ಜ್ಞಾನೋದಯದ ಹಾದಿಯಲ್ಲಿ ಮಾತ್ರ, ನೀವು ಎಷ್ಟು ಪ್ರಯತ್ನ ಮಾಡುತ್ತೀರೋ ಜ್ಞಾನೋದಯ ನಿಮ್ಮಿಂದ ಅಷ್ಟು ದೂರ ಹೋಗುತ್ತದೆ. ನೀವು ಪ್ರಯತ್ನ ಮುಂದುವರೆಸುವಿರಾದರೆ ಜ್ಞಾನೋದಯ ನಿಮಗೆ ಅಸಾಧ್ಯವಾಗಿಬಿಡುತ್ತದೆ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೋಡಿದರೆ ಕಾಣಿಸದು
ಕೇಳಿದರೆ ಕೇಳಿಸದು
ಮುಟ್ಟಿದರೆ ನಿಲುಕದು
ಇನ್ನೂ ಮುಂದೆ ವರ್ಣಿಸುವುದು
ಆಗದ ಮಾತು,
ಅಂತೆಯೇ ಇದು ಮೂರಲ್ಲ
ಒಂದು. ತಲೆ ಮೇಲೆ ಬೆಳಕಿಲ್ಲ
ಕಾಲ ಕೆಳಗೆ ಕತ್ತಲೆಯಿಲ್ಲ
ಆರಂಭ, ಕೊನೆ, ಹೆಸರು ಒಂದೂ ಇಲ್ಲ.
ರೂಹಿಲ್ಲದ ರೂಹು
ಪ್ರತಿಬಂಬವಿಲ್ಲದ ಬಿಂಬ
ಕಾಣಿಸದಷ್ಟು ಸೂಕ್ಷ್ಮ, ಕಾಣದಷ್ಟು ಅಪಾರ ಶುರುವಿನ ಗೆರೆಯಿಲ್ಲ, ಮುಟ್ಟುವ ದಾರವಿಲ್ಲ
ರುಚಿಯ ಬಲ್ಲವರಿಲ್ಲ, ರುಚಿ ಆದವರು ಸಾಕಷ್ಟು
ದಾರಿಯಲ್ಲಿ ಹೆಜ್ಜೆ ಹಾಕುತ್ತ ಹೋದಂತೆ
ಜೊತೆಯಾಗುತ್ತ ಹೋಗುತ್ತದೆ ‘ಸಧ್ಯ’ ~ ಲಾವೋತ್ಸೇ
ಬಡತನದಲ್ಲಿ ಹುಟ್ಟಿದರೂ ತನ್ನ ಕಾಲದ ಅತೀ ಶ್ರೀಮಂತರಲ್ಲಿ ಒಬ್ಬನಾಗಿ ಬೆಳೆದಿದ್ದ ಹೆನ್ರಿ ಫೋರ್ಡ್.
ಒಮ್ಮೆ ಹೆನ್ರಿಯ ನ್ನ ಪ್ರಶ್ನೆ ಮಾಡಲಾಯಿತು. “ಮುಂದಿನ ಜನ್ಮದಲ್ಲಿ ನೀನು ಏನಾಗಬೇಕೆಂದು ಬಯಸುತ್ತೀಯ?”
“ಖಂಡಿತ ಮತ್ತೇ ಹಣವಂತನಾಗಲು ನಾನು ಬಯಸುವುದಿಲ್ಲ. ಶ್ರೀಮಂತ ಆಗುವುದೆಂದರೆ ಅದೊಂದು ರೀತಿಯ ಸ್ವ-ಹಿಂಸೆ, ಒಂದು ಚೂರೂ ಸುಖವಿಲ್ಲದ ಬಾಳು ಇದು. ಪ್ರತಿದಿನ ನಾನು ೭ ಗಂಟೆಗೆ ಫ್ಯಾಕ್ಟರಿಗೆ ಹೋಗುತ್ತಿದ್ದರೆ, ಕಾರ್ಮಿಕರು ೮ ಗಂಟೆಗೆ ಬರುತ್ತಿದ್ದರು ಮತ್ತು ಕ್ಲರ್ಕ್ ಗಳು ೯ ಗಂಟೆಗೆ ಹಾಗು ಮ್ಯಾನೇಜರ್ ಗಳು ಆರಾಮಾಗಿ ೧೦ ಗಂಟೆಗೆ. ಮ್ಯಾನೇಜರ್ ಗಳು ೨ ಗಂಟೆಗೆ ಆಫಿಸಿನಿಂದ ಹೊರಟುಬಿಡುತ್ತಿದ್ದರೆ ಬಾಕಿ ಎಲ್ಲರೂ ೫ ಗಂಟೆಗೆ ಜಾಗ ಖಾಲೀ ಮಾಡಿಬಿಡುತ್ತಿದ್ದರು. ಆದರೆ ನಾನು ಪ್ರತಿದಿನ ೮, ೯, ೧೦ ಗಂಟೆಯವರೆಗೆ ಕೆಲಸ ಮಾಡುತ್ತಿದ್ದೆ, ಒಮ್ಮೊಮ್ಮೆ ನಾನು ಫ್ಯಾಕ್ಟರಿ ಬಿಡುವಾಗ ೧೨ ಗಂಟೆಯಾಗಿರುತ್ತಿತ್ತು. ಹಣವಂತನಾಗಲು ನಾನು ಬಹಳ ಕಷ್ಟಪಟ್ಟು ಕೆಲಸ ಮಾಡಿದೆ, ಹಣವಂತ ಆದೆ ಕೂಡ. ಆದರೆ ಏನು ಪ್ರಯೋಜನ? ಈ ಎಲ್ಲವೂ ನನಗೆ ಒಂದಿಷ್ಟೂ ಸುಖಕೊಡಲಿಲ್ಲ. ನಾನು ನನ್ನ ಕೆಲಸಗಾರರಿಗಿಂತ ಹೆಚ್ಚು ಕೆಲಸ ಮಾಡಿದೆ ಆದರೆ ಅವರು ನನಗಿಂತ ಹೆಚ್ಚು ಸುಖಿಗಳಾಗಿದ್ದಾರೆ. ಅವರು ರಜೆಯಲ್ಲಿದ್ದಾಗ ಕೂಡ ನಾನು ಫ್ಯಾಕ್ಟರಿಗೆ ಹೋಗಿ ನಮ್ಮ ಮುಂದಿನ ಪ್ಲಾನ್ ಗಳನ್ನ ರೂಪಿಸುತ್ತಿದ್ದೆ”. ಹೆನ್ರಿ ಫೋರ್ಡ್ ಉತ್ತರಿಸುತ್ತಿದ್ದ.
