ಸಹವಾಸದ ಫಲ!

ನಿರೂಪಣೆ: ಚಿದಂಬರ ನರೇಂದ್ರ

ಜಗತ್ತು ನಿಂತಿರೋದೇ
‘ಕೊಡು-ಕೊಳ್ಳುವಿಕೆ’ ಯ
ಸಿದ್ಧಾಂತದ ಮೇಲೆ.

ಒಂದು ಹನಿ ಅಂತಃಕರಣ,
ಒಂದು ತುಣುಕು ಕೇಡು ಕೂಡ
ಕೊಟ್ಟಿದ್ದಕ್ಕೆ ಮೋಸವಿಲ್ಲದಂತೆ
ವಾಪಸ್ಸಾಗಿ
ಮತ್ತೆ ನಮ್ಮನ್ನು ಸೇರುತ್ತವೆ.

ಯಾರಾದರೂ
ಖೆಡ್ಡಾ ತೋಡುತ್ತಿದ್ದಾರೆಂದರೆ
ನೆನಪಿರಲಿ, ಭಗವಂತ
ಎಲ್ಲರಿಗಿಂತ ದೊಡ್ಡ ತಂತ್ರಗಾರ.

ಈ ಮಾತನ್ನ ಗಟ್ಟಿಯಾಗಿ ನಂಬಿ,
ಒಂದು ಎಲೆ ಕೂಡ ಕಂಪಿಸುವುದಿಲ್ಲ
ಭಗವಂತನ ಅಣತಿಯಿಲ್ಲದೆ.

ಅದ್ಭುತವಾದುದನ್ನೇ ಸೃಷ್ಟಿಸುತ್ತಾನೆ ಭಗವಂತ
ಏನೇ ಸೃಷ್ಟಿಸಿದರು.

~ ಶಮ್ಸ್ ತಬ್ರೀಝಿ

*******************

ಸದಾ ನೆಲದ ಮೇಲೆ ಜೀವಿಸುವ ಇಲಿಯೊಂದು ದುರದೃಷ್ಟವಶಾತ್ ಅದು ಹೇಗೋ ಅರ್ಧ ನೆಲ ಅರ್ಧ ನೀರಿನಲ್ಲಿ ಜೀವಿಸುವ ಕಪ್ಪೆಯೊಂದಿಗೆ ತೀವ್ರ ಗೆಳೆತನ ಬೆಳೆಸಿಕೊಂಡುಬಿಟ್ಟಿತ್ತು.

ಇಲಿ ಮತ್ತು ಕಪ್ಪೆ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತ ಗೆಳೆತನವನ್ನು ನಿಭಾಯಿಸಿಕೊಂಡು ಇದ್ದವು. ಆದರೆ ಒಂದು ದಿನ ಕಪ್ಪೆಗೆ ತರಲೆ ಮಾಡಬೇಕೆಂಬ ಮನಸ್ಸಾಯಿತು. ಅದು ಒಂದು ಗಟ್ಟಿ ದಾರದಿಂದ ಇಲಿಯ ಕಾಲನ್ನು ತನ್ನ ಕಾಲಿಗೆ ಕಟ್ಟಿಕೊಂಡಿತು.

ಆ ದಿನ ಇಬ್ಬರೂ ಕೂಡಿಯೇ ಓಡಾಡಿದರು. ತಾವು ದಿನ ನಿತ್ಯ ಆಹಾರ ಹುಡುಕುತ್ತಿದ್ದ ಹೊಲಕ್ಕೆ ಕೂಡಿಯೇ ಹೋಗಿ ಬಂದರು. ಸಂಜೆಯ ಹೊತ್ತಿಗೆ ಕಪ್ಪೆ ನಿಧಾನವಾಗಿ ಇಲಿಯನ್ನು ತಾನು ವಾಸಿಸುತ್ತಿದ್ದ ಕೊಳದ ಬಳಿ ಕರೆದುಕೊಂಡು ಹೋಯಿತು. ಇಲಿ ನೋಡ ನೋಡುತ್ತಿದ್ದಂತೆಯೇ ಕಪ್ಪೆ ಕೊಳದಲ್ಲಿ ಜಿಗಿದು ಆರಾಮಾಗಿ ಈಸ ತೊಡಗಿತು. ಅದರ ಜೊತೆಯೇ ನೀರಿಗೆ ಬಿದ್ದ ಇಲಿ ಎರಡು ನಿಮಿಷ ಒದ್ದಾಡಿ ಕೊನೆಗೆ ಸತ್ತು ಹೋಯಿತು.

ಕಪ್ಪೆ ನೀರಲ್ಲಿ ಈಸತೊಡಗಿದಂತೆಲ್ಲ ಸತ್ತ ಇಲಿಯ ಹೆಣ ನೀರಿನ ಮೇಲೆ ತೇಲತೊಡಗಿತು. ಇದನ್ನು ಗಮನಿಸಿದ ಆಕಾಶದಲ್ಲಿ ಹಾರುತ್ತಿದ್ದ ಹದ್ದು ಥಟ್ಟನೇ ಹಾರಿ ಬಂದು ಇಲಿಯ ಹೆಣವನ್ನು ಕೊಕ್ಕಿನಿಂದ ಕಚ್ಚಿಕೊಂಡು ತನ್ನ ಗೂಡಿಗೆ ತೆಗೆದುಕೊಂಡು ಹೋಯಿತು.

ಇನ್ನೂ ಇಲಿಯ ಕಾಲಿಗೆ ತನ್ನ ಕಾಲನ್ನು ಕಟ್ಟಿಕೊಂಡಿದ್ದ ಕಪ್ಪೆ ಕೂಡ ಇಲಿಯೊಡನೆ ಹದ್ದಿನ ಗೂಡು ಸೇರಿತು. ಹದ್ದು, ಇಲಿ ಮತ್ತು ಕಪ್ಪೆ ಎರಡನ್ನೂ ತಿಂದು ಹಾಕಿತು.

~ ಖಲೀಲ್ ಜಿಬ್ರಾನ್

Leave a Reply