ಟೀ ಮಾಸ್ಟರ್ ಕಲಿಸಿದ ಪಾಠ

ಶಿಷ್ಯನ ಮಾತಿನಿಂದ ಉತ್ಸಾಹಭರಿತನಾದ ಮಾಸ್ಟರ್ ನಿಧಾನವಾಗಿ ಯುದ್ಧಕಣದೊಳಗೆ ಪ್ರವೇಶ ಮಾಡಿದ. ಸಮುರಾಯಿ ಕೂಡ ಆಕ್ರೋಶಭರಿತನಾಗಿ ಯುದ್ಧಕಣಕ್ಕೆ ಧುಮುಕಿದ. ಆಮೇಲೆ… | ಚಿದಂಬರ ನರೇಂದ್ರ

ಒಂದು ಪರ್ವತದ ಮೇಲೆ ಒಬ್ಬ ಪ್ರಸಿದ್ಧ ಚಹಾ ಮಾಸ್ಟರ್ ವಾಸವಾಗಿದ್ದ. ಚಹಾ ಧ್ಯಾನದಲ್ಲಿ ಅವನನ್ನು ಮೀರಿಸುವವರು ಸುತ್ತಲೂ ಯಾರೂ ಇರಲಿಲ್ಲ. ದೂರದ ಊರುಗಳಿಂದ ಜನ ಅವನ ಚಹಾ ಪಾರ್ಟಿಗಳಿಗೆ ಆಗಮಿಸುತ್ತಿದ್ದರು.

ಒಂದು ದಿನ ಒಬ್ಬ ದುಡುಕಿನ ಸಮುರಾಯಿ, ಮಾಸ್ಟರ್ ಕೊಟ್ಟ ಗ್ರೀನ್ ಟೀ ಕುಡಿದು ನಾಲಿಗೆ ಸುಟ್ಟುಕೊಂಡ. ಸಿಟ್ಟಿನಿಂದ ಉದ್ರಿಕ್ತನಾದ ಸಮುರಾಯಿ ಟೀ ಮಾಸ್ಟರ್ ವಿರುದ್ಧ ಸಮರ ಘೋಷಿಸಿದ. ಮಾಸ್ಟರ್ ನನ್ನು ದ್ವಂದ್ವ ಯುದ್ಧಕ್ಕೆ ಆಹ್ವಾನಿಸಿದ.

ಸಮುರಾಯಿ ರುದ್ರಾವತಾರವನ್ನು ಕಂಡು ಟೀ ಮಾಸ್ಟರ್ ತನ್ನ ಶಿಷ್ಯನಿಗೆ ಹೇಳಿದ……

“ಜೀವನವಿಡೀ ನಾನು ಚಹಾ ಮಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಜನ್ಮದಲ್ಲೇ ನಾನು ಖಡ್ಗ ಹಿಡಿದವನಲ್ಲ. ಬಹುಶಃ ಇದು ನನ್ನ ಬದುಕಿನ ಕೊನೆ ಅನಿಸುತ್ತದೆ. ಇನ್ನು ಮುಂದೆ ನೀನೇ ನನ್ನ ಕೆಲಸ ಮುಂದುವರೆಸು”.

ಮಾಸ್ಟರ್ ಮಾತು ಕೇಳಿ ಶಿಷ್ಯ ಸಿಟ್ಟಿನಿಂದ ಕಿರುಚಿದ…..

“ಹಿಂಜರಿಯಬೇಡಿ ಮಾಸ್ಟರ್, ಇಗೋ ನನ್ನ ಖಡ್ಗ ತೆಗೆದುಕೊಳ್ಳಿ, ಚಹಾ ಪಾತ್ರೆಯನ್ನು ಎತ್ತಿಕೊಂಡಷ್ಟು ಘನತೆಯಿಂದ ಖಡ್ಗವನ್ನು ಎತ್ತಿ ಹಿಡಿದು ಈ ಸಮುರಾಯಿಯನ್ನು ಎದುರಿಸಿ”.

