ಸಂಬಂಧದಲ್ಲಿ ಪ್ರತಿಬಿಂಬ… : ಓಶೋ ವ್ಯಾಖ್ಯಾನ

ಯಾರು ಆಳವಾಗಿ ಪ್ರೇಮಿಸಿ ಪ್ರೇಮವನ್ನು ದಕ್ಕಿಸಿಕೊಂಡಿರುವರೋ ಅವರಿಗೆ ಆಳವಾದ ಧ್ಯಾನ ಕೂಡ ಸಾಧ್ಯವಾಗುತ್ತದೆ. ಯಾರು ಸಂಬಂಧಗಳಲ್ಲಿ ಇದ್ದು ಪ್ರೇಮವನ್ನು ಅನುಭವಿಸಿರುವರೋ ಅವರು ಈಗ ಏಕಾಂಗಿಯಾಗಿಯೂ ಇರಬಲ್ಲರು… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂಟಿತನ ಮತ್ತು ಏಕಾಂತ
ಎರಡೂ ಬೇರೆ ಬೇರೆ.

ಒಂಟಿತನ ಕಾಡುತ್ತಿರುವಾಗ,
ಸರಿಯಾದ ದಾರಿಯಲ್ಲಿದ್ದೇವೆಂದು
ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುವುದು
ಬಹಳ ಸುಲಭ. ಏಕಾಂತ ಒಳ್ಳೆಯದು.
ಇಲ್ಲಿಯೂ ಇರುವುದು ಕೇವಲ ನಾವು ಮಾತ್ರ,
ಆದರೆ ಒಂಟಿತನದ ಜಿಗುಪ್ಸೆ ಇಲ್ಲಿಲ್ಲ.

ಕನ್ನಡಿಯಂಥ ಸಂಗಾತಿಯನ್ನ ಹುಡುಕಿ.
ಆ ಇನ್ನೊಬ್ಬರ ಹೃದಯದಲ್ಲಿ ಮಾತ್ರ
ನೀವು ನಿಮ್ಮ ನಿಜವನ್ನು ಕಾಣುವಿರಿ
ಮತ್ತು
ನಿಮ್ಮೊಳಗಿನ ಭಗವಂತನನ್ನು ಕೂಡ

~ ಶಮ್ಸ್ ತಬ್ರೀಝಿ


ಪ್ರೇಮಿಸಿದವರು ಪ್ರೇಮಿಸಲ್ಪಟ್ಟವರು ಸಂಬಂಧಗಳ ರುಚಿಯನ್ನು ಅನುಭವಿಸಿದವರು ಮಾತ್ರ ಒಬ್ಬಂಟಿಯಾಗಿ ಇರಬಲ್ಲರು. ಅವರ ಒಬ್ಬಂಟಿತನಕ್ಕೆ ಒಂದು ವಿಶೇಷವಾದ ಕ್ವಾಲಿಟಿ ಇದೆ, ಅದು ಸಾಧಾರಣ ಒಂಟಿತನ ಅಲ್ಲ. ಪ್ರೇಮಿಗಳು ಸಂಬಂಧದ ಚೆಲುವನ್ನು ಕಂಡವರು, ಉಂಡವರು. ಪ್ರೇಮದ ಪಕ್ವತೆಯನ್ನು ಅನುಭವಿಸಿದವರು, ಇನ್ನೊಬ್ಬರನ್ನು ಅರಿತವರು, ಇನ್ನೊಬ್ಬರ ಮೂಲಕ ತಮ್ಮನ್ನು ತಾವು ಅರಿತವರು. ಈಗ ಅವರು ತಮ್ಮನ್ನು ತಾವು ನೇರವಾಗಿ ಅರಿತುಕೊಳ್ಳಬಹುದು, ಅವರಿಗೆ ಬೇರೆ ಕನ್ನಡಿಯ ಅವಶ್ಯಕತೆಯಿಲ್ಲ.

