ಯಾವ ಸ್ವಾಧೀನಪಡಿಸಿಕೊಳ್ಳುವಿಕೆಯ ಬಯಕೆ ಇಲ್ಲದೇ ಸುಮ್ಮನೇ ಖುಶಿ ಅನುಭವಿಸುವ ಇನ್ನೊಂದು ಉದಾಹರಣೆ ಪುಟ್ಟ ಮಕ್ಕಳ ಬಾಲ ಲೀಲೆಗೆ ನಾವು ಪ್ರತಿಕ್ರಯಿಸುವ ರೀತಿಯಲ್ಲಿದೆ. ಇಲ್ಲಿಯೂ ನಾವು ಮಕ್ಕಳನ್ನು ಪ್ರೀತಿಸುತ್ತೇವೆ ಎಂದು ತೋರಿಸಿಕೊಳ್ಳುವ ಸ್ವ- ಮೋಸದ ಸ್ವಭಾವದ ಬಗ್ಗೆ ನನಗೆ ಸಂಶಯ ಇದೆಯಾದರೂ ಮಕ್ಕಳನ್ನು ಕುರಿತಾದ ಜೀವಂತಿಕೆಯ ಪ್ರತಿಕ್ರಿಯೆ ಅಪರೂಪವೇನಲ್ಲ… | ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/08/13/fromm-45/
ಒಂದು ಸಂಗತಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸದೆಯೇ ಅದನ್ನು ಪ್ರೀತಿಸುವುದು, ಮೆಚ್ಚುವುದು, ಮತ್ತು ಸಂಭ್ರಮಿಸುವುದರ ಕುರಿತಾದ ಜಪಾನಿ ಮತ್ತು ಪಾಶ್ಚಿಮಾತ್ಯ ಪದ್ಯಗಳಲ್ಲಿನ ವೈರುಧ್ಯವನ್ನು ಸುಝುಕಿ ಅವರು ವಿವರಿಸಿರುವುದನ್ನ ಮೊದಲನೇಯ ಅಧ್ಯಾಯದಲ್ಲಿ ಗಮನಿಸಿದ್ದೇವೆ. ಹೌದು, ಪಶ್ಚಿಮದ ಮನುಷ್ಯರಿಗೆ having ನ ಪ್ರತ್ಯೇಕಗೊಳಿಸಿ ( ಆ ಸಂಗತಿಯನ್ನ ಹೊಂದುವ ಆಸೆ ಬಿಟ್ಟು) ಒಂದು ಸಂಗತಿಯನ್ನು ಖುಶಿಯಿಂದ ಅನುಭವಿಸುವುದು ಖಂಡಿತವಾಗಿ ಸಾಧ್ಯವಿಲ್ಲ. ಆದರೆ ಇದು ನಮಗೆ ಸಂಪೂರ್ಣವಾಗಿ ಅಪರಿಚಿತವೇನಲ್ಲ. ಆ ಅಲೆಮಾರಿ ವ್ಯಕ್ತಿ ಹೂವನ್ನು ಬಿಟ್ಟು ಪರ್ವತಶ್ರೇಣಿಯನ್ನು ನೋಡುತ್ತಿದ್ದರೆ, ಹುಲ್ಲುಗಾವಲನ್ನು ನೋಡುತ್ತಿದ್ದರೆ, ನದಿಯನ್ನು ನೋಡುತ್ತಿದ್ದರೆ ಅಥವಾ ಯಾವುದನ್ನ ಹೊಂದುವುದು ಸಾಧ್ಯವಿಲ್ಲವೋ ಅಂತಹದನ್ನ ನೋಡುತ್ತಿದ್ದರೆ ಅಂಥ ಸಂದರ್ಭಗಳಲ್ಲಿ ಸುಝುಕಿಯವರ ವ್ಯಾಖ್ಯಾನ ಅನ್ವಯವಾಗುವುದಿಲ್ಲ. ವಾಸ್ತವವೇನೆಂದರೆ ಬಹಳಷ್ಟು ಜನ ಅಥವಾ ಬಹುತೇಕರು ನಿಜವಾಗಿ ಪರ್ವತವನ್ನು ನೋಡುವುದಿಲ್ಲ, ಅನುಭವಿಸುವುದಿಲ್ಲ ಬದಲಾಗಿ ಅವರು, ಆ ಪರ್ವತದ ಹೆಸರನ್ನ, ಎತ್ತರವನ್ನ ತಿಳಿದುಕೊಳ್ಳಲು ಬಯಸುತ್ತಾರೆ, ಅದರ ಮೇಲೆ ಹತ್ತಲು ಬಯಸುತ್ತಾರೆ. ಇದು ಇನ್ನೊಂದು ರೀತಿಯ ಸ್ವಾಧೀನಪಡಿಸಿಕೊಳ್ಳುವಿಕೆಯೇ. ಆದರೆ ಕೆಲವರು ಮಾತ್ರ ಪ್ರಾಮಾಣಿಕವಾಗಿ ಪರ್ವತದ ಚೆಲುವನ್ನು ಅನುಭವಿಸುತ್ತಾರೆ. ಈ ಮಾತನ್ನೇ ನಾವು ಸಂಗೀತದ ಕುರಿತಾಗಿಯೂ ಹೇಳಬಹುದು. ಬಹಳಷ್ಟು ಜನ ಸಂಗೀತವನ್ನು ಖುಶಿಯಿಂದ ಅನುಭವಿಸುವುದರ ಬದಲಾಗಿ ಮ್ಯೂಸಿಕ್ ರಿಕಾರ್ಡಿಂಗ್ ಗಳನ್ನ ಹೊಂದುವುದನ್ನ ಹೆಚ್ಚು ಇಷ್ಟಪಡುತ್ತಾರೆ. ನಿಜವಾಗಿ ಕಲೆಯನ್ನು ಇಷ್ಟಪಡುವ ಬಹಳಷ್ಟು ಜನ ಅದನ್ನ “consume” ಮಾಡುವವರೇ. ಆದರೆ ಕೆಲವು ಜನರಾದರೂ ಸಂಗೀತ ಮತ್ತು ಕಲೆಯನ್ನು ನಿಜದಲ್ಲಿ ಅನುಭವಿಸುತ್ತಾರೆ ಅದನ್ನು ಭೌತಿಕವಾಗಿ ಅಥವಾ ಮಾನಸಿಕವಾಗಿ ಹೊಂದಲು ಬಯಸದೆಯೇ.
ಕೆಲವೊಮ್ಮೆ ಜನರ ಪ್ರತಿಕ್ರಿಯೆಗಳನ್ನ ನಾವು ಅವರ ಮುಖಭಾವದ ಮೇಲೆ ಗುರುತಿಸಬಹುದು. ಇತ್ತೀಚಿಗೆ ನಾನು ಅಸಾಮಾನ್ಯ ಕಸರತ್ತುಗಳ ಚೀನೀ ಸರ್ಕಸ್ ಒಂದರ ಟೆಲಿಫಿಲ್ಮ್ ನೋಡುತ್ತಿದ್ದೆ. ಸರ್ಕಸ್ ನಡೆಯುತ್ತಿದ್ದ ಸಮಯದಲ್ಲಿ ಜನರ ಪ್ರತಿಕ್ರಿಯೆಯನ್ನ ಹಿಡಿದಿಡಲು ಒಂದು ಟಿವಿ ಕ್ಯಾಮರಾ ನ್ನ ಪ್ರೇಕ್ಷಕರ ಮೇಲೆ ಪ್ಯಾನ್ ಮಾಡಲಾಗುತ್ತಿತ್ತು. ನಾನು ಗಮನಿಸಿದ ಹಾಗೆ ಸರ್ಕಸ್ ನ ಅದ್ಭುತ, ಜೀವಂತ ಪ್ರದರ್ಶನ ನೋಡುತ್ತಿದ್ದ ಬಹುತೇಕ ಪ್ರೇಕ್ಷಕರ ಮುಖಗಳು ಖುಶಿ ಮತ್ತು ಆಶ್ಚರ್ಯಗಳಿಂದ ಬೆಳಗುತ್ತಿದ್ದವಾದರೆ ಕೇವಲ ಕೆಲವರ ಮುಖಭಾವಗಳು ಮಾತ್ರ ಯಾವ ಪ್ರತಿಕ್ರಿಯೆಯಿಲ್ಲದ ಕಲ್ಲಿನಂತಿದ್ದವು.
