ಎರಡು ಮಡಕೆಗಳು : ಝೆನ್ ಕತೆ

ಒಬ್ಬ ಝೆನ್ ಮಾಸ್ಟರ್ ಪ್ರತಿದಿನ ದೂರದ ನದಿಯಿಂದ ತನ್ನ ಆಶ್ರಮಕ್ಕೆ ಎರಡು ಮಣ್ಣಿನ ಮಡಕೆಗಳಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ. ಮಾಸ್ಟರ್ ಒಂದು ಕೋಲಿನ ಎರಡೂ ತುದಿಗಳಲ್ಲಿ ಎರಡು ಮಡಕೆಗಳನ್ನು ಕಟ್ಟಿಕೊಂಡು ಆ ಕೋಲನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಪ್ರತಿದಿನ ತನ್ನ ಆಶ್ರಮಕ್ಕೆ ನೀರು ತೆಗೆದುಕೊಂಡು ಹೋಗುತ್ತಿದ್ದ. ಒಂದು ದಿನ… । ಚಿದಂಬರ ನರೇಂದ್ರ (ಆಕರ: ಝೆನ್ ಕತೆ)

ನಿನ್ನ ಜೊತೆ
ಬೇರೆಯವರು ನಡೆದುಕೊಳ್ಳುವ ರೀತಿಯನ್ನ
ನೀನು ಬದಲಾಯಿಸ ಬಯಸುವೆಯಾದರೆ,
ಮೊದಲು ನೀನು,
ನಿನ್ನೊಂದಿಗೆ ವ್ಯವಹರಿಸುವ ರೀತಿಯನ್ನ
ಪೂರ್ಣವಾಗಿ, ಪ್ರಾಮಾಣಿಕವಾಗಿ
ಬದಲಾಯಿಸಿಕೋ.

ಜನ,
ನಿನ್ನನ್ನ ಪ್ರೀತಿಸುವಂತೆ ಮಾಡುವ
ಇನ್ನೊಂದು ಪ್ರಭಾವಶಾಲಿ ವಿಧಾನ
ನನಗಂತೂ ಗೊತ್ತಿಲ್ಲ.

ಈ ಹಂತ ದಾಟಿದ ಮೇಲೆ
ನಿನ್ನ ದಾರಿಯಲ್ಲಿ ಎಸೆಯಲಾಗುವ
ಪ್ರತೀ ಮುಳ್ಳಿಗೂ ಕೃತಜ್ಞನಾಗಿರು.

ನಿನ್ನ ಮೇಲೆ
ಗುಲಾಬಿಯ ಸುರಿಮಳೆಯಾಗುವ
ಮುನ್ಸೂಚನೆ ಇದು.

~ ಶಮ್ಸ್ ತಬ್ರೀಝಿ


ಒಬ್ಬ ಝೆನ್ ಮಾಸ್ಟರ್ ಪ್ರತಿದಿನ ದೂರದ ನದಿಯಿಂದ ತನ್ನ ಆಶ್ರಮಕ್ಕೆ ಎರಡು ಮಣ್ಣಿನ ಮಡಕೆಗಳಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ. ಮಾಸ್ಟರ್ ಒಂದು ಕೋಲಿನ ಎರಡೂ ತುದಿಗಳಲ್ಲಿ ಎರಡು ಮಡಕೆಗಳನ್ನು ಕಟ್ಟಿಕೊಂಡು ಆ ಕೋಲನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಪ್ರತಿದಿನ ತನ್ನ ಆಶ್ರಮಕ್ಕೆ ನೀರು ತೆಗೆದುಕೊಂಡು ಹೋಗುತ್ತಿದ್ದ.

ಆ ಎರಡು ಮಡಕೆಗಳಲ್ಲಿ ಒಂದು ಮಡಕೆ ಕೊಂಚ ಬಿರುಕು ಬಿಟ್ಟಿತ್ತು ಮತ್ತು ಇನ್ನೊಂದು ಮಡಕೆಗೆ ಯಾವ ಹಾನಿಯೂ ಆಗಿರಲಿಲ್ಲ. ಚೆನ್ನಾಗಿ ಇರುವ ಮಡಕೆ ಪ್ರತಿದಿನ ಆಶ್ರಮಕ್ಕೆ ಒಂದು ಪೂರ್ತಿ ಮಡಕೆ ತುಂಬ ನೀರು ತೆಗೆದುಕೊಂಡು ಬರುತ್ತಿದ್ದರೆ, ಬಿರುಕು ಬಿಟ್ಟ ಮಡಕೆಯ ಅರ್ಧ ನೀರು ಸೋರಿ ಹೋಗುತ್ತಿತ್ತು, ಅದು ಆಶ್ರಮಕ್ಕೆ ಕೇವಲ ಅರ್ಧ ಮಡಕೆ ನೀರು ತರುತ್ತಿತ್ತು. ಹೀಗೇ ಈ ರೀತಿಯ ನೀರು ಸಾಗಾಣಿಕೆ ಎರಡು ವರ್ಷಗಳ ವರೆಗೆ ಮುಂದುವರೆಯಿತು.

