ಸಾವು ಉತ್ಕರ್ಷದ ಘಟ್ಟ ಎನ್ನುವುದನ್ನ ಅರಿಯಬೇಕು ಆಗ ಹೊಸ ಹೊಸ ದೃಷ್ಟಿಕೋನಗಳು ಆನಾವರಣಗೊಳ್ಳುತ್ತವೆ, ಆಗ ನೀವು ಸಾವನ್ನು ಆವಾಯಿಡ್ ಮಾಡುವುದಿಲ್ಲ, ಆಗ ನೀವು ಸಾವಿನ ವೈರಿ ಅಲ್ಲ, ಆಗ ಸಾವಿನ ನಿಗೂಢತೆ ನಿಮ್ಮನ್ನು ಅಚ್ಚರಿಗೊಳಿಸುತ್ತ ಹೋಗುತ್ತದೆ, ಆಗ ನೀವು ಸಾವನ್ನು ಎಂಜಾಯ್ ಮಾಡುವುದು ಸಾಧ್ಯವಾಗುತ್ತದೆ, ಆಗ ನಿಮಗೆ ಸಾವಿನ ಕುರಿತಾದ ಚಿಂತನೆ ಮತ್ತು ಧ್ಯಾನ ಸಾಧ್ಯವಾಗುತ್ತದೆ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದು ದಿನ
ಪುರಾತನ ಅರಮನೆಯ
ಪಾಳುಬಿದ್ದ ಅವಶೇಷಗಳ ನಡುವೆ
ಓಡಾಡುತ್ತ ದಣಿದು
ಖರ್ಜೂರದ ಮರವೊಂದರ ಕೆಳಗೆ
ಸ್ವಲ್ಪ ಹೊತ್ತು ಕಾಲು ಚಾಚಿದೆ ಹಾಯಾಗಿ.
ಮನೆಯಿಂದ ಕಟ್ಟಿಕೊಂಡು ಬಂದಿದ್ದ
ಬುತ್ತಿ ಗಂಟು ಬಿಚ್ಚಿ, ಊಟ ಮುಗಿಸಿ
ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ
ಕಣ್ಣು ಮುಚ್ಚಿಕೊಳ್ಳುತ್ತಿದ್ದಂತೆಯೇ
ನನ್ನ ಕೈಗಳನ್ನು ನೆಕ್ಕತೊಡಗಿತು
ಜಿಂಕೆಯೊಂದು
ಬಿಳಚಿಕೊಂಡಿತ್ತು ಅದರ ಮೂಗು, ಮುಖ
ಏನೋ ಒಂದು ಬಿಗಿತ ಕತ್ತಿನ ಚಲನೆಯಲ್ಲಿ.
ಕಣ್ಣು ಬಿಟ್ಟರೆ ಜಿಂಕೆ ಅಂಜಬಹುದೆಂದು
ಎಲ್ಲ ಗಮನಿಸುತ್ತಿದ್ದೆ
ಹಾಗೆ ಅಲ್ಲಾಡದೇ ಕಿರುಗಣ್ಣಿನಲ್ಲಿಯೇ.
ನನ್ನ ದೇಹವನ್ನೊಮ್ಮೆ ಮೂಸಿ ನೋಡಿ
ಮೊಣಕಾಲ ಮೇಲೆ ಬಗ್ಗಿ
ತನ್ನ ತಲೆಯನ್ನ ನನ್ನ ತೊಡೆಗಳ ಮೇಲಿಟ್ಟು
ಒರಗಿಕೊಂಡಿತು ಜಿಂಕೆ
ಒಂದು ಜೊತೆ ಕಪ್ಪುಕಣ್ಣುಗಳು
ನನ್ನ ಕಣ್ಣುಗಳೊಡನೆ ಮಾತಿಗಿಳಿದವು,
ನಿಧಾನವಾಗಿ ಆ ಕಣ್ಣೊಳಗಿನ ಬೆಳಕು ಮಾಯವಾಗುತ್ತ, ತೀರಿಯೇ ಹೋದಳು
ಆ ಕಪ್ಪು ಕಣ್ಣಿನ ಒಡತಿ .
ಒಂದಿಷ್ಟು ಅದ್ಭುತ ದಿನಗಳ ಪ್ರೇಮದ ನಂತರ
ಪ್ರೇಮಿಗಳು ಸಾಯಲು ಬಯಸೋದು ಹೀಗೆ,
ಪ್ರೇಮಿಯ ಕೈ
ತನ್ನ ಗಲ್ಲನೇವರಿಸುತ್ತಿರುವಾಗ
ಕಣ್ಣೊಳಗಿನ ಬೆಳಕು ನಿಧಾನವಾಗಿ
ಆರಿ ಹೋಗುವಂತೆ.
ನಜತ್ ಹೇಳುತ್ತಾನೆ….