ಯಾವ ಸ್ವಾಧೀನಪಡಿಸಿಕೊಳ್ಳುವಿಕೆಯ ಬಯಕೆ ಇಲ್ಲದೇ ಸುಮ್ಮನೇ ಖುಶಿ ಅನುಭವಿಸುವ ಇನ್ನೊಂದು ಉದಾಹರಣೆ ಪುಟ್ಟ ಮಕ್ಕಳ ಬಾಲ ಲೀಲೆಗೆ ನಾವು ಪ್ರತಿಕ್ರಯಿಸುವ ರೀತಿಯಲ್ಲಿದೆ. ಇಲ್ಲಿಯೂ ನಾವು ಮಕ್ಕಳನ್ನು ಪ್ರೀತಿಸುತ್ತೇವೆ ಎಂದು ತೋರಿಸಿಕೊಳ್ಳುವ ಸ್ವ- ಮೋಸದ ಸ್ವಭಾವದ ಬಗ್ಗೆ ನನಗೆ ಸಂಶಯ ಇದೆಯಾದರೂ ಮಕ್ಕಳನ್ನು ಕುರಿತಾದ ಜೀವಂತಿಕೆಯ ಪ್ರತಿಕ್ರಿಯೆ ಅಪರೂಪವೇನಲ್ಲ. ಭಾಗಶಃ ಇದಕ್ಕೆ ಕಾರಣ ಹರೆಯದವರ ಮತ್ತು ವಯಸ್ಕರರ ಕುರಿತಾದ ಜನಗಳ ಭಾವನೆಗಳ ವೈರುಧ್ಯದಲ್ಲಿ, ಮಕ್ಕಳ ಕುರಿತಾದ ಅವರ ಭಾವನೆಗಳು ಪ್ರೀತಿಯಿಂದ ತುಂಬಿರುವುದಕ್ಕೆ ಕಾರಣ ಅವರಿಗೆ ಮಕ್ಕಳ ಕುರಿತಾಗಿ ಯಾವ ಭಯ ಇಲ್ಲದಿರುವುದು. ಅಕಸ್ಮಾತ್ ನಡುವೆ ಭಯ ಇದ್ದಾಗ ಈ ಬಗೆಯ ಜೀವಂತಿಕೆಯಿಂದ ಪ್ರತಿಕ್ರಯೆ ಸಾಧ್ಯವಾಗುತ್ತಿರಲಿಲ್ಲ.
