‘ಜ್ಞಾನೋದಯ’ ಶಬ್ದಕೋಶದ ಜೊತೆಗೆ ಬರುವುದಿಲ್ಲ

ಬುದ್ಧ ಒಂದೇ ಒಂದು ಮಾತೂ ಆಡಲಿಲ್ಲ, ಸುಮ್ಮನೇ ಆ ಹೂವನ್ನು ಎತ್ತಿ ಹಿಡಿದಿದ್ದ. ಶಿಷ್ಯರಿಗೆ ಬುದ್ಧ ಏನು ಮಾಡುತ್ತಿದ್ದಾನೆನ್ನುವುದು ಅರ್ಥವೇ ಆಗಲಿಲ್ಲ. ಎಲ್ಲ ಶಿಷ್ಯರ ಮುಖದಲ್ಲಿಯೂ ಪ್ರಶ್ನೆ ಎದ್ದುಕಾಣುತ್ತಿತ್ತು… | ಚಿದಂಬರ ನರೇಂದ್ರ

ಮಹಾ ಪರ್ವತದ ಮೇಲಿದ್ದ ಸರೋವರದ ದಂಡೆಯಲ್ಲಿ ನಿಂತಿದ್ದ ಬುದ್ಧ, ತನ್ನ ಮಾತುಗಳನ್ನ ಕೇಳಲು ಅಲ್ಲಿ ನೆರೆದಿದ್ದ ಶಿಷ್ಯ ಸಮೂಹ ತಮ್ಮ ತಮ್ಮ ಜಾಗೆಗಳಲ್ಲಿ ಕುಳಿತುಕೊಳ್ಳುವುದನ್ನೇ ಕಾಯುತ್ತಿದ್ದ. ಆಗಲೇ ಸರೋವರದ ಕೆಸರಲ್ಲಿ ಅರಳಿದ್ದ ಬಂಗಾರದ ಕಮಲ ಅವನ ಕಣ್ಣಿಗೆ ಬಿತ್ತು.

ಕೂಡಲೇ ಬುದ್ಧ ಆ ಹೂವನ್ನು ಬೇರು, ಕಾಂಡ ಮತ್ತು ಹೂವು ಸಮೇತ ಕಿತ್ತು ತನ್ನ ಎಲ್ಲ ಶಿಷ್ಯರಿಗೂ ಕಾಣಿಸುವಂತೆ ಎತ್ತಿ ಹಿಡಿದ. ಬಹಳ ಹೊತ್ತಿನವರೆಗೆ ಅಲ್ಲಿ ಮೌನ ಮನೆ ಮಾಡಿತ್ತು. ಬುದ್ಧ ಒಂದೇ ಒಂದು ಮಾತೂ ಆಡಲಿಲ್ಲ, ಸುಮ್ಮನೇ ಆ ಹೂವನ್ನು ಎತ್ತಿ ಹಿಡಿದಿದ್ದ. ಶಿಷ್ಯರಿಗೆ ಬುದ್ಧ ಏನು ಮಾಡುತ್ತಿದ್ದಾನೆನ್ನುವುದು ಅರ್ಥವೇ ಆಗಲಿಲ್ಲ. ಎಲ್ಲ ಶಿಷ್ಯರ ಮುಖದಲ್ಲಿಯೂ ಪ್ರಶ್ನೆ ಎದ್ದುಕಾಣುತ್ತಿತ್ತು.

ಅಷ್ಟರಲ್ಲಿಯೇ ಶಿಷ್ಯ ಮಹಾಕಶ್ಯಪನ ಮುಖದಲ್ಲಿ ನಗು ಅರಳಿತು, ಅವನಿಗೆ ಬುದ್ಧನ ಮಾತು ಅರ್ಥವಾಗಿತ್ತು.

ಮಹಾಕಶ್ಯಪನಿಗೆ ಏನು ಅರ್ಥ ಆಯಿತು ಎನ್ನುವುದು ಶತಮಾನಗಳಿಂದ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಬುದ್ಧ, ಮಹಾಕಶ್ಯಪನಿಗೆ ಯಾವ ಸಂದೇಶ ಕೊಟ್ಟ?

ಕೆಲವರ ಪ್ರಕಾರ ಬೇರು, ಕಾಂಡ ಮತ್ತು ಹೂವು ಮೂರು ಜಗತ್ತುಗಳನ್ನ ಪ್ರತಿನಿಧಿಸುತ್ತವೆ, ಪಾತಾಳ, ಭೂಮಿ ಮತ್ತು ಆಕಾಶ. ಬಹುಶಃ ಈ ಮೂರು ಲೋಕಗಳನ್ನೂ ತನ್ನ ಅಂಗೈಯಲ್ಲಿ ಎತ್ತಿಹಿಡಿಯಬಲ್ಲೆ ಎಂದು ಬುದ್ಧ ಹೇಳುತ್ತಿದ್ದಾನೆ.

