ಬದುಕು ಬಹಳ ಸಂಕೀರ್ಣವಾದದ್ದು. ಒಮ್ಮೊಮ್ಮೆ ಭವಿಷ್ಯ, ಭೂತಕಾಲಕ್ಕಿಂತ ಮೊದಲು ಕಾಣಿಸಿಕೊಳ್ಳುತ್ತದೆ. ಭೂತಕಾಲದ ನಂತರವಷ್ಟೇ ಭವಿಷ್ಯತ್ಕಾಲ ಬರಬೇಕೆಂಬ ಯಾವ ನಿಯಮವೂ ಬದುಕಿನಲ್ಲಿ ಇಲ್ಲ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಸೂಫಿ ಮಾಸ್ಟರ್ ಗೆ ತೀವ್ರ ಬಾಯಾರಿಕೆಯಾಗತೊಡಗಿತು. ಅವನ ಸುತ್ತಲೂ ಹಲವಾರು ಶಿಷ್ಯರು ಅವನ ಮಾತು ಕೇಳುತ್ತ ಕುಳಿತಿದ್ದರು. ಮಾಸ್ಟರ್ ಅಲ್ಲಿ ಕುಳಿತಿದ್ದ ಒಬ್ಬ ಹುಡುಗನಿಗೆ ಹತ್ತಿರದ ಬಾವಿಗೆ ಹೋಗಿ ನೀರು ತರಲು ಹೇಳಿದ. ಶಿಷ್ಯನ ಕೈಗೆ ಒಂದು ಮಣ್ಣಿನ ಪಾತ್ರೆಯನ್ನು ಕೊಡುತ್ತಾ, ಅದು ತುಂಬ ಹಳೆಯ, ಬೆಲೆ ಬಾಳುವ ಪಾತ್ರೆಯೆಂದು ಹೇಳಿ, ತುಂಬ ಎಚ್ಚರಿಕೆಯಿಂದ ನೀರು ತರಲು ಆದೇಶ ಮಾಡುತ್ತ ಶಿಷ್ಯನ ಕಪಾಳಕ್ಕೆ ಎರಡು ಮೂರು ಬಾರಿ ಮಾಸ್ಟರ್ ಜೋರಾಗಿ ಬಾರಿಸಿದ.
ಮಾಸ್ಟರ್ ನ ಈ ವರ್ತನೆ ನೋಡಿ ಸುತ್ತ ಕುಳಿತಿದ್ದ ಶಿಷ್ಯರಿಗೆ ಅತ್ಯಾಶ್ಚರ್ಯವಾಯಿತು, ಅವರಿಗೆ ತಮ್ಮ ಕಣ್ಣುಗಳನ್ನ ನಂಬುವುದೇ ಅಸಾಧ್ಯವಾಯಿತು. ಒಬ್ಬ ಅಂತಃಕರಣದ ಶಿಷ್ಯ ಎದ್ದು ನಿಂತು ಸೂಫಿಯನ್ನ ಪ್ರಶ್ನೆ ಮಾಡಿದ, “ಮಾಸ್ಟರ್ ಇದೇನು ಮಾಡಿದಿರಿ, ಇದು ಶುದ್ಧ ಅಸಂಬದ್ಧ. ಪಾಪ ಆ ಹುಡುಗ ಏನೂ ತಪ್ಪು ಮಾಡಿರಲಿಲ್ಲ. ಅವನೇನು ಪಾತ್ರೆ ಒಡೆದಿರಲಿಲ್ಲ, ಅವನ ಕಪಾಳಕ್ಕೆ ಯಾಕೆ ಅಷ್ಟು ಜೋರಾಗಿ ಬಾರಿಸಿದಿರಿ? ಅವನಿಗೆ ಯಾಕೆ ಶಿಕ್ಷೆ ಕೊಟ್ಟಿರಿ”.
ಮಾಸ್ಟರ್ ಉತ್ತರಿಸಿದರು, “ಹೌದು ನನಗೆ ಗೊತ್ತು ಸಧ್ಯ ಅವನು ಯಾವ ತಪ್ಪೂ ಮಾಡಿಲ್ಲ ಆದರೆ ಅಕಸ್ಮಾತ್ ಮುಂದೆ ಅವನು ಪಾತ್ರೆ ಒಡೆದುಬಿಟ್ಟರೆ ನಾನು ಆಮೇಲೆ ಅವನಿಗೆ ಶಿಕ್ಷೆ ಕೊಟ್ಟು ಏನು ಪ್ರಯೋಜನ? ಹಾಗಾಗಿ ನಾನು ಈಗಲೇ ಅವನನ್ನು ಶಿಕ್ಷೆಗೆ ಗುರಿಮಾಡಿದೆ.”
