ಮಾಸ್ಟರ್ ಮಾತಾಡುವುದು ಯಾವಾಗ? : ಓಶೋ ವ್ಯಾಖ್ಯಾನ

ನಿಮ್ಮ ಸುಳ್ಳುಗಳನ್ನ ಬೆಂಬಲಿಸಬೇಕೆನ್ನುವುದು ನಿಮ್ಮ ಬಯಕೆಯೇ ಹೊರತು ನಾಶಮಾಡಬೇಕೆನ್ನುವುದಲ್ಲ. ಆದರೆ ಮಾಸ್ಟರ್ ಗೆ ನಿಮ್ಮ ಬಯಕೆಗಳ ಹಂಗು ಇಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ಮಗು ಮಾತೇ ಆಡುತ್ತಿರಲಿಲ್ಲ. ಮೂರು ವರ್ಷ ಆದರೂ ಮಗು ಮಾತನಾಡದಿರುವುದನ್ನ ಕಂಡು ತಂದೆ ತಾಯಿಗೆ ಆತಂಕ ಶುರುವಾಯಿತು. ಅವರು ಮಗುವನ್ನು ಎಲ್ಲ ವೈದ್ಯರಿಗೆ ತೋರಿಸಿದರು, ಎಷ್ಟೋ ದೇವರುಗಳಿಗೆ ಹರಕೆ ಹೊತ್ತರು.

ಆದರೆ ಕೊನೆಗೊಮ್ಮೆ ಮಗುವಿಗೆ ಏಳು ವರ್ಷ ವಯಸ್ಸು ಆಗಿದ್ದಾಗ ಮಗು ಥಟ್ಟನೇ ಮಾತನಾಡಿತು. ಅಂದು ಮಗು, ಅಪ್ಪ ಅಮ್ಮನೊಡನೆ ಊಟ ಮಾಡುತ್ತಿದ್ದಾಗ ಮೊದಲ ಬಾರಿ ಮಾತನಾಡಿತು. ಅದರ ಬಾಯಿಯಿಂದ ಬಂದ ಮೊದಲ ವಾಕ್ಯ ಏನು ಗೊತ್ತೆ? “

“ಅಮ್ಮ ಸಾರಿಗೆ ಉಪ್ಪು ಕಡಿಮೆಯಾಗಿದೆ.”

ಎಂದೂ ತಮ್ಮನ್ನ ಅಪ್ಪ ಅಮ್ಮ ಎಂದು ಕರೆಯದ ಮಗು ಧಿಡೀರನೇ ಮಾತಾಡಿದ್ದು ಮತ್ತು ಹೀಗೆ ವಿಚಿತ್ರವಾಗಿ ಮಾತನಾಡಿದ್ದು ತಂದೆ ತಾಯಿಯ ಆಶ್ಚರ್ಯಕ್ಕೆ ಕಾರಣವಾಗಿತ್ತು.

“ದೇವರು ದೊಡ್ಡವನು” ತಾಯಿ ಸಂತೋಷದಿಂದ ಉದ್ಗಾರ ಮಾಡಿದಳು. “ಎಷ್ಟು ಚೆನ್ನಾಗಿ ಎಷ್ಟು ಸ್ಪಷ್ಟವಾಗಿ ಮಾತನಾಡುತ್ತೀಯ, ಆದರೆ ಇಷ್ಟು ದಿನ ಏಕೆ ಮಾತನಾಡಲಿಲ್ಲ?” ತಾಯಿ ಮಗುವನ್ನ ಪ್ರಶ್ನೆ ಮಾಡಿದಳು.

“ ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು “
ಮಗು ಉತ್ತರಿಸಿತು.

ಮಾಸ್ಟರ್ ಮಾತನಾಡುವುದು ಕೂಡ ಹೀಗೆ, ಏನಾದರೂ ತಪ್ಪು ಅನಿಸಿದಾಗ ಮಾತ್ರ. ಎಲ್ಲವೂ ಸರಿ ಇದ್ದಾಗ ಅವನು ಮಾತನಾಡುವುದಿಲ್ಲ, ಸುಮ್ಮನಿದ್ದುಬಿಡುತ್ತಾನೆ. ತಪ್ಪು ಕಂಡಾಗ ಮಾತ್ರ ಮಾಸ್ಟರ್ ಮಾತನಾಡುತ್ತಾನೆ. ಅದು ನಿಮ್ಮ ಮನಸ್ಸನ್ನು ನೋಯಿಸಬಹುದು, ನಿಮ್ಮನ್ನು ಮುಜುಗರಕ್ಕೆ ಈಡು ಮಾಡಬಹುದು.

ನಿಮಗೆ ಹೊಗಳಿಕೆ ಇಷ್ಟ, ಟೀಕೆ ಅಲ್ಲ. ಯಾರಾದರೂ ನಿಮ್ಮ ಬೆನ್ನು ತಟ್ಟುತ್ತಲೇ ಇರಬೇಕೆಂದು ನೀವು ಬಯಸುತ್ತೀರಿ, ವಿಮರ್ಶೆಯ ಒಂದು ಮಾತೂ ನಿಮಗೆ ಇಷ್ಟವಾಗುವುದಿಲ್ಲ. ಜನ ನಿಮ್ಮ ಸುಳ್ಳುಗಳನ್ನ ಬೆಂಬಲಿಸಬೇಕೆನ್ನುವುದು ನಿಮ್ಮ ಬಯಕೆಯೇ ಹೊರತು ನಾಶಮಾಡಬೇಕೆನ್ನುವುದಲ್ಲ. ಆದರೆ ಮಾಸ್ಟರ್ ಗೆ ನಿಮ್ಮ ಬಯಕೆಗಳ ಹಂಗು ಇಲ್ಲ. ಅವನಿಗೆ ನಿಮ್ಮ ಸುಳ್ಳುಗಳನ್ನ ನಾಶ ಮಾಡಲೇಬೇಕಿದೆ, ಸತ್ಯವನ್ನು ನಿಮ್ಮ ಎದುರು ಪ್ರತಿಷ್ಠಾಪಿಸಲೇ ಬೇಕಿದೆ.

ಸತ್ಯ ನಿಮ್ಮನ್ನ ನೋಯಿಸುತ್ತಿಯಾದರೆ ಅದು ನಿಮ್ಮ ಸಮಸ್ಯೆ, ಮಾಸ್ಟರ್ ಗೆ ಯಾರನ್ನೂ ನೋಯಿಸುವ ಇಚ್ಛೆ ಇಲ್ಲ. ಅವನ ಮಾತುಗಳು ಯಾವಾಗಲೂ ಸ್ಪಷ್ಟ ಎಂದೂ ಕಠೋರ ಅಲ್ಲ.

Leave a Reply