೆ
ಒಂದಿನಿತೂ ಸಂಬಂಧವಿಲ್ಲ.
ಯಾತನೆಗೆ ಕಾರಣವೇ ನಮ್ಮ ಅಸ್ತಿತ್ವ
ಮತ್ತು, ಅಸ್ತಿತ್ವದ ವಿಳಾಸ ನನಗೆ ಅಪರಿಚಿತ.
ಅಥವಾ
ಉನ್ಮತ್ತ ಆನಂದವೇ ನನ್ನ ಅಸ್ತಿತ್ವ . ಹೊರಗಿನ ಯಾವುದಕ್ಕೂ
ನನ್ನೊಳಗೆ ಪ್ರವೇಶವಿಲ್ಲ.
ಹೊರಗಿನ ಹೆಜ್ದೆಗಳು ಕಂಡ ಕ್ಷಣದಲ್ಲಿಯೇ
ಒರೆಸಿ ಹಾಕಿಬಿಡುತ್ತೇನೆ.

ಶಮ್ಸ್ ಹೇಳಿದ, ಕಥೆ ಎಂದರೆ ಸಾಮಾನ್ಯ ಸಂಗತಿ ಅಲ್ಲ. ಕಥೆಗಳನ್ನು ಒಂದಾಗಿ ಹೆಣೆದು ನಮ್ಮ ಈ ಜಗತ್ತನ್ನ ಸೃಷ್ಟಿಸಲಾಗಿದೆ.

ಕಥೆಯ ಗೀಳು ಹಚ್ಚಿಕೊಂಡಿದ್ದ ಇಬ್ಬರು ಗೆಳೆಯರು ಕಥೆಗಾಗಿ ಒಬ್ಬ ಶೇಖನ ಬಳಿ ಹೋಗುತ್ತಾರೆ. ಕಥೆ ಹೇಳುವ ಮೊದಲು ಶೇಖ್ ಅವರನ್ನ ನಾನಾ ರೀತಿಯಿಂದ ಪ್ರಶ್ನೆ ಮಾಡುತ್ತಾನೆ.

“ಎಷ್ಟು ದಿನಗಳಿಂದ ನೀವು ಗೆಳೆಯರು?”

ಬಹಳ ವರ್ಷಗಳಾಯಿತು, ಹುಜೂರ್.

“ಎಷ್ಟು ವರ್ಷ ಆಯಿತು?”

“ಸುಮಾರು ನಲವತ್ತು ವರ್ಷಗಳಾಗಿರಬಹುದು.”

“ಈ ನಲವತ್ತು ವರ್ಷಗಳಲ್ಲಿ ನೀವು ಎಂದಾದರೂ ಜಗಳಾಡಿದ್ದಿರಾ?”

ಯಾವತ್ತೂ ನಾವು ಜಗಳಾಡಿಲ್ಲ ಹುಜೂರ್.

“ಹಾಗಾದರೆ ನಿಮ್ಮದು ತೋರಿಕೆಯ ಗೆಳೆತನ. ಇಂಥ ಗೆಳೆತನದಿಂದ ಏನೂ ಪ್ರಯೋಜನ ಇಲ್ಲ. ಇದು ಮೋಸದ ಆಧಾರದ ಮೇಲೆ ಕಟ್ಟಲ್ಪಟ್ಟ ಗೆಳೆತನ. ನೀವು ಎಂದೂ ಗೆಳೆಯರಾಗಿರಲಿಲ್ಲ, ನೀವು ಒಬ್ಬರನ್ನೊಬ್ಬರು ಹೊಗಳಿಕೊಂಡು ಇದ್ದವರು. ಇದು ಗೆಳೆತನ ಅಲ್ಲ.”

ಸ್ವಲ್ಪ ಹೊತ್ತು ಸುಮ್ಮನಿದ್ದ ಶಮ್ಸ್ ಮಾತು ಮುಂದುವರೆಸಿದ… “ನಾನು ಮೊದಲ ದಿನವೇ ರೂಮಿಗೆ ಹೇಳಿದ್ದೆ, ಗೆಳೆತನದಲ್ಲಿ ಎಲ್ಲ ಬೂಟಾಟಿಕೆಯನ್ನ ಬಿಟ್ಟು ಬಿಡಬೇಕು. ಸತ್ಯ ಜನಗಳ ಗುಂಪಿನಲ್ಲಿ ಇರುವುದು ಸಾಧ್ಯವಿಲ್ಲ. ಏಕಾಂಗಿಯಾಗಿರುವುದು ನಿನಗೆ ಸಾಧ್ಯವಿಲ್ಲವಾದರೆ ನಿನ್ನೊಳಗಿನ ಕಲ್ಮಶಗಳಿಂದ ಯಾವತ್ತು ಹೊರತಾಗುತ್ತೀಯ? ನಿನ್ನ ಸುತ್ತ ಇರುವ ಎಲ್ಲ ಗೇಟ್ ಕೀಪರ್ ಗಳಿಂದ ನೀನು ಬಿಡುಗಡೆ ಪಡೆಯಬೇಕು. ಗೆಳೆಯರ ವೇಷದಲ್ಲಿ ನಿನ್ನ ಸುತ್ತ ಇರುವ ಈ ಗೆಟ್ ಕೀಪರ್ ಗಳು ನಿನ್ನನ್ನ ಹೊಗಳುತ್ತ ಸತ್ಯದಿಂದ ನಿನ್ನ ದೂರ ಇಟ್ಟಿರುತ್ತಾರೆ.”

ಒಂದು ಶುಕ್ರುವಾರ ಮಧ್ಯಾಹ್ನ ನಸ್ರುದ್ದೀನ್ ಮತ್ತು ಅವನ ಪಾರ್ಟನರ್, ಬೇಗ ಆಫೀಸ್ ಲಾಕ್ ಮಾಡಿಕೊಂಡು ಲಾಂಗ್ ಡ್ರೈವ್ ಮಾಡುತ್ತ ಹತ್ತಿರದ ಬೀಚ್ ರೆಸಾರ್ಟ್ ಗೆ ಬಂದರು. ಇಬ್ಬರು ಆರಾಮಾಗಿ ಕೂತು ಬಿಯರ್ ಕುಡಿಯುತ್ತಿದ್ದಾಗ, ಪಾರ್ಟನರ್ ಗೆ ಏನೋ ನೆನಪಾದಂತಾಗಿ ಅವನು ಗಾಬರಿಯಾದ, “ನಸ್ರುದ್ದೀನ್, ನಾನು ಸೇಫ್ಟೀ ಲಾಕರ್ ಲಾಕ್ ಮಾಡೋದನ್ನ ಮರೆತುಬಿಟ್ಟೆ, ಏನು ಮಾಡೋದು ಈಗ?”

“ಏನೂ ಅಪಾಯ ಆಗಲಾರದು ಗೆಳೆಯ, ನಾವಿಬ್ಬರೂ ಇಲ್ಲಿ ಜೊತೆಯಲ್ಲೇ ಇದ್ದೀವಲ್ಲ” ನಸ್ರುದ್ದೀನ್ ಪಾರ್ಟನರ್ ನ ಸಮಾಧಾನ ಮಾಡಿದ!

Leave a Reply