ನಿಜವಾದ ಮಾಸ್ಟರ್ ಯಾವತ್ತೂ ಟೀಚರ್ ಅಲ್ಲ. ಅವನು ನಿಮ್ಮನ್ನ ಜಾಗೃತಹೊಳಿಸುವವನು. ಅವನ ಕೆಲಸ ಟೀಚರ್ ಗಿಂತ ಸಂಪೂರ್ಣ ವಿಭಿನ್ನ. ಅವನ ಕೆಲಸ ಹೆಚ್ಚು ಕಷ್ಟಕರ... । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಝೆನ್ ಎನ್ನುವುದು ಕಲಿಸುವಿಕೆಯಲ್ಲ – ಏಕೆಂದರೆ ಝೆನ್ ಗೆ ಗೊತ್ತು ನೀವು ನಿದ್ದೆಯಲ್ಲಿರುವುದು. ಝೆನ್ ನ ಮೂಲಭೂತ ಸಂಗತಿ, ನಿಮಗೆ ಕಲಿಸುವುದಲ್ಲ, ನಿಮ್ಮನ್ನ ಎಚ್ಚರಿಸುವುದು. ಝೆನ್ ಎಂದರೆ ಅಲಾರಾಂ ಇದ್ದಂತೆ.
ಝೆನ್ ಕಲಿಸುವಿಕೆ ಅಲ್ಲ ಅಂದಮೇಲೆ ನೀವು ಝೆನ್ ಮಾಸ್ಟರ್ ನ ಟೀಚರ್ (ಶಿಕ್ಷಕರು) ಎನ್ನುವ ಹಾಗಿಲ್ಲ. ಅವನು ಟೀಚರ್ ಅಲ್ಲ, ಮಾಸ್ಟರ್ (ಗುರು). ಹಾಗು ಟೀಚರ್ ಮತ್ತು ಮಾಸ್ಟರ್ ನಡುವೆ ಅಗಾಧ ವ್ಯತ್ಯಾಸವಿದೆ.
ಮೊದಲು ನೀವು ಮಾಸ್ಟರ್ ನ ಸಂಪರ್ಕಕ್ಕೆ ಬಂದಾಗ ಅವನನ್ನ ವೀವು ಟೀಚರ್ ಎಂದೇ ಪರಿಗಣಿಸುತ್ತೀರಿ. ಬಹುಶಃ ಒಬ್ಬ ಮಹಾ ಟೀಚರ್ ಆದರೆ, ಇನ್ನೂ ನೀವು ಅವನನ್ನು ಟೀಚರ್ ಎಂದೇ ಗುರುತಿಸುತ್ತಿದ್ದೀರಿ. ಇದಕ್ಕೆ ಕಾರಣ ನಿಮ್ಮ ನಿರೀಕ್ಷೆಯಲ್ಲಿದೆ, ಅವನು ನಿಮಗೆ ದೊಡ್ಡ ಫಿಲಾಸೊಫಿಯನ್ನೋ , ಮಹಾ ಮಹಾ ಸತ್ಯಗಳನ್ನ ಹೇಳಿಕೊಡುತ್ತಾನೆ ಎಂದು ನೀವು ಎದುರು ನೋಡುತ್ತಿದ್ದೀರಿ.
ಅದು ಹಾಗಲ್ಲ. ನಿಜವಾದ ಮಾಸ್ಟರ್ ಯಾವತ್ತೂ ಟೀಚರ್ ಅಲ್ಲ. ಅವನು ನಿಮ್ಮನ್ನ ಜಾಗೃತಹೊಳಿಸುವವನು. ಅವನ ಕೆಲಸ ಟೀಚರ್ ಗಿಂತ ಸಂಪೂರ್ಣ ವಿಭಿನ್ನ. ಅವನ ಕೆಲಸ ಹೆಚ್ಚು ಕಷ್ಟಕರ.
