ಇನ್ನೊಬ್ಬರನ್ನು ಕ್ಷಮಿಸಲಾಗದವರು… : ಓಶೋ ವ್ಯಾಖ್ಯಾನ

“ಯಾಕೋ ಇದು ಅತೀಯಾಯ್ತು ಬುದ್ದ. ನಿನ್ನೆ ನಿನಗೆ ಅಪಮಾನ ಮಾಡಿದ್ದು, ನಿನ್ನನ್ನ ಕೆಟ್ಟದಾಗಿ ನಿಂದಿಸಿದ್ದು ಈ ವ್ಯಕ್ತಿಯೇ. ನಾನು ಯಾವತ್ತೂ ಈ ಮನುಷ್ಯನನ್ನು ಕ್ಷಮಿಸಲಾರೆ…” ಅಂದ ಆನಂದನಿಗೆ ಬುದ್ಧ ಕೊಟ್ಟ ಉತ್ತರವೇನು ಗೊತ್ತೇ? ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಇನ್ನೊಬ್ಬರನ್ನು ಕ್ಷಮಿಸಲಾಗದವರು
ತಾವೇ ದಾಟಿ ಹೋಗಬೇಕಾಗಿರುವ
ಸೇತುವೆಯೊಂದನ್ನು
ಕೈಯ್ಯಾರೆ ತಾವೇ ನಾಶಮಾಡಿಕೊಳ್ಳುವರು.

~ ಕನ್ಫ್ಯೂಷಿಯಸ್

**********

ಒಂದು ದಿನ ಬುದ್ಧನ ಆಶ್ರಮಕ್ಕೆ ಬಂದ ಒಬ್ಬ ವ್ಯಕ್ತಿ ಬುದ್ಧನನ್ನು ನಾನಾ ರೀತಿಯಲ್ಲಿ ನಿಂದಿಸಿದ, ಬುದ್ಧನನ್ನು ಅಪಮಾನಕ್ಕೆ ಗುರಿ ಮಾಡಿದ. ಆದರೆ ಬುದ್ಧ ಮಾತ್ರ ಆ ಅಪರಿಚಿತ ಮಾಡುತ್ತಿದ್ದ ನಿಂದನೆಯನ್ನ ಶಾಂತ ರೀತಿಯಲ್ಲಿ ಕೇಳಿಸಿಕೊಂಡ.

ಮರುದಿನ ಆ ವ್ಯಕ್ತಿಗೆ ತಾನು ಮಾಡಿದ ನಿಂದನೆಗಾಗಿ ಪಶ್ಚಾತಾಪವಾಗಿ ಆತ ಬುದ್ಧನ ಬಳಿ ಬಂದು ಪಾದ ಮುಟ್ಟಿ ಕಣ್ಣೀರು ಸುರಿಸುತ್ತ ಅವನ ಕ್ಷಮೆ ಕೇಳಿದ.

“ನಿನ್ನೆ ಆದದ್ದನ್ನೆಲ್ಲ ಮರೆತು ಬಿಡು. ಇವತ್ತು ನಾನು, ನಿನ್ನೆ ನೀನು ಅಪಮಾನ ಮಾಡಿದ ವ್ಯಕ್ತಿಯಲ್ಲ ಹಾಗೆಯೇ ಇಂದು, ನಿನ್ನೆ ನನಗೆ ಅಪಮಾನ ಮಾಡಿದ ವ್ಯಕ್ತಿಯಾಗಿ ನೀನು ಕೂಡ ಉಳಿದಿಲ್ಲ. ಹಾಗಾಗಿ ಯಾರು ಯಾರ ಬಳಿ ಕ್ಷಮೆ ಕೇಳಬೇಕು? ನಿನ್ನೆ ನೀನು ಅಪಮಾನ ಮಾಡಿದ ವ್ಯಕ್ತಿ ಈಗ ಇಲ್ಲ ಹಾಗಾಗಿ ನೀನು ನನ್ನ ಬಳಿ ಕ್ಷಮೆ ಕೇಳಬೇಕಿಲ್ಲ. ನಿನ್ನೆ ನನ್ನನ್ನು ಅಪಮಾನ ಮಾಡಿದ ವ್ಯಕ್ತಿ ನೀನಲ್ಲ, ಅದು ಬೇರೆ ಯಾರೋ. ನಾನಾದರೂ ಇವತ್ತಿನ ನಿನ್ನನ್ನ ಹೇಗೆ ಕ್ಷಮಿಸಲಿ? ಇವತ್ತಿನ ನನಗೆ ನೀನು ಯಾವ ಅಪಮಾನವನ್ನೂ ಮಾಡಿಲ್ಲವಲ್ಲ. ಹಾಗಾಗಿ ಆದದ್ದನೆಲ್ಲ ಮರೆತು ಬಿಡು, ಚಿಂತೆ ಮಾಡಬೇಡ.”

ಬುದ್ಧ ಆ ಅಪರಿಚಿತ ವ್ಯಕ್ತಿಯನ್ನ ಸಮಾಧಾನ ಮಾಡಿದ.

