ಆಧ್ಯಾತ್ಮಿಕತೆ ಮತ್ತು ಲೌಕಿಕತೆ: ಓಶೋ ವ್ಯಾಖ್ಯಾನ

ನೀವು ಆಧ್ಯಾತ್ಮಿಕತೆಯನ್ನು ಆಚರಿಸುತ್ತಲೇ ಲೌಕಿಕತೆಯನ್ನು ಯಶಸ್ವಿಯಾಗಿ ಆಚರಿಸಬಹುದು. ಹಾಗೆ ನೋಡಿದರೆ ನೀವು ಎಷ್ಟು ಒಳ್ಳೆಯ ಆಧ್ಯಾತ್ಮಿಕರೋ ಅಷ್ಟೇ ಒಳ್ಳೆಯ ಲೌಕಿಕರು ಕೂಡ… ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ಸಂಕಟದ ಕಣ್ಣೀರು ನಿನಗೆ ಕಾಣಿಸುವುದಿಲ್ಲ.
ನೀನು ಉನ್ಮತ್ತನಾಗಿದ್ದೀಯ,
ಆ ನಶೆಯ ಹೊಗೆ
ನಿನ್ನ ಕಣ್ಣನ್ನು ಮಂಜಾಗಿಸಿದೆ.
ಎಷ್ಟೊಂದು ನೋವು ನಿನ್ನ ಸುತ್ತ ಮುತ್ತ
ಆದರೂ ನೀನು
ಸೂಕ್ಷ್ಮ ಚೆಲುವಿನ ಬಗ್ಗೆ
ಹಾಡು ಕಟ್ಟಿ ಹಾಡುತ್ತಿದ್ದೀಯ.

ಪ್ರೇಮ ಅಪಮಾನಕ್ಕೊಳಗಾಗುವುದು
ಒಂದೆರಡು ಥರ ಅಲ್ಲ,
ಆದರೆ ಪ್ರೇಮಕ್ಕೆ ತನ್ನ ಶಕ್ತಿಯ ಬಗ್ಗೆ ಗೊತ್ತು
ಹಾಗಾಗಿ
ಪ್ರೇಮಕ್ಕೆ ಯಾವ ಹಂಗೂ ಇಲ್ಲ.

~ ರೂಮಿ

**********************

ಒಮ್ಮೆ ಒಬ್ಬ ಮನುಷ್ಯ ಬುದ್ಧನನ್ನು ಪ್ರಶ್ನೆ ಮಾಡಿದ,

“ಜಗತ್ತು ಅಪಾರ ಸಂಕಟದಲ್ಲಿದೆ, ಜನ ಆತಂಕಿತರಾಗಿದ್ದಾರೆ ಆದರೂ ನಿನಗೆ ಹೀಗೆ ಪ್ರಶಾಂತವಾಗಿ, ಖುಶಿಯಿಂದ ಕೂರುವುದು ಹೇಗೆ ಸಾಧ್ಯ?”

ಬುದ್ಧ ಉತ್ತರಿಸಿದ…….

“ಯಾರಾದರೂ ಜ್ವರದಿಂದ ವೇದನೆ ಅನುಭವಿಸುತ್ತಿದ್ದಾರೆಂದರೆ, ವೈದ್ಯನೂ ಕೂಡ ಅದೇ ವೇದನೆ ಅನುಭವಿಸುತ್ತ ಅವನ ಪಕ್ಕ ಕೂರಬೇಕೆ? ವೈದ್ಯ ಅಂತಃಕರಣದಿಂದ ಆ ವ್ಯಕ್ತಿಯ ಜ್ವರವನ್ನು ತಾನೂ ಅಂಟಿಸಿಕೊಂಡು ಅವನ ಸಂಕಟದಲ್ಲಿ ಸಹಭಾಗಿಯಾಗಬೇಕೆ? ವೈದ್ಯ ಹಾಗೆ ಮಾಡುವುದರಿಂದ ಆ ರೋಗಿಗೆ ಏನಾದರೂ ಉಪಯೋಗವಾಗುವುದೆ? ಮೊದಲು ಒಬ್ಬ ರೋಗಿ ಇದ್ದ , ಈಗ ಇಬ್ಬರು ರೋಗಿಗಳಾದರು, ಜಗತ್ತಿನ ರೋಗ ದ್ವಿಗುಣಗೊಂಡಿತು. ರೋಗಿಗೆ ಸಹಾಯ ಮಾಡಲು, ವೈದ್ಯ ತಾನೂ ರೋಗವನ್ನು ಅಂಟಿಸಿಕೊಳ್ಳಬೇಕಿಲ್ಲ, ಬದಲಾಗಿ ಅವನು ತನ್ನ ಆರೋಗ್ಯವನ್ನು ಇನ್ನೂ ಹೆಚ್ಚು ಚೆನ್ನಾಗಿ ನೋಡಿಕೊಳ್ಳಬೇಕು. ವೈದ್ಯ ಎಷ್ಟು ಆರೋಗ್ಯವಂತನಾಗಿರುತ್ತಾನೋ ಅಷ್ಟು ರೋಗಿಗೆ ಸಹಾಯವಾಗುತ್ತದೆ. ರೋಗ ಎಷ್ಟು ಸಾಂಕ್ರಾಮಿಕವೋ ಅದಕ್ಕಿಂತ ಹೆಚ್ಚು ಸಾಂಕ್ರಾಮಿಕ ಆರೋಗ್ಯ.”