ಕೆಲವೇ ಕೆಲವು ಜನ ಮಾತ್ರ ಉಳಿದುಕೊಳ್ಳುತ್ತಾರೆ ಮಾಸ್ಟರ್ ಜೊತೆ ಏಕೆಂದರೆ, ಸಾವಿರಾರು ಜನ್ಮಗಳ ನಿದ್ದೆಯಿಂದ ಎಚ್ಚರಗೊಳ್ಳುವುದು ಸಾಮಾನ್ಯದ ಮಾತಲ್ಲ, ಅದು ಒಂದು ಪವಾಡ.
ಒಮ್ಮೆ ಒಬ್ಬ ಝೆನ್ ಮಾಸ್ಟರ್ ನ ಶಾಲೆಯಲ್ಲಿ ವಿದ್ಯಾರ್ಥಿಗಳು ತುಂಬ ಜಾಸ್ತಿ ಆಗಿ ಶಾಲೆಯ ಜಾಗ ತುಂಬ ಇಕ್ಕಟ್ಟಾಗತೊಡಗಿತು. ಇದನ್ನು ಗಮನಿಸಿದ ಆ ಊರಿನ ವ್ಯಾಪಾರಿ ಶಾಲೆಯ ಕಟ್ಟಡವನ್ನು ವಿಸ್ತರಿಸುವ ಸಲುವಾಗಿ 500 ಬಂಗಾರದ ನಾಣ್ಯಗಳನ್ನು ಶಾಲೆಗೆ ದಾನ ನೀಡಲು ನಿರ್ಧರಿಸಿದ.
ಒಂದು ದಿನ ಶಾಲೆಗೆ ಆಗಮಿಸಿದ ವ್ಯಾಪಾರಿ, 500 ಬಂಗಾರದ ನಾಣ್ಯಗಳ ಚೀಲವನ್ನು ಝೆನ್ ಮಾಸ್ಟರ್ ಕೈಗಿತ್ತ.
“ಆಯಿತು, ಈ ನಾಣ್ಯಗಳನ್ನು ಸ್ವೀಕರಿಸುತ್ತ್ತೇನೆ “ ಎಂದ ಮಾಸ್ಟರ್.
ಮಾಸ್ಟರ್ ನ ನಿರ್ಲಿಪ್ತ ಉತ್ತರ ಕೇಳಿ ವ್ಯಾಪಾರಿಗೆ ಸಿಟ್ಟು ಬಂತು.
ವ್ಯಾಪಾರಿ : ಈ ಚೀಲದಲ್ಲಿ 500 ಬಂಗಾರದ ನಾಣ್ಯಗಳಿವೆ.
ಮಾಸ್ಟರ್ : ಆಗಲೇ ಹೇಳಿದೆಯಲ್ಲ.
ವ್ಯಾಪಾರಿ : ನಾನು ಶ್ರೀಮಂತನಿರಬಹುದು ಆದರೆ 500 ಬಂಗಾರದ ನಾಣ್ಯಗಳು ನನಗೂ ದೊಡ್ಡ ಮೊತ್ತವೇ.
ಮಾಸ್ಟರ್ : ನನ್ನಿಂದ ಕೃತಜ್ಞತೆ ಏನಾದರೂ ಬಯಸುತ್ತಿರುವೆಯಾ?
ವ್ಯಾಪಾರಿ : ತಪ್ಪಾ?
ಮಾಸ್ಟರ್ : ಖಂಡಿತ ತಪ್ಪು. ಕೊಡುವುದು ಯಾವಾಗಲೂ ಕೊಡುವವನ ಅವಶ್ಯಕತೆ ಆಗಿರುವುದರಿಂದ, ಕೃತಜ್ಞತೆ ಹೇಳಬೇಕಾದವನು ಕೊಡುವವನೇ.
Source —Õshó— Ah, This!
Ch #5: See right at once am in Buddha Hall
[_via Bodhisattva Shree Amithaba Subhuti ]

