ರವೀಂದ್ರನಾಥ ಠಾಕೂರರ ಒಂದು ಕವಿತೆಯನ್ನ ಮಾತ್ರ ಜಗತ್ತಿನಾದ್ಯಂತ ಎಲ್ಲ ವಿಮರ್ಶಕರು ಕಟುವಾಗಿ ಟೀಕಿಸಿದರು. ಏಕೆಂದರೆ ಆ ಪದ್ಯ ಏಕ್ದಂ ಶುರುವಾಗುತ್ತದೆ ಮತ್ತು ಏಕ್ದಂ ಮುಗಿದುಹೋಗುತ್ತದೆ; ಆ ಪದ್ಯಕ್ಕೆ ಒಂದು ಸರಿಯಾದ ಆರಂಭ ಮತ್ತು ಮುಕ್ತಾಯ ಇಲ್ಲ. ಅದು ಬೇರೆ ಯಾವುದೋ ಕವಿತೆಯ ಮಧ್ಯ ಭಾಗದಂತಿದೆ. ಕವಿತೆಯ ಆರಂಭ ಕಾಣೆಯಾಗಿದೆ ಹಾಗೆಯೇ ಮುಕ್ತಾಯವೂ.
ಒಮ್ಮೆ ರವೀಂದ್ರನಾಥರನ್ನ ಕೇಳಲಾಯಿತು,
“ಈ ನಿಮ್ಮ ಪದ್ಯ ಇಷ್ಟು ಕಠಿಣ ಟೀಕೆಗೊಳಗಾದರೂ ನೀವು ಯಾಕೆ ಸುಮ್ಮನಿದ್ದೀರಿ? ನಿಮ್ಮ ಅಭಿಪ್ರಾಯ ಏನು?”
ರವೀಂದ್ರನಾಥರು ಉತ್ತರಿಸಿದರು……
“ಈ ಕವಿತೆಯನ್ನು ಟೀಕಿಸಿದವರಿಗೆ ಬದುಕು ಎಂದರೇನು ಎನ್ನುವುದು ಗೊತ್ತಿಲ್ಲ. ಬದುಕು ಶುರುವಾಗೋದೇ ಮಧ್ಯದಿಂದ, ನನ್ನ ಕವಿತೆ ಬದುಕನ್ನ ಪ್ರತಿನಿಧಿಸುತ್ತದೆ. ಬದುಕು ಕೂಡ ಎಲ್ಲಿಂದಲೋ ಏಕ್ದಂ ಶುರುವಾಗುತ್ತದೆ, ಮತ್ತು ಏಕ್ದಂ ಮರೆಯಾಗಿಹೋಗುತ್ತದೆ, ಮುಕ್ತಾಯದ ಯಾವ ಅನುಭವವನ್ನೂ ನೀಡದೇ ಆವಿಯಾಗಿ ಹೋಗುತ್ತದೆ.
~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