ಇದನ್ನೆಲ್ಲ ಗಮನಿಸುತ್ತಿದ್ದ ಬುದ್ಧನ ಶಿಷ್ಯ ಆನಂದ ಮಾತನಾಡಿದ,

“ಯಾಕೋ ಇದು ಅತೀಯಾಯ್ತು ಬುದ್ದ. ನಿನ್ನೆ ನಿನಗೆ ಅಪಮಾನ ಮಾಡಿದ್ದು, ನಿನ್ನನ್ನ ಕೆಟ್ಟದಾಗಿ ನಿಂದಿಸಿದ್ದು ಈ ವ್ಯಕ್ತಿಯೇ. ನಾನು ಯಾವತ್ತೂ ಈ ಮನುಷ್ಯನನ್ನು ಕ್ಷಮಿಸಲಾರೆ. ನಿನ್ನೆ ಅವನು ನಿನ್ನ ಬಗ್ಗೆ ಎಷ್ಟು ಕೆಟ್ಟ ಭಾಷೆ ಬಳಸಿದ, ಎಷ್ಟು ಕೆಟ್ಟ ಪದಗಳನ್ನು ಬಳಸಿದ. ಆ ಮಾತುಗಳು ಇನ್ನೂ ನನ್ನ ಚುಚ್ಚುತ್ತಿವೆ. ನಿನ್ನೆಯೇ ಈ ಮನುಷ್ಯನಿಗೆ ಬುದ್ಧಿ ಕಲಿಸಬೇಕೆಂದು ಮಾಡಿದ್ದೆ ಆದರೆ ನೀನು ಅದಕ್ಕೆಲ್ಲ ಅವಕಾಶ ಕೊಡುವುದಿಲ್ಲ ಎಂದು ಸುಮ್ಮನಾದೆ.”

“ ಆನಂದ, ನಿನ್ನೆ ನನಗೆ ಅಪಮಾನ ಮಾಡಿದ ವ್ಯಕ್ತಿ ಇವನಲ್ಲ ಎನ್ನುವುದು ನಿನಗೆ ಯಾಕೆ ಕಾಣಿಸುತ್ತಿಲ್ಲ? ನಿನ್ನೆಯ ಮನುಷ್ಯ ಚೀರುತ್ತಿದ್ದ, ನಿಂದಿಸುತ್ತಿದ್ದ, ಅಪಮಾನ ಮಾಡುತ್ತಿದ್ದ. ಆದರೆ ಇಂದು ನಮ್ಮೆದುರಿಗಿರುವ ಈ ಮನುಷ್ಯ ಕ್ಷಮೆ ಕೇಳುತ್ತಿದ್ದಾನೆ, ನಿನ್ನ ಪ್ರಕಾರ ಅಪಮಾನ ಮತ್ತು ಕ್ಷಮೆ ಎರಡೂ ಒಂದೇನಾ? ಈ ಮನುಷ್ಯನ ಕಣ್ಣುಗಳನ್ನ ನೋಡು, ಅವನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದೆ. ನಿನ್ನೆಯ ಮನುಷ್ಯನನ್ನು ಗಮನಿಸಿದ್ದೆಯಾ? ಅವನ ಕಣ್ಣುಗಳು ಬೆಂಕಿಯನ್ನು ಕಾರುತ್ತಿದ್ದವು. ನಿನ್ನೆಯ ಮನುಷ್ಯನಲ್ಲಿ ನನ್ನನ್ನು ಕೊಲ್ಲುವಷ್ಟು ಸಿಟ್ಟಿತ್ತು. ಇಂದು ಈ ಮನುಷ್ಯ ನನ್ನ ಪಾದ ಮುಟ್ಚಿ ಕ್ಷಮೆ ಕೇಳುತ್ತಿದ್ದಾನೆ. ಹೀಗಿರುವುವಾಗಲೂ ಇವನು ನಿನ್ನೆಯ ಮನುಷ್ಯನೇ ಎಂದು ನಿನಗನಿಸುತ್ತಿದೆಯಾ?” ಬುದ್ಧ ಆನಂದನನ್ನು ಪ್ರಶ್ನೆ ಮಾಡಿದ.

Nobody is ever same.

“ ಒಂದೇ ನದಿಯಲ್ಲಿ ಎರಡು ಬಾರಿ ಕಾಲಿಡುವುದು ಸಾಧ್ಯವಿಲ್ಲ ” ಎಂದು ಹೇಳುತ್ತಾನೆ ಹೆರಾಕ್ಲಿಟಸ್, ಇದು ಬುದ್ಧನಿಗೆ ಸಂಪೂರ್ಣವಾಗಿ ಒಪ್ಪಿತವಾಗುವ ಮಾತು. ಇಷ್ಟೇ ಅಲ್ಲ ಬುದ್ಧ ಮುಂದುವರೆದು ಹೇಳುತ್ತಾನೆ, “ಅದೇ ನದಿಯಲ್ಲಿ ಅದೇ ವ್ಯಕ್ತಿ ಒಮ್ಮೆ ಕೂಡ ಕಾಲಿಡುವುದು ಸಾಧ್ಯವಿಲ್ಲ.” ಏಕೆಂದರೆ ನದಿ ಸತತವಾಗಿ ಹರಿಯುತ್ತಿದೆ. ಕೇವಲ ನದಿ ಮಾತ್ರ ಪ್ರತಿ ಕ್ಷಣ ಹೊಸತಾಗುತ್ತಿಲ್ಲ, ಅದರಲ್ಲಿ ಕಾಲಿಡುತ್ತಿರುವ ವ್ಯಕ್ತಿ ಕೂಡ ಪ್ರತಿಕ್ಷಣ ಬದಲಾಗುತ್ತಿದ್ದಾನೆ. ಹಾಗಾಗಿ ಅದೇ ವ್ಯಕ್ತಿ ಅದೇ ನದಿಯಲ್ಲಿ ಒಮ್ಮೆ ಕೂಡ ಕಾಲಿಡುವುದು ಸಾಧ್ಯವಿಲ್ಲ.

Leave a Reply