ಸೂಫಿ ಮಾಸ್ಟರ್ ಏನು ಹೇಳುತ್ತಿದ್ದಾನೆಂದರೆ, ಬದುಕಿನಲ್ಲಿ ಯಾವಾಗಲೂ ಪರಿಣಾಮ (effect), ಕಾರಣದ (cause) ನಂತರ ಬರುವುದಿಲ್ಲ. ಬದುಕಿನಲ್ಲಿ ಒಮ್ಮೆ ಪರಿಣಾಮ, ಕಾರಣದ ನಂತರ ಕಾಣಿಸಿಕೊಂಡರೆ, ಒಮ್ಮೊಮ್ಮೆ ಕಾರಣಕ್ಕಿಂತಲೂ ಮುಂಚೆ ಪರಿಣಾಮವನ್ನು ಕಾಣಬಹುದು. ಬದುಕು ಬಹಳ ಸಂಕೀರ್ಣವಾದದ್ದು. ಒಮ್ಮೊಮ್ಮೆ ಭವಿಷ್ಯ, ಭೂತಕಾಲಕ್ಕಿಂತ ಮೊದಲು ಕಾಣಿಸಿಕೊಳ್ಳುತ್ತದೆ. ಭೂತಕಾಲದ ನಂತರವಷ್ಟೇ ಭವಿಷ್ಯತ್ಕಾಲ ಬರಬೇಕೆಂಬ ಯಾವ ನಿಯಮವೂ ಬದುಕಿನಲ್ಲಿ ಇಲ್ಲ.
ಬದುಕು, ನೀವು ತಿಳಿದುಕೊಂಡಷ್ಟು ಸರಳ ಅಲ್ಲ, ಅದು ಕಠಿಣ, ಸಂಕೀರ್ಣ. ನಿನ್ನೆಯದೆಲ್ಲವೂ ಇವತ್ತಿನೊಳಗಿದೆ, ಹಾಗೆಯೇ ನಾಳೆಯದೂ ಕೂಡ. ಇಲ್ಲಿ ನಿನ್ನೆ, ಇಂದು, ನಾಳೆ ಎಲ್ಲ ಒಂದಾಗಿ, ಸಮಗ್ರವಾಗಿದೆ. ನಿಮ್ಮ ತಾಯಿ, ತಂದೆ, ಅಜ್ಜ, ಮುತ್ತಜ್ಜ, ಹಾಗೆಯೇ ಆ್ಯಡಂ ಮತ್ತು ಈವ್ ಕೂಡ ನಿಮ್ಮೊಳಗಿದ್ದಾರೆ. ನಿಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಕೂಡ ಈಗ ನಿಮ್ಮಲ್ಲಿದ್ದಾರೆ. ನಿಮ್ಮ ಯಾವುದೋ ಒಂದು ಅಂಶ ಆ್ಯಡಂ ಮತ್ತು ಈವ್ ರಲ್ಲಿ ಇತ್ತು ಈಗ ಅವರು ಇಡಿಯಾಗಿ ನಿಮ್ಮೊಳಗಿದ್ದಾರೆ. ಇಡೀ ಭೂತ ಕಾಲ ಮತ್ತು ಸಮಸ್ತ ಭವಿಷತ್ಕಾಲದಿಂದ ನಿಮ್ಮನ್ನು ಸೃಷ್ಟಿಸಲಾಗಿದೆ. ಮುಂದೆ ಈ ಜಗತ್ತಿನಲ್ಲಿ, ಈ ಬ್ರಹ್ಮಾಂಡದಲ್ಲಿ ಆಗಬಹುದಾದ ಎಲ್ಲವನ್ನೂ ನೀವು ಈಗಲೇ ಹೊತ್ತು ನಡೆಯುತ್ತಿದ್ದೀರಿ.
ಸ್ವತಃ ನೀವು ಇಡೀ ಜಗತ್ತು ಆಗಿದ್ದೀರಿ. ಕಾರಣ, ಪರಿಣಾಮ, ಭೂತ, ಭವಿಷ್ಯ ಎಲ್ಲವೂ ನಿಮ್ಮೊಳಗಿದೆ. ಅಸ್ತಿತ್ವದ ಪ್ರತಿಯೊಂದೂ ನಿಮ್ಮ ಮೂಲಕವೇ ಹಾಯ್ದು ಹೋಗುತ್ತದೆ.