ಬುದ್ಧ ಹೇಳುವ ಐದು ಸ್ಮರಣಿಕೆಗಳು…

ನಮ್ಮೊಳಗಿನ ಭಯವನ್ನು ಗುರುತಿಸಿಕೊಳ್ಳಲು, ಅಪ್ಪಿಕೊಳ್ಳಲು ಮತ್ತು ಅದನ್ನು ಆಳವಾಗಿ ಪರಿಶೀಲಿಸಲು ಬುದ್ಧ ಐದು ಸ್ಮರಣಿಕೆಗಳು ಎನ್ನುವ ಆಚರಣೆಯೊಂದರ ಪ್ರಸ್ತಾಪ ಮಾಡುತ್ತಾನೆ… । Thich Nhat Hanh ; ಕನ್ನಡಕ್ಕೆ: ಚಿದಂಬರ ನರೇಂದ್ರ

ಬುದ್ಧ ಹೇಳುವ ಹಾಗೆ ನಮ್ಮೆಲ್ಲರಲ್ಲೂ ಭಯದ ಬೀಜ ಇದೆ. ಆದರೆ ನಾವು ಬಹುತೇಕರು ಅದನ್ನು ನಮ್ಮೊಳಗೆ ಹತ್ತಿಕ್ಕಿಕೊಂಡಿರುತ್ತೇವೆ.

ಈ ಭಯವನ್ನು ಗುರುತಿಸಿಕೊಳ್ಳಲು, ಅಪ್ಪಿಕೊಳ್ಳಲು ಮತ್ತು ಅದನ್ನು ಆಳವಾಗಿ ಪರಿಶೀಲಿಸಲು ಬುದ್ಧ ಐದು ಸ್ಮರಣಿಕೆಗಳು ಎನ್ನುವ ಆಚರಣೆಯೊಂದರ ಪ್ರಸ್ತಾಪ ಮಾಡುತ್ತಾನೆ.

ಈ ಐದು ಸ್ಮರಣಿಕೆಗಳೆಂದರೆ,

  1. ವಯಸ್ಸಾಗಿ ನಾವು ಮುದುಕರಾಗುವುದು ನಮ್ಮ ಪ್ರಕೃತಿ. ವೃದ್ಧಾಪ್ಯವನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.
  2. ಅನಾರೋಗ್ಯಕ್ಕೆ ಈಡಾಗುವುದು ನಮ್ಮ ಪ್ರಕೃತಿ. ಅನಾರೋಗ್ಯವನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.
  3. ಆಯಸ್ಸು ತೀರಿದ ಮೇಲೆ ಸಾಯುವುದು ನಮ್ಮ ಪ್ರಕೃತಿ. ಸಾವನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.
  4. ನಾನು ಪ್ರೀತಿಸುವ ಎಲ್ಲ ಸಂಗತಿಗಳು, ಎಲ್ಲ ಜನರು ಬದಲಾಗುವುದು ಪ್ರಕೃತಿ. ಈ ಎಲ್ಲದರಿಂದ ದೂರವಾಗುವುದನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ನಮ್ಮೊಂದಿಗೆ ಶಾಶ್ವತವಾಗಿ ಯಾವುದೂ ಇರುವುದಿಲ್ಲ. ನಾವು ಈ ಭೂಮಿಗೆ ಬಂದದ್ದು ಖಾಲೀ ಕೈಯಲ್ಲಿ ಮತ್ತು ಈ ಭೂಮಿಯನ್ನು ಬಿಟ್ಟು ಹೋಗುವುದು ಕೂಡ ಖಾಲೀ ಕೈಯಲ್ಲಿ.
  5. ನಮ್ಮ ನಿಜವಾದ ಆಸ್ತಿ ಎಂದರೆ ನಾವು ಮಾಡುವ ಕ್ರಿಯೆಗಳು ಮಾತ್ರ. ನಮ್ಮ ಕ್ರಿಯೆಗಳ ಪರಿಣಾಮಗಳಿಗೆ ನಾವೇ ಜವಾಬ್ದಾರರು. ನಮ್ಮ ಕ್ರಿಯೆಯ ಪರಿಣಾಮದ ನೆಲೆಯ ಮೇಲೆಯೇ ನಾವು ನಿಂತಿದ್ದೇವೆ.

ಪ್ರತಿದಿನ ನಾವು ಕೆಲ ಕ್ಷಣಗಳನ್ನು ಈ ಐದು ಸ್ಮರಣಿಕೆಗಳನ್ನು ಪ್ರ್ಯಾಕ್ಟೀಸ್ ಮಾಡಲು ಮೀಸಲಾಗಿಡಬೇಕು. ಧ್ಯಾನದಲ್ಲಿ ನಮ್ಮ ಉಸಿರಾಟವನ್ನು ಅನುಸರಿಸುವಾಗ ಈ ಐದು ಸ್ಮರಣಿಕೆಗಳನ್ನು ಅವಲೋಕನ ಮಾಡಿಕೊಳ್ಳಬೇಕು.

ಐದು ಸ್ಮರಣಿಕೆಗಳ ಪ್ರಾಕ್ಟೀಸ್ ನಮ್ಮೊಳಗೆ ಹೆಪ್ಪುಗಟ್ಟಿರುವ ಭಯವನ್ನು ಕರಗಿಸಿ ಮತ್ತೆ ಹರಿದಾಡುವಂತೆ ಮಾಡುತ್ತದೆ.

ನಾವು ಈ ಭಯವನ್ನು ಗುರುತಿಸಿ ಹೆಸರು ಹಿಡಿದು ಕರೆಯಲು ಶುರುಮಾಡಿದಾಗ ಅದು ನಶಿಸುತ್ತ ಹೋಗುತ್ತದೆ.

ನಾವು ಹೀಗೆ ಈ ಭಯದ ಬೀಜವನ್ನು ಗುರುತಿಸಿ, ಹೆಸರು ಹಿಡಿದು ಕರೆಯಲು ಶುರು ಮಾಡಿದಾಗ ಉದ್ಭವವಾಗುವ ಸಿಟ್ಟನ್ನು ನಿರ್ವಹಣೆ ಮಾಡಲು ಸಿದ್ಧರಾಗಿರಬೇಕು.

ಭಯ ಸಿಟ್ಟನ್ನು ಹುಟ್ಟು ಹಾಕುತ್ತದೆ.

ಭಯ ಇರುವ ತನಕ ಸಮಾಧಾನ ಇರುವುದಿಲ್ಲ, ಭಯ ಸಿಟ್ಟನ್ನು ಹುಟ್ಟಿಸುವ ಫಲವತ್ತಾದ ನೆಲವಾಗಿದೆ.

ಭಯ ಹುಟ್ಟಿಕೊಳ್ಳುವುದು ಅಜ್ಞಾನದ ಕಾರಣವಾಗಿ. ತಿಳುವಳಿಕೆಯ ಕೊರತೆ ಸಿಟ್ಟಿನ ಹುಟ್ಟಿಗೆ ಮತ್ತೊಂದು ಮೂಲಭೂತ ಕಾರಣ.

Reconciliation: Healing the Inner Child By Thich Nhat Hanh (Page 32 to 33)

Leave a Reply