ಪರಿತ್ಯಾಗ : ಓಶೋ ವ್ಯಾಖ್ಯಾನ

ಯಾವಾಗ ನೀವು ಯಾವುದಕ್ಕೂ ಅಂಟಿಕೊಂಡಿರುವುದಿಲ್ಲವೋ ಆಗ ಯಾವದನ್ನೂ ಪರಿತ್ಯಾಗ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂಟಿಕೊಳ್ಳುವುದರ ಇನ್ನೊಂದು ಬದಿಯೇ ಪರಿತ್ಯಾಗ ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಜಗತ್ತಿನ ಎಲ್ಲವೂ
ಬದಲಾಗುತ್ತಲೇ ಇರುತ್ತವೆ
ಎನ್ನುವುದು ಮನವರಿಕೆಯಾದಾಗ
ಯಾರೂ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ.

ಸಾವಿನ ಭಯ ಇಲ್ಲದೇ ಹೋದಾಗ
ಯಾವುದೂ ಅಸಾಧ್ಯ ಅನಿಸುವುದಿಲ್ಲ.

ಮುಂದಿನ ಆಗು ಹೋಗುಗಳನ್ನು
ಅಂಕೆಯಲ್ಲಿಡಲು ಹವಣಿಸುವುದು
ಪ್ರಧಾನ ಬಡಗಿಯ ಸ್ಥಾನದ ಮೇಲೆ ಕಣ್ಣು ಹಾಕಿದಂತೆ.
ನೆನಪಿರಲಿ, ಅವನ ಉಳಿಯ ಮುಟ್ಟಿದವರೆಲ್ಲ
ಬೆರಳು ಕತ್ತರಿಸಿಕೊಂಡಿದ್ದಾರೆ.

~ ಲಾವೋತ್ಸೇ

****************

ಒಮ್ಮೆ ಒಬ್ಬ ದರ್ವಿಶ್, ಸೂಫಿ ಮಾಸ್ಟರ್ ನ ಭೇಟಿಯಾಗಲು ಬಂದ. ಮಾಸ್ಟರ್ ನ ಶ್ರಿಮಂತಿಕೆಯನ್ನ ನೋಡಿ ದಂಗಾಗಿ ಹೋದ. ಇಷ್ಟು ಅಸಹ್ಯದ ಶ್ರೀಮಂತಿಕೆ ಮತ್ತು ಸೂಫಿಸಂ ಕೂಡಿ ಇರುವುದು ಸಾಧ್ಯವೇ ಎಂದು ಅನುಮಾನಪಟ್ಟ. ಸ್ವಲ್ಪ ದಿನ ಮಾಸ್ಟರ್ ಜೊತೆ ಇದ್ದ ದರ್ವಿಶ್, ಕೊನೆಗೊಮ್ಮೆ ಅಲ್ಲಿ ಇರುವುದು ಅಸಾಧ್ಯವಾಗಿ, ತನಗೆ ಇಷ್ಟು ಶ್ರೀಮಂತಿಕೆಯಲ್ಲಿರುವುದು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಂದ ಹೊರಟು ನಿಂತ.

“ಸರಿ ಹಾಗಾದರೆ ನಿನ್ನ ಜೊತೆ ನಾನೂ ಬರುತ್ತೇನೆ, ನಡಿ ಹೊರಟು ಹೋಗೋಣ ಇಲ್ಲಿಂದ” ಎನ್ನುತ್ತ ಸೂಫಿ ಮಾಸ್ಟರ್, ದರ್ವಿಶ್ ನ ಜೊತೆ ಹೊರಟ. ಇಬ್ಬರೂ ಸ್ವಲ್ಪ ದೂರ ಕ್ರಮಿಸಿದ ನಂತರ ದರ್ವಿಶ್ ನಿಗೆ ತಾನು ತನ್ನ ಭಿಕ್ಷಾ ಪಾತ್ರೆಯನ್ನ ಮಾಸ್ಟರ್ ಮನೆಯಲ್ಲಿಯೇ ಬಿಟ್ಟು ಬಂದಿರುವುದು ನೆನಪಾಯಿತು.