ಶಿಷ್ಯನ ಮಾತಿನಿಂದ ಉತ್ಸಾಹಭರಿತನಾದ ಮಾಸ್ಟರ್ ನಿಧಾನವಾಗಿ ಯುದ್ಧಕಣದೊಳಗೆ ಪ್ರವೇಶ ಮಾಡಿದ. ಸಮುರಾಯಿ ಕೂಡ ಆಕ್ರೋಶಭರಿತನಾಗಿ ಯುದ್ಧಕಣಕ್ಕೆ ಧುಮುಕಿದ.

ಮಾಸ್ಟರ್ ಕಣ್ಣುಮುಚ್ಚಿಕೊಂಡು ತನ್ನ ಚಹಾ ಸಂಪ್ರದಾಯದಲ್ಲಿ ಮಾಡುವಂತೆ ಘನತೆಯಿಂದ, ತನ್ನ ಎಲ್ಲ ಶಕ್ತಿಯನ್ನು ಕೈಯಲ್ಲಿ ಆಹ್ವಾನಿಸಿಕೊಂಡು ಖಡ್ಗವನ್ನು ಆಕಾಶದತ್ತ ಎತ್ತಿದ.

ಮಾಸ್ಟರ್ ತೋರಿದ ಅದ್ಭುತ ಘನತೆ ಮತ್ತು ಸಮತೋಲವನ್ನು ನೋಡಿ ಸಮುರಾಯಿ ಗಾಬರಿಯಾದ, ಈತ ಒಬ್ಬ ಮಹಾನ ಕತ್ತಿವರಸೆಯ ಪಟು ಎಂದುಕೊಂಡು ಜಾಗ ಖಾಲೀ ಮಾಡಿದ. ಮತ್ತೆಂದೂ ಸಮುರಾಯಿ ಆ ಚಹಾ ಆಶ್ರಮದ ಸುತ್ತ ಕಾಣಿಸಿಕೊಳ್ಳಲಿಲ್ಲ.

ಒಬ್ಬ ಝೆನ್ ವಿದ್ಯಾರ್ಥಿಗೆ ಮಾರ್ಶಲ್ ಆರ್ಟ್ ನ ಹುಚ್ಚು. ಝೆನ್ ಜೊತೆಜೊತೆಗೆ ಯುದ್ಧಕಲೆಯನ್ನೂ ಅಭ್ಯಾಸ ಮಾಡುತ್ತಿದ್ದ.

ಒಮ್ಮೆ ಅವನಿಗೆ ತನ್ನ ಯುದ್ಧಕಲೆಯನ್ನು ಬಳಸಿ ಗುರುವಿನ ಸಾಮರ್ಥ್ಯ ಪರೀಕ್ಷಿಸುವ ಮನಸ್ಸಾಯಿತು.

ಗುರು ವಿಶ್ರಾಂತಿಯಲ್ಲಿದ್ದಾಗ ಅಚಾನಕ್ ಆಗಿ ಈಟಿಯಿಂದ ಗುರುವಿನ ಮೇಲೆ ಆಕ್ರಮಣ ಮಾಡಿದ.

ಗುರು ಕ್ಷಣಾರ್ಧದಲ್ಲಿ ತನ್ನ ಜಪಮಣಿ ಬಳಸಿ ಈಟಿಯ ದಿಕ್ಕನ್ನೇ ಬದಲಾಯಿಸಿದ.
ಶಿಷ್ಯನಿಗೆ ಆಶ್ಚರ್ಯವಾಯಿತು.

ಗುರು ಉತ್ತರಿಸಿದ

“ ಹುಡುಗಾ, ನಿನ್ನ ಯುದ್ಧತಂತ್ರ ಇನ್ನೂ ಪಕ್ವವಾಗಿಲ್ಲ, ಈಟಿಗಿಂತಲೂ ಮೊದಲು ನಿನ್ನ mind move ಆಗಿದ್ದನ್ನ ನಾನು ಕ್ಷಣಾರ್ಧದಲ್ಲಿ ಗಮನಿಸಿದೆ”

Leave a Reply