ಝೆನ್ ಎನ್ನುವುದು ಧರ್ಮದ ನಿಜವಾದ ತಿರುಳು: ಓಶೋ ವ್ಯಾಖ್ಯಾನ

ಬಂಡೆ ಮನಸ್ಸಿನ ಒಳಗಿದೆಯೋ ಹೊರಗಿದೆಯೋ… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಝೆನ್
ಉತ್ತರಗಳನ್ನು ಹುಡುಕುವುದಿಲ್ಲ
ಪ್ರಶ್ನೆಗಳನ್ನು ಕಳೆದುಕೊಳ್ಳುತ್ತದೆ

~ zen proverb

ಝೆನ್ ಮಾಸ್ಟರ್ ಹೊಟೈ ಬಗ್ಗೆ ಒಂದು ಕಥೆ ಇದೆ…

ಒಂದು ದಿನ ಝೆನ್ ಮಾಸ್ಟರ್ ಹೊಟೈ ಒಂದು ಹಳ್ಳಿಯ ಮೂಲಕ ಹಾಯ್ದು ಹೋಗುತ್ತಿದ್ದ. ಅವನು ತನ್ನ ಹೆಗಲ ಮೇಲೆ ಯಾವತ್ತೂ ಮಕ್ಕಳಿಗಾಗಿ ಆಟದ ಸಾಮಾನು, ಸಿಹಿ ತಿಂಡಿಗಳ ದೊಡ್ಡ ಮೂಟೆ ಹೊತ್ತು ತಿರುಗುತ್ತಿದ್ದ.

ಒಮ್ಮೆ ಹೀಗೆ ಮೂಟೆ ಹೊತ್ತು ಹೋಗುವಾಗ ಯಾರೋ ಒಬ್ಬರು ಮಾಸ್ಟರ್ ನ ಪ್ರಶ್ನೆ ಮಾಡಿದರು, “ಮಾಸ್ಟರ್ ಹೊಟೈ ನೀನು ಹೀಗೆ ಮೂಟೆ ಹೊತ್ತು ತಿರುಗಾಡುವುದು ಬರೀ ಆ್ಯಕ್ಟಿಂಗ್ ಎಂದು ಕೇಳಿದ್ದೀನಿ, ಬಹುಶಃ ನೀನು ಯಾವುದೋ ಒಂದು ಪಾತ್ರ ಮಾಡುತ್ತಿದ್ದೀಯ. ನೀನು ಬಹಳ ದೊಡ್ಡ ಝೆನ್ ಮಾಸ್ಟರ್ ಅಂತ ಹೇಳುತ್ತಾರೆ, ಯಾಕೆ ನೀನು ಮಕ್ಕಳಿಗೆ ಆಟಿಗೆ ಸಾಮಾನು ಹಂಚುತ್ತ ತಿರುಗಾಡುತ್ತೀಯ? ನೀನು ನಿಜವಾಗಿಯೂ ಝೆನ್ ಮಾಸ್ಟರ್ ಆಗಿದ್ದರೆ, ಝೆನ್ ಎಂದರೆ ಏನು ಎನ್ನುವುದನ್ನ ತೋರಿಸು”

ಝೆನ್ ಎನ್ನುವುದು ಧರ್ಮದ ನಿಜವಾದ ತಿರುಳು.

ಕೂಡಲೇ ಮಾಸ್ಟರ್ ಹೊಟೈ ತನ್ನ ಬೆನ್ನ ಮೇಲಿದ್ದ ಮೂಟೆಯನ್ನ ಕೆಳಗಿಳಿಸಿದ. ಮಾಸ್ಟರ್ ಏನು ಮಾಡಿ ತೋರಿಸುತ್ತಿದ್ದಾನೆ ಎನ್ನುವುದು ಯಾರಿಗೂ ಅರ್ಥ ಆಗಲಿಲ್ಲ, ಅವರು ಮತ್ತೆ ಪ್ರಶ್ನೆ ಮಾಡಿದರು. “ ಏನಿದು ಹೀಗೆ ಮಾಡಿದರೆ?”

