ಚೆಲುವಿನ ವ್ಯಾಖ್ಯಾನ

ಅಂದಿನಿಂದ ಇಂದಿನವರೆಗೆ ಗಂಡು ಹೆಣ್ಣುಗಳು ಚೆಲುವನ್ನು ಕುರೂಪ ಎಂದೂ, ಕುರೂಪವನ್ನು ಚೆಲುವು ಎಂದು ತಪ್ಪು ತಿಳಿದುಕೊಂಡು ಸಮಸ್ಯೆಗಳನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ… । ಚಿದಂಬರ ನರೇಂದ್ರ

ತಾನು ಎಷ್ಟು ವಿಶೇಷಳು
ಎಂಬುದನ್ನ
‘ಚೆಲುವು’ ತುಂಬಾ ಚೆನ್ನಾಗಿ ಬಲ್ಲಳು.
ಅದಕ್ಕೆಂದೇ ಆಕೆ ಒಮ್ಮೊಮ್ಮೆ
ಚಂಚಲೆಯಂತೆ ವರ್ತಿಸುತ್ತಾಳೆ.
ನಾವು ಆಕೆಯೊಂದಿಗೆ
ಕೆಲ ಸಮಯ ಕಳೆದರೂ ಸಾಕು
ನಮ್ಮ ಬದುಕು ಮೊದಲಿನ ಹಾಗಿರುವುದಿಲ್ಲ
ಇದು ಆಕೆ ಗೊತ್ತು.

ಹೌದು
ಆಕೆ ಅಂದುಕೊಂಡದ್ದರಲ್ಲಿ ತಪ್ಪೇನಿಲ್ಲ
ಅವಳು ಬಲು ಜಾಣೆ.

ಪ್ರಕೃತಿಯ ಸೌಜನ್ಯ,
ಕಲೆಯೊಳಗಿನ ಧೀಮಂತಿಕೆ,
ಎದೆ ತಟ್ಟಿದ ಸಂಗೀತ,
ನಮ್ಮ ಮುಖವನ್ನು ಮೃದುವಾಗಿಸಿಲ್ಲವೇ?
ನಮ್ಮ ಸ್ಪರ್ಶದ ಬೇಡಿಕೆಯನ್ನು ಹೆಚ್ಚಿಸಿಲ್ಲವೇ?
ನಮ್ಮ ದನಿಯನ್ನು ಹೆಚ್ಚು ಶ್ರೀಮಂತ,
ಹೆಚ್ಚು ಜೀವಂತವಾಗಿಸಿಲ್ಲವೇ?
ಈ ಜಗತ್ತನ್ನು ಮೊದಲಿಗಿಂತಲೂ
ಸಹನೀಯವಾಗಿಸಿಲ್ಲವೇ?

ನಿನ್ನ ಭರವಸೆ
ಈಗ ನನಗೆ ಹೆಚ್ಚು ರುಚಿ ಅನಿಸುತ್ತಿದೆ.

– ಹಾಫೀಜ್

****************

ಖಲೀಲ್ ಜಿಬ್ರಾನ್ ಒಂದು ಕಥೆ ಹೇಳುತ್ತಾನೆ……

ಒಂದು ದಿನ ಚೆಲುವು ಮತ್ತು ಕುರೂಪ ಸಮುದ್ರದ ದಂಡೆಯ ಮೇಲೆ ಭೇಟಿಯಾದವು, ಸಮುದ್ರದ ನೀರಿನಲ್ಲಿ ಜಲಕ್ರೀಡೆಯಾಡುವ ಎಂದು ಮಾತನಾಡಿಕೊಂಡವು.