ಹೊಂದುವ ಬಯಕೆಯಿಲ್ಲದೇ ಪ್ರೀತಿಸುವ, ಖುಶಿ ಪಡುವ ಅತ್ಯಂತ ಸಮಂಜಸ ಉದಾಹರಣೆಯನ್ನ ನಾವು ವ್ಯಕ್ತಿಗಳ ನಡುವಿನ ವೈಯಕ್ತಿಕ ಸಂಬಂಧಗಳಲ್ಲಿ ಕಾಣಬಹುದು. ಗಂಡು ಮತ್ತು ಹೆಣ್ಣು ಪರಸ್ಪರರಲ್ಲಿ ಹಲವಾರು ಕಾರಣಗಳಿಂದ ಸುಖ ಕಾಣುತ್ತಾರೆ; ಅವರಿಗೆ ಪರಸ್ಪರರ ಧೋರಣೆ, ಪ್ರವೃತ್ತಿ ಇಷ್ಟವಾಗಬಹುದು, ಇಬ್ಬರ ಟೇಸ್ಟ್ , ಐಡಿಯಾಗಳು,ಮನೋಧರ್ಮ ಒಂದೇ ಆಗಿರಬಹುದು, ಅಥವಾ ಇಬ್ಬರಿಗೂ ಪರಸ್ಪರರ ಪೂರ್ಣ ವ್ಯಕ್ತಿತ್ವ ಇಷ್ಟ ಆಗಿರಬಹುದು. ಆದರೂ ಕೇವಲ ಅಂಥವರಲ್ಲಿ, ಯಾರು ತಾವು ಇಷ್ಟಪಟ್ಟದ್ದನ್ನು ಹೊಂದಿದಾಗ ಮಾತ್ರ ಸುಖ ಅನುಭವಿಸುವರೋ ಬಹುತೇಕ ಅಂಥವರ ಬಯಕೆ ಲೈಂಗಿಕ ಸ್ವಾಧೀನತೆಯನ್ನು ಕಂಡುಕೊಳ್ಳುವುದರಲ್ಲಿ ಕೊನೆಗೊಳ್ಳುತ್ತದೆ. ಯಾರಲ್ಲಿ being ವಿಧಾನ ಪ್ರಬಲವಾಗಿದೆಯೋ ಅವರು ಕೂಡ ಇನ್ನೊಬ್ಬರಲ್ಲಿ ಸುಖ ಕಂಡುಕೊಳ್ಳುತ್ತಾರೆ ಮತ್ತು ಪರಸ್ಪರ ಲೈಂಗಿಕವಾಗಿ ಕೂಡ ಆಕರ್ಷಿತರಾಗುತ್ತಾರೆ, ಆದರೆ ಅವನು ಅಥವಾ ಅವಳು ಸುಖ ಅನುಭವಿಸಲು ಇನ್ನೊಬ್ಬರನ್ನು “ಕಿತ್ತುಕೊಳ್ಳಬೇಕಾಗಿಲ್ಲ” (ಟೆನಿಸನ್ ನ ಪದ್ಯದ ಭಾಷೆಯಲ್ಲಿ ಹೇಳುವುದಾದರೆ).
Having ಕೇಂದ್ರಿತ ವ್ಯಕ್ತಿಗಳು ತಾವು ಮೆಚ್ಚುವ ಅಥವಾ ಇಷ್ಟಪಡುವ ವ್ಯಕ್ತಿಗಳನ್ನು ತಮ್ಮ ಸ್ವಾಧೀನದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಈ ರೀತಿಯ having ಪ್ರಕ್ರಿಯೆಯನ್ನ ನಾವು ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧದಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧದಲ್ಲಿ ಹಾಗು ಗೆಳೆಯರ ನಡುವಿನ ಸಂಬಂಧದಲ್ಲಿ ಗಮನಿಸಬಹುದು. ಇಂಥ ಸಂಬಂಧಗಳಲ್ಲಿ ಇಬ್ಬರೂ ಪಾರ್ಟನರ್ ಗಳು ಇನ್ನೊಬ್ಬರನ್ನು ಸುಮ್ಮನೇ ಸಂಭ್ರಮಿಸುವುದು ಸಾಧ್ಯವಿಲ್ಲ, ಪ್ರತಿಯೊಬ್ಬ ಪಾರ್ಟನರ್ ಇನ್ನೊಬ್ಬರನ್ನು ತಮ್ಮ ಸ್ವಾಧೀನದಲ್ಲಿ ಬಯಸುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಬಯಸುತ್ತಿರುವ ಇನ್ನೊಬ್ಬರ ಬಗ್ಗೆ ಅಸೂಯೆಯನ್ನು ಬೆಳೆಸಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ಇನ್ನೊಬ್ಬ ಪಾರ್ಟನರ್ ನನ್ನು ಹುಟ್ಟು (plank) ಹುಡುಕುತ್ತಿರುವ ಧ್ವಂಸಗೊಂಡ ದೋಣಿಯ ನಾವಿಕನಂತೆ ಕಾಣುತ್ತಾರೆ. ಪ್ರಧಾನವಾಗಿ having ಸಂಬಂಧಗಳು ಭಾರವಾಗಿರುವಂಥವು ಮತ್ತು ಸಂಘರ್ಷ ಹಾಗು ಅಸೂಯೆಗಳಿಂದ ಕೂಡಿರುವಂಥವು.