“ಮಾಸ್ಟರ್, ಭಿಕ್ಷಾಪಾತ್ರೆಯನ್ನ ನಿಮ್ಮ ಮನೆಯಲ್ಲಿಯೇ ಬಿಟ್ಟು ಬಂದೆ, ನೀವು ಇಲ್ಲೇ ಕುಳಿತಿರಿ ನಾನು ವಾಪಸ್ ಹೋಗಿ ಕೂಡಲೇ ಅದನ್ನ ತೆಗೆದುಕೊಂಡು ಬಂದುಬಿಡುತ್ತೇನೆ” ಎನ್ನುತ್ತ ದರ್ವಿಶ್ ವಾಪಸ್ ಹೊರಡಲು ಸಿದ್ಧನಾದ.

“ನಾನು ನನ್ನ ಎಲ್ಲ ಶ್ರೀಮಂತಿಕೆಯನ್ನ ಬಿಟ್ಟು ನಿನ್ನ ಜೊತೆ ಹೊರಟೆ ಆದರೆ ನಿನಗೆ ಒಂದು ಭಿಕ್ಷಾಪಾತ್ರೆಯನ್ನ ಬಿಟ್ಟು ಇರಲಿಕ್ಕೆ ಆಗಲಿಲ್ಲ. ಇನ್ನು ನಾವು ಕೂಡಿ ಹೆಜ್ಜೆ ಹಾಕುವುದರಲ್ಲಿ ಯಾವ ಅರ್ಥ ಇಲ್ಲ.” ಎನ್ನುತ್ತ ಸೂಫಿ ಮಾಸ್ಟರ್, ದರ್ವಿಶ್ ನ ಅಲ್ಲೇ ಬಿಟ್ಟು ಹೊರಟು ಬಿಟ್ಟ.

ಒಬ್ಬ ಸೂಫಿ ಶ್ರೀಮಂತಿಕೆಗೂ ಅಂಟಿಕೊಂಡಿರುವುದಿಲ್ಲ ಹಾಗೆಯೇ ಬಡತನಕ್ಕೂ. ಹಾಗೆ ನೋಡಿದರೆ ಸೂಫಿ ಯಾವುದಕ್ಕೂ ಅಂಟಿಕೊಂಡಿರುವುದಿಲ್ಲ. ಯಾವಾಗ ನೀವು ಯಾವುದಕ್ಕೂ ಅಂಟಿಕೊಂಡಿರುವುದಿಲ್ಲವೋ ಆಗ ಯಾವದನ್ನೂ ಪರಿತ್ಯಾಗ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂಟಿಕೊಳ್ಳುವುದರ ಇನ್ನೊಂದು ಬದಿಯೇ ಪರಿತ್ಯಾಗ. ಯಾರು ಅಂಟಿಕೊಳ್ಳುವಿಕೆಯ ಹುಚ್ಚುತನವನ್ನ ಅರ್ಥಮಾಡಿಕೊಂಡಿದ್ದಾರೋ ಅವರು ಪರಿತ್ಯಾಗದ ಮಾತನ್ನೇ ಎತ್ತುವುದಿಲ್ಲ. ಅವರು ಈ ಜಗತ್ತಿನಲ್ಲಿ ಇರುತ್ತಾರೆನೋ ಹೌದು ಆದರೆ ಅವರು ಈ ಜಗತ್ತಿನವರಲ್ಲ.

ನೆನಪಿನಲ್ಲಿರಲಿ, ಇಚ್ಛಾಪೂರ್ವಕವಾಗಿ ಬಡತನವನ್ನು ಬಯಸುವುದು ಕೂಡ ಒಂದು ರೀತಿಯ ಅಂಟಿಕೊಳ್ಳುವಿಕೆಯೇ. ಇದೂ ಒಂದು ರೀತಿಯ ಅಹಂ ಪ್ರಯಾಣವೇ. ಸೂಫಿ ಸರಳವಾಗಿ ಬದುಕುತ್ತಾನೆ, ಅವನಿಗೆ ತನ್ನದೇ ಆದ ಇಚ್ಛೆಯೂ ಇಲ್ಲ. ಅವನು ಅರಮನೆಯಲ್ಲೂ ಖುಶಿಯಾಗಿರಬಲ್ಲ ಹಾಗೆಯೇ ಗುಡಿಸಿಲಿನಲ್ಲೂ.