ಕೆಲವರು, ಮಹಾಮಂತ್ರ “ಮಣಿ ಪದ್ಮೇ ಹಂ” ರತ್ನ ಇರುವುದು ಕಮಲದ ಒಳಗೆ ಎನ್ನುವುದನ್ನ ಬುದ್ಧ ರಿವರ್ಸ್ ಆಗಿ ಹೇಳುತ್ತಿದ್ದಾನೆ ಎಂದು ತಿಳಿದುಕೊಂಡರು. ಬುದ್ಧ ಕಮಲವನ್ನು ಎತ್ತಿ ಹಿಡಿದಾಗ, ಕಮಲ ರತ್ನದ ಒಳಗೆ ಇದೆ ಎಂದು ಜನ ಅರ್ಥ ಮಾಡಿಕೊಂಡರು.

ಕೆಲವು ಜನ ಬೇರು, ಕಾಂಡ ಮತ್ತು ಹೂವನ್ನ , ಚಕ್ರ ಧ್ಯಾನ ಪದ್ಧತಿಯ ಮೂಲಾಧಾರ, ಬೆನ್ನೆಲುಬು ಮತ್ತು ಸಹಸ್ರದಳ ಕಮಲ ಎಂದುಕೊಂಡರು. ಮತ್ತು ಹೀಗೆ ಹೂವನ್ನು ಎತ್ತಿ ಹಿಡಿಯುವ ಮೂಲಕ ಬುದ್ಧ ಚಕ್ರ ಧ್ಯಾನವನ್ನ ಪ್ರಚಾರ ಮಾಡುತ್ತಿದ್ದಾನೆ ಎಂದು ತಿಳಿದುಕೊಂಡರು.

ಕೆಲವರು ಇಷ್ಟು ದಿನ ತಂದೆ ತಾಯಿ ಮಾತ್ರ ಆಗಿದ್ದ ಬುದ್ಧ ಈಗ ಮಗನೂ ಆಗಿ, ಕಮಲವನ್ನು ಕೈಯಲ್ಲಿ ಹಿಡಿದುಕೊಂಡ ಮೈತ್ರೇಯ, ಭವಿಷ್ಯದ ಬುದ್ಧನಾಗಿ ತನ್ನ ತ್ರಿಪಾತ್ರಗಳ ಸಂಪೂರ್ಣಗೊಳ್ಳುವಿಕೆಯನ್ನ ಸೂಚಿಸುತ್ತಿದ್ದಾನೆ ಎಂದುಕೊಂಡರು.

ಚಾನ್ ನಲ್ಲಿ ನಾವು ಹೀಗೆ ಹಲವಾರು ಸಂಗತಿಗಳ ಬಗ್ಗೆ ಯೋಚಿಸುವುದಿಲ್ಲ. ಜ್ಞಾನೋದಯ ಹೀಗೆ ಶಬ್ದಕೋಶದ ಜೊತೆಗೆ ಬರುವುದಿಲ್ಲ ಎನ್ನುವ ನಿಜ ಮಾತ್ರ ನಮಗೆ ಗೊತ್ತು. ನಿರ್ವಾಣದ ಸೇತುವೆ ಹೀಗೆ ಅನಿಸಿಕೆಗಳಿಂದ ಕಟ್ಟಲ್ಪಟ್ಟಿಲ್ಲ ಎನ್ನುವ ಸತ್ಯ ಮಾತ್ರ ಗೊತ್ತು. ಲಾವೋತ್ಸೇ ಹೇಳುವಂತೆ, “ ಹೇಳಬಹುದಾದರೆ ಅದು ತಾವೋ ಅಲ್ಲ”.

ಅಂದು ಬುದ್ಧ ಮೌನದಲ್ಲಿ ಮಾತನಾಡಿದ, ಆದರೆ ಬುದ್ಧ ಹೇಳಿದ್ದು ಏನು?

ಬಹುಶಃ ಬುದ್ಧ ಹೀಗೆ ಹೇಳುತ್ತಿದ್ದಾನೆ,

ಸಂಸಾರದ ಕೆಸರಿನಲ್ಲಿ ಕಮಲ ಶುದ್ಧವಾಗಿ, ನಿರ್ಮಲ ವಾಗಿ ಹುಟ್ಟುವಂತೆ, ಅಹಂ – ಪ್ರಜ್ಞೆಗಳನ್ನು ದಾಟಿ ಹೂವಿನೊಡನೆ ಒಂದಾಗಿ !

There! The Buddha gave a lecture and nobody had to take any notes.

Leave a Reply