ಜನರಲೀ ಹೇಳುವುದಾದರೆ, ಅಸ್ತಿತ್ವದ having ವಿಧಾನದ ರೀತಿಯ ಸಂಬಂಧಗಳ ಮೂಲಭೂತ ಅಂಶಗಳೆಂದರೆ, ಸ್ಪರ್ಧೆ, ವಿರೋಧಾಭಾಸ, ಹಗೆತನ (antagonism), ಮತ್ತು ಭಯ. Having ಸಂಬಂಧದಲ್ಲಿನ ವೈರತ್ವದ ಅಂಶ ಹುಟ್ಟಿಕೊಂಡಿರುವುದು ಈ ವಿಧಾನದ ಸ್ವಭಾವ ಕಾರಣವಾಗಿ. ನನ್ನ ಐಡೆಂಟಿಟಿಯ ಆಧಾರ having ಆಗಿದ್ದಾಗ, “I am what I have” ಮತ್ತು ನನ್ನ ಹೊಂದುವ ಬಯಕೆ, ಇನ್ನಷ್ಟು, ಮತ್ತಷ್ಟು ಹೊಂದುವ ನನ್ನ ಬಯಕೆಯನ್ನು ಪೋಷಿಸುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಅತಿಆಸೆ (greed) ಎನ್ನುವುದು having ದೃಷ್ಟಿಕೋನದ ಸ್ವಾಭಾವಿಕ ಫಲಿತಾಂಶ. ಈ ಅತಿಆಸೆ, ಜಿಪುಣನ ದುರಾಸೆಯಾಗಿರಬಹುದು, ಲಾಭ ಬಡುಕನ ದುರಾಸೆಯಾಗಿರಬಹುದು, ಅಥವಾ ಹೆಣ್ಣುಬಾಕನ ದುರಾಸೆಯಾಗಿರಬಹುದು.
ಅವರ ಅತಿಆಸೆ ಏನೆಲ್ಲದ್ದರಿಂದ ತುಂಬಿಕೊಂಡಿದ್ದರೂ ಅವರಿಗೆ ಯಾವುದೂ ಸಾಕಾಗುವುದಿಲ್ಲ, ಅವರಿಗೆ ತೃಪ್ತಿ ಎನ್ನುವುದು ಸಾಧ್ಯವೇ ಇಲ್ಲ. ದೈಹಿಕ ಅವಶ್ಯಕತೆಗಳಿಗೆ (ಉದಾಹರಣೆಗೆ ಹಸಿವು) ಕೆಲವು ನಿರ್ದಿಷ್ಟ ಸಂತೃಪ್ತಿಯ ತಾಣಗಳಿರುತ್ತವೆ ಆದರೆ, ಮೆಂಟಲ್ ಗ್ರೀಡ್ ಗೆ (ಮಾನಸಿಕ ಅತಿಯಾಸೆ) – ಎಲ್ಲ ಗ್ರೀಡ್ ಗಳೂ ಮೆಂಟಲ್ ಗ್ರೀಡ್ ಗಳೇ, ಅದು ದೈಹಿಕವಾಗಿ ತೃಪ್ತಿಹೊಂದಿದರೂ ಅದಕ್ಕೊಂದು ಸಂತೃಪ್ತಿಯ ತಾಣವಿಲ್ಲ, ಏಕೆಂದರೆ ಅದರ ಪೂರೈಕೆ ಒಳಗಿನ ಖಾಲೀತನವನ್ನ, ಬೋರ್ ಡಂ ನ, ಒಂಟಿತನವನ್ನ ಮತ್ತು ಖಿನ್ನತೆಯನ್ನ ಯಾವುದನ್ನ ಅದು ಮೀರಬೇಕಿತ್ತೋ ಅದನ್ನು ಪೂರ್ತಿಯಾಗಿ ತುಂಬಿಕೊಳ್ಳುವುದೇ ಇಲ್ಲ. ಹೆಚ್ಚುವರಿಯಾಗಿ, ಒಬ್ಬರು ಹೊಂದಿರುವುದನ್ನ ಇನ್ನೊಬ್ಬರು ಒಂದಿಲ್ಲ ಒಂದು ರೂಪದಲ್ಲಿ ಕಸಿದುಕೊಳ್ಳಬಹುದಾದ್ದರಿಂದ, ವ್ಯಕ್ತಿ ತನ್ನನ್ನು ಈ ಅಪಾಯದಿಂದ ರಕ್ಷಿಸಿಕೊಳ್ಳಲು ಹೆಚ್ಚು ಹೆಚ್ಚು ಹೊಂದಬೇಕಾಗಿದೆ, ಪ್ರತಿಯೊಬ್ಬರೂ ತಮ್ಮ ಬಳಿ ಇರುವುದರ ಮೇಲೆ ಸ್ವಾಧೀನತೆ ಹೊಂದಲು ಬಯಸುವ ಇನ್ನೊಬ್ಬರ ಆಕ್ರಮಣಕಾರಿ ಉದ್ದೇಶಗಳಿಗೆ ಭಯಪಡಬೇಕಾಗಿದೆ. ಇಂಥ ಆಕ್ರಮಣಗಳನ್ನು ತಡೆಗಟ್ಟಲು ವ್ಯಕ್ತಿ ಹೆಚ್ಚು ಸಾಮರ್ಥ್ಯಶಾಲಿಯಾಗಬೇಕಿದೆ ಮತ್ತು ರಕ್ಷಣೆಗಾಗಿ ಸ್ವತಃ ಆಕ್ರಮಣಕಾರಿಯಾಗಬೇಕಿದೆ. ಉತ್ಪಾದನೆ ಅದು ಎಷ್ಟು ಮಹಾನ್ ಆಗಿದ್ದರೂ ಅದಕ್ಕೆ ಅನ್ ಲಿಮಿಟೆಡ್ ಬಯಕೆಗಳನ್ನು ಸರಿದೂಗಿಸುವುದು ಸಾಧ್ಯವೇ ಇಲ್ಲ, ಹಾಗಾಗಿ ಹೆಚ್ಚು ಹೆಚ್ಚು ಹೊಂದುವುದಕ್ಕಾಗಿ ವ್ಯಕ್ತಿ ವ್ಯಕ್ತಿಗಳ ನಡುವೆ ಸ್ಪರ್ಧೆ, ಹಗೆತನ ಸಾಮಾನ್ಯ. ಎಷ್ಟೇ ಸಮೃದ್ಧಿಯಿದ್ದರೂ ಈ ಕಲಹ ನಿರಂತರವಾಗಿ ಮುಂದುವರೆಯುತ್ತಲೇ ಇರುತ್ತದೆ; ಯಾರು ಆರೋಗ್ಯ, ಆಕರ್ಷಣೆ, ಪ್ರತಿಭೆ, ಬಳುವಳಿಗಳ ಕೊರತೆಯಿಂದ ಬಳಲುತ್ತಿದ್ದಾರೋ ಅವರು ಈ ಎಲ್ಲವೂ ಹೇರಳವಾಗಿ ಇರುವವರನ್ನು ಕಂಡು ಹೊಟ್ಟೆಕಿಚ್ಚುಪಡುತ್ತಾರೆ.
1 Comment