ಕನ್ನಡಿಯನ್ನು ಒಮ್ಮೆಯೂ ನೋಡಿಯೇ ಇರದವರ ಬಗ್ಗೆ ಒಮ್ಮೆ ಯೋಚಿಸಿ. ಅವರು ಕಣ್ಣು ಮುಚ್ಚಿಕೊಂಡು ತಮ್ಮ ಚಹರೆಯನ್ನು ನೋಡಬಹುದೇ? ಅಸಾಧ್ಯ. ಅವರಿಗೆ ತಮ್ಮ ಮುಖವನ್ನು ಕಲ್ಪಿಸಿಕೊಳ್ಳುವುದು ಅದನ್ನ ಧ್ಯಾನಿಸುವುದು ಸಾಧ್ಯವೇ ಇಲ್ಲ. ಆದರೆ ಕನ್ನಡಿಯನ್ನ ಒಮ್ಮೆಯಾದರೂ ನೋಡಿದವರು ಅದರ ಮೂಲಕ ತಮ್ಮ ಮುಖವನ್ನು ಕಂಡವರು ಮಾತ್ರ, ಕಣ್ಣು ಮುಚ್ಚಿ ತಮ್ಮ ಚೆಹರೆಯನ್ನು ಕಾಣಬಲ್ಲರು, ಕಲ್ಪಿಸಿಕೊಳ್ಳಬಲ್ಲರು. ಸಂಬಂಧಗಳಲ್ಲಿ ಇದ್ದವರ ಜೊತೆಯೂ ಹೀಗೇ ಆಗುತ್ತದೆ. ಒಬ್ಬ ವ್ಯಕ್ತಿ ಸಂಬಂಧವನ್ನು ಪ್ರವೇಶಿಸಿದಾಗ ಸಂಬಂಧ ಕನ್ನಡಿಯ ಥರ ಕೆಲಸ ಮಾಡುತ್ತದೆ, ಅವರಿಗೆ ಅವರನ್ನು ತೋರಿಸುತ್ತದೆ, ಅವರ ಚೆಹರೆಯ ಪರಿಚಯ ಮಾಡಿಸುತ್ತದೆ. ಆಗ ಅವರಿಗೆ ತಮ್ಮೊಳಗೆ ಇದ್ದ ಆದರೆ ಗೊತ್ತೇ ಇರದಿದ್ದ ಎಷ್ಟೋ ಸಂಗತಿಗಳ ಬಗ್ಗೆ ಗೊತ್ತಾಗುತ್ತದೆ.

ಸಂಬಂಧದಲ್ಲಿರುವಾಗ ಪ್ರೇಮಿಗೆ ಇನ್ನೊಬ್ಬರ ಮೂಲಕ ತನ್ನ ಕಾಮ, ಪ್ರೇಮ, ಸಿಟ್ಟು, ಸೊಕ್ಕು, ಹೊಟ್ಟೆಕಿಚ್ಚು, ಉತ್ಕಟತೆ, ಕಾರುಣ್ಯ, ಅಂತಃಕರಣ, ಹೀಗೆ ತನ್ನ ಇನ್ನೂ ಸಾವಿರಾರು ಭಾವಗಳ ಪರಿಚಯವಾಗುತ್ತದೆ. ಪ್ರಕೃತಿಯ ಎಷ್ಟೋ ವಾತಾವರಣಗಳನ್ನ ಅವರು ಇನ್ನೊಬ್ಬರ ಮೂಲಕ ಅನುಭವಿಸುತ್ತಾರೆ. ಈಗ ಅವರು ಏಕಾಂಗಿಯಾಗಿರಲು ಸಿಧ್ದರಾಗಿದ್ದಾರೆ, ಈಗ ಅವರು ಕಣ್ಣು ಮುಚ್ಚಿಕೊಂಡು ತಮ್ಮ ಪ್ರಜ್ಞೆಯನ್ನ ನೇರವಾಗಿ ಅರಿಯಬಲ್ಲರು. ಆದ್ದರಿಂದಲೇ ನಾನು ಮೇಲಿಂದ ಮೇಲೆ ಹೇಳುತ್ತಿರುತ್ತೇನೆ, ಯಾರು ಪ್ರೇಮಕ್ಕೆ ಅಪರಿಚಿತರೋ ಅವರಿಗೆ ಧ್ಯಾನ ತುಂಬಾ ತಂಬಾ ಕಠಿಣ.

