ಓಶೋ ಹೇಳಿದ ಬರ್ನಾಡ್ ಶಾ ಕತೆ

ನಾವು ಬಹುತೇಕರು, ಬರ್ನಾಡ್ ಶಾ ನಂತೆ ಶಾಪಗ್ರಸ್ತ ಮರೆಗುಳಿಗಳು, ಇಷ್ಟಪಟ್ಟು ಖರೀದಿ ಮಾಡಿದ ಟಿಕೇಟ್ ಮಿಸ್ ಮಾಡಿಕೊಂಡು ತಾವು ಮುಟ್ಟಬೇಕಾದ ಜಾಗದ ವಿಳಾಸ ಗೊತ್ತಿಲ್ಲದೇ ಅಲೆಯುತ್ತಿರುವವರು… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ರೈಲು ಪ್ರಯಾಣದಲ್ಲಿ ಟಿಕೇಟ್ ಕಲೆಕ್ಟರ್, ಟಿಕೇಟ್ ತೋರಿಸುವಂತೆ ಕೇಳಿದಾಗ ಜಾರ್ಜ್ ಬರ್ನಾಡ್ ಶಾ ನ ಹತ್ತಿರ ಟಿಕೇಟ್ ಇರಲಿಲ್ಲ. ಶಾ ಏನೋ ಟಿಕೇಟ್ ತೆಗೆದುಕೊಂಡೇ ರೈಲು ಹತ್ತಿದ್ದು ಆದರೆ ಈಗ ಟಿಕೇಟ್ ಮಾಯವಾಗಿಬಿಟ್ಟಿತ್ತು. ಶಾ ಟಿಕೇಟ್ ಗಾಗಿ ಹುಡುಕಲಾರಂಭಿಸಿದ, ಮೊದಲು ತನ್ನ ಕೋಟು, ಶರ್ಟ್, ಪ್ಯಾಂಟ್ ಎಲ್ಲ ಹುಡುಕಿದ ಮೇಲೆ, ತಾನು ತಂದಿದ್ದ ಲಗೇಜ್ ಗಳನ್ನ ಒಂದೊಂದಾಗಿ ಬಿಚ್ಚಿ ಟಿಕೇಟ್ ಹುಡುಕಲು ಶಾ ಶುರು ಮಾಡಿದ. ರೈಲಿನ ಇಡೀ ಕಂಪಾರ್ಟ್ ಮೆಂಟ್ ನಲ್ಲಿ ಶಾ ನ ಬಟ್ಟೆ, ಪುಸ್ತಕ, ವಸ್ತುಗಳು ಹರಡಿಕೊಂಡಿದ್ದವು. ಶಾ ಗಂಭೀರನಾಗಿ ಟಿಕೇಟ್ ಹುಡುಕುತ್ತಲೇ ಇದ್ದ.

ಶಾ ನ ಪಡಿಪಾಟಲು ನೋಡಲಾಗದೇ ಕೊನೆಗೆ ಟಿಕೇಟ್ ಕಲೆಕ್ಟರ್ ತಾನೇ ಹೇಳಿದ, “ ಮಿ. ಬರ್ನಾಡ್ ಶಾ, ನೀವು ಯಾರಿಗೆ ಗೊತ್ತಿಲ್ಲ, ನೀವು ನಮ್ಮ ದೊಡ್ಡ ಲೇಖಕರು, ನಾಟಕಕಾರರು. ಟಿಕೇಟ್ ಎಲ್ಲೋ ಮಿಸ್ ಆಗಿರಬಹುದು, ಅದರ ಹುಡುಕಾಟ ಬಿಟ್ಟುಬಿಡಿ. ನೀವು ಟಿಕೇಟ್ ಇಲ್ಲದೇ ಪ್ರಯಾಣ ಮಾಡುವುದಿಲ್ಲ ಎನ್ನುವುದು ನಮಗೆ ಗೊತ್ತು. ಇಷ್ಟು ಲಗೇಜ್ ನಲ್ಲಿ ಟಿಕೇಟ್ ಎಲ್ಲೋ ಸೇರಿಕೊಂಡಿರಬೇಕು. ಚಿಂತೆ ಮಾಡಬೇಡಿ, ನಾನು ಇನ್ನೊಮ್ಮೆ ಈ ಕಂಪಾರ್ಟ್ ಮೆಂಟ್ ಗೆ ಬರುವುದಿಲ್ಲ, ಇತರ ಟಿಕೇಟ್ ಕಲೆಕ್ಟರ್ ಗಳಿಗೂ ಮೆಸೇಜ್ ಮುಟ್ಟಿಸುತ್ತೇನೆ ನಿಮಗೆ ತೊಂದರೆ ಕೊಡದಿರಲು. ನೀವು ಆರಾಮಾಗಿ ಪ್ರಯಾಣ ಮುಂದುವರೆಸಿ.”

ಟಿಕೇಟ್ ಕಲೆಕ್ಟರ್ ಮಾತು ಕೇಳುತ್ತಿದ್ದಂತೆಯೇ ಶಾ ಕೆಂಡಾಮಂಡಲನಾದ, “ಮೂರ್ಖ, ನಾನು ನಿನ್ನ ಜುಜುಬಿ ಟಿಕೇಟ್ ಗಾಗಿ ಇಷ್ಟು ಕಷ್ಟ ಪಡುತ್ತಿದ್ದೇನೆ ಎಂದು ತಿಳಿದುಕೊಂಡಿದ್ದೀಯಾ? ಟಿಕೇಟ್ ನ ಹಣ ನನಗೆ ಸಮಸ್ಯೆಯೇ ಅಲ್ಲ, ಆದರೆ ನಾನು ಎಲ್ಲಿ ಹೋಗುತ್ತಿದ್ದೇನೆ ಅನ್ನೋದು ನನಗೆ ಮರೆತು ಹೋಗಿದೆ. ಟಿಕೇಟ್ ಮೇಲೆ ನಾನು ಇಳಿಯಬೇಕಾದ ಸ್ಟೇಷನ್ ನ ಹೆಸರು ಬರೆದಿತ್ತು. ರೈಲು ಇಷ್ಟು ವೇಗದಿಂದ ಚಲಿಸುತ್ತಿದೆ ಮತ್ತು ಯಾವ ಸ್ಟೇಷನ್ ಲ್ಲಿ ಇಳಿಯಬೇಕು ಎನ್ನುವುದು ನನಗೆ ಮರೆತುಹೋಗಿದೆ. ಮೂರ್ಖನಂತೆ ನನ್ನೆದುರು ಯಾಕೆ ನಿಂತಿದ್ದೀಯಾ? ನನ್ನ ಕೆಲಸ ನನಗೆ ಮಾಡಲು ಬಿಡು. ಟಿಕೇಟ್ ಸಿಗದೇಹೋದರೆ ನಾನು ದಾರಿತಪ್ಪಿಬಿಡುತ್ತೇನೆ.”

ನಾವು ಬಹುತೇಕರು, ಬರ್ನಾಡ್ ಶಾ ನಂತೆ ಶಾಪಗ್ರಸ್ತ ಮರೆಗುಳಿಗಳು, ಇಷ್ಟಪಟ್ಟು ಖರೀದಿ ಮಾಡಿದ ಟಿಕೇಟ್ ಮಿಸ್ ಮಾಡಿಕೊಂಡು ತಾವು ಮುಟ್ಟಬೇಕಾದ ಜಾಗದ ವಿಳಾಸ ಗೊತ್ತಿಲ್ಲದೇ ಅಲೆಯುತ್ತಿರುವವರು.

Leave a Reply