ಆದರೆ ನೀವು ಹಾಗೆ
ಪ್ರೇಮಿಯ ತೊಡೆಯ ಮೇಲೆ ತಲೆಯಿಟ್ಟು
ಕಣ್ಣು ಮುಚ್ಚಿಕೊಳ್ಳಲು ಕಾಯಬೇಕಿಲ್ಲ
ಸಾವು ಬರುವ ತನಕ.
****************
ಬದುಕಿನ ಮಹಾ ರಹಸ್ಯ ಸ್ವತಃ ಬದುಕು ಅಲ್ಲ, ಸಾವು. ಸಾವು ಬದುಕಿನ ಪರಾಕಾಷ್ಠತೆ, ಬದುಕಿನ ಆತ್ಯಂತಿಕ ಅರಳುವಿಕೆ. ಸಾವಿನಲ್ಲಿ ಬದುಕಿನ ಸಂಕ್ಷಿಪ್ತ ಸಾರ ಇದೆ, in death you arrive. ಬದುಕು ಎನ್ನುವುದು ಸಾವಿನೆಡಗಿನ ನಮ್ಮ ತೀರ್ಥಯಾತ್ರೆ. ಬಹಳ ಮೊದಲಿನಿಂದಲೂ ಸಾವು ನಮ್ಮತ್ತ ಸಾಗಿ ಬರುತ್ತಿದೆ. ಹುಟ್ಟಿದ ಕ್ಷಣದಿಂದ ಸಾವು ನಮ್ಮತ್ತ ಬರುತ್ತಿದೆ, ನಾವು ಸಾವಿನೆಡಗೆ ಧಾವಿಸುತ್ತಿದ್ದೇವೆ.
ಆದರೆ ಆಗಿರುವ ಅತ್ಯಂತ ದೊಡ್ಡ ದುರಂತ ಎಂದರೆ, ಹ್ಯೂಮನ್ ಮೈಂಡ್ ಸಾವನ್ನ ತನ್ನ ಎದುರಾಳಿ ಎಂದು ತಿಳಿದುಕೊಂಡಿರುವುದು. ಸಾವನ್ನು ತನ್ನ ಎದುರಾಳಿ ಎಂದು ತಿಳಿದುಕೊಳ್ಳುವುದೆಂದರೆ ಸಾವಿನ ನಿಗೂಢತೆಯಿಂದ ಹೊರತಾಗುವುದು ಮತ್ತು ಬದುಕನ್ನ ಕೂಡ ಮಿಸ್ ಮಾಡಿಕೊಳ್ಳುವುದು, ಏಕೆಂದರೆ ಸಾವು ಮತ್ತು ಬದುಕು ಎರಡೂ ಪರಸ್ಪರ ಇನ್ವಾಲ್ವ ಆಗಿರುವ ಸಂಗತಿಗಳು, in fact ಅವು ಎರಡಲ್ಲ. ಬದುಕು ಬೆಳವಣಿಗೆಯ ಭಾಗವಾದರೆ ಸಾವು, ಅರಳುವಿಕೆಯ ಭಾಗ. ಪ್ರಯಾಣ ಮತ್ತು ಗುರಿ ಬೇರೆ ಬೇರೆ ಅಲ್ಲ. ಪ್ರಯಾಣ ಗುರಿಯಲ್ಲಿ ತನ್ನ ಸಾರ್ಥಕತೆಯನ್ನ ಕಂಡುಕೊಳ್ಳುತ್ತದೆ.
ಸಾವು ಉತ್ಕರ್ಷದ ಘಟ್ಟ ಎನ್ನುವುದನ್ನ ಅರಿಯಬೇಕು ಆಗ ಹೊಸ ಹೊಸ ದೃಷ್ಟಿಕೋನಗಳು ಆನಾವರಣಗೊಳ್ಳುತ್ತವೆ, ಆಗ ನೀವು ಸಾವನ್ನು ಆವಾಯಿಡ್ ಮಾಡುವುದಿಲ್ಲ, ಆಗ ನೀವು ಸಾವಿನ ವೈರಿ ಅಲ್ಲ, ಆಗ ಸಾವಿನ ನಿಗೂಢತೆ ನಿಮ್ಮನ್ನು ಅಚ್ಚರಿಗೊಳಿಸುತ್ತ ಹೋಗುತ್ತದೆ, ಆಗ ನೀವು ಸಾವನ್ನು ಎಂಜಾಯ್ ಮಾಡುವುದು ಸಾಧ್ಯವಾಗುತ್ತದೆ, ಆಗ ನಿಮಗೆ ಸಾವಿನ ಕುರಿತಾದ ಚಿಂತನೆ ಮತ್ತು ಧ್ಯಾನ ಸಾಧ್ಯವಾಗುತ್ತದೆ.
ಸಾವಿನ ಕುರಿತಾದ ಒಂದು ಸೂಫೀ ದೃಷ್ಟಾಂತ ಕಥೆ ಹೀಗಿದೆ.