ಸೂಫಿಗೆ, ತಾನು ರಾಜನಾಗಿದ್ದರೂ ಅಥವಾ ಭಿಕ್ಷುಕನಾಗಿದ್ದರೂ ಯಾವ ವ್ಯತ್ಯಾಸವಿಲ್ಲ. ಸೂಫಿಗೆ ಯಾವ ಆದ್ಯತೆಗಳೂ ಇಲ್ಲ, ಅವನು ಪ್ರತೀ ಕ್ಷಣದಿಂದ ಕ್ಷಣಕ್ಕೆ ತನ್ನ ಬದುಕನ್ನ ಅನುಭವಿಸುತ್ತಾನೆ. ಯಾವುದನ್ನ ಭಗವಂತ ಸಾಧ್ಯಮಾಡುತ್ತನೋ ಸೂಫಿ ಅದನ್ನ ಯಾವ ಬೇಸರ ಯಾವ ಖುಶಿ ಇಲ್ಲದೇ ಅನುಭವಿಸುತ್ತಾನೆ.

ಝೆನ್ ಮಾಸ್ಟರ್ ತಾಜಿ ಸಾವಿನ ಹಾಸಿಗೆಯಲ್ಲಿದ್ದ. ಮಾಸ್ಟರ್ ತಾಜಿಗೆ ಟೋಕಿಯೋದ ಮಾರ್ಕೇಟ್ ನಲ್ಲಿ ಸಿಗುವ ಒಂದು ವಿಶೇಷ ಕೇಕ್ ಎಂದರೆ ತುಂಬಾ ಪ್ರೀತಿ ಎಂದು ಅವನ ಶಿಷ್ಯರಿಗೆ ಗೊತ್ತಿತ್ತು .

ಶಿಷ್ಯರು ಟೋಕಿಯೋದ ಅಂಗಡಿಗಳನ್ನೆಲ್ಲ ಹುಡುಕಾಡಿ ತಾಜಿ ಗಾಗಿ ಆ ವಿಶೇಷ ಕೇಕ್ ಕೊಂಡು ತಂದರು.

ಮಾಸ್ಟರ್ ತಾಜಿ ತುಂಬ ಖುಶಿಯಿಂದ ಶಿಷ್ಯರು ತಂದ ಕೇಕ್ ತಿಂದ. ಅವನು ಕೇಕ್ ತಿಂದಾದ ಮೇಲೆ ಮಾಸ್ಟರ್ ಗೆ , ಅವರಿಗಾಗಿ ಒಂದು ಕೊನೆಯ ವಾಕ್ಯ ಹೇಳುವಂತೆ ಶಿಷ್ಯರು ವಿನಂತಿ ಮಾಡಿದರು.

ಮಾಸ್ಟರ್ ತಾಜಿ, ತುಟಿಗೆ ಅಂಟಿಕೊಂಡಿದ್ದ ಕೇಕ್ ನ್ನು ನಾಲಿಗೆಯಿಂದ ನೆಕ್ಕುತ್ತಾ ಗಂಟಲು ಸರಿ ಮಾಡಿಕೊಂಡ

“ ಬುದ್ಧನ ಪ್ರಕಾರ……. ಕ್ಷಮಿಸಿ ಕ್ಷಮಿಸಿ….ನೀವು ತಂದ ಕೇಕ್ ತುಂಬ ಚೆನ್ನಾಗಿತ್ತು “

ಮಾತು ಮುಗಿಸುತ್ತ ಮಾಸ್ಟರ್ ತಾಜಿ ನೆಲಕ್ಕೊರಗಿ ತೀರಿಕೊಂಡ.

Leave a Reply