ಗುರುವಿನ ಅಂತಃಕರಣ : ಓಶೋ ವ್ಯಾಖ್ಯಾನ

ಮಾಸ್ಟರ್, ಟೆನ್ನೊ ನೊಂದಿಗೆ ನಡೆದುಕೊಂಡದ್ದು ತುಂಬ ಕಠಿಣ ಅನಿಸಬಹುದು ಆದರೆ ಅದು ಹಾಗಲ್ಲ. ನನಗಂತೂ ಮಾಸ್ಟರ್ ನ ನಡುವಳಿಕೆಯಲ್ಲಿ ತೀವ್ರ ಅಂತಃಕರಣ ಎದ್ದು ಕಾಣುತ್ತದೆ… ~ ಓಶೋ ರಜನೀಶ್। ಕನ್ನಡಕ್ಕೆ: ಚಿದಂಬರ ನರೇಂದ್ರ

ತನ್ನ ವಿದ್ಯಾಭ್ಯಾಸ ಮುಗಿಸಿ ಝೆನ್ ಶಿಕ್ಷಕನಾಗಿ ಕೆಲಸ ಆರಂಭಿಸಿದ್ದ ಟೆನ್ನೊ ಎಂಬ ಹೆಸರಿನ ಸಾಧಕ, ಝೆನ್ ಮಾಸ್ಟರ್ ನ್ಯಾನ್ ಯಿನ್ ನ ಭೇಟಿಯಾಗಲು ಬಂದಿದ್ದ. ಅದು ಮಳೆಗಾಲದ ದಿನವಾದ್ದರಿಂದ ಟೆನ್ನೊ ಕಟ್ಟಿಗೆಯ ಚಪ್ಪಲಿ ಧರಿಸಿ, ಕೊಡೆ ತೆಗೆದುಕೊಂಡು ಬಂದಿದ್ದ.

ಟೆನ್ನೊ ನ ಸ್ವಾಗತಿಸಿದ ಮಾಸ್ಟರ್ ಪ್ರಶ್ನೆ ಮಾಡಿದ, “ ನಿನ್ನ ಕಟ್ಟಿಗೆಯ ಚಪ್ಪಲಿಯನ್ನು ನೀನು ಬಾಗಿಲ ಹೊರಗೆ ಬಿಟ್ಟಿರಬೇಕು ಅಲ್ವಾ? ನೀನು ಕೊಡೆಯನ್ನ ಚಪ್ಪಲಿಯ ಎಡಕ್ಕೆ ಇರಿಸಿದೆಯೋ ಅಥವಾ ಬಲಕ್ಕೆ ಇರಿಸಿದೆಯೋ?”

ಮಾಸ್ಟರ್ ಕೇಳಿದ ಪ್ರಶ್ನೆಯಿಂದ ಟೆನ್ನೊಗೆ ಗೊಂದಲವಾಯಿತು, ತಕ್ಷಣಕ್ಕೆ ಅವನಿಗೆ ಏನೂ ನೆನಪಾಗಲಿಲ್ಲ ಯಾವ ಉತ್ತರವೂ ಹೊಳೆಯಲಿಲ್ಲ. ಆಗ ಟೆನ್ನೊ ಗೆ ತಾನು ಪ್ರತಿ ಕ್ಷಣದ ಝೆನ್ ಪಾಲಿಸದಿರುವುದು ಅರಿವಾಯಿತು. ಪ್ರತಿ ಕ್ಷಣದ ಝೆನ್ ತನ್ನದಾಗಿಸಿಕೊಳ್ಳಲು ಟೆನ್ನೊ ಮುಂದೆ ಆರು ವರ್ಷ ಮಾಸ್ಟರ ನ್ಯಾನ್ ಯಿನ್ ನ ಹತ್ತಿರ ಶಿಷ್ಯವೃತ್ತಿ ಕೈಗೊಂಡ.