ಒಂದು ದಿನ ಬಾಗ್ದಾದ್ ನ ಶ್ರೀಮಂತ ವ್ಯಾಪಾರಿಯೊಬ್ಬ ತನ್ನ ಸೇವಕನನ್ನು ಕೆಲ ಅಡುಗೆಯ ಸಾಮಾನು ತರಲು ಮಾರುಕಟ್ಟೆಗೆ ಕಳುಹಿಸಿದ. ಕೆಲವೇ ಕೆಲವು ನಿಮಿಷಗಳ ನಂತರ ಆ ಸೇವಕ, ಗಾಬರಿಯಿಂದ ಏದುಸಿರು ಬಿಡುತ್ತ ಶ್ರೀಮಂತ ವ್ಯಾಪಾರಿಯ ಹತ್ತಿರ ವಾಪಸ್ ಬಂದ.
“ ಒಡೆಯ, ನಿಮ್ಮ ಲಾಯದಲ್ಲಿರುವ ಅತ್ಯಂತ ವೇಗವಾಗಿ ಓಡುವ ಬಲಶಾಲಿ ಕುದುರೆಯೊಂದನ್ನು ದಯಮಾಡಿ ನನಗೆ ತಕ್ಷಣ ಕೊಡಿ. ನನ್ನ ಜೀವ ಉಳಿಸಿಕೊಳ್ಳಲು ನಾನು ಡೆಮಾಸ್ಕಸ್ ಗೆ ತಪ್ಪಿಸಿಕೊಂಡು ಓಡಿ ಹೋಗಬೇಕು”. ಅಳುತ್ತ ವ್ಯಾಪಾರಿಯನ್ನು ಬೇಡಿಕೊಂಡ.
“ ಏನಾಯಿತು? ಯಾಕಿಷ್ಟು ಗಾಬರಿ? “ ವ್ಯಾಪಾರಿ ವಿಚಾರಿಸಿದ.
“ ನಾನು ಅಡುಗೆ ಸಾಮಾನು ತರಲು ಮಾರುಕಟ್ಟೆಗೆ ಹೋದಾಗ, ಅಲ್ಲಿ ಸಾವು ನನಗಾಗಿ ಕಾದು ನಿಂತಿರುವುದನ್ನ ಕಂಡೆ, ನನ್ನನ್ನು ನೋಡಿದೊಡನೆ ಸಾವು, ವಿಚಿತ್ರ ರೀತಿಯ ಸನ್ನೆ ಮಾಡುತ್ತ ನನ್ನ ಹತ್ತಿರ ನಡೆಯಲು ಶುರು ಮಾಡಿತು. ದಯಮಾಡಿ ನನಗೆ ಕುದುರೆ ಕೊಡಿ ನಾನು ಡೆಮಾಸ್ಕಸ್ ಗೆ ಓಡಿ ಹೋಗಿಬಿಡುತ್ತೇನೆ. “
ವ್ಯಾಪಾರಿಗೆ ಸೇವಕನ ಮೇಲೆ ಕರುಣೆ ಬಂತು. ತನ್ನ ಬಳಿಯಿದ್ದ ಅತ್ಯುತ್ತಮ ಕುದುರೆಯನ್ನು ಸೇವಕನಿಗೆ ನೀಡಿ ಅವನನ್ನು ಡೆಮಾಸ್ಕಸ್ ಗೆ ಬೀಳ್ಕೊಟ್ಟ.
ನಂತರ ಸೇವಕ ವಿವರಿಸಿದ ಘಟನೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ವ್ಯಾಪಾರಿ ಸ್ವತಃ ತಾನೇ ಮಾರುಕಟ್ಟೆಗೆ ಬಂದ. ಅಲ್ಲಿ ಸೇವಕ ಹೇಳಿದಂತೆ ಸಾವು ಕಾದು ನಿಂತಿರುವುದನ್ನ ಕಂಡ.
“ ಯಾಕೆ ನೀನು ನನ್ನ ಸೇವಕನನ್ನು ನೋಡಿ ವಿಚಿತ್ರ ಸನ್ನೆ ಮಾಡಿದೆ? “ ವ್ಯಾಪಾರಿ ಸಾವನ್ನು ಮಾತನಾಡಿಸಿದ.
“ ಹಾಗೇನು ಮಾಡಲಿಲ್ಲವಲ್ಲ, ಬದಲಾಗಿ ಅವನನ್ನು ಇಲ್ಲಿ ಕಂಡು ನನಗೆ ಆಶ್ಚರ್ಯವಾಯಿತು. ಏಕೆಂದರೆ ಇವತ್ತು ಸಂಜೆ ಡೆಮಾಸ್ಕಸ್ ನಲ್ಲಿ ನನಗೆ ಅವನೊಂದಿಗೆ ಭೇಟಿ ನಿರ್ಧಾರವಾಗಿದೆ.
Source – Osho(The Revolution # 9)