ಹಾಗಾಗಿ ಮಾಸ್ಟರ್ ಗೆ ಪ್ರತಿದಿನ ನದಿಯಿಂದ ಕೇವಲ ಒಂದೂವರೆ ಮಡಕೆಯಷ್ಟು ಮಾತ್ರ ನೀರನ್ನ ಆಶ್ರಮಕ್ಕೆ ತರಲು ಸಾಧ್ಯವಾಗುತ್ತಿತ್ತು. ತಾನು ಹೆಚ್ಚು ನೀರು ಸಾಗಿಸುತ್ತಿದ್ದ ಕಾರಣಕ್ಕೆ ಚೆನ್ನಾಗಿದ್ದ ಮಡಕೆಗೆ ಹೆಮ್ಮೆಯಾದರೆ, ಪ್ರತಿದಿನ ಕೇವಲ ಅರ್ಧ ಮಡಕ್ಕೆಯಷ್ಟು ಮಾತ್ರ ನೀರು ಸಾಗಿಸುತ್ತಿದ್ದ ಬಿರುಕುಬಿಟ್ಟ ಮಡಕೆಗೆ ಬೇಸರ ಮತ್ತು ನಾಚಿಕೆಯಾಗುತ್ತಿತ್ತು.

ಒಂದು ದಿನ ಬಿರುಕುಬಿಟ್ಟ ಮಡಕೆ ಮಾಸ್ಟರ್ ನ ಕ್ಷಮೆ ಕೇಳಿತು, “ಮಾಸ್ಟರ್ ನಾನು ಬಿರುಕುಬಿಟ್ಟಿರುವ ಕಾರಣದಿಂದ ಪ್ರತಿದಿನ ಕೇವಲ ಅರ್ಧಮಡಕೆಯಷ್ಟು ಮಾತ್ರ ನೀರು ಸಾಗಿಸುವುದು ನನಗೆ ಸಾಧ್ಯವಾಗುತ್ತಿದೆ. ಅರ್ಧ ನೀರು ಸೋರಿ ಹೋಗಿ ವ್ಯರ್ಥವಾಗುತ್ತಿದೆ, ನನ್ನ ಕ್ಷಮಿಸು”.

“ಬೇಸರ ಮಾಡಿಕೊಳ್ಳಬೇಡ, ನಾಳೆ ನದಿಯಿಂದ ನಾವು ವಾಪಸ್ ಬರುವಾಗ ದಾರಿಯ ಒಂದು ಬದಿಯಲ್ಲಿ ಅರಳಿನಿಂತಿರುವ ಹೂವುಗಳನ್ನು ಒಮ್ಮೆ ನೋಡು, ಆಮೇಲೆ ಮಾತನಾಡೋಣ” ಝೆನ್ ಮಾಸ್ಟರ್ ಬಿರುಕುಬಿಟ್ಟ ಮಡಕೆಯನ್ನು ಸಂತೈಸಿದ.

ಮರುದಿನ ದಿನ ನೀರು ತೆಗೆದುಕೊಂಡು ವಾಪಸ್ ಬರುವಾಗ, ಬಿರುಕು ಬಿಟ್ಟ ಮಡಕೆ ದಾರಿಯಲ್ಲಿ ಅರಳಿ ನಿಂತಿದ್ದ ಸುಂದರ ಹೂವುಗಳನ್ನು ಗಮನಿಸಿತು. “ಗಮನಿಸಿದೆಯಾ ನೀರು ತರುವ ಹಾದಿಯಲ್ಲಿ ನಿನ್ನ ಬದಿಯಲ್ಲಿ ಮಾತ್ರ ಹೂವುಗಳು ಅರಳಿ ನಿಂತಿರುವುದನ್ನ? ಇನ್ನೊಂದು ಬದಿಯಲ್ಲಿ ಯಾವ ಹೂಗಳೂ ಇಲ್ಲದಿರುವುದನ್ನ? “ ಮಾಸ್ಟರ್ ಬಿರುಕುಬಿಟ್ಟ ಮಡಕೆಯನ್ನ ಪ್ರಶ್ನೆ ಮಾಡಿದ.