ಮಾಡುವ ಕೆಲಸಗಳಲ್ಲಿ ನಾವು ಇಷ್ಟು ಸೂಕ್ಷ್ಮ ರೀತಿಯಲ್ಲಿ ಅರಿವು, ಎಚ್ಚರಿಕೆ ಮೂಡಿಸಿಕೊಳ್ಳಬೇಕು. ನಿಜ ಟೆನ್ನೊ ಅಂಥ ದೊಡ್ಡ ತಪ್ಪನ್ನೇನೂ ಮಾಡಿರಲಿಲ್ಲ, ತನ್ನ ಕೊಡೆಯನ್ನ ಚಪ್ಪಲಿಯ ಯಾವ ಬದಿಗೆ ಇರಿಸಿದ್ಜೇನೆ ಎನ್ನುವುದನ್ನ ಮರೆತಿದ್ದ ಅಷ್ಟೇ. ನಿಮಗೆ ಮಾಸ್ಟರ್, ಟೆನ್ನೊ ನೊಂದಿಗೆ ನಡೆದುಕೊಂಡದ್ದು ತುಂಬ ಕಠಿಣ ಅನಿಸಬಹುದು ಆದರೆ ಅದು ಹಾಗಲ್ಲ. ನನಗಂತೂ ಮಾಸ್ಟರ್ ನ ನಡುವಳಿಕೆಯಲ್ಲಿ ತೀವ್ರ ಅಂತಃಕರಣ ಎದ್ದು ಕಾಣುತ್ತದೆ.

ನ್ಯಾನ್ ಯಿನ್ ಮೊದಲ ಬಾರಿಗೆ ತನ್ನ ಮಾಸ್ಟರ್ ಬಳಿ ಬಂದಾಗ ಅವನ ಮಾಸ್ಟರ್ ಕೂಡ ಇಂಥಹದೇ ಪ್ರಶ್ನೆಯೊಂದನ್ನ ಕೇಳಿದ್ದ.

ಬೆಟ್ಟ ಗುಡ್ಡಗಳನ್ನು ಹಾಯ್ದು ಸುಮಾರು ಎರಡು ನೂರು ಮೈಲುಗಳ ಕಠಿಣ ಪ್ರಯಾಣ ಮಾಡಿ ಬಂದ ನ್ಯಾನ್ ಯಿನ್ ನ ಅವನ ಮಾಸ್ಟರ್ ಕೇಳಿದ ಮೊದಲ ಪ್ರಶ್ನೆ ಏನು ಗೊತ್ತ? ಆ ಪ್ರಶ್ನೆಯಲ್ಲಿ ಯಾವ ಅನುಭಾವ ಯಾವ ಫಿಲಾಸೊಫಿಯೂ ಇರಲಿಲ್ಲ.

ಮಾಸ್ಟರ್ ಕೇಳಿದ ಪ್ರಶ್ನೆ, “ ನಿನ್ನ ಊರಿನಲ್ಲಿ ಅಕ್ಕಿಯ ಬೆಲೆ ಎಷ್ಟು?”

ನ್ಯಾನ್ ಯಿನ್ ಥಟ್ಟನೇ ಉತ್ತರಿಸಿದ್ದ. “ ನಾನು ಈಗ ಅಲ್ಲಿಲ್ಲ, ಇಲ್ಲಿದ್ದೇನೆ. ನನಗೆ ಹಿಂತಿರುಗಿ ನೋಡುವ ಅಭ್ಯಾಸ ಇಲ್ಲ, ದಾಟಿದ ಎಲ್ಲ ಸೇತುವೆಗಳನ್ನೂ ನಾನು ನಾಶ ಮಾಡಿಬಿಡುತ್ತೇನೆ. ಆದ್ದರಿಂದ ನನಗೆ ಯಾವ ಅಕ್ಕಿಯ ಬೆಲೆಯೂ ನೆನಪಿಲ್ಲ.”

ನ್ಯಾನ್ ಯಿನ್ ನ ಉತ್ತರ ಕೇಳಿ ಮಾಸ್ಟರ್ ಸಿಕ್ಕಾಪಟ್ಟೆ ಖುಶಿಯಾಗಿದ್ದ. ನ್ಯಾನ್ ಯಿನ್ ನ ಅಪ್ಪಿಕೊಂಡು ಆಶೀರ್ವಾದ ಮಾಡಿದ್ದ,

“ ನಿನ್ನ ಊರಿನ ಅಕ್ಕಿಯ ಬೆಲೆಯನ್ನ ನೀನೇನಾದರೂ ಹೇಳಿದ್ದರೆ, ಆಶ್ರಮದಿಂದ ನಿನ್ನ ಹೊರಗೆ ಹಾಕಿ ಬಿಡುತ್ತಿದ್ದೆ. ಏಕೆಂದರೆ ಇದು ಝೆನ್ ಶಾಲೆ, ನಮಗೆ ಕ್ಷಣ ಕ್ಷಣದ ಬದುಕಿನಲ್ಲಿ ಆಸಕ್ತಿ, ಅಕ್ಕಿಯ ವ್ಯಾಪಾರದಲ್ಲಿ ಅಲ್ಲ.”

Leave a Reply