ಸಂತೋಷದ ಗುಟ್ಟು : ಬೆಳಗಿನ ಹೊಳಹು

ನಮಗಾಗಿಯೇ ಒಂದು ಹೊಸ ದಾರಿ ಇರುವಾಗ ಹತಾಶೆ ಏಕೆ? : ಚಿದಂಬರ ನರೇಂದ್ರ

ಬದುಕಿನಲ್ಲಿ ಏನೇ ಘಟಿಸಿದರೂ,
ಎಂಥ ಸಂಕಟದ ಸಮಯಗಳು ಎದುರಾದರೂ,
ದಯವಿಟ್ಟು
ಹತಾಶೆಯ ಮನೆ ಇರುವ ವಠಾರಕ್ಕೆ ಕಾಲಿಡಬೇಡ.

ಎಲ್ಲ ಬಾಗಿಲುಗಳು
ಸಂಪೂರ್ಣವಾಗಿ ಮುಚ್ಚಿದ್ದರೂ,
ಭಗವಂತ
ಕೇವಲ ನಿನಗಾಗಿ ಎಂದೇ
ಹೊಸ ದಾರಿಯೊಂದನ್ನು ಹುಟ್ಟು ಹಾಕುತ್ತಾನೆ.

ಅವನ ಅಪಾರ ಕರುಣೆಯನ್ನು ಸ್ಮರಿಸು !

ಎಲ್ಲ ಮನಸ್ಸಿನಂತೆ ನಡೆಯುತ್ತಿರುವಾಗ
ಕೃತಜ್ಞತೆಗಳನ್ನು ಒಪ್ಪಿಸುವುದು ಸುಲಭ ಸಾಧ್ಯ.

ಆದರೆ ತನಗೆ
ಕೊಡಲಾಗಿರುವುದರ ಬಗ್ಗೆ ಮಾತ್ರ ಅಲ್ಲ
ನಿರಾಕರಿಸಿದ್ದರ ಬಗ್ಗೆ ಕೂಡ
ಸೂಫಿ ಕೃತಜ್ಞ.

~ ಶಮ್ಸ್ ತಬ್ರೀಝಿ


ಒಬ್ಬ ವಯಸ್ಸಾದ ಹೆಣ್ಣು ಮಗಳು ಪ್ರತಿದಿನ ಊರ ಹೊರಗಿನ ಮರದ ಕೆಳಗೆ ಕುಳಿತು ಕಣ್ಣೀರು ಹಾಕುತ್ತಿದ್ದಳು . ದಾರಿಯಲ್ಲಿ ಓಡಾಡುವ ಜನರಿಗೆ ಈ ಹೆಣ್ಣುಮಗಳ ವರ್ತನೆ ಕಂಡು ಆಶ್ಚರ್ಯವಾಗುತ್ತಿತ್ತು. ಯಾರಿಗೂ ಆ ಮಹಿಳೆ ಯಾಕೆ ಪ್ರತಿದಿನ ಹೀಗೆ ಅಳುತ್ತಾಳೆ ಎನ್ನುವುದು ಗೊತ್ತಿರಲಿಲ್ಲ.

ಒಂದು ದಿನ ಆ ದಾರಿಯಲ್ಲಿ ಹಾಯ್ದು ಹೋಗುತ್ತಿದ್ದ ಒಬ್ಬ ಸನ್ಯಾಸಿ, ಯಾಕೆ ಅಳುತ್ತಿದ್ದೀಯ ಏನು ಕಾರಣ ಎಂದು ಮರದ ಕೆಳಗೆ ಅಳುತ್ತ ಕುಳಿತಿದ್ದ ಮಹಿಳೆಯನ್ನು ಪ್ರಶ್ನೆ ಮಾಡಿದ. ಇಷ್ಟು ದಿನ ಯಾರ ಜೊತೆಯೂ ತನ್ನ ದುಃಖ ಹಂಚಿಕೊಳ್ಳದ ಮಹಿಳೆ, ಸನ್ಯಾಸಿಯ ಎದುರು ತನ್ನ ಸಂಕಟವನ್ನು ವಿವರಿಸಿ ಹೇಳಿದಳು,