ಯಾರು ಆಳವಾಗಿ ಪ್ರೇಮಿಸಿ ಪ್ರೇಮವನ್ನು ದಕ್ಕಿಸಿಕೊಂಡಿರುವರೋ ಅವರಿಗೆ ಆಳವಾದ ಧ್ಯಾನ ಕೂಡ ಸಾಧ್ಯವಾಗುತ್ತದೆ. ಯಾರು ಸಂಬಂಧಗಳಲ್ಲಿ ಇದ್ದು ಪ್ರೇಮವನ್ನು ಅನುಭವಿಸಿರುವರೋ ಅವರು ಈಗ ಏಕಾಂಗಿಯಾಗಿಯೂ ಇರಬಲ್ಲರು. ಪ್ರೇಮ ಅವರನ್ನ ಪ್ರಬುದ್ಧರನ್ನಾಗಿಸಿದೆ, ಈಗ ಅವರಿಗೆ ಇನ್ನೊಬ್ಬರ ಅವಶ್ಯಕತೆಯಿಲ್ಲ. ಇನ್ನೊಬ್ಬರು ಇದ್ದರೆ ಅವರು ಪ್ರೇಮವನ್ನು ಹಂಚಿಕೊಳ್ಳಬಲ್ಲರು ಆದರೆ ಈಗ ಅವರಿಗೆ ಆ ಇನ್ನೊಬ್ಬರ ಅವಶ್ಯಕತೆ ಅವಲಂಬನೆ ಅಗತ್ಯವಲ್ಲ.

ಒಂದು ದಿನ ಮಾಸ್ಟರ್ ಸುಝುಕಿ ರೋಶಿ ಅವರ ಶಿಷ್ಯೆ, ಅವರ ಹತ್ತಿರ ಬಂದು ತನ್ನ ಮನಸ್ಸಿನ ತಳಮಳವನ್ನು ನಿವೇದಿಸಿಕೊಂಡಳು. “ ಮಾಸ್ಟರ್, ಯಾಕೋ ಗೊತ್ತಿಲ್ಲ ನಿಮ್ಮ ಮೇಲೆ ನನಗೆ ವಿಪರೀತ ಪ್ರೇಮ ಉಕ್ಕಿ ಬರುತ್ತಿದೆ. ಕೂತಲ್ಲಿ, ನಿಂತಲ್ಲಿ ಸದಾ ನಿಮ್ಮ ಯೋಚನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ, ತುಂಬ ಗೊಂದಲವಾಗುತ್ತಿದೆ. “

ಮಾಸ್ಟರ್ ರೋಶಿ ಉತ್ತರಿಸಿದರು,
“ ಹುಡುಗಿ, ಇದು ತಪ್ಪು ಒಪ್ಪಿನ ಪ್ರಶ್ನೆ ಅಲ್ಲ. ನನ್ನ ಬಗ್ಗೆ ಯಾವ ಭಾವನೆ ಹೊಂದಲೂ ನೀನು ಸ್ವತಂತ್ರಳು. ಭಾವನೆಗಳನ್ನು ಹತ್ತಿಕ್ಕಬೇಡ, ಮುಕ್ತವಾಗಿ ವ್ಯಕ್ತಪಡಿಸು “

ಹುಡುಗಿ ಆಶ್ಚರ್ಯಚಕಿತಳಾಗಿ ಮಾಸ್ಟರ್ ರೋಶಿಯನ್ನೇ ನೋಡತೊಡಗಿದಳು. ಮಾಸ್ಟರ್ ರೋಶಿ ಅವಳ ತಲೆ ಮೇಲೆ ಕೈಯಿಟ್ಟು ಹೇಳಿದರು. “ ಹೆದರಬೇಡ ಹುಡುಗಿ, ನನ್ನ ಹತ್ತಿರ ಇಬ್ಬರಿಗೂ ಸಾಕಾಗುವಷ್ಟು ಶಿಸ್ತು ಇದೆ. “

Leave a Reply