“ನನಗೆ ನಿನ್ನಲ್ಲಿ ಬಿರುಕು ಇರುವುದು ಗೊತ್ತಿತ್ತು ಆದ್ದರಿಂದ ನಿನ್ನ ಬದಿಯ ಹಾದಿಯಲ್ಲಿ ನಾನು ಹೂವಿನ ಗಿಡದ ಬೀಜಗಳನ್ನು ದಾರಿಯುದ್ದಕ್ಕೂ ಬಿತ್ತಿದ್ದೆ. ನಾನು ನಿನ್ನೊಳಗಿನ ಕೊರತೆಯನ್ನು ಗುರುತಿಸಿ ಅದನ್ನು ಸದುಪಯೋಗ ಮಾಡಿಕೊಂಡೆ. ನಿನ್ನಿಂದ ಸೋರಿ ಹೋಗುತ್ತಿದ್ದ ನೀರಿನಿಂದಾಗಿಯೇ ನಿನ್ನ ಬದಿಯ ಹಾದಿಯಲ್ಲಿ ಇಂದು ಹೂವಿನ ಗಿಡಗಳು ಬೆಳೆದು ನಿಂತಿರುವುದು. ಈ ಎರಡು ವರ್ಷ ನಿನ್ನಿಂದ ಸೋರಿದ ನೀರಿನ ಕಾರಣವಾಗಿಯೇ ಇವತ್ತು ಈ ಹೂವುಗಳು ಅರಳಿ ನಿಂತಿರುವುದು, ಈ ಜಗತ್ತು ಇಷ್ಟರಮಟ್ಟಿಗೆ ಸುಂದರವಾಗಿರುವುದು.” ಮಾಸ್ಟರ್, ಬಿರುಕುಬಿಟ್ಟ ಮಡಕೆಯನ್ನು ಸಮಾಧಾನ ಮಾಡಿದ.

ನಾವು ಪ್ರತಿಯೊಬ್ಬರಲ್ಲೂ ಕೊರತೆಗಳಿವೆ, ದೌರ್ಬಲ್ಯಗಳಿವೆ. ನಾವೆಲ್ಲರೂ ಒಂದು ರೀತಿಯಲ್ಲಿ ಬಿರುಕುಬಿಟ್ಟಿರುವ ಮಡಕೆಯ ಹಾಗೆ. ಆದರೆ ನಾವು ಮನಸ್ಸು ಮಾಡಿದರೆ, ಪ್ರಯತ್ನ ಮಾಡಿದರೆ. ನಮ್ಮ ದೌರ್ಬಲ್ಯ, ಕೊರತೆಗಳ ಬಗ್ಗೆ ಸುಮ್ಮನೇ ಹಳಹಳಿಸುತ್ತ ಕುಳಿತುಕೊಳ್ಳದೇ ನಾವು ನಮ್ಮ ದೌರ್ಬಲ್ಯಗಳನ್ನು ಧನಾತ್ಮಕವಾಗಿ ಬಳಕೆ ಮಾಡಬಹುದು. ಅವಗಳನ್ನ ವಿರೋಧ ಮಾಡದೇ ಅವನ್ನು ಅವಕಾಶಗಳನ್ನಾಗಿ ಬದಲಾಯಿಸಿಕೊಳ್ಳಬಹುದು. ವಿವೇಕವಂತರ ದೃಷ್ಟಿಯಲ್ಲಿ ಯಾವುದೂ ವ್ಯರ್ಥವಲ್ಲ. ನಮ್ಮ ಕೊರತೆಗಳು ನಮ್ಮನ್ನು ಕಟ್ಟಿಹಾಕುವುದು ಬೇಡ. ನಮ್ಮ ಕೊರತೆಗಳ ಬಗ್ಗೆ ತಿಳುವಳಿಕೆ ಹೊಂದಿರುವುದು ಮತ್ತು ಅದನ್ನು ಮೀರಿ ನಡೆಯುವುದು ನಮ್ಮ ಒಂದು ದೊಡ್ಡ ಸಾಮರ್ಥ್ಯ.

Leave a Reply