ನನಗಂತೂ ಅಧ್ಯಾತ್ಮಿಕತೆ ಮತ್ತು ಲೌಕಿಕತೆಯ ನಡುವೆ ಯಾವ ವ್ಯತ್ಯಾಸವೂ ಇಲ್ಲ. ನೀವು ಆಧ್ಯಾತ್ಮಿಕತೆಯನ್ನು ಆಚರಿಸುತ್ತಲೇ ಲೌಕಿಕತೆಯನ್ನು ಯಶಸ್ವಿಯಾಗಿ ಆಚರಿಸಬಹುದು. ಹಾಗೆ ನೋಡಿದರೆ ನೀವು ಎಷ್ಟು ಒಳ್ಳೆಯ ಆಧ್ಯಾತ್ಮಿಕರೋ ಅಷ್ಟೇ ಒಳ್ಳೆಯ ಲೌಕಿಕರು ಕೂಡ. ನೀವು ಆಧ್ಯಾತ್ಮಿಕರಾಗಿದ್ದಾಗ ನಿಮ್ಮ ಪ್ರತಿಯೊಂದು ಕ್ರಿಯೆಯಲ್ಲಿ ಖುಶಿ ಇದೆ, ಸೂಕ್ಷ್ಮತೆ ಇದೆ, ಸಂವೇದನಾಶಾಲತೆ ಇದೆ, ಕಲಾತ್ಮಕತೆ ಇದೆ. ಆಗ ನಿಮ್ಮ ಲೌಕಿಕ ಕ್ರಿಯೆಗಳಲ್ಲಿ ಯಾವ ಒತ್ತಡ ಇಲ್ಲ, ಯಾವ ಆತಂಕ ಯಾವ ದುಗುಡವೂ ಇಲ್ಲ.

ಒಂದು ದಿನ ಸುಝೂಕಿ ರೋಶಿ ಅವರ ಶಿಷ್ಯೆ, ಅವರ ಹತ್ತಿರ ಬಂದು ತನ್ನ ಮನಸ್ಸಿನ ತಳಮಳವನ್ನು ನಿವೇದಿಸಿಕೊಂಡಳು.

“ ಮಾಸ್ಟರ್, ಯಾಕೋ ಗೊತ್ತಿಲ್ಲ ನಿಮ್ಮ ಮೇಲೆ ನನಗೆ ವಿಪರೀತ ಪ್ರೇಮ ಉಕ್ಕಿ ಬರುತ್ತಿದೆ. ಕೂತಲ್ಲಿ, ನಿಂತಲ್ಲಿ ಸದಾ ನಿಮ್ಮ ಯೋಚನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ, ತುಂಬ ಗೊಂದಲವಾಗುತ್ತಿದೆ. “

ಮಾಸ್ಟರ್ ರೋಶಿ ಉತ್ತರಿಸಿದರು,

“ ಹುಡುಗಿ, ಇದು ತಪ್ಪು ಒಪ್ಪಿನ ಪ್ರಶ್ನೆ ಅಲ್ಲ. ನಿನ್ನ ಗುರುವಿನ ಬಗ್ಗೆ ಯಾವ ಭಾವನೆ ಹೊಂದಲೂ ನೀನು ಸ್ವತಂತ್ರಳು. ಭಾವನೆಗಳನ್ನು ಹತ್ತಿಕ್ಕಬೇಡ, ಮುಕ್ತವಾಗಿ ವ್ಯಕ್ತಪಡಿಸು “

ಹುಡುಗಿ ಆಶ್ಚರ್ಯಚಕಿತಳಾಗಿ ಮಾಸ್ಟರ್ ರೋಶಿಯನ್ನೇ ನೋಡತೊಡಗಿದಳು “

ಮಾಸ್ಟರ್ ರೋಶಿ ಅವಳ ತಲೆ ಮೇಲೆ ಕೈಯಿಟ್ಟು ಹೇಳಿದರು.

“ ಹೆದರಬೇಡ ಹುಡುಗಿ, ನನ್ನ ಹತ್ತಿರ ಇಬ್ಬರಿಗೂ ಸಾಕಾಗುವಷ್ಟು ಶಿಸ್ತು ಇದೆ. “

Leave a Reply