ಕಷ್ಟ ಹೌದು, ಆದರೆ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೆ ಒಂದಿಲ್ಲೊಂದು ದಿನ ಖಂಡಿತ ನೀವು ಹಣವಂತರಾಗಬಹುದು. ಕಠಿಣ ನಿಜ, ಆದರೆ ಛಲ ಬಿಡದೇ ಪ್ರಯತ್ನ ಮುಂದುವರೆಸುವಿರಾದರೆ ಖಂಡಿತ ಒಮ್ಮೆಯಾದರೂ ನೀವು ಮೌಂಟ್ ಎವರೆಸ್ಟ್ ಏರಬಹುದು. ಆದರೆ ಜ್ಞಾನೋದಯದ ಹಾದಿಯಲ್ಲಿ ಮಾತ್ರ, ನೀವು ಎಷ್ಟು ಪ್ರಯತ್ನ ಮಾಡುತ್ತೀರೋ ಜ್ಞಾನೋದಯ ನಿಮ್ಮಿಂದ ಅಷ್ಟು ದೂರ ಹೋಗುತ್ತದೆ. ನೀವು ಪ್ರಯತ್ನ ಮುಂದುವರೆಸುವಿರಾದರೆ ಜ್ಞಾನೋದಯ ನಿಮಗೆ ಅಸಾಧ್ಯವಾಗಿಬಿಡುತ್ತದೆ. ನೀವು ನಿಮ್ಮ ಮೈಂಡ್ ನ ಅದರ ಎಲ್ಲ ಒತ್ತಡ ಎಲ್ಲ ಚಿಂತೆಗಳೊಡನೆ ಜ್ಞಾನೋದಯಕ್ಕಾಗಿ ದುಡಿಯಲು ಹಚ್ಚುವಿರಾದರೆ, ನೀವು ತಪ್ಪು ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದೀರಿ, ಜ್ಞಾನೋದಯದ ವಿರುದ್ಧ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿದ್ದೀರಿ.
ಜ್ಞಾನೋದಯಕ್ಕಾಗಿ ನೀವು ಯಾವ ಪ್ರಯತ್ನವನ್ನೂ ಮಾಡಬೇಕಿಲ್ಲ, ನಿಮ್ಮನ್ನು ನೀವು ನಿರಾಳವಾಗಿಸಿಕೊಳ್ಳಬೇಕು, ಯಾವುದೇ ಒತ್ತಡಗಳಿಂದ ಮುಕ್ತರಾಗಿಸಿಕೊಳ್ಳಬೇಕು, ಸಂಪೂರ್ಣ ಪ್ರಶಾಂತತೆ ನಿಮ್ಮನ್ನು ತುಂಬಿಕೊಳ್ಳಬೇಕು. ಆಗ ಅಚಾನಕ್ ಆಗಿ ನಿಮ್ಮೊಳಗೆ ಒಂದು ವಿಸ್ಫೋಟ ಸಂಭವಿಸುವುದು, ಥಟ್ಟನೇ ನೀವು ಜ್ಞೋನೋದಯದೊಳಗೆ ಕಾಲಿಡುವಿರಿ. ನಿಮಗೆ ಅರಿವಾಗಬಹುದು ಅಥವಾ ಅರಿವಾಗದಿರಬಹುದು ಹುಟ್ಟಿನಿಂದಲೇ ನೀವು enlightened being.
ಒಮ್ಮೆ ಒಬ್ಬ ಶಿಷ್ಯ, ಝೆನ್ ಮಾಸ್ಟರ್ ಗೆ ಪ್ರಶ್ನೆ ಹಾಕಿದ; ” ಮಾಸ್ಟರ್ ಜ್ಞಾನೋದಯ ಪಡೆಯಲು ಎಷ್ಟು ಸಮಯ ಬೇಕು? ”
“ಏಳು ವರ್ಷ” ಮಾಸ್ಟರ್ ಉತ್ತರಿಸಿದ.
” ಕಷ್ಟ ಪಟ್ಟು ಸಾಧನೆ ಮಾಡಿದರೆ ? ” ಶಿಷ್ಯ ಮತ್ತೆ ಪ್ರಶ್ನೆ ಕೇಳಿದ.
” ಹದಿನಾಲ್ಕು ವರ್ಷ” ಮಾಸ್ಟರ್ ಉತ್ತರಿಸಿದ.