“ನನಗೆ ಇಬ್ಬರು ಹೆಣ್ಣು ಮಕ್ಕಳು, ದೊಡ್ಡವಳು ಕೊಡೆ ಮಾರುತ್ತಾಳೆ ಮತ್ತು ಚಿಕ್ಕವಳು ತಂಪು ಶರಬತ್ ನ ವ್ಯಾಪಾರ ಮಾಡುತ್ತಾಳೆ. ಬೇಸಿಗೆ ಕಾಲದಲ್ಲಿ ನಾನು ಅಳುವುದಕ್ಕೆ ಕಾರಣ, ಆಗ ನನ್ನ ದೊಡ್ಡ ಮಗಳ ಬಳಿ ಯಾರೂ ಕೊಡೆ ಕೊಳ್ಳುವುದಿಲ್ಲ, ಅವಳು ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಾಳೆ ಎಂದು. ಮಳೆಗಾಲದಲ್ಲಿ ನಾನು ಅಳುವುದಕ್ಕೆ ಕಾರಣ, ಆಗ ನನ್ನ ಚಿಕ್ಕ ಮಗಳ ಅಂಗಡಿಯಲ್ಲಿ ಯಾರೂ ತಂಪು ಶರಬತ್ ಕುಡಿಯಲು ಬರುವುದಿಲ್ಲ, ಇಡೀ ಮಳೆಗಾಲ ಅವಳ ಹಣದ ತೊಂದರೆ ಅನುಭವಿಸುತ್ತಾಳೆ ಎಂದು”.

“ ನಿನಗೆ ಸಂತೋಷದ ಗುಟ್ಟು ಹೇಳಿಕೊಡುತ್ತೇನೆ” ಸನ್ಯಾಸಿ ಮಹಿಳೆಯನ್ನು ಕುರಿತು ಮಾತನಾಡಿದ. “ ಬೇಸಿಗೆ ಕಾಲದಲ್ಲಿ ನೀನು ನಿನ್ನ ಚಿಕ್ಕ ಮಗಳ ಬಗ್ಗೆ ಯೋಚಿಸು, ಅವಳ ಶರಬತ್ ಅಂಗಡಿಯಲ್ಲಿ ಹೆಚ್ಚು ವ್ಯಾಪಾರ ಆಗುತ್ತಿರುವುದರ ಕುರಿತು ಖುಶಿ ಪಡು, ಮತ್ತು ಮಳೆಗಾಲದಲ್ಲಿ ನಿನ್ನ ದೊಡ್ಡ ಮಗಳ ಕೊಡೆ ವ್ಯಾಪಾರ ಭರ್ಜರಿಯಾಗಿ ನಡೆಯುವುದನ್ನ ನೋಡಿ ಸಂತೋಷದಿಂದಿರು”.

ಸನ್ಯಾಸಿಯ ಮಾತು ಕೇಳುತ್ತಿದ್ದಂತೆಯೇ ಆ ಮಹಿಳೆಗೆ ಜ್ಞಾನೋದಯವಾಯಿತು. ಮುಂದೆ ಯಾವತ್ತೂ ಆ ಊರಿನ ಜನ ಆ ಮಹಿಳೆ ಅಳುವುದನ್ನ ನೋಡಲೇ ಇಲ್ಲ.

ಒಂದು ದಿನ ಡಾಕ್ಟರ್ ಬಳಿ ನಸ್ರುದ್ದೀನ್, ತನ್ನ ತೊಂದರೆ ಹೇಳಿಕೊಂಡ.

“ ಡಾಕ್ಟರ್ ಮೈಯಲ್ಲಿ ಎಲ್ಲಿ ಮುಟ್ಟಿದರೂ ನೋವು “

“ ಸರಿಯಾಗಿ, ವಿವರವಾಗಿ ಹೇಳು “
ಡಾಕ್ಟರ್ ನಸ್ರುದ್ದೀನ್ ಮೇಲೆ ರೇಗಿದರು.

ನಸ್ರುದ್ದೀನ್ ತನ್ನ ತೋರು ಬೆರಳನಿಂದ ಹಣೆ, ಮೂಗು, ಕತ್ತು, ಎದೆ, ಮೂಣಕಾಲು ಮುಟ್ಟಿ ತೋರಿಸಿದ,
“ ಎಲ್ಲಿ ಮುಟ್ಟಿದರೂ ನೋವಾಗುತ್ತದೆ ಡಾಕ್ಟರ್ “

ಡಾಕ್ಟರ್ ಗೆ ಸಂಶಯ ಬಂದು ನಸ್ರುದ್ದೀನ್ ನ ತೋರು ಬೆರಳಿನ ಎಕ್ಸರೇ ಮಾಡಿದರು, ಅವನ ತೋರು ಬೆರಳು ಫ್ರ್ಯಾಕ್ಚರ್ ಆಗಿತ್ತು.

Leave a Reply