ಎರಡೂ ತಮ್ಮ ತಮ್ಮ ಬಟ್ಟೆ ಕಳಚಿಟ್ಟು ಸಮುದ್ರದ ನೀರಿಗಿಳಿದವು. ಬಹಳ ಹೊತ್ತಿನವರೆಗೆ ಸಮುದ್ರದ ನೀರಿನಲ್ಲಿ ಆಟ ಆಡಿದವು. ಸ್ವಲ್ಪ ಹೊತ್ತಿನ ನಂತರ ಲಗುಬಗೆಯಿಂದ ದಂಡೆಗೆ ಬಂದ ಕುರೂಪ, ಚೆಲುವು ಕಳಚಿಟ್ಟ ಬಟ್ಟೆಯನ್ನು ತಾನು ಧರಿಸಿಕೊಂಡು ಅಲ್ಲಿಂದ ಹೊರಟುಬಿಟ್ಟಿತು.

ನಂತರ ದಂಡೆಗೆ ಬಂದ ಚೆಲುವಿಗೆ ಅಲ್ಲಿ ತನ್ನ ಬಟ್ಟೆ ಇಲ್ಲದಿರುವುದು ಕಂಡುಬಂದಿತು. ಬಹಳ ಹೊತ್ತು ಅಲ್ಲಿ ಇಲ್ಲಿ ತನ್ನ ಬಟ್ಟೆಗಾಗಿ ಹುಡುಕಾಟ ನಡೆಸಿದ ಚೆಲುವು , ಹೆಚ್ಚು ಹೊತ್ತು ಬತ್ತಲೆಯಾಗಿರಲು ಬಯಸದೇ ಅಲ್ಲಿಯೇ ಬಿದ್ದಿದ್ದ ಕುರೂಪದ ಬಟ್ಟೆ ಧರಿಸಿ ತಾನು ಬಂದ ದಿಕ್ಕಿನತ್ತ ಪ್ರಯಾಣ ಬೆಳೆಸಿತು.

ಅಂದಿನಿಂದ ಇಂದಿನವರೆಗೆ ಗಂಡು ಹೆಣ್ಣುಗಳು ಚೆಲುವನ್ನು ಕುರೂಪ ಎಂದೂ, ಕುರೂಪವನ್ನು ಚೆಲುವು ಎಂದು ತಪ್ಪು ತಿಳಿದುಕೊಂಡು ಸಮಸ್ಯೆಗಳನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ.

ಆದರೆ ಇಂದಿಗೂ ಚೆಲುವಿನ ಮುಖವನ್ನು ತಮ್ಮ ಕಣ್ಣಲ್ಲಿ ನೆನಪಿಟ್ಟುಕೊಂಡ ಜನರಿದ್ದಾರೆ ಹಾಗೆಯೇ ಕುರೂಪ ಹೊದ್ದುಕೊಂಡಿರುವ ಬಟ್ಟೆ ತಮ್ಮನ್ನು ಮೋಸಗೊಳಿಸದಿರುವಂತೆ ಕೆಲವರು ಅರಿವು ಸಾಧಿಸಿಕೊಂಡಿದ್ದಾರೆ.

ಒಂದು ದಿನ ನಸ್ರುದ್ದೀನ್ ಗೆಳೆಯನ ಜೊತೆ ವಾದ ಮಾಡುತ್ತಿದ್ದ.

ನಸ್ರುದ್ದೀನ್ : ನಿನ್ನ ಹೆಂಡತಿ ಪರಮಸುಂದರಿ ಅನ್ನೋ ಭ್ರಮೆ ನಿನಗಿದ್ದರೆ, ಒಮ್ಮೆ ನನ್ನ ಗರ್ಲ್ ಫ್ರೆಂಡ್ ನ ಭೇಟಿ ಮಾಡು.

ಗೆಳೆಯ : ಏನು! ನಿನ್ನ ಗರ್ಲ್ ಫ್ರೆಂಡ್ ಅಷ್ಟು ಚೆಲುವೆ ನಾ ?

ನಸ್ರುದ್ದೀನ್ : ಅವಳು ಕಣ್ಣಿನ ಡಾಕ್ಟರು

Leave a Reply