ಮಾಸ್ಟರ್ ಹೊಟೈ ಉತ್ತರಿಸಿದ, “ಝೆನ್ ಎಂದರೆ ಇಷ್ಟೇ. ಭಾರವನ್ನು ಕೆಳಗಿಳಿಸುವುದು”.

ಜನ ಮತ್ತೆ ಪ್ರಶ್ನೆ ಮಾಡಿದರು, “ಸರಿ, ಹಾಗಾದರೆ ಮುಂದಿನ ಹೆಜ್ಜೆ ಏನು?”

ಮಾಸ್ಟರ್ ಹೊಟೈ ಮತ್ತೆ ಮೂಟೆಯನ್ನ ಹೊತ್ತು ನಡೆಯತೊಡಗಿದ.

“ಇದು ಮುಂದಿನ ಹೆಜ್ಜೆ. ಈಗ ನಾನು ಏನನ್ನೂ ಹೊತ್ತುಕೊಂಡಿಲ್ಲ. ಮೊದಲು ನನ್ನ ಬೆನ್ನ ಮೇಲಿದ್ದ ಮೂಟೆಯ ಭಾರ ಈಗ ಮಕ್ಕಳ ಸಂತೋಷವಾಗಿ ಬದಲಾಗಿಬಿಟ್ಟಿದೆ”.

ಒಮ್ಮೆ ಒಬ್ಬ ಝೆನ್ ಮಾಸ್ಟರ್ ಮತ್ತು ಅವನ ಶಿಷ್ಯ ಒಂದು ಪರ್ವತ ಶ್ರೇಣಿಯ ಮೂಲಕ ಹಾಯ್ದು ಮುಂದಿನ ಊರಿಗೆ ಹೋಗುತ್ತಿದ್ದರು.

ದಾರಿಯುದ್ದಕ್ಕೂ ಮಾಸ್ಟರ್ ಮೌನವಾಗಿದ್ದ ಆದರೆ ಅವನ ಶಿಷ್ಯ ಮಾತ್ರ ಝೆನ್ ಬಗ್ಗೆ ಮತ್ತು ಮನಸ್ಸಿನ ಬಗ್ಗೆ ಸತತವಾಗಿ ಮಾತಾನಾಡುತ್ತಲೇ ಇದ್ದ. ಸ್ವಲ್ಪ ದೂರ ಕ್ರಮಿಸಿದ ನಂತರ ಅವರಿಬ್ಬರಿಗೂ ಒಂದು ಭಾರಿ ಬಂಡೆ ಎದುರಾಯಿತು.

ಮಾಸ್ಟರ್ ತನ್ನ ಶಿಷ್ಯನ ತಲೆ ಮೇಲೆ ಕೈಯ್ಯಾಡಿಸುತ್ತ ಕೇಳಿದ, “ ನೋಡು ಆ ಭಾರಿ ಬಂಡೆ ಇದೆಯಲ್ಲಾ, ಅದು ನಿನ್ನ ಮನಸ್ಸಿನ ಒಳಗಿದೆಯೋ ಹೊರಗಿದೆಯೋ?

ಶಿಷ್ಯ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ, “ ಝೆನ್ ನಲ್ಲಿ ಎಲ್ಲವೂ ಮನಸ್ಸಿನ ಆಟ, ಮನಸ್ಸು ನಮ್ಮ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಖಂಡಿತವಾಗಿ ಬಂಡೆ ನನ್ನ ಮನಸ್ಸಿನ ಒಳಗಿದೆ.”

“ಹಾಗಾದರೆ ಭಾರಿ ಬಂಡೆಯನ್ನು ಹೊತ್ತ ನಿನ್ನ ತಲೆ ತುಂಬ ಭಾರವಾಗಿರಬೇಕಲ್ಲ ? “ ಮಾಸ್ಟರ್ ನಗುತ್ತ ಉತ್ತರಿಸಿದ.

ಮುಂದಿನ ಹಾದಿಯನ್ನು ಇಬ್ಬರೂ ಮಾತಿಲ್ಲದೇ ಸಮಾಧಾನದಿಂದ ಕ್ರಮಿಸಿದರು.

Leave a Reply